ರಾಜ್ಯ ಕಾಂಗ್ರೆಸ್ಸಿನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಹಾವು-ಮುಂಗುಸಿಯಂತೆ ಆಗಾಗ ಕಿತ್ತಾಡುತ್ತಿದ್ದ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹಲವು ಬಾರಿ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆ ಪ್ರಕಾರ ಹಳೆ ಮುನಿಸು ಮರೆತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಜಮೀರ್ ಅಹಮ್ಮದ್ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ರಾಜ್ಯದಲ್ಲಿ ಇತ್ತೀಚೆಗೆ ಕಾಂಗ್ರೆಸ್ನ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿದ್ದವು. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅಂತೂ ಸಾರ್ವಜನಿಕವಾಗಿ ರಾಜ್ಯದ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘಂಟಾಘೋಷವಾಗಿ ಹೇಳುತ್ತಿದ್ದರು. ಇದು ಸಹಜವಾಗಿಯೇ ಡಿಕೆ ಶಿವಕುಮಾರ್ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿಯೇ ಡಿ.ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಕೇಳಿ ಬಂದವು. ಇದು ಸಿದ್ದರಾಮಯ್ಯ ಆಪ್ತ ಜಮೀರ್ ಮತ್ತು ಡಿ.ಕೆ ಶಿವಕುಮಾರ್ ನಡುವಿನ ಮುನಿಸಿಗೆ ಕಾರಣವಾಗಿತ್ತು.
ಇತ್ತೀಚೆಗೆ ಇಡಿ ದಾಳಿ ನಡೆದ ಬಳಿಕ ಡಿ.ಕೆ ಶಿವಕುಮಾರ್ ಹಾಗೂ ಜಮೀರ್ ಅಹಮ್ಮದ್ ಮುನಿಸು ಎಲ್ಲವೂ ಮರೆತು ಹತ್ತಿರವಾಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಜಮೀರ್, ಡಿ.ಕೆ ಶಿವಕುಮಾರ್ ಆಗಾಗ ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು. ED ಸಂಕೋಲೆಯ ಸುಳಿಗೆ ಸಿಲುಕಿರುವ ಜಮೀರ್ ಅಹ್ಮದ್ ಖಾನ್ ಬೆನ್ನಿಗೆ ನಿಂತಿರುವ ಡಿ.ಕೆ ಶಿವಕುಮಾರ್ ಧೈರ್ಯ ತುಂಬಿದ್ದಾರೆ. ಯಾವುದೇ ಕಾರಣಕ್ಕೂ ಹೆದರಬೇಡಿ, ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಡಿ.ಕೆ ಶಿವಕುಮಾರ್ ಜಮೀರ್ಗೆ ಮಾತು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಎಂದಿರುವ ಡಿ.ಕೆ ಶಿವಕುಮಾರ್, ಜಮೀರ್ ಗೆ ಕೆಲವೊಂದು ಕಾನೂನು ಸಲಹೆಗಳನ್ನ ನೀಡಿದ್ದಾರೆ. ಇದರಿಂದ ಭಾರೀ ಖುಷಿಪಟ್ಟಿರುವ ಜಮೀರ್, ಹಲವು ಬಾರಿ ಡಿ.ಕೆ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇಡಿ ದಾಳಿ ಕೇಸನಿಂದ ಪಾರಾಗಲು ಬೇಕಾದ ವಕೀಲರ ಸಂಪರ್ಕವನ್ನು ಡಿ.ಕೆ ಶಿವಕುಮಾರ್ ಅವರಿಂದ ಜಮೀರ್ ಪಡೆದಿದ್ದಾರಂತೆ. ಯಾವ ವಕೀಲರು ಸೂಕ್ತ, ಹೇಗೆ ಕಾನೂನು ಹೋರಾಟ ಮಾಡಬೇಕು ಎಂದು ಸಲಹೆ ಪಡೆದಿರುವ ಜಮೀರ್ಗೆ ಡಿ.ಕೆ ಶಿವಕುಮಾರ್ ಕಪಿಲ್ ಸಿಬಲ್ ಸಂಪರ್ಕ ಕೊಟ್ಟಿದ್ದಾರೆ. ಖುದ್ದು ಡಿ.ಕೆ ಶಿವಕುಮಾರ್ ಕಾಲ್ ಮಾಡಿ ಜಮೀರ್ ಗೆ ಸಹಾಯ ಮಾಡಿ ಎಂದು ಸಿಬಲ್ ಗೆ ಮನವಿ ಮಾಡಿದ್ದಾರಂತೆ.
ಇನ್ನು, ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ ಆಪ್ತರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರಾ? ಡಿ.ಕೆ ಶಿವಕುಮಾರ್ ಎಂಬ ಅನುಮಾನ ಹುಟ್ಟಿಕೊಂಡಿದೆ. ಸಿದ್ದರಾಮಯ್ಯ ಆಪ್ತರ ವಿಶ್ವಾಸ ಗಳಿಸುವ ಮೂಲಕ ತನ್ನ ಕೈ ಬಲಪಡಿಸಿಕೊಳ್ಳಲು ಮುಂದಾಗಿರುವ ಡಿ.ಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ.
ಸಿದ್ದರಾಮಯ್ಯ ಆಪ್ತರನ್ನು ದಿನಕ್ಕೆ ಒಬ್ಬರಂತೆ ಭೇಟಿ ಮಾಡುವುದು. ಅವರ ಸಮಸ್ಯೆಗಳನ್ನು ಆಲಿಸುವುದು. ತಾನು ಕಾಂಗ್ರೆಸ್ ಮುಂದಿನ ರಾಜ್ಯ ಸಿಎಂ ಎಂಬ ಭಾವನೆ ಮೂಡಿಸುವುದು. ಯಾರು ಸಿದ್ದರಾಮಯ್ಯ ಪರ ಇದ್ದಾರೋ ಅವರನ್ನು ತನ್ನ ಪರ ಸೆಳೆದುಕೊಳ್ಳುವ ಪ್ಲಾನ್ ಡಿ.ಕೆ ಶಿವಕುಮಾರ್ ಅವರದ್ದು.
ಭವಿಷ್ಯದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಆಪ್ತರನ್ನ ಸೆಳೆಯಲು ಡಿ.ಕೆ ಶಿವಕುಮಾರ್ ಕೈ ಹಾಕಿದ್ದಾರಂತೆ. ಮೊದಲ ಪ್ರಯತ್ನವಾಗಿ ಅಂತರ ಕಾಯ್ದುಕೊಂಡಿದ್ದ ಸ್ವಪಕ್ಷೀಯ ಶಾಸಕನನ್ನ ತಮ್ಮತ್ತ ಸೆಳೆಯುವುದರಲ್ಲಿ ಡಿ.ಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಆರಂಭದಿಂದಲೂ ಸಿದ್ದರಾಮಯ್ಯ ಬಣ ಸೇರಿ ಸೆಡ್ಡು ಹೊಡೆದಿದ್ದ ಜಮೀರ್ ಖಾನ್ ಅವರನ್ನು ಡಿ.ಕೆ ಶಿವಕುಮಾರ್ ಭೇಟಿಯಾಗಿ ಸೆಳೆಯುವುದರಲ್ಲಿ ಸಫರಾಗಿದ್ದಾರೆ. ಈ ಹಿಂದೆ 10ಕ್ಕೂ ಹೆಚ್ಚು ಸಲ ತನ್ನ ಚಾಮರಾಜಪೇಟೆ ಕ್ಷೇತ್ರಕ್ಕೆ ಫುಡ್ ಕಿಟ್ ವಿತರಣೆಗೆ ಸಿದ್ದರಾಮಯ್ಯಗೆ ಮಾತ್ರ ಆಹ್ವಾನ ನೀಡಿದ್ದರು ಜಮೀರ್. ಡಿ.ಕೆ ಶಿವಕುಮಾರ್ ಅವರನ್ನು ದೂರವಿಟ್ಟು ಎಲ್ಲರನ್ನು ಕರೆದಿದ್ದ ಜಮೀರ್ ಬಗ್ಗೆ ಭಾರೀ ಚರ್ಚೆಯಾಗಿತ್ತು.
ಅಷ್ಟೇ ಅಲ್ಲದೇ ಚಾಮರಾಜಪೇಟೆ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸಿದ್ದುಗೆ ಬಹಿರಂಗ ಆಹ್ವಾನ ನೀಡಿದ್ದರು ಜಮೀರ್. ಇಬ್ಬರೂ ನಾಯಕರಿಗೂ ಆಹ್ವಾನ ನೀಡದೆ ಕೇವಲ ಸಿದ್ದರಾಮಯ್ಯಗೆ ಆದ್ಯತೆ ನೀಡುತ್ತಿದ್ದ ಜಮೀರ್, ಹೋದಲ್ಲಿ ಬಂದಲ್ಲಿ ಮುಂದಿನ ಸಿಎಂ ಸಿದ್ದು ಎಂದು ಘಂಟಾಘೋಷವಾಗಿ ಹೇಳಿಕೆ ನೀಡುತ್ತಿದ್ದರು.
ಜಮೀರ್ ನಡೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇಡಿ ದಾಳಿ ಬಳಿಕ ಮಾಸ್ಟರ್ ಪ್ಲಾನ್ ಮಾಡಿ ಸೆಳೆದಿದ್ದಾರೆ. ಇಡಿ ದಾಳಿ ಬಳಿಕ ಮುಜುಗರದ ಕಾರಣ ಜಮೀರಿಂದ ಸಿದ್ದರಾಮಯ್ಯ ದೂರ ಉಳಿದದ್ದೇ ತಡ, ಡಿ.ಕೆ ಶಿವಕುಮಾರ್ ಈ ಅವಕಾಶ ಬಳಸಿಕೊಂಡು ತನ್ನ ವಿರೋಧಿಯನ್ನು ಸೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.