ಬಸವರಾಜ್ ಬೊಮ್ಮಾಯಿ ಸಿಎಂ ಆದ ಬಳಿಕ ಇದೇ ಮೊದಲ ಭಾರಿಗೆ ವಿಧಾನಮಂಡಲ ಅಧಿವೇಶನ ಶುರುವಾಗುತ್ತಿದೆ. ಸೆಪ್ಟೆಂಬರ್ 13ರಿಂದ ಶುರುವಾಗಲಿರುವ ಈ ವಿಧಾನಮಂಡಲ ಅಧಿವೇಶನ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಹಣಿಯಲು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಮತ್ತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮುಂದಾಗಿವೆ. ಎರಡು ಪಕ್ಷಗಳು ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಳ್ಳಲು ಸಾಕಷ್ಟು ಅಸ್ತ್ರಗಳನ್ನು ರೆಡಿ ಮಾಡಿಕೊಂಡಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಅಂತೂ ಕಾಂಗ್ರೆಸ್ ನಾಯಕರ ವಿರೋಧದ ನಡುವೆಯೂ ಜಾತಿಗಣತಿ ಗುರಾಣಿ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಅಸ್ತ್ರಗಳಿಗೆ ಪ್ರತ್ಯುತ್ತರ ನೀಡಲು ಸಿಎಂ ಬಸವರಾಜ್ ಬೊಮ್ಮಾಯಿ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸವಾಲು ಎದುರಿಸುವ ಸಲುವಾಗಿಯೇ ಬೊಮ್ಮಾಯಿ ಸೋಮವಾರ ಬೆಳಿಗ್ಗೆ ಬಿಜೆಪಿ ಪಕ್ಷದ ಶಾಸಕಾಂಗ ಸಭೆ ಕರೆದಿದ್ದಾರೆ. ಇಲ್ಲಿ ಹಲವು ಮಹತ್ವದ ವಿಚಾರಗಳನ್ನು ಚರ್ಚೆ ಮಾಡಲಾಗುತ್ತದೆ.
ಮಾರಕ ಕೊರೋನಾ ವೈರಸ್ನಿಂದ ಇಡೀ ರಾಜ್ಯ ತತ್ತರಿಸಿ ಹೋಗಿತ್ತು. ಇದು ವಿಧಾನಮಂಡಲ ಅಧಿವೇಶನ ವಿಳಂಬಕ್ಕೆ ಕಾರಣವಾಗಿತ್ತು. ಈಗ ಸೆಪ್ಟೆಂಬರ್ 13ರಿಂದ ಆರಂಭವಾಗಲಿರುವ ಈ ವಿಧಾನಮಂಡಲ ಅಧಿವೇಶನ ಒಟ್ಟು ಹತ್ತು ದಿನಗಳ ಕಾಲ ನಡೆಯಲಿದೆ. ಇಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನೇ ಟಾರ್ಗೆಟ್ ಮಾಡಲಿದ್ದು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸರ್ಕಾರದ ನೆರವಿಗೆ ಬರಲಿದ್ದಾರೆ.
ಒಂದೆಡೆ ಬಸವರಾಜ್ ಬೊಮ್ಮಾಯಿ ಮೊದಲ ಅಧಿವೇಶನದಲ್ಲಿ ಪ್ರಮುಖ ವಿಧೇಯಕಗಳು ಮಂಡನೆ ಮಾಡಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ತಯಾರಿ ನಡೆಸಿಕೊಂಡಿದ್ದಾರೆ. ಇನ್ನೊಂದೆಡೆ ಸರ್ಕಾವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿವೆ. ಪಕ್ಷದ ಆಂತರಿಕ ವಿರೋಧದ ನಡುವೆಯೂ ಸಿದ್ದರಾಮಯ್ಯ ಜಾತಿಗಣತಿ ಚರ್ಚೆಗೆ ರೆಡಿ ಆಗಿದ್ದಾರೆ.
ಅಧಿವೇಶನದಲ್ಲಿ ಜಾತಿ ಗಣತಿ ಹೋರಾಟ ನಡೆಸಲು ಪ್ಲಾನ್ ಮಾಡಿರುವ ಸಿದ್ದರಾಮಯ್ಯ, ಇದರ ಜಾರಿಗಾಗಿ ಪಟ್ಟು ಹಿಡಿಯಲಿದ್ದಾರೆ. ಹೇಗಾದರೂ ಸರಿ ಈ ವಿಚಾರ ಚರ್ಚೆಗೆ ತರಬೇಕು. ಇದನ್ನು ಬಿಜೆಪಿ ಸರ್ಕಾರದಿಂದಲೇ ಜಾರಿಗೊಳಿಸುವ ಮೂಲಕ ತನ್ನ ದಶಕದ ಹೋರಾಟಕ್ಕೆ ಒಂದು ಸಾರ್ಥಕ ಅಂತ್ಯ ಕಾಣಿಸಬೇಕು ಎಂಬುದು ಸಿದ್ದರಾಮಯ್ಯ ಉದ್ದೇಶ
2005ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅಂದೇ ಜಾತಿಗಣತಿ ಘೋಷಣೆ ಮಾಡಿದ್ದರು. ಅದಕ್ಕಾಗಿ 19 ಕೋಟಿ ರೂಪಾಯಿ ಮೀಸಲಿರಿಸಿದ್ದರು. ಅನಿವಾರ್ಯ ಕಾರಣಾಂತರಗಳಿಂದ ಡಿಸಿಎಂ ಪೋಸ್ಟ್ನಿಂದ ವಜಾಗೊಂಡ ಸಿದ್ದರಾಮಯ್ಯ ವರದಿ ಅನುಷ್ಠಾನ ಆಗಲಿಲ್ಲ.
ಇದಾದ ಬಳಿಕ ಕಾಂಗ್ರೆಸ್ ಬಹುಮತದಿಂದ ಗೆದ್ದು ಬಂದ ಮೇಲೆ ಸಿದ್ದರಾಮಯ್ಯ ಅವರೇ ಸಿಎಂ ಆದರು. ಆಗ ₹170 ಕೋಟಿ ರೂಪಾಯಿ ವೆಚ್ಚ ಮಾಡಿ ಜಾತಿಗಣತಿ ನಡೆಸಿದರು. ಜಾತಿಗಣತಿ ವರದಿ ವಿಶ್ಲೇಷಣೆ ಹೊಣೆಯನ್ನ ಬಿಇಎಲ್ ಸಂಸ್ಥೆಗೆ ನೀಡಲಾಗಿತ್ತು.
ಇನ್ನು, ಬಿಜೆಪಿ ಸರ್ಕಾರಕ್ಕೆ ಜಾತಿಗಣತಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿರುವ ಸಿದ್ದರಾಮಯ್ಯ, ತನ್ನ ಅವಧಿಯಲ್ಲಿ ಯಾಕೆ ಮಾಡಲಿಲ್ಲ ಎಂಬುದು ಗೊತ್ತಿರುವ ವಿಚಾರ. ಹಾಗಾಗಿಯೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನುಷ್ಠಾನ ಮಾಡಲಿಲ್ಲವೇಕೆ ಎಂಬ ಪ್ರಶ್ನೆ ಬಿಜೆಪಿ-ಜೆಡಿಎಸ್ ಕೇಳುತ್ತಿವೆ. ಇದಕ್ಕೆ ಅಧಿವೇಶನದಲ್ಲೇ ಉತ್ತರ ಕೊಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ.
ಜಾತಿ ಗಣತಿ ಅನುಷ್ಠಾನಕ್ಕೆ ಒತ್ತಾಯಿಸಿ ಸದನದಲ್ಲಿ ಹೋರಾಟ ಮಾಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಬಿ.ಕೆ ಹರಿಪ್ರಸಾದ್, ಶಾಮನೂರು ಶಿವಶಂಕರಪ್ಪ, ಎಂ.ಬಿ ಪಾಟೀಲ್ ಸೇರಿದಂತೆ ಹಲವು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯ ಈ ಹೋರಾಟಕ್ಕೆ ಮುಂದಾಗಿದ್ದಾರೆ ಎಂಬುದು ಗಮನಾರ್ಹ.
ಜಾತಿಗಣತಿ ಒಂದಡೆ, ಸಚಿವ ಸಂಪುಟ ರಚನೆಯಿಂದಾಗಿ ಉಂಟಾದ ಗೊಂದಲ ಮತ್ತೊಂದೆಡೆ. ಸಚಿವರ ಅಧಿಕಾರ ಸ್ವೀಕರಿಸಲು ವಿಳಂಬ ನೀತಿ, ಶಶಿಕಲಾ ಜೊಲ್ಲೆ ಪ್ರಕರಣ, ಕೊರೋನಾ ನಿಯಂತ್ರಣ, ಮೈಸೂರು ಗ್ಯಾಂಗ್ರೇಪ್, ಗೃಹ ಸಚಿವರ ಹೇಳಿಕೆ ಸೇರಿ ಹಲವಾರು ಅಸ್ತ್ರಗಳು ಸದನದಲ್ಲಿ ಸದ್ದಾಗುವ ಸಾಧ್ಯತೆಗಳಿವೆ.