ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗುವ ಮಹಿಳೆಯರ ಕುರಿತು ಸಮಾಜದಲ್ಲಿ ಆಳವಾದ ಪೂರ್ವಾಗ್ರಹ ಪೀಡಿತ ಆಲೋಚನೆ ಹಾಗೂ ತಾರತಮ್ಯವಿದೆ. ಅವರನ್ನು ಕಳಂಕಿತರಂತೆ ನೋಡಿಕೊಳ್ಳಲಾಗುತ್ತಿದೆ. ಇಂತಹ ಮಹಿಳೆಯರು ಸಮಾಜದೊಂದಿಗೆ ಮರುಸಂಘಟಿತರಾಗಲು ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿದೆ, ಎಂದು ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಹೇಳಿದ್ದಾರೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ 32ನೇ ಕೇಂದ್ರೀಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು . ಬಂಧನಕ್ಕೆ ಒಳಗಾಗದ ಮಹಿಳೆಯರು ಕಳಂಕಿತರು ಎಂಬ ಭಾವನೆ ಸಮಾಜದಲ್ಲಿ ಮೂಡಿದ್ದು ಇದರಿಂದಾಗಿ ಅವರಿಗೆ ಪುರ್ನವಸತಿ ಕಲ್ಪಿಸುವುದು ನಿಜಕ್ಕೂ ಸವಾಲಿನ ವಿಚಾರವಾಗಿದೆ. ಭಾರತ ಎಲ್ಲರ ಹಿತ ಕಾಯುವ ದೇಶವಾಗಿದ್ದರಿಂದ ಮಹಿಳಾ ಖೈದಿಗಳನ್ನು ಸಮಾಜದೊಂದಿಗೆ ಪುನರ್ ಸಂಯೋಜಿಸಲು ಸೇವೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಪುರುಷ ಖೈದಿಗಳಂತೆ ಮಹಿಳೆಯರಿಗೂ ಸಮಾನ ಅವಕಾಶ ನೀಡಬೇಕಾಗಿದೆ, ಎಂದು ಅವರು ಹೇಳಿದ್ದಾರೆ.
“ಮಹಿಳಾ ಖೈದಿಗಳು ಬಿಡುಗಡೆಯಾದ ಬಳಿಕ ಅವರಿಗೆ ತಾರತಮ್ಯವಿಲ್ಲದ ಶಿಕ್ಷಣ, ಕೌಶಲ್ಯಾಭಿವೃದ್ದಿ ತರಬೇತಿ ಹಾಗೂ ಗೌರವಧನ ಸಿಗುವಂತಹ ಉದ್ಯೋಗವನ್ನು ಪಡೆಯಲು ಯೋಜನೆ ರೂಪಿಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಜಸ್ಟೀಸ್ ಲಲಿತ್, ಕರೋನಾ ಕಾರಣದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿವೆ. ಜ್ಯುವೆನೈಲ್ ಹೋಮ್’ಗಳಲ್ಲಿನ ಪರಿಸ್ಥಿತಿ ಊಹೆಗೂ ನಿಲುಕದಷ್ಟರ ಮಟ್ಟಿಗೆ ಬಿಗಡಾಯಿಸಿದೆ. ಕೇವಲ ಒಬ್ಬ ಶಿಕ್ಷಕ ವೀಡಿಯೋ ತರಗತಿಗಳನ್ನು ನಡೆಸುವುದರ ಮೂಲಕ ಪರಿಣಾಮಕಾರಿ ಶಿಕ್ಷಣ ನೀಡಲು ಅಸಾಧ್ಯ. ಅದರಲ್ಲೂ ವಿವಿಧ ವಯೋಮಿತಿಯ ಮಕ್ಕಳಿರುವ ಕಡೆ ಇದು ಕಷ್ಟ ಸಾಧ್ಯ, ಎಂದು ಹೇಳಿದ್ದಾರೆ.
“ಈ ಅಂತರವನ್ನು ನಿಭಾಯಿಸಲು ಹಾಗೂ ಸಮಾಜದಲ್ಲಿ ತಳಮಟ್ಟದ ಬದಲಾವಣೆಯನ್ನು ತರಲು ಕಾನೂನು ವಿದ್ಯಾರ್ಥಿಗಳು ಮೂರು ಅಥವಾ ನಾಲ್ಕು ತಾಲ್ಲೂಕುಗಳನ್ನು ದತ್ತು ಪಡೆದು ಕಾರ್ಯ ನಿರ್ವಹಿಸಬೇಕು. ಕಾನೂನು ವಿದ್ಯಾರ್ಥಿಗಳ ಸೇವೆ ಹಾಗೂ ಅವರ ಕೌಶಲ್ಯ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು,” ಎಂದು ಜಸ್ಟೀಸ್ ಲಲಿತ್ ಹೇಳಿದ್ದಾರೆ.
ಶನಿವಾರದಂದು 33 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕ ಅದಾಲತ್ ಮೂಲಕ ಸುಮಾರು 15 ಲಕ್ಷಗಳಿಗೂ ಅಧಿಕ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇದು ದೇಶದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿಯೇ ಅತ್ಯಂತ ಮಹತ್ತರವಾದ ಸಾಧನೆ ಎಂದು ಗುರುತಿಸಿಕೊಂಡಿದೆ.