ಆಡಳಿತರೂಢ ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದು, ಮುಂದಿನ ಚುನಾವಣೆಯ ಟಿಕೆಟ್ ಖಾತರಿಪಡಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಟಿಕೆಟ್ ಖಾತರಿಯಾಗುತ್ತಲೇ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆದಿದೆ.
ಮೀಸಲಾತಿ ವಿಷಯದಲ್ಲಿ ರಾಜ್ಯದ ವಿವಿಧ ಸಮುದಾಯಗಳ ನಡುವೆ ನಡೆಯುತ್ತಿರುವ ಪೈಪೋಟಿಯ ಹೋರಾಟಗಳ ಕುರಿತು ಸರ್ಕಾರ ಸಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂಬುದೂ ಸೇರಿ ಕೆಲವು ಜ್ವಲಂತ ವಿಷಯಗಳು ಕಾರ್ಯಕಾರಿಣಿಯಲ್ಲಿ ಚರ್ಚೆಗೆ ಬಂದವು ಎಂಬುದನ್ನು ಪಕ್ಷದ ನಾಯಕರು ಅಧಿಕೃತವಾಗಿ ಹೇಳಿದ್ದಾರೆ. ಆದರೆ, ಅಧಿಕೃತ ಚರ್ಚೆಯ ಆಚೆಗೆ ಈ ಕಾರ್ಯಕಾರಿಣಿ ರಾಜ್ಯ ಬಿಜೆಪಿ ಮತ್ತು ರಾಜ್ಯ ರಾಜಕಾರಣದ ಕುರಿತ ಕೆಲವು ವಿಷಯಗಳ ಬಗ್ಗೆ ಪರೋಕ್ಷವಾಗಿ ಒಂದಿಷ್ಟು ಸ್ಪಷ್ಟನೆಗಳನ್ನು, ಸಂದೇಶಗಳನ್ನು ರವಾನಿಸಿದೆ. ಹೀಗೆ ಪರೋಕ್ಷವಾಗಿ ರವಾನಿಸಿದ ಸಂದೇಶಗಳ ಕಾರಣಕ್ಕೆ ಈ ಕಾರ್ಯಕಾರಣಿ ರಾಜಕೀಯ ಚರ್ಚೆಯ ಸಂಗತಿ ಎಂಬುದನ್ನು ಹೊರತುಪಡಿಸಿದರೆ ಅದೊಂದು ಮಾಮೂಲಿ ಸಭೆ ಎಂದಷ್ಟೇ ಹೇಳಬಹುದು.
ಮುಖ್ಯವಾಗಿ ರಾಜ್ಯ ಬಿಜೆಪಿಯ ನಾಯಕತ್ವದ ಕುರಿತ ಚರ್ಚೆಯ ಹಿನ್ನೆಲೆಯಲ್ಲಿ ಈ ಕಾರ್ಯಕಾರಿಣಿಯ ಮೇಲೆ ಎಲ್ಲರ ಕಣ್ಣಿತ್ತು. ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿದ ಬಳಿಕ ಪಕ್ಷದ ರಾಷ್ಟ್ರೀಯ ನಾಯಕ, ಗೃಹ ಸಚಿವ ಅಮಿತ್ ಶಾ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೇ ಪಕ್ಷ ಮುಂದಿನ ಚುನಾವಣೆ ಎದುರಿಸಲಿದೆ ಎಂದು ಹೇಳಿದ್ದರು. ಒಂದು ಕಡೆ ಸ್ವತಃ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಭಾಷಣದಲ್ಲಿಯೇ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು 150 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ತರುವುದೇ ತಮ್ಮ ಗುರಿ ಎಂದು ಹೇಳುವ ಮೂಲಕ ಪಕ್ಷದ ಚುನಾವಣಾ ನಾಯಕತ್ವ ತಮ್ಮ ಕೈತಪ್ಪದಂತೆ ನೋಡಿಕೊಳ್ಳುವ ಯತ್ನ ಮಾಡಿದ್ದರೆ, ಮತ್ತೊಂದು ಕಡೆ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಲೇ ಅವರನ್ನು ಮೂಲೆಗುಂಪು ಮಾಡುವ ತಂತ್ರವೆಂಬಂತೆ ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ, ಮುಂದಿನ ಚುನಾವಣೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ನೇತೃತ್ವದಲ್ಲಿ ಎಂದಿದ್ದರು. ಇಂತಹ ವಿರೋಧಾಭಾಸದ ಹೇಳಿಕೆಗಳ ನಡುವೆ ಹೈಕಮಾಂಡ್ ಅಮಿತ್ ಶಾ ಕರ್ನಾಟಕ ಭೇಟಿಯ ವೇಳೆ ಬೊಮ್ಮಾಯಿ ನಾಯಕತ್ವ ಪ್ರಸ್ತಾಪಿಸಿ ನಾಯಕತ್ವ ಚರ್ಚೆಗೆ ಮತ್ತೊಂದು ಆಯಾಮ ನೀಡಿದ್ದರು.
ಆ ಹಿನ್ನೆಲೆಯಲ್ಲಿ ದಾವಣಗೆರೆಯ ಕಾರ್ಯಕಾರಣಿ, ಮುಂದಿನ ಚುನಾವಣೆಯ ನಾಯಕತ್ವ ಕುರಿತು ಏನು ಚರ್ಚಿಸಲಿದೆ ಎಂಬ ದಿಸೆಯಲ್ಲಿ ಚರ್ಚೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದವು. ಆದರೆ, ಬಿಜೆಪಿಯ ಭವಿಷ್ಯದ ನಾಯಕತ್ವದ ಕುರಿತು ಸ್ವಾರಸ್ಯಕರ ಸಂದೇಶಗಳನ್ನು ಈ ಕಾರ್ಯಕಾರಿಣಿ ರವಾನಿಸಿದೆ ಎಂಬುದು ವಿಶೇಷ. ಒಂದು ಕಡೆ ಕಾರ್ಯಕಾರಿಣಿಯಲ್ಲಿ ಭಾಗಿಯಾಗಲು ಬಂದಿದ್ದ ಸಚಿವ ಈಶ್ವರಪ್ಪ, ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರ ಜಂಟಿ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದು ಹೇಳಿದ್ದರೆ, ಮತ್ತೆ ಕೆಲವರು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ಮಾತನಾಡಿದ್ದರು. ಕಾರ್ಯಕಾರಿಣಿಯಲ್ಲಿ ಮಾತನಾಡಿದ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸರ್ಕಾರದ ಅಭಿವೃದ್ಧಿ ಕೆಲಸಗಳ ಮೇಲೆ ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರು ಎದೆಯುಬ್ಬಿಸಿ ಮತ ಕೇಳುವಂತೆ ಮಾಡುತ್ತೇವೆ ಎನ್ನುವ ಮೂಲಕ ಬಹುತೇಕ ಸಾಮೂಹಿಕ ನಾಯಕತ್ವದ ಆಶಯವನ್ನೇ ವ್ಯಕ್ತಪಡಿಸಿದ್ದಾರೆ.

ಆದರೆ, ಪಕ್ಷದ ನಾಯಕರ ಈ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಮಾತನಾಡಿರುವ ಮಾಜಿ ಸಿಎಂ ಯಡಿಯೂರಪ್ಪ, ಪರೋಕ್ಷವಾಗಿ ಅಂತಹ ಸಾಮೂಹಿಕ ನಾಯಕತ್ವದ ಮಾತುಗಳು ಪ್ರಯೋಜನಕ್ಕೆ ಬರುವುದಿಲ್ಲ ಎಂಬುದನ್ನು ತಮ್ಮದೇ ದಾಟಿಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ; ಸ್ವತಃ ಪ್ರಧಾನಿ ಮೋದಿ ವರ್ಚಸ್ಸು ಕೂಡ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಕೈಹಿಡಿಯುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಕೆಲಸ ಮಾಡಬಹುದೇನೋ. ಆದರೆ, ವಿಧಾನಸಭಾ ಚುನಾವಣೆಗೆ ಮೋದಿ ಅಲೆ ಪ್ರಯೋಜನಕಕ್ಕೆ ಬಾರದು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಆ ಮೂಲಕ ಪರೋಕ್ಷವಾಗಿ, ಬಿಜೆಪಿಯ ಈ ಪ್ರಭಾವಿ ನಾಯಕ ತಮ್ಮನ್ನು ಮೂಲೆಗುಂಪು ಮಾಡಿ ಚುನಾವಣೆ ಎದುರಿಸಿದರೆ ಬಿಜೆಪಿ ಮಣ್ಣು ಮುಕ್ಕಲಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆಯೇ ಎಂಬುದು ಈಗ ಚರ್ಚೆಯಾಗುತ್ತಿದೆ.
ಅದೇ ಹೊತ್ತಿಗೆ ತಮ್ಮ ರಾಜೀನಾಮೆಯ ಬಳಿಕ ನಿರಂತರ ಚರ್ಚೆಯಲ್ಲಿರುವ ತಮ್ಮ ರಾಜ್ಯ ಪ್ರವಾಸದ ವಿಷಯವನ್ನು ಕೂಡ ಪ್ರಸ್ತಾಪಿಸಿರುವ ಬಿ ಎಸ್ ವೈ, ಯಡಿಯೂರಪ್ಪ ರಾಜ್ಯ ಪ್ರವಾಸದ ವಿಷಯ ಭಾರೀ ಚರ್ಚೆಯಾಗುತ್ತಿದೆ. ಆದರೆ, ನಾನು ಪ್ರವಾಸ ಮಾಡುತ್ತೇನೆ ಎಂದರೆ; ಅದರರ್ಥ ನಾನೊಬ್ಬನೇ ಪ್ರವಾಸ ಮಾಡುತ್ತೇನೆ ಎಂದಲ್ಲ; ಸಂಸದರು, ಶಾಸಕರು, ಪಕ್ಷದ ಇತರೆ ನಾಯಕರು ಕೂಡ ಜೊತೆಗಿರುತ್ತಾರೆ. ಎಲ್ಲರೂ ಒಟ್ಟಾಗಿಯೇ ಮಾಡುವ ಪ್ರವಾಸ ಇದು ಎಂದಿದ್ದಾರೆ. ಆದರೆ, ಆ ಪ್ರವಾಸದ ನಾಯಕತ್ವ ಮಾತ್ರ ತಮ್ಮದು ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಇದರೊಂದಿಗೆ, ಪ್ರತಿಪಕ್ಷಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಕಾಂಗ್ರೆಸ್ ಎದ್ದು ಕೂತಿದೆ. ಮೈಮರೆತರೆ ಅಪಾಯವಿದೆ. ವಿರೋಧಪಕ್ಷಗಳಿಗೆ ಅವುಗಳದ್ದೇ ಆದ ಶಕ್ತಿ ಇದೆ. ಈಗಾಗಲೇ ಕಾಂಗ್ರೆಸ್ ನಾಯಕರು ನಮ್ಮ ಶಾಸಕರನ್ನು ಸಂಪರ್ಕಿಸಿದ್ದಾರೆ. ಹಾಗಾಗಿ, ಎಲ್ಲರೂ ಪಕ್ಷವನ್ನು ಸಂಘಟಿಸಿ ಒಮ್ಮನಸ್ಸಿನಿಂದ ಕೆಲಸ ಮಾಡಿದರೆ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂಬ ಎಚ್ಚರಿಕೆ ಅಗತ್ಯ ಎಂದೂ ಬಿಎಸ್ ವೈ ಹೇಳಿದ್ದಾರೆ. ಆ ಮೂಲಕ ಆಡಳಿತ ಪಕ್ಷ ಬಿಜೆಪಿಯ ಶಾಸಕರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿರುವ ಸಂಗತಿಯನ್ನು ಸ್ವತಃ ಬಿಜೆಪಿಯ ಹಿರಿಯ ನಾಯಕರೇ ಖಚಿತಪಡಿಸಿದ್ದಾರೆ. ಜೊತೆಗೆ ಪಕ್ಷ ಒಗ್ಗಟ್ಟಿನಿಂದ ಕೆಲಸ ಮಾಡದೇ ಇದ್ದರೆ ಗೆಲುವು ಸಾಧ್ಯವಿಲ್ಲ ಎಂಬುದನ್ನೂ ಯಡಿಯೂರಪ್ಪ ಹೇಳಿದ್ದಾರೆ.
ಹಾಗಾಗಿ ದಾವಣಗೆರೆಯ ಬಿಜೆಪಿ ಕಾರ್ಯಕಾರಿಣಿ, ಅಧಿಕೃತವಾಗಿ ಚರ್ಚಿಸಿದ, ನಿರ್ಣಯ ಕೈಗೊಂಡ ಸಂಗತಿಗಳಿಗಿಂತ, ಹೀಗೆ ಅದರ ವೇದಿಕೆಯಿಂದ, ವೇದಿಕೆ ಆಸುಪಾಸಿನಿಂದ ವಿವಿಧ ನಾಯಕರ ಮೂಲಕ ರವಾನಿಸಿರುವ ಸಂದೇಶಗಳು ಹೆಚ್ಚು ಗಮನಾರ್ಹ.
ಮೊದಲನೆಯದಾಗಿ ಮುಂದಿನ ಚುನಾವಣೆಗೆ ಯಡಿಯೂರಪ್ಪ ನಾಯಕತ್ವವೇ? ಅಥವಾ ಸಿಎಂ ಬೊಮ್ಮಾಯಿ ನಾಯಕತ್ವವೇ? ಅಥವಾ ರಾಜ್ಯಾಧ್ಯಕ್ಷ ಕಟೀಲು ನಾಯಕತ್ವವೇ? ಅಥವಾ ಸಾಮೂಹಿಕ ನಾಯಕತ್ವವೇ? ಎಂಬ ಕುರಿತ ಗೊಂದಲಕ್ಕೆ ತೆರೆ ಎಳೆಯಲು ಬಿಜೆಪಿ ಕಾರ್ಯಕಾರಿಣಿ ಯಶಸ್ವಿಯಾಗಿಲ್ಲ. ಈಗಲೂ ನಾಯಕತ್ವದ ವಿಷಯದಲ್ಲಿ ಮಾಜಿ ಸಿಎಂ ಮತ್ತು ಅವರ ವಿರೋಧಿ ಬಣದ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ.
ಎರಡನೆಯದಾಗಿ, ಕೋವಿಡ್ ಮತ್ತು ಆರ್ಥಿಕ ದುಃಸ್ಥಿತಿಯ ಹಿನ್ನೆಲೆಯಲ್ಲಿ ದೇಶದಲ್ಲಿ ಈಗಾಗಲೇ ಕಳೆಗುಂದಿರುವ ಪ್ರಧಾನಿ ಮೋದಿಯವರ ವರ್ಚಸ್ಸು, ರಾಜ್ಯ ವಿಧಾನಸಭಾ ಚುನಾವಣೆಯ ಹೊತ್ತಿಗೆ ಇನ್ನಷ್ಟು ನೆಲಕಚ್ಚಲಿದೆ. ಹಾಗಾಗಿ ಮೋದಿ ಅಲೆ ಎಂಬುದು ವಿಧಾನಸಭಾ ಚುನಾವಣೆಯಲ್ಲಿ ಕೆಲಸಕ್ಕೆ ಬಾರದು . ಮೂರನೆಯದಾಗಿ ಬಿಜೆಪಿ ಅಧಿಕಾರದಲ್ಲಿದ್ದರೂ, ಆಡಳಿತ ಪಕ್ಷದ ಸದಸ್ಯರೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದು, ಪಕ್ಷ ತೊರೆಯುವ ನಿಟ್ಟಿನಲ್ಲಿ ತೆರೆಮರೆಯ ಮಾತುಕತೆಗಳನ್ನು ನಡೆಸುತ್ತಿದ್ಧಾರೆ. ರಾಜ್ಯ ಸರ್ಕಾರದ ಕಾರ್ಯವೈಖರಿ, ಯಡಿಯೂರಪ್ಪ ಅವರ ಪದಚ್ಯುತಿ, ಮತ್ತು ಪ್ರಧಾನಿ ಮೋದಿಯವರ ಆಡಳಿತ ವೈಖರಿಯಿಂದಾಗಿ ಮತದಾರ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಲಿದ್ದಾನೆ ಎಂಬ ಮುನ್ಸೂಚನೆ ಅರಿತಿರುವ ಶಾಸಕರು ಬೇರೆ ಪಕ್ಷಗಳತ್ತ ಮುಖಮಾಡುತ್ತಿದ್ದಾರೆ,..
ಈ ಮೂರು ಸಂದೇಶಗಳನ್ನು ದಾವಣಗೆರೆ ಕಾರ್ಯಕಾರಿಣಿಯ ಚರ್ಚೆಗಳು ರಾಜ್ಯದ ಜನತೆಗೆ ರವಾನಿಸಿವೆ.
ಅದರಲ್ಲೂ ಪಕ್ಷದ ಪ್ರಭಾವಿ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಮಾತುಗಳೇ ಇಂತಹ ಸಂದೇಶವನ್ನು ಧ್ವನಿಸಿರುವುದು ಸಹಜವಾಗೇ ಸಾಕಷ್ಟು ಕುತೂಹಲ ಮೂಡಿಸಿದೆ. ಮೋದಿ ಅಲೆಯ ಮೇಲೆ ಮುಂದಿನ ಚುನಾವಣೆ ಗೆಲ್ಲಲಾಗದು ಎಂಬ ಅವರ ಮಾತಿಗೂ, ಪಕ್ಷದ ಶಾಸಕರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದಾರೆ ಎಂಬ ಹೇಳಿಕೆಗೂ ತಾಳೆಯಾದರೆ, ಮುಂದಿನ ಚುನಾವಣೆಯ ಹೊತ್ತಿಗೆ ಬಿಜೆಪಿಯ ಮುಂದಿರುವ ಸವಾಲು ಕೂಡ ನಿಚ್ಛಳವಾಗಲಿದೆ. ಆ ಕಾರಣದಿಂದಾಗಿಯೇ ಕಾರ್ಯಕಾರಿಣಿಯ ನಿರ್ಣಯಗಳಿಗಿಂತ, ಅಧಿಕೃತ ಚರ್ಚೆಗಳಿಗಿಂತ, ಬಿಎಸ್ ವೈ ಅವರ ಈ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.