ಆಗಸ್ಟ್ ತಿಂಗಳ ಆರಂಭದಲ್ಲಿ ತಾಲೀಬಾನರು ಅಫ್ಗಾನಿಸ್ತಾನದ ಪ್ರಾಂತ್ಯಗಳನ್ನು ಆಕ್ರಮಿಸುತ್ತಿರುವಾಗ ಕಾಬುಲ್ ಮೂಲದ ವಾಯುವಿಹಾರ ವೃತ್ತಿನಿರತರಾದ ಸಾದ್ಯಾ ಪೊಪಲ್ಜಾಯ್ ಅವರು ಮತ್ತೊಂದು ವೈಯಕ್ತಿಕ ಸಮಸ್ಯೆಯನ್ನು ಎದುರಿಸದರು. ಅವರ ತಂದೆ ರಕ್ತಕೊರತೆಯಿಂದ ಸ್ಟ್ರೋಕ್ ಗೆ ಒಳಗಾಗಿದ್ದರು.
ಸಾವಿರಾರು ಅಫ್ಗನರ ಹಾಗೆಯೇ, ಅವರು ವೈದ್ಕಕೀಯ ನೆರವಿಗಾಗಿ ಭಾರತದ ಕಡೆ ತಿರುಗಿದರು. ಹೇಗಿದ್ದರೂ ಆರು ವರ್ಷಗಳ ಮುನ್ನ ಫರಿದಾಬಾದಿನ ಆಸ್ಪತ್ರೆಯೊಂದರಲ್ಲಿ ಅವರ ತಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಪಾಸ್ಪೋರ್ಟಿನ ಮೇಲೆ ವೀಸಾವನ್ನು ಅಚ್ಚೊತ್ತಿಸಿಕೊಂಡು ಆಗಸ್ಟ್ 15ರ ದೆಹಲಿಯ ವಿಮಾನಕ್ಕೆ ಟಿಕೆಟ್ಗಳನ್ನು ಕಾಯ್ದಿರಿಸಿದ್ದರು. ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುವುದರಲ್ಲಿದ್ದರು.
ಅಂದು ತಾಲೀಬಾನರು ಅಫ್ಗಾನಿಸ್ತಾನವನ್ನು ಪುನರಾಕ್ರಮಿಸಿಕೊಳ್ಳಲು ಕಾಬುಲ್ ನಗರವನ್ನು ಪ್ರವೇಶಿಸಿದರು. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಎಲ್ಲವೂ ಬದಲಾಗಿತ್ತು. ವಿಮಾನ ನಿಲ್ದಾಣವನ್ನು ತಲುಪಿ ವಿಮಾನಯೇರುವುದು ಸಾಧ್ಯವಾಗದ ಕೆಲಸವಾಯಿತು.
ಹತ್ತು ದಿನಗಳ ನಂತರ, ನವ ದೆಹಲಿ ಆಫ್ಗಾನರ ಎಲ್ಲಾ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದಾಗ ಅವರಿಗೆ ಮತ್ತೊಂದು ಆಘಾತವಾಯಿತು, ವಿಮಾನ ನಿಲ್ದಾಣ ಇನ್ನೂ ಚಾಲ್ತಿಗೆ ಬಂದಿರಲಿಲ್ಲ. ಆದರೆ ರಿಪೇರಿಗಳು ನಡೆಯುತ್ತಿದ್ದವು ಮತ್ತು ಅಂತರಾಷ್ಟ್ರೀಯ ನಾಗರೀಕ ವಿಮಾನಗಳು ದಿಗಂತದಂಚಿನಲ್ಲಿದ್ದವು.
ಏರಿಯಾನಾ ಏರ್ಲೈನ್ಸ್ ನಲ್ಲಿ ಕೆಲಸ ಮಾಡುವ ಪೊಪಲ್ಜಾಯ್ ಅವರಿಗೆ ಏನು ಮಾಡುವುದೆಂದು ತೋಚಲೇ ಇಲ್ಲ.
“ಅವರ ಚಿಕಿತ್ಸೆಗೆ ಕಾಬುಲ್ ನಲ್ಲಿ ಸರಿಯಾದ ಸೌಕರ್ಯಗಳಿಲ್ಲ. ಮನೆಯಲ್ಲಿ ಎಲ್ಲರೂ ಅಳುತಲಿದ್ದಾರೆ. ಅಫ್ಗಾನಿಸ್ತಾನದ ಪರಿಸ್ಥಿತಿ ನಿಮಗೆಲ್ಲಾ ತಿಳಿದಿದ್ದೇ. ಎಲ್ಲವೂ ಒಂದೇ ಸಮಯದಲ್ಲಿ ನಡೆಯುತ್ತಿದೆ.” ಎಂದರು.
ಹೊಸದಾಗಿ ಪರಿಚಯಿಸಿರುವಂತಹ ‘ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ’ ಗಾಗಿ ಎರಡು ವಾರಗಳ ಹಿಂದೆಯೇ ಪೊಪಾಲ್ಜಾಯ್ ಅವರ ಕುಟುಂಬ ಅರ್ಜಿ ಸಲ್ಲಿಸಿದೆ. ಅವರ ಅರ್ಜಿಯ ರಸೀದಿಯಲ್ಲಿ ಪರಿಷ್ಕರಣ ಸಮಯ 72 ಘಂಟೆಗಳು ಎಂದು ಹೇಳಲಾಗಿದೆ. ಆದರೆ ಅವರಿಗಿನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ದೊರಕಿಲ್ಲ.
“ದಯವಿಟ್ಟು ನಮಗೆ ಸಹಾಯ ಮಾಡಿ. ನಾವು ಭಾರತಕ್ಕೆ ಬರಲೇಬೇಕು.” ಕಾಬುಲ್ ನಿಂದ ಬಂದ ಕರೆಯಲ್ಲಿ ಅವರ ಧ್ವನಿ ಕಂಪಿಸುತ್ತಿತ್ತು.
ಪೊಪಾಲ್ಜಾಯ್ ಅವರ ಕತೆ ವಿಭಿನ್ನವಾದದ್ದೇನಲ್ಲ. ವೀಸಾ ರದ್ದತಿಯ ನಿರ್ಧಾರ ಮತ್ತು ವಿಶೇಷ ಬಗೆಯ ಈ-ವೀಸಾ ಹೊರಡಿಸುವುದರ ಕುರಿತು ಭಾರತ ವಹಿಸಿರುವ ಮೌನದ ಬಗ್ಗೆ ಚಿಂತೆಗೊಳಗಾಗಿರುವ ಹಲವಾರು ಅಫ್ಗಾನ್ ನಾಗರೀಕರೊಡನೆ ದ ವೈರ್ ಸಂಭಾಷಣೆ ನಡೆಸಿತು.
ನಜೀಬಾ ಎಂಬ ಸ್ತ್ರೀರೋಗತಜ್ಞರು ತಮ್ಮ ತಾಯಿಯನ್ನು ಕೀಮೋತೆರಪಿಗಾಗಿ ಕಳೆದ ಸೆಪ್ಟೆಂಬರ್ ನಿಂದ ಮೂರು ತಿಂಗಳಿಗೊಮ್ಮೆ AIIMS ಗೆ ಕರೆದೊಯ್ಯುತ್ತಿದ್ದಾರೆ.
“ಭಾರತದ ಎಲ್ಲಾ ವೀಸಾಗಳು ರದ್ದಾಗಿರುವುದನ್ನು ತಿಳಿದು ನಾನು ತಲ್ಲಣಗೊಂಡಿದ್ದೇನೆ. ನಮ್ಮ ಮುಂಚಿನ ವೀಸಾವನ್ನು ದಯಮಾಡಿ ವಾಪಸ್ ನೀಡಿ. ನಾವೆಂದಿಗೂ ಇಂತಹ ಸಮಸ್ಯೆಯನ್ನು ಎದುರಿಸಿಲ್ಲ. ವೀಸಾ ಯಾಕೆ ರದ್ದಾಯಿತು ಎಂಬುದು ನನಗೆ ಅರ್ಥವೇ ಆಗುತ್ತಿಲ್ಲ.” ಎಂದು ವೈರ್ ಬಳಿ ಹೇಳಿಕೊಂಡರು.
ಕಳೆದ 20 ವರ್ಷಗಳಲ್ಲಿ ಭಾರತವು 3 ಬಿಲಿಯನ್ ಡಾಲರ್ ಗಳಿಗೂ ಹೆಚ್ಚಿನ ಮೌಲ್ಯದ ಅಫ್ಗಾನಿಸ್ತಾನದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸಿದೆ.
ಅಫ್ಗಾನರ ವೈದ್ಯಕೀಯ ಚಿಕಿತ್ಸೆಗೆ, ವಿದ್ಯಾರ್ಥಿಗಳಿಗೆ ಮತ್ತು ವೃತತ್ತಿಪರರಿಗೆ ಉದಾರವಾದ ವೀಸಾ ನೀತಿಗಳನ್ನು ಹೊರಡಿಸುವುದರ ಮೂಲಕ ಅಲ್ಲಿನ ಜನರ ಮೇಲೂ ನವದೆಹಲಿ ಗಣನೀಯ ಪ್ರಮಾಣದ ಹೂಡಿಕೆ ಮಾಡಿದೆ. 1990ರ ನಂತರ ಅಫ್ಗಾನಿಸ್ತಾನದ ಜೊತೆಗೆ ಕಳೆದುಕೊಂಡ ಸಂಪರ್ಕವನ್ನು ಮತ್ತೆ ಬೆಳೆಸಲು ಇಂತಹ ನೀತಿಗಳನ್ನು ನಿಧಾನವಾಗಿ ಜಾರಿಗೆ ತರಲಾಗಿತ್ತು.
ದ ಟೈಮ್ಸ್ ಆಫ್ ಇಂಡಿಯಾದ ಇತ್ತೀಚೆಗಿನ ವರದಿಯೊಂದರಲ್ಲಿ, ಅಫ್ಗಾನಿಸ್ತಾನಕ್ಕೆ ಮಾಜಿ ಭಾರತೀಯ ರಾಯಭಾರಿಯಾಗಿದ್ದ ಜಯಂತ್ ಪ್ರಸಾದ್ ಅವರು “ಅಫ್ಗಾನಿಸ್ತಾನದಲ್ಲಿ ಹೊಸ ಆಡಳಿತ ಬಂದಿರುವ ಸಂದರ್ಭದಲ್ಲಿ, ಅಫ್ಗಾನ್ ಜನರಸಮಾನ್ಯರೊಡನೆ ಸಂಪರ್ಕವನ್ನು ಮತ್ತು ಈ ಹಿಂದೆ ಸಂಪಾದಿಸಿರುವ ಅನುಕೂಲಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ.” ಅಂದು ಮನವಿ ಮಾಡಿಕೊಂಡಿದ್ದರು.
ವೀಸಾ ನೀತಿಯ ಜಾರಿಯ ಕುರಿತು ಭಾರತ ಸರ್ಕಾರ ವಹಿಸಿರುವ ಮೌನವು ಹೆಚ್ಚುತ್ತಿರವ ತಲ್ಲಣಕ್ಕೆ ಕಾರಣವಾಗಿದೆ.
ಕಾಬುಲ್ ಪತನಗೊಂಡ ಎರಡು ದಿನಗಳಲ್ಲೇ ಭಾರತ ಘೋಷಿಸಿದ್ದ ಈ-ವೀಸಾ ಕ್ಯಾಟಗರಿ ಪ್ರಶಂಸೆಗೆ ಪಾತ್ರವಾಗಿತ್ತು. ಮಿಲಿಟರಿ ವಿಮಾನಗಳನ್ನು ಅಫ್ಗಾನರು ಮುತ್ತು ಹಾಕುತ್ತಿದ್ದ ದೃಶ್ಯಗಳು ಹಾಗು ಪಶ್ಚಿಮ ದೇಶಗಳು ತಮ್ಮ ಸೈನಿಕರನ್ನು ಹಿಂಪಡೆಯುವುದಕ್ಕೆ ಪರದಾಡುತ್ತಿರುವ ದೃಶ್ಯಗಳು ಜಾಗತಿಕ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ಮೊದಲ ಒಂದಿಷ್ಟು ದಿನಗಳಲ್ಲಿ ಭಾರತದ ಘೋಷಣೆಯನ್ನು ವಿಶೇಷವಾಗಿ ಗುರುತಿಸಲಾಗಿತ್ತು.
ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓರಿಯೆಂಟಲ್ ಆಂಡ್ ಆಫ್ರಿಕನ್ ಸ್ಟಡೀಸ್ ನ ಹಿರಿಯ ಆಧ್ಯಾಪಕರು ಮತ್ತು ಭಾರತ-ಅಫ್ಗಾನ್ ಸಂಬಂಧಗಳನ್ನು ದಾಖಲಿಸಿಕೊಂಡಿರುವ ಒಂದು ಪುಸ್ತಕದ ಲೇಖಕರಾದ ಅವಿನಾಶ್ ಪಾಲಿವಲ್ ಆ ಘೋಷಣೆಯನ್ನು ನವದೆಹಲಿಯಿಂದ ಬಂದಿರುವ ಪ್ರಮುಖ ‘ರಾಜಕೀಯ ಸೂಚನೆ’ ಎಂದು ಗಮನಿಸಿದ್ದರು.
“ಹಲವಾರು ದೇಶಗಳು ಅಫ್ಗಾನರಿಗೆ ಯಾವುದೇ ರೀತಿಯ ಸ್ಥಳಾವಕಾಶ ಮಾಡಿಕೊಡಲು ಸಿದ್ಧವಿರದ ಸಂದರ್ಭದಲ್ಲಿ ಅಥವಾ ಅಪೂರ್ಣ ಸ್ಥಳಾವಕಾಶ ಮಾಡಿಕೊಡಲು ತಯಾರಿರುವಾಗ ಈ ಘೋಷಣೆ ಬಂದಿದೆ. ಧಾರ್ಮಿಕತೆಗೂ ಮಿಗಿಲಾಗಿ ತಾತ್ಕಾಲಿಕವಾಗಿಯಾದರೂ ವೀಸಾ ನೀತಿಯನ್ನು ತೆರೆದಿಡುವ ನಿರ್ಧಾರ ಒಂದು ಸಶಕ್ತ ರಾಜಕೀಯ ಸೂಚನೆಯಾಗಿದೆ. ಜೊತೆಗೆ ಆಂತರಿಕ ದೃಷ್ಟಿಕೋನದಿಂದ, ಸಿ.ಎ.ಎ. (ಪೌರತ್ವ ತಿದ್ದುಪಡಿ ಕಾಯ್ದೆಯ) ಕುರಿತು ಬಹಳಷ್ಟು ಚರ್ಚೆಗಳು ನಡೆದಿವೆ. ಒಳಬರುತ್ತಿರುವ ಎಲ್ಲಾ ಅಫ್ಗಾನರಿಗೆ ಬಾಗಿಲನ್ನು ತೆರದಿಡುವುದಕ್ಕೆ ಒಂದು ರೀತಿಯ ಆಂತರಿಕ ರಾಜಕೀಯ ಮರ್ಗಡುವಿಕೆಯಿದೆ.” ಎಂದು ದ ವೈರ್ ಗೆ ಪಾಲಿವಾಲ್ ಹೇಳಿದರು.
ಫೇಸ್ಬುಕ್ ಮತ್ತು ಟೆಲಿಗ್ರಾಮ್ ಚಾನಲ್ ಗಳ ಮೂಲಕ ಹೊಸ ಈ-ವೀಸಾಗಾಗಿ ಅರ್ಜಿ ಸಲ್ಲಿಸಬಹುದು ಎಂಬ ಸುದ್ದಿ ಹರಡಿದಾಗ ಅರ್ಜಿ ಸಲ್ಲಿಸುವುದಕ್ಕೆ ಬಹುದೊಡ್ಡ ಸಂಖ್ಯೆಯಲ್ಲಿ ಜನ ಮುಂದೋಡಿದರು.
ಪತ್ರಿಕಾ ಸಭೆಗಳಲ್ಲಿ ಪ್ರಶ್ನೆಗಳನ್ನು ಕೇಳಿದರೂ, ಇಂದಿನ ವರೆಗೆ ಸರಕಾರ ಬಂದಿರುವ ಅರ್ಜಿಗಳ ಸಂಖ್ಯೆ ಯನ್ನು ಪ್ರಕಟಿಸಿಲ್ಲ.
ಹತ್ತು ದಿನಗಳ ಹಿಂದೆ ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾದ ಆನ್ಲೈನ್ ಅರ್ಜಿದಾರರ ಸಂಖ್ಯೆ ಸುಮಾರು 15,000 ಎಂದು ತಿಳಿದುಬಂದಿದೆ. ಈ ಸಂಖ್ಯೆ ಸುಮಾರು 25,000 ದಿಂದ 30,000 ಕ್ಕೆ ಹೆಚ್ಚಾಗಿದೆ.
ವೀಸಾ ನೀತಿಯನ್ನು ಜಾರಿಗೆ ತರುವ ಜವಾಬ್ದಾರಿಯಿರುವ ಗೃಹ ಸಚಿವಾಲಯ ಎಷ್ಟು ವೀಸಾಗಳನ್ನು ನೀಡಲಾಗಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಆದರೆ ವಿವಿಧ ಮೂಲಗಳ ಪ್ರಕಾರ ಆನ್ಲೈನ್ ವೀಸಾ ಅರ್ಜಿಗಳು ತ್ರಿಶಂಕು ಸ್ಥಿತಿಯಲ್ಲಿ ಉಳಿದಿದೆ.
ಬಲ್ಲ ಮೂಲಗಳ ಪ್ರಕಾರ ಈ-ವೀಸಾ ಪಡೆಯಲು ನಿಭಾಯಿಸಿರುವ ಅರ್ಜಿದಾರರ ಸಂಖ್ಯೆ ಬಹಳ ಕಡಿಮೆ. ಈ-ವೀಸಾ ಪಡೆಯುವುದರಲ್ಲಿ ಯಶಸ್ವಿಯಾಗಿರುವವರ ಸಂಖ್ಯೆಯನ್ನು ತಿಳಿಯಲು ದ ವೈರ್ ಗೃಹ ಸಚಿವಾಲಯವನ್ನು ಸಂಪರ್ಕಿಸಿದೆ. ಆದರೆ ಇಲ್ಲಿಯ ವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ದೊರಕಿಲ್ಲ.
ಎಮರ್ಜನ್ಸಿ ಈ-ವೀಸಾಗಾಗಿ ಅರ್ಜಿ ಸಲ್ಲಿಸಿರುವವರಲ್ಲಿ ಬಹುಪಾಲ ಜನರ ವೀಸಾಗಳನ್ನು ಆಗಸ್ಟ್ 25ರ ಸೂಚನೆ ‘ಅಮಾನ್ಯ’ಗೊಳಿಸಿತ್ತು,
ಆಗಸ್ಟ್ 17 ರಂದು ಎರಡು ವರ್ಷದ ಮಗುವೊಂದರ ತಂದೆಯಾಗಿರುವ ನವಾಬ್ (ಹೆಸರನ್ನು ಬದಲಾಯಿಸಲಾಗಿದೆ) ತಮ್ಮ ಹೆಂಡತಿಯ ಬ್ರೈನ್ ಟ್ಯೂಮರ್ ಚಿಕಿತ್ಸೆಗಾಗಿ ಕಾಬುಲ್ ನಿಂದ ಹೊರಡಬೇಕಿತ್ತು. ಆ ಸನ್ನಿವೇಶ ಬಹಳ ಬಿಕ್ಕಟ್ಟಿನ ಸನ್ನಿವೇಶವಾಗಿದ್ದು, ಸರಿಯಾದ ವೈದ್ಯಕೀಯ ಸೌಕರ್ಯಗಳು ದೊರೆಯದೇ ಅವರ ನಾದಿನಿ ತಮ್ಮ ಖಾಯಿಲೆಯೊಂದಿಗೆ ನರಳುತ್ತಿದ್ದರು ಎಂದು ನವಾಬರ ತಂಗಿ ವಿವರಿಸುತ್ತಾರೆ. “ವೀಸಾಗಳನ್ನು ಯಾಕೆ ರದ್ದು ಪಡಿಸಿದರು ಎಂಬುದು ನನಗೆ ತಿಳಿಯುತ್ತಲೇ ಇಲ್ಲ. ಇದೀಗ ಭಾರತಕ್ಕೆ ಪ್ರಯಾಣಿಸುವ ಕುರಿತು ಯಾವ ಮಾಹಿತಿಯೂ ನಮಗಿಲ್ಲ.” ಎಂದು ಅವರು ಹೇಳಿದರು.
“ಮುಂಚೆ ನೀಡಿದ್ದ ವೀಸಾಗಳನ್ನು ಭಾರತ ಯಾಕೆ ರದ್ದು ಪಡಿಸಿತು?”
ಮುಂಚೆ ನೀಡಿದ್ದ ವೀಸಾಗಳನ್ನು ಯಾಕೆ ರದ್ದು ಪಡಿಸಲಾಯಿತು ಎಂಬುದರ ಬಗ್ಗೆ ವೀಕ್ಷಕರಿಗೆ ಸ್ಪಷ್ಟತೆಯಿಲ್ಲ. ಹಲವಾರು ವರ್ಷಗಳ ಕಾಲ ಅಫ್ಗಾನಿಸ್ತಾನದೊಡನೆ ವ್ಯವಹರಿಸಿದ ಗುರುತಿಸಿಕೊಳ್ಳಲಿಚ್ಛಿಸಿದ ಸರ್ಕಾರಿ ಅಧಿಕಾರಿಯೊಬ್ಬರು ಈ ನಡೆಯನ್ನು ಬಹಳ ಸಂಕುಚಿತ ನಡೆಯೆಂದು ಕರೆದಿದ್ದಾರೆ.
ಆಗಸ್ಟ್ 27ರಂದು ನಡೆದ ಸಾಪ್ತಾಹಿಕ ಪತ್ರಿಕಾ ಸಭೆಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರರು ಹೀಗೆ ಹೇಳಿದರು. ಆಗಸ್ಟ್ 15ರ ನಂತರ ಪರಿಸ್ಥಿತಿ ‘ತ್ವರಿತವಾಗಿ ಹದಗೆಟ್ಟಿದಾಗ’ ಭಾರತೀಯ ವೀಸಾಗಳಿದ್ದ ಅಫ್ಗಾನ್ ಪಾಸ್ಪೋರ್ಟ್ ಗಳನ್ನು ಇರಿಸಿದ್ದ ಹೊರಗುತ್ತಿಗೆ ಏಜನ್ಸಿಗೆ ಗುಂಪೊಂದು ಮುತ್ತಿಗೆ ಹಾಕಿದ ವರದಿಗಳು’ ಇದ್ದವು.
“ಹಾಗಾಗಿ ಭಾರತೀಯ ವೀಸಾಗಳಿದ್ದ ಅಫ್ಗಾನ್ ಪಾಸ್ಪೋರ್ಟ್ ಗಳು ಕಳುವಾದ ಕಾರಣದಿಂದಾಗಿ ನಮ್ಮ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದರು. ಇದರೊಂದಿಗೆ ನಾವು ಈ-ಎಮರ್ಜನ್ಸಿ ವೀಸಾ ವ್ಯವಸ್ಥೆಯ ಕಡೆಗೆ ಚಲಿಸುತ್ತಿದ್ದೆವು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.” ಎಂದರು.
ಆಗಸ್ಟ್ 20ರಂದು ಅಫ್ಗಾನ್ ಸಂಸದೆಯೊಬ್ಬರು ಭಾರತಕ್ಕೆ ಬಂದಾಗ ಅವರನ್ನು ಕೂಡಲೇ ಗಡಿಪಾರು ಮಾಡಲಾಗಿತ್ತು ಎಂದು ಇಂಡಿಯನ್ ಎಕ್ಸ್ಪ್ರೆಸ್ ಮೊದಲು ವರದಿ ಮಾಡಿತ್ತು. ಈ ಹಿನ್ನಲೆಯಲ್ಲಿ ಕೇಳಿದ ಪ್ರಶ್ನೆಗೆ ದೊರಕಿದ ಉತ್ತರ ಮೇಲಿನದ್ದು.
ಎಲ್ಲಾ ವೀಸಾಗಳನ್ನು ರದ್ದು ಪಡಿಸುವ ಗೃಹ ಸಚಿವಾಲಯದ ನಿರ್ಧಾರಕ್ಕೆ ಇದೇ ಕಾರಣ ಎಂದು ಅಧೀಕೃತ ಮೂಲಗಳು ಅನೌಪಚಾರಿಕವಾಗಿ ಉಲ್ಲೇಖಿಸಿವೆ.
“ಆಗಸ್ಟ್ 15 ಮತ್ತು 16ರ ನಡುವೆ ಪಾಕಿಸ್ತಾನ ISI ನ ಬೆಂಬಲದೊಂದಿಗೆ ಸಶಸ್ತ್ರ ಉರ್ದು ಭಾಷಿಗರ ಗುಂಪೊಂದು ಕಾಬುಲ್ ನ ಖಾಸಗಿ ಟ್ರಾವೆಲ್ ಏಜನ್ಸಿಯಂದರ ಮೇಲೆ ದಾಳಿ ನಡೆಸಿ ಭಾರತೀಯ ವೀಸಾಗಳಿದ್ದ ಅಫ್ಗಾನ್ ಪಾಸ್ಪೋರ್ಟ್ ಗಳನ್ನು ಕದ್ದಿದೆ” ಎಂದು ಭಾರತೀಯ ಪ್ರದೇಶದಾಚೆಯಿರುವವರಿಗೆ ನೀಡಿದ ವೀಸಾಗಳನ್ನು ರದ್ದು ಪಡಿಸಿದ ದಿನವೇ, CNN-News 18 ವರದಿ ಮಾಡಿತ್ತು.
ಮುಂಚೆ ನೀಡಿದ್ದ ವೀಸಾಗಳನ್ನು ರದ್ದು ಗೊಳಿಸಿದರ ಬಗ್ಗೆ ಮತ್ತು ಪಾಸ್ಪೋರ್ಟ್ ಗಳನ್ನು ಅಧೀಕೃತ ಏಜನ್ಸಿಯಿಂದ ಕದಿಯಲಾಗಿದೆಯೇ ಎಂದು ದ ವೈರ್ ಗೃಹ ಸಚಿವಾಲಯದ ವಕ್ತಾರರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಲು ನಿರಾಕರಿಸಿದ ವಕ್ತಾರರು ಆಗಸ್ಟ್ 25ರ ಸೂಚನೆಯನ್ನು ಮಾತ್ರ ಉಲ್ಲೀಖಿಸಿದರು. ಹಾಗಯೇ ಅಧೀಕೃತ ಪತ್ರಿಕಾ ಪ್ರಕಟನೆಯ ಪ್ರಕಾರ ಕೇವಲ ಕೆಲವು ಪಾಸ್ಪೋರ್ಟ್ ಗಳಷ್ಟೇ ‘ಮಿಸ್ಪ್ಲೇಸ್’ ಆಗಿದೆ ಎಂದು ಹೇಳಿದರು.
ಕಳೆದ 12 ವರ್ಷಗಳಿಂದ ವೀಸಾ ಅರ್ಜಿಗಳ ಸಂಗ್ರಹಣೆಯನ್ನು ಶಾಹರ್-ಇ-ನೂರ್ ಬಡಾವಣೆಯಲ್ಲಿ ಬೃಹತ್ ಕಛೇರಿಯನ್ನು ಹೊಂದಿದ್ದ ಶಾಹಿರ್ ಟ್ರಾವೆಲ್ ಏಜನ್ಸಿಗೆ ಹೊರಗುತ್ತಿಗೆ ನೀಡಲಾಗಿತ್ತು.
ವೀಸಾಗಳ ಕುರಿತು ಗೃಹ ಸಚಿವಾಲಯ ಸೂಚನೆ ಹೊರಡಿಸಿದ ಮೂರು ದಿನಗಳ ನಂತರ, ಶಾಹಿರ್ ಟ್ರಾವೆಲ್ ಏಜನ್ಸಿಯ ಮುಖ್ಯಸ್ಥ ಮೊಹ್ದ್ ಕರೀಮ್ ದಸ್ತಾಗಿರ್ ಅವರು ತಮ್ಮ ವ್ಯಾಪಾರ ಸಂಸ್ಥೆಯ ಫೆಸ್ಬುಕ್ ಪೇಜಿನಲ್ಲಿ ಭಾರತೀಯ ಮಾಧ್ಯಮಗಳು ವರದಿ ಮಾಡಿರುವಂತೆ ಯಾವುದೇ ರೀತಿಯ ದಾಳಿಯಾಗಲಿ ಅಥವಾ ಕಳುವಾಗಲೀ ನಡೆದಿಲ್ಲ ಎಂದು ಬರೆದುಕೊಂಡಿದ್ದಾರೆ.
“ನಮಗೆ ಬಿಗಿ ಭದ್ರತೆಯನ್ನು ನೀಡಲಾಗಿದೆ. ನಮ್ಮೆಲ್ಲಾ ಸ್ವತ್ತುಗಳು ಭದ್ರವಾಗಿದ್ದೂ ಕಛೇರಿ ಚಾಲ್ತಿಯಲ್ಲಿದೆ. ರಾಜತಾಂತ್ರಿಕ ಕಾರ್ಯಗಳು ಪುನರಾರಂಭಗೊಳ್ಳುತ್ತಿದ್ದಂತೆಯೇ ನಾವು ಭಾರತೀಯ ರಾಯಭಾರದ ಪರವಾಗಿ ಭಾರತಕ್ಕೆ ವೀಸಾ ಅರ್ಜಿಗಳನ್ನು ಸ್ವೀಕರಿಸಲಾರಂಭಿಸುತ್ತೇವೆ.” ಎಂದು ಆಗಸ್ಟ್ 28ರ ಫೇಸ್ಬುಕ್ ಪೋಸ್ಟ್ ಹೇಳಿದೆ.
ಕಾಬುಲ್ ನ ಪತನದ ಮುನ್ನ, ಈ ಏಜನ್ಸಿಯು ಭಾನುವಾರದಿಂದ ಗುರುವಾರದ ವರೆಗು ವಾರಕ್ಕೆ ಐದು ದಿನಗಳಲ್ಲಿ ತಮ್ಮ ಕಛೇರಿಯಲ್ಲಿ ವ್ಯಕ್ತಿಗತವಾಗಿ ವೀಸಾ ಅರ್ಜಿಗಳನ್ನು ಸ್ವೀಕರಿಸುತ್ತಿತ್ತು. ಅರ್ಜಿದಾರ ಮೊದಲ ಬಾರಿ ಅರ್ಜಿ ಸಲ್ಲಿಸುವವರಾಗಿದ್ದರೆ ಅವರ ಫೋಟೋಗಳನ್ನು ಮತ್ತು ಬಯೋಮೆಟ್ರಿಕ್ಸ್ ಗಳನ್ನು ಪಡೆಯಲಾಗುತ್ತಿತ್ತು.
ಹೊರಗುತ್ತಿಗೆಯ ಏಜೆಂಟ್ ನಂತರ ಅರ್ಜಿದಾರರ ಎಲ್ಲಾ ಮಾಹಿತಿಯನ್ನು ಗೃಹ ಸಚಿವಾಲಯದ ‘ಎಮಿಗ್ರೇಷನ್, ವೀಸಾ ಆಂಡ್ ಫಾರಿನರ್ಸ್ ರೆಜಿಸ್ಟ್ರೇಷನ್ ಅಂಡ್ ಟ್ರ್ಯಾಕಿಂಗ್ ಸಿಸ್ಟಮ್’ ಗೆ ಅದೇ ದಿನದಂದು ಅಪ್ಲೋಡ್ ಮಾಡುತ್ತಿದ್ದರು. ವಿದೇಶಿಗರನ್ನು ತಮ್ಮ ವೀಸಾ ಅರ್ಜಿಯಿಂದ ಭಾರತದ ವಾಸದ ವರೆಗೂ ಕಣ್ಗಾವಲಿನಲ್ಲಿ ಇರಿಸಿಕೊಳ್ಳುವ ಈ ಜಾಲವು ಏಜನ್ಸಿಯನ್ನು ಭಾರತೀಯ ರಾಯಭಾರಕ್ಕೆ ಮತ್ತು ಗೃಹ ಸಚಿವಾಲಯಕ್ಕೆ ಸಂಪರ್ಕಿಸುತ್ತದೆ.
ಸಂಗ್ರಹಿಸಲಾಗುವ ಎಲ್ಲಾ ಪಾಸ್ಪೋರ್ಟ್ ಗಳನ್ನು ಭಾರತೀಯ ರಾಯಭಾರಕ್ಕೆ ಕಳಿಸಲಾಗುತ್ತಿತ್ತು ಮತ್ತು ರಾಯಭಾರ ಅರ್ಜಿಯನ್ನು ಪರಿಷ್ಕರಿಸಲು ಹತ್ತು ದಿನಗಳ ಕಾಲವನ್ನು ತಗೆದುಕೊಳ್ಳುತ್ತಿತ್ತು. ಈ ಪ್ರಕ್ರಿಯೆ ಅಫ್ಗಾನಿಸ್ತಾನದಲ್ಲಿ ನೀಡಿರುವ ಮಾಹಿತಿ ಮತ್ತು ಭಾರತದಲ್ಲಿ ನೀಡಿರುವ ಮಾಹಿತಿ ಮತ್ತು ಇತರ ದಾಖಲೆಗಳ ಪರಿಶೀಲನೆಯನ್ನು ಒಳಗೊಳ್ಳುತ್ತಿತ್ತು.
ಹತ್ತು ದಿನಗಳ ನಂತರ, ರಾಯಭಾರದ ಅಧಿಕಾರಿಗಳ ನಿರ್ಧಾರದ ಮೇರೆಗೆ ವೀಸಾ ಸ್ಟಿಕ್ಕರ್ ಗಳೊಂದಿಗೆ ಅಥವಾ ಸ್ಟಿಕ್ಕರ್ ಇಲ್ಲದೇ ಪಾಸ್ಪೋರ್ಟ್ ಗಳನ್ನು ಹಿಂದಿರುಗಿಸಲಾಗುತ್ತಿತ್ತು.
ಕಳೆದ ಒಂದು ವರ್ಷದಲ್ಲಿ ಪ್ರತಿದಿನ ಸುಮಾರು 300 ರಿಂದ 400 ಭಾರತೀಯ ವೀಸಾಗಳನ್ನು ಅಫ್ಗಾನ್ ನಾಗರೀಕರಿಗೆ ನೀಡಲಾಗುತ್ತಿತ್ತು. ಅದರಲ್ಲಿ 70 ಪ್ರತೀಶತ ವೈದ್ಯಕೀಯ ಕಾರಣಗಳಿಗಾಗಿ ನೀಡಲಾಗುತ್ತಿತ್ತು.
ತಾಲೀಬಾನ್ ಆಕ್ರಮಣದ ಹಿಂದಿನ ದಿನ ಎಂದರೆ ಅಗಸ್ಟ್ 12ರಂದು ಏಜನ್ಸಿ ಅರ್ಜಿಗಳನ್ನು ಸ್ವೀಕರಿಸಿತ್ತು. ಭಾರತೀಯ ರಾಯಭಾರ ಹೊರಡಲು ಸಿದ್ಧರಾದಾಗ ಕೊನೆಯ ಗುಂಪಿನ ಪಾಸ್ಪೋರ್ಟ್ ಗಳನ್ನು ಆಗಸ್ಟ್ 15ರ ಸಂಜೆ ಏಜನ್ಸಿಗೆ ವಿತರಣೆಗಾಗಿ ಹಿಂದಿರುಗಿಸಲಾಗಿತ್ತು.
ತಾಲೀಬಾನರು ಕಾಬುಲ್ ನಗರವನ್ನು ಪ್ರವೇಶಿಸಿದಾಗ ಒಟ್ಟಾಗಿ ಶಾಹಿರ್ ಟ್ರಾವೆಲ್ ಏಜನ್ಸಿ ಬಳಿ ಸುಮಾರು 2000 ಪಾಸ್ಪೋರ್ಟ್ ಗಳು ವಿತರಣೆಗೆ ಸಿದ್ಧವಾಗಿದ್ದವು. ಅವುಗಳಲ್ಲಿ ಸುಮಾರು 1800 ಪಾಸ್ಪೋರ್ಟ್ ಗಳನ್ನು ವಿತರಿಸಲಾಗಿದೆ.
ಕಾಬುಲ್ ನಗರದ ಮಿಕ್ಕ ವ್ಯಾವಹಾರಿಕ ಸ್ಥಾಪನೆಗಳಿಗೆ ಭೇಟಿ ನೀಡಿದಂತೆಯೇ ತಾಲೀಬಾನರು ಈ ಏಜನ್ಸಿಗೂ ಭೇಟಿ ನೀಡಿದ್ದರು ಎಂದು ದಸ್ತಾಗಿರ್ ಹೇಳಿದ್ದಾರೆ. “ಆದರೆ ಏನನ್ನೂ ತಗೆದುಕೊಂಡು ಹೋಗಲಾಗಿಲ್ಲ. ನಾವು ಸಹಜವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದೇವೆ. ನಾವು ನಮ್ಮ ಉದ್ಯೋಗಿಗಳು ಎದುರಿಸಬಹುದಾದ ಕುತ್ತುಗಳ ಬಗ್ಗೆ ಚಿಂತಿತರಾಗಿದ್ದೇವೆ. ಯಾಕೆಂದರೆ ಭಾರತೀಯ ಮಾಧ್ಯಮಗಳು ಹೀಗೆ ಸುಳ್ಳುಗಳನ್ನು ಪ್ರಕಟಿಸಿರುವುದರಿಂದ ಅವರು ನಮ್ಮ ಕುರಿತು ಕೋಪಗೊಳ್ಳಬಹುದು.”
ಶಾಹಿರ್ ಟ್ರಾವೆಲ್ ಏಜನ್ಸಿಯ ಮುಖ್ಯಸ್ಥರು ದ ವೈರ್ ಒಡನೆ ಮಾತನಾಡುತ್ತಾ ಮುಂಚೆಯೇ ನೀಡಿದ್ದ ವೀಸಾಗಳ ರದ್ದತಿಯನ್ನಾದರೂ ಹಿಂಪಡೆಯುವುದು ಉತ್ತಮ ಎಂದು ಹಂಚಿಕೊಂಡರು. “IVFRT ವ್ಯವಸ್ಥೆಯು ಬಹಳ ಗಟ್ಟಿಯಾದ ಪ್ರಕ್ರಿಯೆ. ಫೋಟೋಗಳನ್ನು ಮತ್ತು ಬಯೋಮೆಟ್ರಿಕ್ ಗಳನ್ನು ಈಗಾಗಲೇ ಅಪ್ಲೋಡ್ ಮಾಡಿರುವುದರಿಂದ ಮೂರನೇ ವ್ಯಕ್ತಿಯಿಂದ ಅದರ ದುರ್ಬಳಕೆಯ ಸಾಧ್ಯತೆ ಬಹಳ ವಿರಳ”
ಕಾಬುಲ್ ನಲ್ಲಿ ಇದ್ದಂತಹ ಪರೀಶೀಲನಾ ಮಟ್ಟವನ್ನು ಹೊಂದಿಸಲು ಭಾರತಕ್ಕೆ ಕಷ್ಟವಾದರೂ, ಈ-ಎಮರ್ಜನ್ಸಿ ವೀಸಾಗಳನ್ನು ಆದಷ್ಟು ಬೇಗ ಬಿಡುಗಡೆಗೊಳಿಸಬೇಕು ಎಂದು ಅವರು ಮನವಿ ಮಾಡಿದರು. “ರಾಯಭಾರದಿಂದ ನೀಡಲಾಗಿದ್ದ ವೀಸಾಗಳ ಬಯೋಮೆಟ್ರಿಕ್ಸ್ ಪಡೆಯಲಾಗಿದೆ ಮತ್ತು ವ್ಯಕ್ತಿಗತ ಸಂದರ್ಶನಗಳು ನಡೆದಿವೆ. ಈ-ವೀಸಾಗಳಿಗೆ ಇದನ್ನು ಹೇಗೆ ಮಾಡುತ್ತಾರೆ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ”
ಭಾರತ-ಅಫ್ಗಾನ್ ಸಂಬಂಧಗಳ ಹಿರಿಯ ವೀಕ್ಷಕರ ಪ್ರಕಾರ ದೆಹಲಿಗೆ ಪ್ರಯಾಣಿಸುವ ಬಹುಪಾಲು ಅಫ್ಗಾನರು ಯು.ಎಸ್. ಅಥವಾ ಯೂರೋಪಿನ ದೇಶಗಳಿಗೆ ನಿರಾಶ್ರಿತರ ಅರ್ಜಿ ಸಲ್ಲಿಸಲು ಯೋಚಿಸಿರುತ್ತಾರೆ. ಹಾಗಾಗಿ ಭಾರತದಲ್ಲಿ ಅವರಿಗೆ ಆಶ್ರಯ ನೀಡುವುದು ತಾತ್ಕಾಲಿಕವಾದದ್ದು. ಇದು ದೇಶಗಳ ನಡುವಿನ ಸ್ನೇಹವನ್ನೂ ಕಾಪಾಡುತ್ತದೆ.
ಭಾರತದಲ್ಲಿರುವ ಅಫ್ಗಾನ್ ವಿದ್ಯಾರ್ಥಿಗಳ ಕಥೆಯೇನು?
ಭಾರತ ಸರಕಾರ ತೆಗೆದುಕೊಳ್ಳಬೇಕಾಗಿರುವ ಮತ್ತೊಂದು ನೀತಿ ನಿರ್ಧಾರ ಅಫ್ಗಾನ್ ವಿದ್ಯಾರ್ಥಿಗಳ ಕುರಿತು. ಇಂಡಿಯನ್ ಕೌಂಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ನ ವಿದ್ಯಾರ್ಥಿ ವೇತನದಡಿ ಸುಮಾರು 2,200 ವಿದ್ಯಾರ್ಥಿಗಳಿದ್ದಾರೆ ಮತ್ತು 5000 ದಿಂದ 6000 ಸಾವಿರ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ವ್ಯಾಸಂಗ ನಡೆಸುತ್ತಿದ್ದಾರೆ.
2002ರಿಂದ ಭಾರತವು ಅಫ್ಗಾನ್ ವಿದ್ಯಾರ್ಥಿಗಳಿಗೆ ICCR ಮೂಲಕ ವಿಶೇಷ ವಿದ್ಯಾರ್ಥಿ ವೇತನಗಳನ್ನು ನೀಡಲಾರಂಭಿಸಿತು.
ICCR ನ ವಿದ್ಯಾರ್ಥಿಗಳ ನಡುವೆ ಸುಮಾರು 400 ವಿದ್ಯಾರ್ಥಿಗಳ ವ್ಯಾಸಂಗ ಆಗಸ್ಟ್ 31ಕ್ಕೆ ಮುಗಿಯುತ್ತದೆ. ಸಾಮಾನ್ಯವಾಗಿ ವೀಸಾ ಅವಧಿ ಮುಗಿಯುವ ವರೆಗೂ ಅವರಿಗೆ ಒಂದು ತಿಂಗಳ ಅಧಿಕ ಕಾಲಾವಕಾಶ ನೀಡಲಾಗುತ್ತದೆ. ಆದರೆ ಅನೇಕರು ಈಗಲೇ ಹಿಂದಿರುಗಲು ತಯಾರಿಲ್ಲ.
ಮೂಲಗಳ ಪ್ರಕಾರ, ಮತ್ತೊಂದು ಶೈಕ್ಷಣಿಕ ಸಂಸ್ಥೆಯಲ್ಲಿ ಅವರಿಗೆ ಪ್ರವೇಶ ಪಡೆಯಲಾದರೆ ಅವರು ಇಲ್ಲೇ ಇರಬಹುದು ಎಂದು ಅನೌಪಚಾರಿಕವಾಗಿ ಅವರಿಗೆ ತಿಳಿಸಲಾಗಿದೆ.
300 ICCR ವಿದ್ಯಾರ್ಥಿಗಳ ಮತ್ತೊಂದು ಗುಂಪು ಸದ್ಯ ಅಫ್ಗಾನಿಸ್ತಾನದಲ್ಲಿದೆ. ಕೋವಿಡ್-19ರ ದಿಗ್ಬಂಧನದಿಂದಾಗಿ ಅವರು ತಮ್ಮೂರುಗಳಿಗೆ ಹಿಂದಿರುಗಿದ್ದು ಆನ್ಲೈನ್ ತರಗತಿಗಳ ಮೂಲಕ ವ್ಯಾಸಂಗ ನಡೆಸುತ್ತಿದ್ದಾರೆ. ಭಾರತೀಯ ಶೈಕ್ಷಣಿಕ ಸಂಸ್ಥೆಗಳು ಪುನರಾರಂಭವಾಗುತ್ತಿರುವಾಗ ಮತ್ತು ತಮ್ಮ ಊರುಗಳಲ್ಲಿ ಅನಿಶ್ಚಿತತೆ ಕಾಡುತ್ತಿರುವಾಗ ತಮ್ಮ ವ್ಯಾಸಂಗ ಮುಂದುವರೆಸಲು ಹೆಚ್ಚು ಕಡಿಮೆ ಎಲ್ಲರೂ ಈ-ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ. “ಭಾರತವನ್ನು ತಲುಪುವುದು ಅವರ ಜವಾಬ್ದಾರಿಯೆಂಬುದು ವಿದ್ಯಾರ್ಥಿಗಳ ನಿಲುವು. ನಾಗರೀಕ ವಿಮಾನಗಳು ಇಲ್ಲದಿದ್ದರೂ ಅವರಿಗೆ ವಿಸ್ತರಣೆಗಳನ್ನು ನೀಡಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯ” ಎಂದು ಅಧಿಕಾರಿಯೊಬ್ಬರು ನುಡಿದಿದ್ದಾರೆ.
ICCR ಮೂಲಕ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಮಾಸ್ಟರ್ಸ್ ನ ವ್ಯಾಸಂಗ ನಡೆಸುತ್ತಿರುವ ಫಾತಿಮಾ ಯೂಸುಫಿ ಇನ್ನೂ ಕಾಬುಲ್ ನಲ್ಲೇ ಇದ್ದಾರೆ. ಫೆಬ್ರವರಿ ತಿಂಗಳಲ್ಲೆ ವೀಸಾ ಪಡೆಯುವುದಕ್ಕಾಗಿ ಬೇಕಾಗಿದ್ದ ಅಧೀಕೃತ ಪತ್ರವನ್ನು ಕೋರಿ ವಿಶ್ವವಿದ್ಯಾಲಯಕ್ಕೆ ಮಿಂಚಂಚೆ ಕಳಿಸಿದ್ದಾರೆ. ಆದರೆ, ಈ ವರೆಗೂ ಅವರಿಗೆ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಇದೀಗ ಅವರ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.
800 ವಿದ್ಯಾರ್ಥಿಗಳ ಗುಂಪು ತಮ್ಮ ವ್ಯಾಸಂಗವನ್ನು ಇನ್ನೂ ನಡೆಸುತ್ತಿದ್ದು ಅವರು ಭಾರತದಲ್ಲೇ ಉಳಿದುಕೊಂಡಿದ್ದಾರೆ.
ವಿದೇಶಾಂಗ ಸಚಿವಾಲಯದ ಸಾಂಸ್ಕೃತಿಕ ರಾಯಭಾರ ವಿಭಾಗದ ಸಂಪರ್ಕವು ವಿದ್ಯಾರ್ಥಿಗಳ ವೀಸಾ ಕುರಿತಾದ ವಿಚಾರಣೆಗಳಿಂದ ತುಂಬಿಹೋಗಿದೆ. ಆದರೆ ಇದರ ಕುರಿತು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲವಾದ್ದರಿಂದ ಅವರು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತಿಲ್ಲ.
ಅಧಿಕಾರಿಗಳ ಪ್ರಕಾರ ಗೃಹ ಸಚಿವಾಲಯವು ಇದನ್ನು ಸಂಕುಚಿತ ಭದ್ರತಾ ದೃಷ್ಟಿಕೋನದಿಂದ ನೋಡಲು ಮುಂದಾಗಿರುವುದರಿಂದ ಅಫ್ಗಾನ್ ನಾಗರೀಕರ ಎಲ್ಲಾ ವೀಸಾಗಳ ಕುರಿತು ರಾಜಕಾರಣದ ಅತೀ ಗರಿಷ್ಠ ಮಟ್ಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಈ ವಿಚಾರವನ್ನು ದೂರದೃಷ್ಟಿಯಿಂದ ಒಂದಿಷ್ಟು ಅನುಕಂಪದೊಡನೆ ಕಾಣಬೇಕು ಎಂಬುದು ಹಿರಿಯ ಭಾರತೀಯ ಅಧಿಕಾರಿಯೊಬ್ಬರ ಅಭಿಪ್ರಾಯ.
“ವೈದ್ಯಕೀಯ ಮತ್ತು ಶೈಕ್ಷಣಿಕ ವೀಸಾಗಳನ್ನು ನೀಡುವ ಮೂಲಕ ಅಫ್ಗಾನಿಸ್ತಾನದೊಡನೆ ನಾವು ಕಟ್ಟಿಕೊಂಡಿರುವ ವ್ಯಕ್ತಿಗತ ಸಂಬಂಧ ನಮ್ಮ ಅತೀ ದೊಡ್ಡ ಆಸ್ತಿಯಾಗಿದೆ. ವೀಸಾಗಳ ಮೇಲಿನ ನಿರ್ಬಂಧ ಇಷ್ಟು ವರ್ಷಗಳ ಕಾಲ ಕಟ್ಟಿಕೊಂಡಿರುವ ಸ್ನೇಹದ ಮೇಲೆ ಪರಿಣಾಮ ಬೀರುತ್ತದೆ.” ಎಂದು ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಇರಾನ್ ದೇಶಗಳಿಗೆ ಜಂಟಿಕಾರ್ಯದರ್ಶಿಯಾಗಿ ಹೊಣೆ ಹೊತ್ತಿದ್ದ ಮಾಜಿ ಭಾರತೀಯ ರಾಯಭಾರಿ ಟಿ.ಸಿ.ಎ. ರಾಘವನ್ ಅವರು ಹೇಳಿದರು.
ಕಳೆದ ದಶಕದಲ್ಲಿ ಭಾರತದಲ್ಲಿ ವ್ಯಾಸಂಗ ನಡೆಸಿದ ಹಲವಾರು ಅಫ್ಗಾನರು ಅಧಿಕಾರವರ್ಗ, ಶೈಕ್ಷಣಿಕ ಕ್ಷೇತ್ರ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ.
ವೀಸಾಗಳನ್ನು ರದ್ದುಗೊಳಿಸುವ ಭಾರತದ ನಿರ್ಧಾರದ ಬಗ್ಗೆ ಅವರಿಗೆ ಹೀಗೆ ಹೇಳುವುದಿತ್ತು: “ಮಿಕ್ಕವರು ಅಫ್ಗಾನ್ ವೀಸಾಗಳನ್ನು ರದ್ದುಗೊಳಿಸದಿರುವ ಸಂದರ್ಭದಲ್ಲಿ ನಾವೇಕೆ ರದ್ದುಗೊಳಿಸಿದೆವು ಎಂಬುದು ನನಗೆ ತಿಳಿಯುತ್ತಿಲ್ಲ. ಆದರೆ ಈ ನಡೆ ತೀವ್ರ ಪ್ರಮಾಣದ್ದಾಗಿದೆ. ವೇಗವಾಗಿ ಈ-ವೀಸಗಳನ್ನು ನೀಡುವುದರ ಮೂಲಕ ಈ ನಡೆಯನ್ನು ತಿದ್ದಲಿ ಎಂದು ಆಶಿಸುತ್ತೇನೆ.”
ವಿಮಾನಯಾನದ ಖರ್ಚನ್ನು ಭರಿಸಲು ಅಲ್ಲಿನ ಮೇಲ್ವರ್ಗ ಮತ್ತು ಮಧ್ಯಮ ಮೇಲ್ವರ್ಗಕ್ಕೆ ಮಾತ್ರ ಸಾಧ್ಯವಾಗಿರುವುದರಿಂದ ಭಾರತದಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳೆಲ್ಲರೂ ಈ ವರ್ಗಗಳಿಗೆಯೇ ಸೇರುತ್ತಾರೆ ಎಂಬುದನ್ನು ಪಾಲಿವಾಲ್ ಗಮನಿಸಿರುತ್ತಾರೆ.
“ಭಾರತವು ಅಫ್ಗಾನ್ ವಲಸಿಗರ ಸಮುದಾಯವನ್ನು ತಂತ್ರಕುಶಲತೆಯ ಉದ್ದೇಶಗಳಿಗೂ ಬಳಸಿಕೊಂಡಿದೆ. ಅವರು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಬಂಧವನ್ನು ತರದೇ ಹೋದರೂ ಅವರೆಲ್ಲರೂ ಒಳ್ಳೆಯ ಸಂಪರ್ಕಗಳಿರುವ ಗುಂಪುಗಳು ಮತ್ತು ವ್ಯಕ್ತಿಗಳೇ ಆಗಿದ್ದಾರೆ. ಒಬ್ಬ ಭಾರತೀಯ ಅಫ್ಗಾನಿಸ್ತಾನಕ್ಕೆ ಹೋಗಿ ಸಾಧಿಸಲಾಗದ ವಿಷಯಗಳಲ್ಲಿ ಇವರ ಮೂಲಕ ಅಫ್ಗಾನಿಸ್ತಾನಕ್ಕೆ ಪ್ರವೇಶ ದಕ್ಕುತ್ತದೆ. ರಾಜಕೀಯ ಲೆಕ್ಕಾಚಾರಗಳಿಗೆ ಇದು ಸಹಕಾರಿಯಾಗುತ್ತದೆ.” ಎಂದರು.
ಕೆಲವು ಕುತ್ತುಗಳು ಎದುರಾದರೆ ತಮ್ಮ ಊರುಗಳನ್ನು ಬಿಡಲು ಸಿದ್ಧರಿರುವ ಅಫ್ಗಾನರ ನಡುವೆಯೂ ಒಳ್ಳೆಯ ಸಂಬಂಧ ಕಾಪಾಡಿಕೊಳ್ಳುವುದು ಭಾರತಕ್ಕೆ ಮುಖ್ಯವಾಗುತ್ತದೆ. ಆದರೆ ಅವರ ವೀಸಾಗಳನ್ನು ಹಿಂಪಡೆಯಲಾಗಿದೆ.
“ನಿಮ್ಮೊಂದಿಗೆ ಸೂಕ್ಷ್ಮವಾಗಿ ಕೆಲಸ ಮಾಡಿರುವ ಮತ್ತು ನಿಮ್ಮ ಕಾರ್ಯನಿರ್ವಹಣಾ ಶೈಲಿಯನ್ನು ತಿಳಿದುಕೊಂಡಿರುವ ಅಫ್ಗಾನರನ್ನು ಪಡೆಯುವುದು ಭಾರತದ ಕಾರ್ಯನಿರ್ವಹಣಾ ತಂತ್ರಕ್ಕೆ ಸೂಕ್ತವಾದದ್ದು. ನೀವು ಅವರಿಗೆ ಈಗ ಸಹಾಯಹಸ್ತ ಚಾಚದಿದ್ದರೆ, ನೀವು ಅವರ ನಂಬಿಕೆಯನ್ನು ಕಳೆದುಕೊಳ್ಳುತ್ತೀರಾ. ನಿಮ್ಮ ಸಂಗಡಿಗರನ್ನು ಸುಟ್ಟುಹಾಕಿ ಭವಿಷ್ಯದ ಆಯ್ಕೆಗಳನ್ನು ಕಳೆದುಕೊಳ್ಳುತ್ತೀರಾ.” ಎಂದು ಪಾಲಿವಾಲ್ ಒತ್ತಿ ಹೇಳಿದ್ದಾರೆ.