ಛತೀಸಗಢದ ರಾಯ್ಪುರದ ಠಾಣೆಯೊಂದರಲ್ಲಿ ಭಾನುವಾರ ಬಲಪಂಥೀಯ ಹಿಂದು ಸಂಘಟನೆಯ ಕಾರ್ಯಕರ್ತರು ಪಾದ್ರಿ ಮತ್ತು ಕ್ರಿಶಿಯನ್ ಸಂಘಟನೆಯ ಇಬ್ಬರನ್ನು ಥಳಿಸಿ ಧಾರ್ಮಿಕ ನಿಂದನೆ ಮಾಡಿದ್ದಾರೆ.
ಪಾದ್ರಿ ಹರೀಶ್ ಸಾಹು ಅವರು ಧಾರ್ಮಿಕ ಮತಾಂತರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬಲಪಂಥೀಯ ಕಾರ್ಯಕರ್ತರ ಗುಂಪು ಆರೋಪಿಸಿತ್ತು. ಅದರಂತೆ, ಅವರು ಹಾಗೂ ಛತ್ತೀಸ್ಗಢದ ಕ್ರಿಶ್ಚಿಯನ್ ಫೋರಂನ ಪ್ರಧಾನ ಕಾರ್ಯದರ್ಶಿ ಅಂಕುಶ್ ಬರಿಯೇಕರ್ ಮತ್ತು ಪ್ರಕಾಶ್ ಮಾಸಿಹ್ ಜೊತೆಗೆ ಪೊಲೀಸ್ ಠಾಣೆಗೆ ಬಂದಿದ್ದರು. ಆ ವೇಳೆ ಅಲ್ಲಿದ್ದ ಬಲಪಂಥೀಯ ಕಾರ್ಯಕರ್ತರ ಗುಂಪು ಪಾದ್ರಿ ಮತ್ತು ಇತರರ ಮೇಲೆ ಪೊಲೀಸ್ ಠಾಣೆಯಲ್ಲೇ ನಿಂದಿಸಿತ್ತು. ಅವರನ್ನು ನಿಂದಿಸಿದ ನಂತರ, ಹಿಂದು ಸಂಘಟನೆಯ ಸದಸ್ಯರು ಪಾದ್ರಿಯನ್ನು ಹಿಂಬಾಲಿಸಿ ಶೂ ಮತ್ತು ಚಪ್ಪಲಿಯಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಕುರಿತು ಬರಿಯೇಕರ್ ಅವರು ದೂರು ನೀಡಿದ ಆಧಾರದಲ್ಲಿ ಐಪಿಸಿ ಸೆಕ್ಷನ್ 147 (ಗಲಭೆ), 294, 323 (ಸ್ವಯಂಪ್ರೇರಣೆಯಿಂದ ನೋವನ್ನು ಉಂಟುಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಹಿಂದು ಸಂಘಟನೆಯ ಹಲವಾರು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ, ಆರಕ್ಷಕ ಸಿಬ್ಬಂದಿಯ ಸಮ್ಮುಖದಲ್ಲೇ ನಡೆದಿರುವ ಈ ಘಟನೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಪ್ರಶ್ನಾರ್ಹವಾಗಿಸಿದೆ.
25 ವರ್ಷದ ಕವಾಲ್ ಸಿಂಗ್ ಪರಸ್ತೆ ಅವರು ಮತಾಂತರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕಬೀರ್ಧಾಮ್ ಜಿಲ್ಲೆಯ ಪೋಲ್ಮಿ ಹಳ್ಳಿಯಲ ಅವರ ಮನೆಯಲ್ಲಿ ಥಳಿಸಿದ ಒಂದು ವಾರ ಕಳೆದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.