ಆಗುಂಬೆ ಹಲವು ಕಾರಣಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಪ್ರತಿ ಮಳೆಗಾಲದ ಗುಡ್ಡ ಕುಸಿತ, ರಸ್ತೆ ಸಂಚಾರ್ ಬಂದ್, ಮತ್ತು ಸಹಜವಾಗೇ ಭಾರೀ ಮಳೆಯ ಕಾರಣಕ್ಕೆ ಆಗುಂಬೆ ಸುದ್ದಿಯಾಗುವುದು ವಾಡಿಕೆ. ಆದರೆ, ಈ ಬಾರಿ ಅಂತಹ ಭೌತಿಕ, ಭೌಗೋಳಿಕ ಕಾರಣಕ್ಕೆ ಮಾತ್ರವಲ್ಲದೆ, ಜೀವಪರಿಸರದ ಪತನದ ಕಾರಣಕ್ಕೆ ಸುದ್ದಿಯಾಗುತ್ತಿದೆ ಎಂಬುದು ವಿಶೇಷ.
ಮೊನ್ನೆ ಮೊನ್ನೆಯಷ್ಟೇ ಆಗುಂಬೆಯ ಕಾಳಿಂಗ ಸೆಂಟರ್ ಫಾರ್ ರೇನ್ ಫಾರೆಸ್ಟ್ ಎಕೋಲಜಿಯವರು 30 ಕಾಳಿಂಗ ಸರ್ಪದ ಮೊಟ್ಟೆಗಳನ್ನು ಹಾವಿನ ಗೂಡಿನಿಂದ ಹೊತ್ತುತಂದು ಕೃತಕವಾಗಿ ಮರಿ ಮಾಡಿ, ಮರಿಗಳನ್ನು ಮತ್ತೆ ಕಾಡಿಗೆ ಬಿಟ್ಟಿರುವ ವಿಷಯ ವಿವಾದಕ್ಕೆ ಎಡೆಯಾಗಿತ್ತು. ಅದರಲ್ಲೂ ಅಳಿವಿನಂಚಿನಲ್ಲಿರುವ ಕಾಳಿಂಗ ಸರ್ಪವನ್ನು ಹೀಗೆ ಅದರ ಸಹಜ ನೈಸರ್ಗಿಕ ಗೂಡಿನಿಂದ ಎತ್ತಿ ತಂದು ಕೃತಕವಾಗಿ ಮರಿ ಮಾಡಿಸುವ ನಿಸರ್ಗವಿರೋಧಿ ಕೃತ್ಯಕ್ಕೆ ಸ್ವತಃ ಅರಣ್ಯ ಇಲಾಖೆ ಮತ್ತು ವೈಲ್ಡ್ ಕ್ಯಾಟ್ ಸಿ ಎಂಬ ಎನ್ ಜಿಒ ಕೂಡ ಸಾಥ್ ನೀಡಿದೆ ಎಂಬುದು ಮಲೆನಾಡಿನ ಪರಿಸರಾಸಕ್ತರು, ನಾಗರಿಕರ ಟೀಕೆಗೆ ಗುರಿಯಾಗಿತ್ತು.
ಕಾಳಿಂಗ ಸರ್ಪದಂತಹ ಅಪರೂಪದ ಜೀವಿನ ಮೊಟ್ಟೆಗಳು ಕಾಡಿನಲ್ಲಿ ಅದರ ಸಹಜ ಪರಿಸರದಲ್ಲಿ ತಾಯಿ ಹಾವಿನ ಆಸರೆಯಲ್ಲಿ ಮರಿಯಾಗಿ ನಿಸರ್ಗ ಸಹಜ ನಿಯಂತ್ರಣ ಮತ್ತು ಸಶಕ್ತ ಜೀವದ ಬದುಕುಳಿಯುವ ಸರಳ ನಿಯಮದಂತೆ ಕಾಡಿನ ನಡುವೆ ಬೆಳೆಯಬೇಕಾದವು. ಅಂತಹ ನೈಸರ್ಗಿಕ ಕ್ರಿಯೆಯಲ್ಲಿ ಮನುಷ್ಯನ ಹಸ್ತಕ್ಷೇಪ ನೈತಿಕವಾಗಿಯೂ, ಪರಿಸರ ಸಮತೋಲನದ ದೃಷ್ಟಿಯಿಂದಲೂ ಸರಿಯಲ್ಲ. ಒಂದು ಪರಿಸರದಲ್ಲಿ ಯಾವ ಜೀವಿಯ ಪ್ರಮಾಣ ಎಷ್ಟಿರಬೇಕು ಎಂಬುದನ್ನು ಅಲ್ಲಿನ ಪರಿಸರವೇ ನಿರ್ಧರಿಸುತ್ತದೆ. ಆದರೆ, ಹೀಗೆ ಮಾನವ ಹಸ್ತಕ್ಷೇಪದಿಂದ ಹಾವು ಇಟ್ಟ ಮೊಟ್ಟೆಗಳೆಲ್ಲಾ ಮರಿಯಾಗಿ ಜನವಸತಿ ಪ್ರದೇಶದ ಆಸುಪಾಸಿನಲ್ಲಿ ಹರಿದಾಡತೊಡಗಿದರೆ ಆ ಹಾವುಗಳ ಜೀವ ಸುರಕ್ಷತೆ, ಆಹಾರ ಸರಪಳಿ ಮತ್ತಿತರ ಎಲ್ಲವೂ ಅಸ್ತವ್ಯಸ್ಥವಾಗುತ್ತವೆ. ಹಾಗಾಗಿ ಇಂತಹ ಕಾರ್ಯಕ್ಕೆ ಅರಣ್ಯ ಇಲಾಖೆ ಹೇಗೆ ಅನುಮತಿ ನೀಡಿದೆ ಎಂದು ಮಲೆನಾಡಿನ ಪರಿಸರಾಸಕ್ತರು ಪ್ರಶ್ನಿಸಿದ್ದರು.

ಹಾಗೇ ಮಳೆಕಾಡು ಅಧ್ಯಯನ, ಕಾಳಿಂಗ ಅಧ್ಯಯನದ ಹೆಸರಲ್ಲಿ ಮಲೆನಾಡಿನ ದಟ್ಟ ಕಾಡಿನ ಒಳಗೆ, ಅಪರೂಪದ, ಅಳಿವಿನಂಚಿನ ವನ್ಯಜೀವಿಗಳ ಬದುಕಿನ ಕ್ರಮದಲ್ಲಿ ನಿರಂತರ ಮಾನವ ಹಸ್ತಕ್ಷೇಪ ಇಡೀ ಜೀವ ಪರಿಸರದ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ಈ ಘಟನೆ ಚರ್ಚೆಗೆ ನಾಂದಿ ಹಾಡಿತ್ತು.
ಅದಾದ ಬೆನ್ನಲ್ಲೇ ಇದೀಗ ಅದೇ ಆಗುಂಬೆಯ ಮಳೆಕಾಡಿನ ಮತ್ತೊಂದು ಅಪರೂಪದ ಜೀವಿಯ ಜೀವನಕ್ರಮದಲ್ಲಿ ಮಾನವ ಹಸ್ತಕ್ಷೇಪ ಸೃಷ್ಟಿಸಿರುವ ಅನಾಹುತ ಆಗುಂಬೆಯೂ ಸೇರಿದಂತೆ ಸಹ್ಯಾದ್ರಿಯ ಅಪರೂಪದ ಜೀವಜಾಲ ಎದುರಿಸುತ್ತಿರುವ ಅಪಾಯಗಳ ಮುನ್ಸೂಚನೆ ನೀಡುತ್ತಿದೆ.
ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ, ಶರಾವತಿ ಅಭಯಾರಣ್ಯ ವ್ಯಾಪ್ತಿಯ ಶರಾವತಿ ಕಣಿವೆ ಪ್ರದೇಶದಲ್ಲಿ ಮಾತ್ರ ಕರ್ನಾಟಕದಲ್ಲಿ ಕಾಣಸಿಗುವ, ಇಡೀ ಜಗತ್ತಿನಲ್ಲಿಯೇ ಕರ್ನಾಟಕ, ತಮಿಳುನಾಡು, ಕೇರಳ ವ್ಯಾಪ್ತಿಯ ಪಶ್ಚಿಮಘಟ್ಟದಲ್ಲಿ ಮಾತ್ರ ಇರುವ ಸಿಂಗಳೀಕ ಅಥವಾ ಲಯನ್ ಟೈಲ್ಡ್ ಮಕಾಕಿ ಸಂತತಿ ಕೂಡ ಆಗುಂಬೆಯಲ್ಲಿ ಈಗ ಅಪಾಯಕ್ಕೆ ಸಿಲುಕಿದೆ.
ಇಡೀ ಜಗತ್ತಿನಲ್ಲೇ ಪಶ್ಚಿಮಘಟ್ಟದ ಸೀಮಿತ ಪ್ರದೇಶದಲ್ಲಿ ಇರುವ ಈ ಸಿಂಗಳೀಕಗಳ ಒಟ್ಟು ಸಂಖ್ಯೆಯೇ 3000ದಷ್ಟಿರಬಹುದು. ಹಾಗೇ ಅದು ವಾಸಿಸುವುದು ಸಾಮಾನ್ಯವಾಗಿ ಮಳೆಕಾಡಿನ ಎತ್ತರದ ಮರಗಳ ಮೇಲೆಯೇ. ಸುಮಾರು 80-120 ವಿಶಿಷ್ಟ ಮರಗಳ ಹಣ್ಣು- ಎಲೆ ತಿಂದು ಬದುಕುವ ಅದು, ಅಂತಹ ವಿಶೇಷ ಮರಗಳಿರುವ ಕಡೆ ಮಾತ್ರ, ನೆಲದಿಂದ 60-80 ಅಡಿ ಎತ್ತರದ ಮರಗಳ ಮೇಲೆಯೇ ಇರುತ್ತವೆ. ಜೀವಿತಾವಧಿಯ ಶೇ.90ರಷ್ಟು ಕಾಲವನ್ನು ಅದು ಮರಗಳ ಮೇಲೆಯೇ ಕಳೆಯುತ್ತದೆ. ಇಂತಹ ಅಪರೂಪದ ಜೀವಿಗೆ ಮನುಷ್ಯರ ದಾಹದಿಂದಾಗಿ ಕಾಡು ಕರಗುತ್ತಿರುವುದು ಮತ್ತು ಬೃಹತ್ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡುತ್ತಿರುವುದರಿಂದ ತನ್ನ ಆವಾಸ ಸ್ಥಾನವನ್ನೇ ಕಳೆದುಕೊಳ್ಳುವ ಅಪಾಯ ಒಂಡು ಕಡೆಯಾದರೆ, ಮತ್ತೊಂದು ಕಡೆ ಮನುಷ್ಯನ ಅವಿವೇಕಿತನ ಪ್ರೀತಿಯೇ ಇದರ ಪಾಲಿಗೆ ಶಾಪವಾಗಿರುವುದು ಮತ್ತೊಂದು ಕಡೆ.
ಹೌದು, ಆಗುಂಬೆ ಘಾಟಿಯಲ್ಲಿ ಸಾಗುವ ಪ್ರವಾಸಿಗರು, ಪ್ರಯಾಣಿಕರು ತಾವು ತಂದ ಹಣ್ಣು, ಬಿಸ್ಕೀಟ್, ಕುರುಕಲು ತಿಂಡಿ, ಚಾಕಲೇಟ್ ಗಳನ್ನು ಘಾಟಿಯ ಉದ್ದಕ್ಕೂ ರಸ್ತೆಯ ಇಕ್ಕೆಲ ಇರುವ ಸಾಮಾನ್ಯ ಕೋತಿಗಳಿಗೆ ಎಸೆಯುವ ಕೆಟ್ಟ ಅಭ್ಯಾಸ ರೂಢಿಯಾಗಿದೆ. ವರ್ಷಗಳಿಂದ ನಡೆದುಕೊಂಡುಬರುತ್ತಿರುವ ಈ ಆಹಾರ ಹಾಕುವ(ಫೀಡಿಂಗ್) ಪಿಡುಗಿಗೆ ಇತ್ತೀಚಿನ ವರ್ಷಗಳಲ್ಲಿ ಸಿಂಗಳೀಕಗಳೂ ರಸ್ತೆಯಂಚಲ್ಲಿ ಬಂದು ಕೂರತೊಡಗಿವೆ. ಸಾಮಾನ್ಯವಾಗಿ ಮನುಷ್ಯರಿಂದ ದೂರವಿರುವ ಮತ್ತು ನಾಚಿಕೆ ಸ್ವಭಾವದ ಸಿಂಗಳೀಕಗಳ ಎರಡು ಕುಟುಂಬ ಹೀಗೆ ಮನುಷ್ಯರ ಒಡ್ಡುವ ಪ್ರಲೋಭನೆಗೆ ಒಗ್ಗಿಹೋಗಿದ್ದು, ಆಗುಂಬೆ ಘಾಟಿಯ ಎರಡು-ಮೂರು ಕಡೆ ರಸ್ತೆಯಲ್ಲೇ ಓಡಾಡಿಕೊಂಡು ಪ್ರವಾಸಿಗರು ಹಾಕಿದ ತಿಂಡಿ ತಿಂದುಕೊಂಡಿವೆ.

ಈ ಅಪಾಯಕಾರಿ ದುರಭ್ಯಾಸ ಎರಡು ರೀತಿಯಲ್ಲಿ ಅವುಗಳ ಸಂತತಿಗೆ ಅಪಾಯಕಾರಿ. ಒಂದು, ಅವು ತಿಂಡಿ ಆಸೆಗೆ ಹೀಗೆ ರಸ್ತೆ ಕಾಯತೊಡಗಿದರೆ ಅವುಗಳಿಗೆ ಕ್ರಮೇಣ ಕಾಡಿನ ಸಹಜ ಮರಗಿಡಗಳ ಆಹಾರ ಹುಡುಕಿ ತಿನ್ನುವುದೇ ಮರೆತುಹೋಗಿ, ಇತರೆ ಸಾಮಾನ್ಯ ಕೋತಿಗಳ ರೀತಿ ಜೀವನ ಪೂರ್ತಿ ಹೀಗೆ ತಮ್ಮ ದೇಹಕ್ಕೆ ಒಗ್ಗದ ಆಹಾರವನ್ನೇ ತಿಂದುಕೊಂಡಿರಬೇಕಾಗುತ್ತದೆ. ಎರಡನೆಯದು, ಇಂತಹ ಎಣ್ಣೆಪದಾರ್ಥ, ಕುರುಕಲು ತಿಂಡಿ ಜೊತೆಗೆ ಕುರ್ಕುರೆ, ಲೇಯ್ಸ್ ನಂತಹ ಅಜಿನೊಮೋಟೋ ಬೆರೆತ ರಾಸಾಯನಿಕ ಆಹಾರದಿಂದಾಗಿ ಅವುಗಳ ದೇಹಪ್ರಕೃತಿಯೇ ವ್ಯತ್ಯಯವಾಗುವ, ಸಂತಾನೋತ್ಪತ್ತಿ ಸೇರಿದಂತೆ ಭವಿಷ್ಯದ ಪೀಳಿಗೆಯ ಮೇಲೆಯೇ ಅಪಾಯ ಉಂಟಾಗುವ ಸಾಧ್ಯತೆ ಇದೆ. ಅಂತಿಮವಾಗಿ ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಗುಂಪಿಗೆ ಸೇರಿರುವ ಈ ಸಿಂಗಳೀಕಗಳು ಈ ಭಾಗದಲ್ಲಿ ಸಂಪೂರ್ಣ ಅಳಿದುಹೋಗಬಹುದು.
ಇಂತಹ ಅಪಾಯವನ್ನು ಗ್ರಹಿಸಿಯೇ ಮಲೆನಾಡಿನ ಪರಿಸರಾಸಕ್ತರು ಕೆಲವರ ಅರಣ್ಯ ಇಲಾಖೆಯ ವನ್ಯಜೀವಿ ವಲಯದವರೊಂದಿಗೆ ಸಮಾಲೋಚಿಸಿ, ಘಾಟಿಯುದ್ದಕ್ಕೂ ಅಲ್ಲಲ್ಲಿ ತಿಂಡಿ ತಿನಿಸು ಎಸೆಯದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ಸೂಚನಾಫಲಕಗಳನ್ನು ಹಾಕಿಸಿದ್ದರು. ಆದರೆ, ಎರಡು ಮೂರು ವರ್ಷವಾದರೂ ಅಂತಹ ಫಲಕಗಳಿಗೆ ಜನ ಕಿವಿಗೊಡುವಂತೆ ಕಾಣಲಿಲ್ಲ. ಆ ಬಳಿಕ ತಿಂಡಿ ಎಸೆಯುವ ಅವಿವೇಕಿತನವನ್ನು ತಡೆಯುವುದು ಕಷ್ಟ ಎಂದುಕೊಂಡು, ಕನಿಷ್ಟ ಸಿಂಗಳೀಕಗಳಿಗೇ ವಿವೇಕ ಕಲಿಸುವ ಎಂದುಕೊಂಡು ಕಳೆದ ಲಾಕ್ ಡೌನ್ ವೇಳೆ ವಾಹನ ಸಂಚಾರ ವಿರಳವಾದ ಸಂದರ್ಭವನ್ನೇ ಬಳಸಿಕೊಂಡು ರಸ್ತೆ ಬದಿ ಬರುತ್ತಿದ್ದ ಸಿಂಗಳೀಕಗಳ ಎರಡು ಕುಟುಂಬಗಳನ್ನು ಮರದಿಂದ ಕೆಳಗಿಳಿಯದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಇಲಾಖೆಯ ವಾಚರ್ ಗಳನ್ನು ನೇಮಿಸಿ ಸಿಂಗಳೀಕಗಳು ರಸ್ತೆ ಬದಿಗೆ ಬರದಂತೆ ಮತ್ತು ಮರದಿಂದ ಕೆಳಗಿಳಿಯದಂತೆ ಕಾಯುವ ಪ್ರಯತ್ನ ನಡೆದಿತ್ತು. ಕೆಲಮಟ್ಟಿಗೆ ಲಾಕ್ ಡೌನ್ ಅವಧಿಯಲ್ಲಿ ಅದು ಫಲಕಾರಿಯಾಗಿತ್ತು ಕೂಡ.
ಆದರೆ, ಇದೀಗ ಲಾಕ್ ಡೌನ್ ತೆರವು ಆಗುತ್ತಲೇ ಆ ಮಾರ್ಗದಲ್ಲಿ ವಾಹನ ಸಂಚಾರ ಮೊದಲಿನಂತೆ ಮಾಮೂಲಿ ಸ್ಥಿತಿಗೆ ಬಂದಿದೆ. ಜೊತೆಗೆ ಮಳೆಗಾಲ ಬೇರೆ. ಹಾಗಾಗಿ ವಾಚರ್ ಗಳ ಕಣ್ಣು ತಪ್ಪಿಸಿ ಸಿಂಗಳೀಕಗಳು ಮತ್ತೆ ತಿಂಡಿ ಆಸೆಗೆ ರಸ್ತೆಗೆ ಇಳಿಯತೊಡಗಿವೆ.
ಈ ನಡುವೆ, ಪ್ರವಾಸಿಗರು, ಪ್ರಮಾಣಿಕರ ಅಜ್ಞಾನದ ಜೊತೆಗೆ, ಫೋಟೋಗ್ರಫಿಯ ಉದ್ದೇಶಕ್ಕಾಗಿ ಬರುವ ವನ್ಯಜೀವಿ ಫೋಟೋಗ್ರಾಫರುಗಳು ಕೂಡ ತಿಳಿವಳಿಕೆ, ವಿವೇಕವಿದ್ದೂ ತಮ್ಮ ಸ್ವಾರ್ಥಕ್ಕಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಿಂಗಳೀಕಗಳ ಫೋಟೋಗಳಿಗೆ ಇರುವ ಬೇಡಿಕೆಗಾಗಿ ಇಲ್ಲಿ ಇವುಗಳಿಗೆ ಹಣ್ಣು, ತಿಂಡಿ ಕೊಟ್ಟು ಸಮೀಪದಲ್ಲಿ ಸಿಗುವಂತೆ ಆಮಿಷವೊಡ್ಡುತ್ತಿದ್ದಾರೆ. ವನ್ಯಜೀವಿಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾದ, ಅವುಗಳ ಜೀವನ ಕ್ರಮ ಅರಿತ ಇಂತಹ ಮಂದಿಯ ನಾಚಿಕೆಗೇಡಿನ ನಡೆ ಕೂಡ ಇಂದು ಅತಿ ಅಪರೂಪದ ಜೀವಿಯೊಂದರ ಉಳಿವಿಗೇ ಸಂಚಕಾರ ತಂದಿದೆ. ಆ ಕುರಿತು ಮಾತನಾಡಿದ ಪರಿಸರಾಸಕ್ತ ಅಖಿಲೇಶ್ ಚಿಪ್ಪಳಿ, “ಆಗುಂಬೆಯಲ್ಲಿ ಇರುವ 70-80 ಸಿಂಗಳೀಕಗಳ ಪೈಕಿ ಎರಡು ಕುಟುಂಬ ಪ್ರವಾಸಿಗರು, ಫೋಟೋಗ್ರಾಫರು ಹಾಕುವ ತಿಂಡಿಯ ಆಮಿಷಕ್ಕೆ ಬಿದ್ದಿವೆ. ಅವುಗಳಿಗೆ ತಿಂಡಿ ಹಾಕದಂತೆ ಜನರಿಗೆ ತಿಳಿಹೇಳುವ ಕೆಲಸ ಫಲ ಕೊಡಲಿಲ್ಲ. ಹಾಗಾಗಿ ಕೊನೆಗೆ ಜನರಿಗೆ ಬುದ್ಧಿಹೇಳಿ ಪ್ರಯೋಜನವಿಲ್ಲ ಎಂದುಕೊಂಡು, ಮೂಕ ಪ್ರಾಣಿಗಳಿಗೇ ಬುದ್ದಿ ಹೇಳುವ ಪ್ರಯತ್ನವಾಗಿ ರಸ್ತೆಯಂಚಿಗೆ ಬರದಂತೆ ತಡೆಯುವ ಪ್ರಯೋಗ ಮಾಡಿದೆವು. ಅದು ಎರಡು ಮೂರು ತಿಂಗಳು ಫಲ ಕೊಟ್ಟಿತ್ತು ಕೂಡ. ಇದೀಗ ಮತ್ತೆ ಅವು ಕೆಳಗೆ ಬರುತ್ತಿವೆ ಎಂದರೆ ಎಲ್ಲಿ ಲೋಪವಾಗಿದೆ ಪರಿಶೀಲಿಸಿ ಸರಿಪಡಿಸಬೇಕಿದೆ. ಮುಖ್ಯವಾಗಿ ಜಗತ್ತಿನ ಅತಿ ಅಪರೂಪದ ಈ ಪ್ರಾಣಿ ನಮ್ಮಲ್ಲಿ ಮಾತ್ರ ಇರುವುದು ಎಂಬ ವಿವೇಕದಿಂದ ನಾವೆಲ್ಲರೂ ಅವುಗಳನ್ನು ಅವುಗಳ ಪಾಡಿಗೆ ಬಿಡುವ ಕೆಲಸ ಮಾಡಬೇಕಿದೆ” ಎನ್ನುತ್ತಾರೆ.
ಒಂದು ಅಂದಾಜಿನ ಪ್ರಕಾರ ರಾಜ್ಯದ ವ್ಯಾಪ್ತಿಯ ಘಟ್ಟದ ಆಗುಂಬೆ ಮಳೆಕಾಡು ವ್ಯಾಪ್ತಿಯಲ್ಲಿ 8ರಿಂದ 10 ಕುಟುಂಬ ಮತ್ತು ಶರಾವತಿ- ಅಘನಾಶಿನಿ ಕಣಿವೆಯ ವ್ಯಾಪ್ತಿಯಲ್ಲಿ 30-32 ಕುಟುಂಬ ಇರಬಹುದು. ಒಂದು ಕುಟುಂಬದಲ್ಲಿ ಒಂದು ವಯಸ್ಕ ಗಂಡು ಮತ್ತು ಇತರೆ ನಾಲ್ಕೈದು ಹೆಣ್ಣು ಹಾಗೂ ಉಳಿದ ನಾಲ್ಕೈದು ಅಪ್ರಾಪ್ತ ಮರಿಗಳು ಇರುತ್ತವೆ. ಆ ಅಂದಾಜಿನ ಒಟ್ಟೂ ರಾಜ್ಯ ವ್ಯಾಪ್ತಿಯಲ್ಲಿ ಪ್ರಕಾರ 380-400 ಸಂಖ್ಯೆಯ ಸಿಂಗಳೀಕಗಳಿರಬಹುದು. ಕೇರಳ, ತಮಿಳುನಾಡು ಮತ್ತು ಶ್ರೀಲಂಕಾದಲ್ಲಿ ಅಲ್ಲಲ್ಲಿ ತೀರಾ ಅಪರೂಪಕ್ಕೆ ಕಂಡುಬರುವ ಇವುಗಳನ್ನು ಜಾಗತಿಕ ಮಟ್ಟದಲ್ಲಿ ಹುಲಿಯಷ್ಟೇ ಪ್ರಾಮುಖ್ಯತೆ ಹೊಂದಿರುವ ಜೀವವೈವಿಧ್ಯದ ಸಮೃದ್ಧಿಯ ಸಂಕೇತ ಎಂದು ಭಾವಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿಯೇ 1980-90ರ ದಶಕದಲ್ಲಿಯೇ ಪಶ್ಚಿಮಘಟ್ಟದ ಈ ಅಪರೂಪದ ಜೀವ ಪ್ರಭೇಧದ ರಕ್ಷಣೆಗೆ ಅಂತಾರಾಷ್ಟ್ರೀಯ ಒತ್ತಡ ಹಾಕಲಾಗಿತ್ತು. ಆ ಬಳಿಕವೇ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಇದರ ವಿಶೇಷ ಸಂರಕ್ಷಿತ ವಲಯಗಳನ್ನು ಘೋಷಿಸಲಾಗಿತ್ತು.
ಇಂತಹ ಜೀವಿಯ ರಕ್ಷಣೆಯ ನಿಟ್ಟಿನಲ್ಲಿ ಆಗುಂಬೆ ಮಳೆಕಾಡು ಪ್ರದೇಶ ನಿರ್ಣಾಯಕವಾಗಿದ್ದು, ಅಲ್ಲಿ ಪ್ರವಾಸಿಗರು ಮತ್ತು ವನ್ಯಜೀವಿ ಫೋಟೋಗ್ರಾಫರುಗಳು ದಾಳಿಯಿಂದ ಇವುಗಳನ್ನು ಕಾಪಾಡುವುದು ಹೇಗೆ ಎಂಬುದು ಈಗ ವನ್ಯಜೀವಿ ಇಲಾಖೆ ಮತ್ತು ಪರಿಸರಾಸಕ್ತರ ಮುಂದಿರುವ ಸವಾಲಾಗಿದೆ!