ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ವಿರೋಧದ ನಡುವೆಯೂ ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಯ್ತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ಕೆಲವು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಹೈಕಮಾಂಡ್ ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರು. ಇದಾದ ಮೇಲೆ ಸಿಎಂ ಆಯ್ಕೆಯಲ್ಲೂ ಬಿ.ಎಸ್ ಯಡಿಯೂರಪ್ಪರನ್ನು ಕಡೆಗಣಿಸಬೇಕು ಎಂದು ಪ್ರಯತ್ನಿಸಿದರಾದರೂ ಆಗಲಿಲ್ಲ. ಹಾಗಾಗಿ ಕೊನೆಗೂ ಬಿ.ಎಸ್ ಯಡಿಯೂರಪ್ಪ ಒತ್ತಡಕ್ಕೆ ಮಣಿದು ತನ್ನ ಆಪ್ತರಾದ ಬಸವರಾಜ್ ಬೊಮ್ಮಾಯಿ ಅವರನ್ನೇ ಸಿಎಂ ಆಗಿ ಮಾಡಲಾಯ್ತು. ಬಿ.ಎಲ್ ಸಂತೋಷ್ ಟೀಮ್ಗೆ ಸೆಡ್ಡು ಹೊಡೆದು ಯಡಿಯೂರಪ್ಪ ತನ್ನ ಸಮುದಾಯದ ನಾಯಕರನ್ನೇ ಸಿಎಂ ಮಾಡಿದರು. ಎಲ್ಲಿ ಲಿಂಗಾಯತ ಸಮುದಾಯದ ಮತ ಕಳೆದುಕೊಳ್ಳಬೇಕಾಗುತ್ತದೋ ಎಂದು ಹೈಕಮಾಂಡ್ ಮಾಜಿ ಸಿಎಂ ಎಸ್.ಆರ್ ಬೊಮ್ಮಾಯಿ ಪುತ್ರ ಬಸವರಾಜ್ ಬೊಮ್ಮಾಯಿ ಅವರನ್ನೇ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿತು.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿ.ಎಸ್ ಯಡಿಯೂರಪ್ಪ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗಷ್ಟೇ ಬಿ.ಎಸ್ ಯಡಿಯೂರಪ್ಪ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಈ ಬೆನ್ನಲ್ಲೇ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದರು. ಗಣೇಶ ಚತುರ್ಥಿ ಹಬ್ಬದ ಬಳಿಕ ಕೈಗೊಳ್ಳಲಿರುವ ರಾಜ್ಯ ಪ್ರವಾಸದ ರೂಪುರೇಷೆಯಲ್ಲಿ ಯಡಿಯೂರಪ್ಪ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ.
ಹೌದು, ಈ ಮುನ್ನ ಯಡಿಯೂರಪ್ಪ ಒಬ್ಬರೆ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದರು. ಆದರೀಗ, ಒಬ್ಬರಲ್ಲದೇ ಪಕ್ಷದ ಮುಖಂಡರೊಂದಿಗೆ ರಾಜ್ಯ ಪ್ರವಾಸ ಮಾಡುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ. ಇದಕ್ಕೆ ಕಾರಣ ಬಿಜೆಪಿ ಪಕ್ಷದ ನಿಯಮಗಳು ಎನ್ನಲಾಗುತ್ತಿದೆ.

ಇನ್ನು, ನಿಯಮಗಳ ಪ್ರಕಾರ ಬಿಜೆಪಿ ಯಾವುದೇ ನಾಯಕ ರಾಜ್ಯ ಪ್ರವಾಸ ಕೈಗೊಳ್ಳಬೇಕಾದರೆ, ಪಕ್ಷದಿಂದಲೇ ಪ್ರವಾಸ ಕಾರ್ಯಕ್ರಮ ಸಿದ್ಧಪಡಿಸಬೇಕು. ನಿರ್ದಿಷ್ಟ ವಿಷಯಗಳನ್ನು ಇಟ್ಟುಕೊಂಡು ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿದು ಬಂದಿದೆ.
ಪಕ್ಷದಿಂದ ಪ್ರವಾಸ ಪಟ್ಟಿ ಮತ್ತು ವಿಷಯ ನಿಗದಿಯಾಗದೇ ಒಬ್ಬರೇ ಪ್ರವಾಸ ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವ ಕಾರಣದಿಂದ ಏಕ ವ್ಯಕ್ತಿ ಪ್ರವಾಸ ಸೂಕ್ತವೂ ಅಲ್ಲ ಎಂದು ತೀರ್ಮಾನಿಸಿದ್ದಾರೆ.
ಸದ್ಯದಲ್ಲೇ ವಿಧಾನ ಪರಿಷತ್, ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆ ಎದುರಾಗಲಿದೆ. ಈ ಚುನಾವಣೆಯಲ್ಲಿ ಗೆಲ್ಲಲು ಶೀಘ್ರವೇ ರಾಜ್ಯದಲ್ಲಿ ಪಕ್ಷದಿಂದ ಸಂಘಟನಾ ಪ್ರವಾಸ ಆಯೋಜಿಸಬೇಕು. ಆಗ ಬೇಕಾದರೆ ಪಕ್ಷದ ಮುಖಂಡರೊಂದಿಗೆ ಪ್ರವಾಸ ಮಾಡಲಿದ್ದೇನೆ ಎಂಬ ತೀರ್ಮಾನಕ್ಕೆ ಬಿಎಸ್ವೈ ಬಂದಾಗಿದೆ.
ಪಕ್ಷದಿಂದ ಕಾರ್ಯಸೂಚಿ ಸಿದ್ಧವಾಗದೇ ಒಬ್ಬರೇ ಪ್ರವಾಸ ನಡೆಸುವುದು ಸರಿಯಲ್ಲ. ಇದರಿಂದ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ಈ ಉದ್ದೇಶದಿಂದ ಯಡಿಯೂರಪ್ಪ ಒಬ್ಬರೇ ಪ್ರವಾಸ ನಡೆಸುವುದು ನಿಲ್ಲಿಸಿದ್ದಾರೆ.
2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿರುವ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದ್ದರು. ಈ ಮೂಲಕ ಹೇಗಾದರೂ ಸರಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.





