ಇಂದು ವಿಘ್ನೇಶ್ವರ ಗಣೇಶ ಚುತುರ್ಥಿ ಹಬ್ಬ ಚರಣೆಯಾಗುತ್ತಿದೆ. ಕೊರೋನಾ ತಗ್ಗಿರುವ ಹಿನ್ನೆಲೆ ಸರ್ಕಾರ ಚೌತಿ ಆಚರಣೆಗೆ ಷರತ್ತು ಬದ್ಧ ಅನುಮತಿಕೊಟ್ಟಿದೆ. ಹೀಗಾಗಿ ನಾಡಿನ ಎಲ್ಲೆಡೆ ಅದ್ದೂರಿಯಾಗಿ ಗೌರಿ ಗಣೇಶ ಹಬ್ಬ ಆಚರಣೆಯಾಗುತ್ತಿದೆ. ಪ್ರತಿ ವರ್ಷವೂ ಅದ್ದೂರಿಯಾಗಿ ಬೆಂಗಳೂರಿನ ಪ್ರಸಿದ್ಧ ದೊಡ್ಡಗಣಪತಿ ದೇವಸ್ಥಾನದಲ್ಲೂ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಸಾರ್ವಜನಿಕವಾಗಿ ಆಚರಿಸಿದೆ ಎಂದಿನಂತೆ ಪೂಜೆ ಕೈಕಂರ್ಯಗಳನ್ನು ಮಾತ್ರ ದೊಡ್ಡ ಗಣಪತಿ ದೇವಾಲಯದಲ್ಲಿ ನೆರವೇರಲಿದೆ. ಅಷ್ಟಕ್ಕೂ ಏನು ಈ ಖ್ಯಾತ ದೊಡ್ಡಗಣಪತಿ ದೇವಸ್ಥಾನದ ಹಿನ್ನೆಲೆ.? ಇಲ್ಲಿನ ವಿಶೇಷವೇನು.? ಈ ದೇವಸ್ಥಾನಕ್ಕೆ ದೊಡ್ಡಗಣಪತಿ ಎಂಬ ಹೆಸರಾದರೂ ಹೇಗೆ ಬಂತು..?
ಗಣೇಶ ಶಿವ ಮತ್ತು ಪಾರ್ವತಿಯ ಪುತ್ರನೆಂಬುವುದು ಐತಿಹ್ಯದ ನಂಬಿಕೆ. ಅಂಥಾ ಗಣೇಶನ ಹುಟ್ಟುಹಬ್ಬವೇ ಈ ಗಣೇಶ ಚತುರ್ಥಿ. ಈ ಗಣೇಶನ ಆರಾಧ್ಯ ದೇವಾಲಯವೇ ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡಗಣಪತಿ ದೇವಸ್ಥಾನ. ಸುಮಾರು 500ಕ್ಕೂ ಅಧಿಕ ವರ್ಷದ ಹಳೆತನ ಈ ದೇವಸ್ಥಾನಕ್ಕಿದೆ. ಬ್ರಹ್ಮಾಂಡರೂಪಿಯಾಗಿ ಇಲ್ಲಿನ ಗರ್ಭಗುಡಿಯಲ್ಲಿ ವಿಘ್ನೇಶ್ವರನನ್ನು ಪ್ರತಿಷ್ಟಾಪಿಸಲಾಗಿದೆ. ಕ್ರಿ.ಶ 1536ರಲ್ಲಿ ಕೆಂಪೇಗೌಡರ ಕಾಲದಲ್ಲಿ ಈ ದೊಡ್ಡಗಣಪತಿ ದೇವಸ್ಥಾನವನ್ನು ನಿರ್ಮಿಸಲಾಯ್ತು. ಧರೆಯ ಗರ್ಭದಿಂದ ಚಿಗುರೊಡೆದ ವಿಗ್ರಹ ನಂತರದ ದಿನಗಳಲ್ಲಿ ವಿನಾಯಕನನ್ನು ಹೋಲುವಂತೆ ರೂಪುಗೊಂಡಿತು. ಇದೇ ಕಾರಣಕ್ಕೆ ಕೆಂಪೇಗೌಡರ ಕಾಲದಲ್ಲಿ ಕೃತಕವಾಗಿ ಬ್ರಹ್ಮಾಂಡ ಕಲ್ಲಿಗೆ ವಿಘ್ನೇಶ್ವರನ ರೂಪ ನೀಡಲಾಯ್ತು ಎಂಬ ನಂಬಿಕೆ ಇದೆ. ಅದಾಗಿ 1983ರ ನಂತರ ಈ ದೊಡ್ಡಗಣಪತಿ ದೇವಾಲಯ ಹಲವು ಬಾರಿ ಜೀರ್ಣೋದ್ದಾರವಾಗಿದೆ. ಅಂದಹಾಗೆ, ಇಡೀ ಬೆಂಗಳೂರಿನ ಮೂಲ ಕುರುಹುಗಳನ್ನು ಈ ದೊಡ್ಡಗಣಪತಿ ದೇವಾಲಯ ಪ್ರತಿಬಿಂಬಿಸುತ್ತದೆ ಎಂಬ ವಾದವೂ ಇವೆ.
ವಿನಾಯಕನ ಮೂಲ ವಿಗ್ರಹ ಇರುವ ಗರ್ಭಗುಡಿ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಗಿರುವಂತದ್ದು. ಇದರ ಹೊರತಾಗಿ ಆವರಣ, ಹೊರಗಿನ ಕಟ್ಟಡ, ಗೋಪುರ.. ಹೀಗೆ ಎಲ್ಲವೂ ಕಾಲಾಕಾಲಕ್ಕೆ ಹಲವರಿಂದ ನಿರ್ಮಿತವಾದಂತವು. ಈ ಗಣೇಶನ ವಿಶೇಷತೆ ಏನೆಂದರೆ ಇಲ್ಲಿನ ಗರ್ಭಗುಡಿಯಲ್ಲಿನ ವಿಗ್ರಹವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. ಒಟ್ಟು 11 ಅಡಿ ಉದ್ದ ಹಾಗೂ 16 ಅಡಿ ಅಗಲದ ವಿಘ್ನೇಶ್ವರನ ವಿಗ್ರಹವಿದು. ಇದೇ ಕಾರಣಕ್ಕೆ ದೊಡ್ಡಗಣಪತಿ ಆಕರ್ಷಣೀಯ ಮತ್ತು ಭಕ್ತಾಧಿಗಳ ನೆಮ್ಮದಿ ತಾಣ ಕೂಡ ಹೌದು. ಮುಜರಾಯಿ ಇಲಾಖೆ ಅಧೀನದಲ್ಲಿ ಬರುವ ಈ ದೇವಸ್ಥಾನ ಇತ್ತೀಚೆಗೆ ಮತ್ತಷ್ಟು ಚೆಂದಗಾಣಿಸಲಾಗಿದೆ. ಮುಖ್ಯವಾಗಿ ಈ ದೊಡ್ಡಣಗಪತಿ ದೇವಸ್ಥಾನಲ್ಲಿನ ಪ್ರತಿಷ್ಟಾಪನೆ ಮಕ್ಕಳಿಗೆ ಪ್ರಿಯ. ಪರೀಕ್ಷೆ ಬರೆಯುವುದುಕ್ಕೂ ಮೊದಲು ಬಂದು ಇಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಉತ್ತಮ ಅಂಕ ಪಡೆಯಬಹುದು ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಇದೇ ಕಾರಣಕ್ಕೆ ಇಲ್ಲಿ ವಿಧ್ಯಾರ್ಥಿಗಳ ದಂಡೇ ಇರುತ್ತದೆ.
ವಾರದ ಎರಡು ದಿನಗಳ ಕಾಲ ಗಣಪತಿಗೆ ಬೆಣ್ಣೆ ಅಲಂಕಾರ ಎಂಬ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ಗೌರಿ ಗಣೇಶ ಹಬ್ಬದ ಸಮಯದಲ್ಲಿ ಭಕ್ತಾಧಿಗಳ ಬೇಡಿಕೆಗೆ ಅನುಗುಣವಾಗಿ ಈ ವಿಶೇಷ ನೆರವೇರಲಿದೆ. ಸದ್ಯ ಕೊರೋನಾ ಭೀತಿ ತಲೆದೂರಿರುವ ಕಾರಣಕ್ಕೆ ಗುಂಪುಗಟ್ಟಿಸಿ ವಿಶೇಷ ಪೂಜೆಗಳನ್ನು ನಡೆಸುವುದುನ್ನೂ ನಿಲ್ಲಿಸಲಾಗಿದೆ. ಡಾ. ರಾಜ್ ಕುಮಾರ್ ಅಭಿನಯದ ಎರಡು ಕನಸು ಎಂಬ ಸಿನಿಮಾದ ಕೆಲ ಭಾಗದ ಚಿತ್ರೀಕರಣವನ್ನೂ ಇಲ್ಲಿ ನಡೆಸಲಾಗಿದೆ. ಅಷ್ಟೇ ಯಾಕೆ ಹಿರಿಯ ನಟ ಅಮಿತಾಬ್ ಬಚ್ಚನ್ ಕೂಲಿ ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾಗ ಶೀಘ್ರ ಗುಣವಾಗಲು ಇದೇ ದೊಡ್ಡಗಣಪತಿ ದೇವಸ್ಥಾನಕ್ಕೆ ಬೆಣ್ಣೆ ಅಲಂಕಾರದ ಹರಕೆ ಹೊತ್ತುಕೊಂಡಿದ್ದರಂತೆ. ಒಟ್ಟಾರೆ ಇಲ್ಲಿನ ಗಣ್ಯಾತಿಗಣ್ಯರೂ ವಿಘ್ನೇಶ್ವರನ ಭಕ್ತರು.