ಬಹುಶಃ ಸಿಎಂ ಆಯ್ಕೆಗೂ ಇಷ್ಟೊಂದು ಕಸರತ್ತು ನಡೆಯುತ್ತೋ ಇಲ್ವೋ ಗೊತ್ತಿಲ್ಲ. ಆದರೆ, ಮೂರು ಜಿಲ್ಲೆಗಳ ಮೇಯರ್ ಆಯ್ಕೆ ಮಾತ್ರ ಇನ್ನೂ ಆಗಿಲ್ಲ. ಧಾರವಾಡದಲ್ಲಿ ಬಿಜೆಪಿ ಇನ್ನೇನು ಮೇಯರ್ ಗದ್ದುಗೆ ಏರಬೇಕು ಅನ್ನುವಷ್ಟರಲ್ಲೇ ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ ಅದೊಂದು ಮಾತು ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಸುದ್ದು ಮಾಡುತ್ತಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ತಲುಪದೇ ಇದ್ರೂ ಜನಪ್ರತಿನಿಧಿಗಳ ವಿಶೇಷ ವೋಟ್‌ನಿಂದ ಪಾಲಿಕೆ ಪಟ್ಟಕ್ಕೆ ಏರೋದು ಪಕ್ಕಾ ಆಗಿದೆ. ಬೆಳಗಾವಿಯಲ್ಲಿ ಬಿಜೆಪಿಯದ್ದೇ ಪಾರುಪತ್ಯ ಫಿಕ್ಸ್ ಆಗಿದೆ. ಇದೆಲ್ಲದರ ಮಧ್ಯೆ ಧಾರವಾಡದಲ್ಲಿ ಆಪರೇಷನ್ ಹಸ್ತ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಶಾಸಕರು ಕೊಟ್ಟ ಆಫರ್ ಪಾಲಿಕೆ ಮೇಯರ್ ಗಾದಿಯ ಹಾದಿಯಲ್ಲಿ ಸಂಚಲನ ತಂದಿದೆ.
ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 33 ಸ್ಥಾನಗಳನ್ನ ಗೆದ್ದಿದೆ. ಇನ್ನೂ 10 ಸ್ಥಾನ ಏನಾದ್ರೂ ಸಿಕ್ರೆ ಕಾಂಗ್ರೆಸ್‌ಗೆ ಮೇಯರ್ ಸ್ಥಾನ. ಆದ್ರೆ, 10 ಸ್ಥಾನ ಬೇಕು ಅಂದರೆ ಆಪರೇಷನ್ ಹಸ್ತದ ಮೊರೆ ಹೋಗಬೇಕು. ಆದೇ ಈಗ ಶಾಸಕ ಶಿವಾನಂದ ಪಾಟೀಲ್ ಹೇಳುತ್ತಾ ಇರೋದು. ಯಾರು ಆಪರೇಷನ್ ಹಸ್ತದ ಮೂಲಕ 10 ಜನರನ್ನ ಕರೆ ತರ್ತಾರೋ ಅವರೇ ಮೇಯರ್. ನಾನು ಹೀಗೆ ಮಾಡೇ ನಗರಸಭೆ ಅಧ್ಯಕ್ಷ ಆಗಿದ್ದು ಎಂದಿದ್ದಾರೆ.

ಹೀಗೆ ಇತ್ತೀಚೆಗೆ ನಡೆದ ನೂತನ ಪಾಲಿಕೆ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಆಪರೇಷನ್ ಕೈ ಬಗ್ಗೆ ಪ್ರಸ್ತಾಪಿಸಿದ್ದಾರೆ ಬಸವನ ಬಾಗೇವಾಡಿ ಶಾಸಕ ಶಿವಾನಂದ್ ಪಾಟೀಲ್. ಮತ್ತೊಂದು ಕಡೆ ಧಾರವಾಡದಲ್ಲಿ ಪಕ್ಷೇತರ ಅಭ್ಯರ್ಥಿಗೆ ಜಾಕ್‌ಪಾಟ್ ಹೊಡದಿದೆ. 69ನೇ ವಾರ್ಡ್‌ನ ದುರ್ಗಮ್ಮ ಬಿಜವಾಡ್‌ಗೆ ಉಪ ಮೇಯರ್ ಆಗುವ ಅದೃಷ್ಟ ಒಲಿದು ಬಂದಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದುರ್ಗಮ್ಮ ಪಕ್ಷದಿಂದ ಉಚ್ಛಾಟನೆಗೊಂಡಿದ್ರು. ಆದ್ರೆ, ಈಗ ಉಪಮೇಯರ್ ಸ್ಥಾನ ಕೈತಪ್ಪುವ ಭೀತಿಯಲ್ಲಿ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಸಿದ್ಧವಾಗಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಕುದುರೆ ವ್ಯಾಪಾರದ ಮೂಲಕ ಅಧಿಕಾರ ಹಿಡಿಯೋದು ಸಾಮಾನ್ಯವಾಗಿ ಬಿಟ್ಟಿದೆ. ಅದ್ರಲ್ಲೂ ಬಿಜೆಪಿ ವಿರುದ್ಧವೇ ಕೇಳಿ ಬರ್ತಿದ್ದ ಆಪರೇಷನ್ ಕಮಲದ ಆರೋಪ ಈಗ ಧಾರವಾಡ ಪಾಲಿಕೆಯಲ್ಲಿ ಕಾಂಗ್ರೆಸ್ ಕಡೆ ವಾಲಿದೆ. ಆರೋಪವಷ್ಟೇ ಅಲ್ಲ, ಖುದ್ದು ಶಾಸಕರೇ ಈ ಬಗ್ಗೆ ಮಾತನಾಡಿರೋದು ಭಾರಿ ಸಂಚಲನ ತಂದಿದೆ.
ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಮಲ ಪಡೆ ಮ್ಯಾಜಿಕ್ ನಂಬರ್ ಸಾಧಿಸದಿದ್ದರೂ, ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 82 ವಾರ್ಡ್ ಗಳ ಪೈಕಿ 39ರಲ್ಲಿ ಬಿಜೆಪಿ, 33ರಲ್ಲಿ ಕಾಂಗ್ರೆಸ್, ಜೆಡಿಎಸ್ 1 ಮತ್ತು ಇತರರು 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಪೈಕಿ 42 ನೇ ವಾರ್ಡ್‌ನಿಂದ ಸ್ಪರ್ಧಿಸಿದ ಮಹಾದೇವಪ್ಪ ನರಗುಂದ ಅವರು ಗೆಲುವಿನ ನಗೆ ಬೀರಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಮ್ಯಾಜಿಕ್ ನಂಬರ್ ಗೆ ಕಮಲ ಪಡೆಗೆ 42 ಸದಸ್ಯರ ಬೆಂಬಲ ಬೇಕಿದೆ. ಹೀಗಾಗಿ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆದು ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಬಿಜೆಪಿ ಪಾಳೆಯದಲ್ಲಿ ಘಟಾನುಘಟಿ ನಾಯಕರೇ ಮಹಾನಗರದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಲಿ ಶಾಸಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಶಾಸಕ ಅರವಿಂದ ಬೆಲ್ಲದ್ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದರು.

ಶಾಸಕ ಅರವಿಂದ ಬೆಲ್ಲದ್ ಹಾಗೂ ಜಗದೀಶ್ ಶೆಟ್ಟರ್ ನಡುವಿನ ಶೀತಲ ಸಮರದಿಂದ ಬೆಲ್ಲದ್ ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದರೂ ಸ್ವಕೇತ್ರ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಮುಖ ಭಂಗವಾಗಬಾರದು ಅನ್ನೋ ಕಾರಣಕ್ಕೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸಿದ್ದರು.
ಇನ್ನೊಂದಡೆ ಶ್ರೀರಾಮುಲು , ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವರು ಪ್ರಚಾರ ನಡೆಸಿದ್ದರು. ಬಂಡಾಯದ ಬೇಗುದಿ ಅಷ್ಟೇನೂ ಬಿಜೆಪಿಗೆ ಕಾಡದಿದ್ದರೂ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದವರು ಹಾಗೂ ಅವರನ್ನು ಬೆಂಬಲಿಸಿದವರನ್ನು ಒಟ್ಟು 23 ಜನರನ್ನು ಪಕ್ಷ ವಿರೋಧಿ ಚುಟುವಟಿಕೆ ಮೇಲೆ ಉಚ್ಚಾಟಿಸಲಾಗಿತ್ತು. ಇವರಲ್ಲಿ ಮೂವರು ಪಕ್ಷೇತರ ಅಭ್ಯರ್ಥಿಗಳಾಗಿ ಜಯ ಸಾಧಿಸಿದ್ದಾರೆ.