ಅತ್ತ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ನಲ್ಲೂ ಸಿಎಂ ಸ್ಥಾನಕ್ಕಾಗಿ ಗುದ್ದಾಟ ಶುರುವಾಗಿತ್ತು. ಪದೇ ಪದೇ ಸಿಎಂ ಸ್ಥಾನ ಯಾರಿಗೆ? ಎಂಬ ಚರ್ಚೆಗಳು ನಡೆದವು. ರಾಜ್ಯದ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವರು ಹೇಳಿಕೆಗಳನ್ನು ನೀಡುತ್ತಿದ್ದರು. ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಕಾರ್ಯಕರ್ತರಿಂದ ಹಿಡಿದು ಆಪ್ತ ಶಾಸಕರವರೆಗೂ ಎಲ್ಲರ ಬಾಯಲ್ಲೂ ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಮಾತುಗಳು ಕೇಳಿ ಬಂದವು. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಯ್ತು.
ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ಶುರುವಾಗುತ್ತಿದ್ದಂತೆಯೇ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದಿತ್ತು. ಹೈಕಮಾಂಡ್ ಸೂಚನೆ ಮೇರೆಗೆ ತಕ್ಕ ಮಟ್ಟಿಗೆ ಸಿಎಂ ಸ್ಥಾನಕ್ಕಾಗಿ ಬಹಿರಂಗವಾಗಿ ನಡೆಯುತ್ತಿದ್ದ ಜಗಳ ತಕ್ಕಮಟ್ಟಿಗೆ ನಿಂತು ಹೋಗಿತ್ತು. ಹೀಗಿದ್ದರೂ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಸೀಟಿಗಾಗಿ ಪೈಪೋಟಿ ನಡೆಯುತ್ತಿದೆ ಎಂಬುದು ಮಾತ್ರ ಸ್ಪಷ್ಟ. ಅದರಲ್ಲೂ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಈ ಬಾರಿ ಚುನಾವಣೆ ಎದುರಿಸಲಿದೆ. ಪಕ್ಷ ಮುಖ್ಯ ಹೊರತು ವ್ಯಕ್ತಿ ಮುಖ್ಯವಲ್ಲ ಎಂಬ ಡಿಕೆಶಿ ಹೇಳಿಕೆ ಪರೋಕ್ಷವಾಗಿ ಸಿದ್ದರಾಮಯ್ಯಗೆ ನೀಡಿರುವ ಟಾಂಗ್ ಎಂದೇ ವಿಶ್ಲೇಷಣೆ ಮಾಡಲಾಗಿತ್ತು.
ಸದ್ಯ ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿ ಉಳಿದಿವೆ. ಬಿಜೆಪಿ ಆಂತರಿಕ ಬಿಕ್ಕಟ್ಟು, ಕೋವಿಡ್ ನಿರ್ವಹಣೆ ರೀತಿ ಇವೆಲ್ಲವೂ ಪಕ್ಷದ ಹಾಗೂ ಸರ್ಕಾರದ ವರ್ಚಸ್ಸನ್ನು ಕುಗ್ಗಿಸಿದೆ. ಸದ್ಯದ ವಾತಾವರಣ ಕಾಂಗ್ರೆಸ್ ಪೂರಕವಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ನಲ್ಲಿ ಕೂಸು ಹುಟ್ಟುವ ಮೊದಲೇ ಕುಲಾವಿ ಎಂಬಂತ್ತೆ ಚುನಾವಣೆಗೂ ಮುನ್ನವೇ ಸಿಎಂ ಸ್ಥಾನಕ್ಕಾಗಿ ಗುದ್ದಾಟ ನಡೆಯುವುದು ಸರಿಯಲ್ಲ ಎಂದು ಹೈಕಮಾಂಡ್ ಹೇಳಿತ್ತು. ಇದಾದ ಮೇಲೂ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೆ ವಿಚಾರದಲ್ಲೂ ಡಿಕೆಶಿ, ಸಿದ್ದು ಗಲಾಂಟೆ ಮುಂದುವರಿದಿದೆ.

ಕೆಪಿಸಿಸಿ ವಿಸರ್ಜಿಸಿ ಎರಡು ವರ್ಷವಳೇ ಕಳೆದಿದೆ. ಪದಾಧಿಕಾರಿಗಳ ನೇಮಕಕ್ಕೆ ಕಾಂಗ್ರೆಸ್ ನಾಯಕರ ಹರಸಾಹಸ ಮುಂದುವರಿದಿದೆ. ನಾಯಕರ ನಡುವಿನ ಪ್ರತಿಷ್ಠೆಯ ಕಾರಣ ಪದಾಧಿಕಾರಿಗಳ ಪಟ್ಟಿಗೆ ಇನ್ನು ಬಿಡುಗಡೆಯ ಭಾಗ್ಯ ಲಭ್ಯವಾಗಿಲ್ಲ. ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಒಂದೂವರೆ ವರ್ಷ ಕಳೆದರೂ ಪದಾಧಿಕಾರಿಗಳ ನೇಮಕ ಮಾತ್ರ ನೆನೆಗುದಿಗೆ ಬಿದ್ದಿದೆ.
ಯಾವಾಗ ಬೇಕಾದರೂ ಬಿಜೆಪಿ ಸರ್ಕಾರ ಬೀಳಬಹುದು, ಮುಂದೆ ಚುನಾವಣೆಗೆ ಹೋಗಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಹೇಳುತ್ತಲೇ ಇದ್ದಾರೆ. ಹೀಗೆ ಚುನಾವಣೆ ಎದುರಾಗಬಹುದು ಎಂದರೂ ಪಕ್ಷದ ಪದಾಧಿಕಾರಿಗಳ ಪಟ್ಟಿ ಬಗ್ಗೆ ಮಾತ್ರ ಮೌನ ಮುಂದುವರಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಾಲು ಸಾಲು ಚುನಾವಣೆಗಳು ಎದುರಾಗಲಿವೆ. ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಅದರ ಬೆನ್ನಲ್ಲೇ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ಕೂಡ ನಡೆಯಲಿದೆ. ಅಲ್ಲದೇ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಕೂಡ ಘೋಷಣೆಯಾಗುವ ಸಾಧ್ಯತೆ ಇದೆ. ಜನವರಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದರೂ ಇನ್ನೂ ಪಕ್ಷದ ಪದಾಧಿಕಾರಿಗಳ ಪಟ್ಟಿ ಮಾತ್ರ ಬಿಡುಗಡೆ ಮಾಡಿಲ್ಲ.

ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ತಮ್ಮ ಬೆಂಬಲಿಗರಿಗೆ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲು ಪೈಪೋಟಿ ನಡೆಸುತ್ತಿರುವುದು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿರುವುದು. ಸದ್ಯ ಹೈಕಮಾಂಡ್ ಆದೇಶದ ಮೇರೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಪಕ್ಷದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಬೇಕಿದೆ. ಎರಡೂ ಬಣಗಳ ನಡುವೆ ಗೊಂದಲಕ್ಕೆ ಅವಕಾಶ ನೀಡದಂತೆ ಪಟ್ಟಿ ಸಿದ್ಧಪಡಿಸಬೇಕಾದ ಒತ್ತಡದಲ್ಲಿ ಸಿಲುಕಿದ್ದಾರೆ ಇಬ್ಬರು ನಾಯಕರು.