ನಗರದಾದ್ಯಂತ ಆಗಸ್ಟ್ 21 ಮತ್ತು 22 ರಂದು ವಾರಾಂತ್ಯ ಕರ್ಫ್ಯೂ ಜಾರಿಯಾದ ಬೆನ್ನಲ್ಲೇ ಚುರುಕಿನ ಕಾರ್ಯಚರಣೆ ನಡೆಸಿದ ಮೈಸೂರು ನಗರ ಸಂಚಾರ ಪೊಲೀಸರು, ನಗರದ ರಸ್ತೆಗಳಲ್ಲಿ ಅನಗತ್ಯವಾಗಿ ಚಲಿಸುತ್ತಿದ್ದ 116 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಧ್ವನಿ ವರದಿ ಮಾಡಲು ತೆರಳಿದಾಗ, ಆಗಸ್ಟ್ 21 ರಂದು, ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಮತ್ತು ಕರ್ಫ್ಯೂ ಸಮಯದಲ್ಲಿ ಅನಗತ್ಯವಾಗಿ ಚಲಿಸುತ್ತಿದ್ದ 53 ದ್ವಿಚಕ್ರ ವಾಹನಗಳು ಮತ್ತು ಐದು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ 22 ರಂದು ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ 56 ದ್ವಿಚಕ್ರ ವಾಹನಗಳು ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಗಡಿ ಜಿಲ್ಲೆಯಲ್ಲಿ ಬಾದಿಸುತ್ತಿರುವ ಮಾರಕ ಕರೋನ ವೈರಸ್ ಹರಡುವುದನ್ನು ತಡೆಗಟ್ಟಲು ಮತ್ತು ಪೊಲೀಸರೊಂದಿಗೆ ಸಹಕರಿಸಲು ಸರ್ಕಾರ ಹೊರಡಿಸಿರುವ ಕೋವಿಡ್ -19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಫುಟ್ ಪಾತ್ ಅತಿಕ್ರಮಣರಿಗೆ ಪೋಲಿಸ್ ಚಾಟಿ
ಕೃಷ್ಣರಾಜ, ನರಸಿಂಹರಾಜ ಮತ್ತು ವಿ.ವಿ. ಪುರಂ ಟ್ರಾಫಿಕ್ ಪೋಲಿಸ್, ಆಗಸ್ಟ್ 22 ರಂದು ನೃಪತುಂಗ ರಸ್ತೆ, ಅಶೋಕ ರಸ್ತೆ ಮತ್ತು ಹಿನಕಲ್ ಮುಖ್ಯ ರಸ್ತೆಯಲ್ಲಿ ಫುಟ್ ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆಗಳನ್ನು ನಡೆಸಿದ್ದು, ಕರ್ನಾಟಕ ಪೊಲೀಸ್ ಕಾಯ್ದೆಯಡಿ ಎರಡು ಪ್ರಕರಣಗಳನ್ನು ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಮೂರು ಪ್ರಕರಣಗಳನ್ನು ದಾಖಲಿಸಿದ್ದು, ಐದು ನೋಟಿಸ್ ಗಳನ್ನು ನೀಡುವುದರ ಜೊತೆಗೆ ಫುಟ್ ಪಾತ್ ಅತಿಕ್ರಮಣದಾರರಿಂದ ಒಟ್ಟು 3,000 ರೂ ದಂಡವನ್ನು ಸಂಗ್ರಹಿಸಿದೆ.












