• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಅಮೃತಘಳಿಗೆಯ ವಿಜೃಂಭಣೆಯೂ, ಪ್ರಜಾತಂತ್ರ ಭಾರತದ ಆತಂಕಗಳೂ

ನಾ ದಿವಾಕರ by ನಾ ದಿವಾಕರ
August 15, 2021
in ಅಭಿಮತ
0
ಅಮೃತಘಳಿಗೆಯ ವಿಜೃಂಭಣೆಯೂ, ಪ್ರಜಾತಂತ್ರ ಭಾರತದ ಆತಂಕಗಳೂ
Share on WhatsAppShare on FacebookShare on Telegram

ಎರಡು ಶತಮಾನಗಳ ವಸಾಹತು ಶೋಷಣೆ ಸಂಕೋಲೆಗಳಿಂದ ವಿಮೋಚನೆ ಪಡೆದು ಒಂದು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡ ಭಾರತ ಇಂದು ತನ್ನ 75ನೆಯ ವರ್ಷವನ್ನು ಪ್ರವೇಶಿಸುತ್ತಿದೆ. ಸಾಮಾಜಿಕಾರ್ಥಿಕ ಅಸಮಾನತೆಯನ್ನು ಹೊದ್ದುಕೊಂಡೇ ಮೈದಡವಿ ನಿಂತ ಸ್ವತಂತ್ರ ಭಾರತ ಒಂದು ಸ್ವಾವಲಂಬಿ ರಾಷ್ಟ್ರವಾಗಿ ರೂಪುಗೊಳ್ಳಲು ಕ್ರಮಿಸಿದ ಹಾದಿಯನ್ನು ನಿರ್ಭಾವುಕತೆಯಿಂದ ಗಮನಿಸದೆ ಹೋದರೆ ಬಹುಶಃ ನಮಗೆ 1947ರಲ್ಲಿದ್ದ ಉತ್ಸಾಹಕ್ಕೂ 2021ರಲ್ಲಿರುವ ಉನ್ಮಾದಕ್ಕೂ ಇರುವ ಅಂತರ ಅರ್ಥವಾಗುವುದಿಲ್ಲ. ವ್ಯಕ್ತಿಗತ ಬದುಕಿನಲ್ಲಿ ಜನ್ಮ ತಾಳಿದ ದಿನಕ್ಕೆ ಇರುವ ಮಹತ್ವವೇ ಒಂದು ಭೌಗೋಳಿಕ ರಾಷ್ಟ್ರದ ವಿಚಾರದಲ್ಲೂ ಇದ್ದರೆ ತಪ್ಪೇನಿಲ್ಲ. ಆದರೆ 75 ವರ್ಷಗಳ ಸುದೀರ್ಘ ಪಯಣದ ನಂತರ ಅಂಬೆಗಾಲಿನ ದಿನಗಳನ್ನು ಸ್ಮರಿಸದೆ ಇಟ್ಟ ಹೆಜ್ಜೆ ಗುರುತುಗಳನ್ನೂ ಅಳಿಸಿಹಾಕುತ್ತಾ ಒಂದು ಹೊಸ ಬದುಕನ್ನು ಕಟ್ಟಿಕೊಡುವ ಭ್ರಮೆಯಲ್ಲಿ ಮುನ್ನಡೆಯುವುದು ಆತ್ಮವಂಚನೆಯಾಗುತ್ತದೆ.

ADVERTISEMENT

1947ರಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯಿಂದ ಅಧಿಕಾರ ವಹಿಸಿಕೊಂಡ ಭಾರತದ ಆಳುವ ವರ್ಗಗಳಲ್ಲಿ ಸುಂದರ ಕನಸುಗಳಿದ್ದವು. ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಮಾಜಿಕ ವೈರುಧ್ಯಗಳನ್ನು ಒಡಲಲ್ಲಿಟ್ಟುಕೊಂಡೇ ಆಳವಾಗಿ ಬೇರೂರಿದ್ದ ಸಾಮಾಜಿಕಾರ್ಥಿಕ ಅಸಮಾನತೆಗಳನ್ನು ಎದುರಿಸಿ ಒಂದು ಸಮ ಸಮಾಜವನ್ನು ನಿರ್ಮಿಸುವ, ಒಂದು ಸೌಹಾರ್ದಯುತ ಮಾನವೀಯ ಸಮಾಜವನ್ನು ರೂಪಿಸುವ ಉತ್ಸಾಹ 1947ರ ಕನಸಿನ ಒಂದು ಭಾಗವಾಗಿತ್ತು. ಆದರೆ ಈ ಕನಸುಗಳ ಹಿಂದೆ ಆತಂಕಗಳೂ ಇದ್ದವು. 1950ರಲ್ಲಿ ಪ್ರಜೆಗಳು ತಮಗೆ ತಾವೇ ಅರ್ಪಿಸಿಕೊಂಡ ಸಂವಿಧಾನದ ಆಶಯಗಳು ಮೂಲತಃ ರೂಪುಗೊಂಡಿದ್ದು ಈ ಸಂದರ್ಭದಲ್ಲೇ. ಭಾರತವನ್ನು ಶೋಷಣೆಯಿಂದ ಮುಕ್ತವಾದ, ಅಸಮಾನತೆಯಿಲ್ಲದ, ತಾರತಮ್ಯಗಳಿಲ್ಲ, ದೌರ್ಜನ್ಯದ ಸುಳಿವಿಲ್ಲದ ಒಂದು ವೈಚಾರಿಕ ದೇಶವನ್ನಾಗಿ ರೂಪಿಸುವುದು ಸಾಂವಿಧಾನಿಕ ಆಶಯಗಳೂ ಆಗಿದ್ದವು.

ಬಾಹ್ಯ ಶತ್ರುಗಳಿಂದ ಭೌಗೋಳಿಕ ಭಾರತವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಾಕಷ್ಟು ದೂರ ಕ್ರಮಿಸಿರುವ ಸ್ವತಂತ್ರ ಭಾರತ ತನ್ನ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹೆಮ್ಮೆಯಿಂದ ಅಖಂಡತೆಯನ್ನು ಪ್ರತಿಪಾದಿಸುವ ಸ್ಥಿತಿಯಲ್ಲಿದೆ. ಒಂದು ಭೌಗೋಳಿಕ ಅಸ್ಮಿತೆ ಮತ್ತು ರಾಷ್ಟ್ರೀಯ ಅಸ್ತಿತ್ವದ ದೃಷ್ಟಿಯಿಂದ ಇದು ಸಮಸ್ತ ಜನಕೋಟಿಯಲ್ಲಿ ಹೆಮ್ಮೆ ಉಂಟುಮಾಡುವ ವಿಚಾರವೇ ಹೌದು. ದೇಶಪ್ರೇಮ ಅಥವಾ ದೇಶಭಕ್ತಿಯನ್ನು ಆತ್ಮಪ್ರತ್ಯಯದ ನೆಲೆಯಲ್ಲಿ ನಿಂತು ನೋಡಿದಾಗ ಇದು ಸ್ವಾವಲಂಬಿ ಭಾರತದ ಒಂದು ಹೆಗ್ಗಳಿಕೆ. ಆದರೆ ಈ ಆತ್ಮಪ್ರತ್ಯಯದ ಹಿಂದೆ ಸ್ವವಿಮರ್ಶಾತ್ಮಕ ಹಿನ್ನೋಟ ಇಲ್ಲದೆ ಹೋದರೆ ಬಹುಶಃ ನಮ್ಮ ಪ್ರಜ್ಞೆಯನ್ನು ಉನ್ಮಾದ ಅಥವಾ ಆತ್ಮರತಿಗೆ ಬಲಿಕೊಟ್ಟುಬಿಡುತ್ತೇವೆ.

ಸಾಧನೆಯ ಹೆಜ್ಜೆ ಗುರುತುಗಳನ್ನು ಅಳಿಸಿಹಾಕುತ್ತಲೇ ಏರಿದ ಮೆಟ್ಟಿಲುಗಳನ್ನು ಅಲ್ಲಗಳೆಯುವ ಒಂದು ವಿಶಿಷ್ಟ ಸಂದರ್ಭದಲ್ಲಿ ನವ ಭಾರತ ತನ್ನ #ಆತ್ಮನಿರ್ಭರತೆಯನ್ನು ಕಂಡುಕೊಳ್ಳಲು ಯತ್ನಿಸುತ್ತಿದೆ. ಸ್ವಾವಲಂಬನೆಯ ಹಾದಿಯಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿಯೂ ಒಂದು ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ನವ ಭಾರತ ಇಂದು ತನ್ನ ಸುಭದ್ರ ತಳಪಾಯದಲ್ಲಿ ಅಡಗಿರುವ ಈ ದೇಶದ ಕೋಟ್ಯಂತರ ಶ್ರಮಜೀವಿಗಳ ನೆನಪುಗಳನ್ನೇ ಅಳಿಸಿಹಾಕುವ ನಿಟ್ಟಿನಲ್ಲಿ ಸಾಗುತ್ತಿರುವುದು ಅಮೃತ ಮಹೋತ್ಸವದ ಉನ್ಮಾದಕ್ಕೆ ತಣ್ಣೀರೆರೆಚಬಹುದಾದ ವಿದ್ಯಮಾನ. ಈ ಆತಂಕದ ನಡುವೆಯೇ ನಮ್ಮ ಉತ್ಸಾಹದ ಕ್ಷಣಗಳನ್ನು ಸವಿಯಬೇಕಿದೆ.

ನಿಜ, ಭಾರತ ತನ್ನ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಲೇ, ತನ್ನ ಅಭಿವೃದ್ಧಿ ಪಥದಲ್ಲಿ ಸಾಕಷ್ಟು ಅಡ್ಡಿ ಆತಂಕಗಳನ್ನು ಎದುರಿಸಿದೆ, ಇಂದಿಗೂ ಎದುರಿಸುತ್ತಿದೆ. ಭೌಗೋಳಿಕ ಭಾರತ ಎದುರಿಸುತ್ತಿರುವ ಸವಾಲುಗಳಿಗಿಂತಲೂ ಹೆಚ್ಚಾಗಿ ನಮ್ಮ ಸಂವಿಧಾನ ಪ್ರತಿನಿಧಿಸುವ ಪ್ರಜೆಗಳ ಭಾರತ ಭೌತಿಕವಾಗಿ, ಬೌದ್ಧಿಕವಾಗಿ ಎದುರುಗೊಳ್ಳಬೇಕಾದ ಸವಾಲುಗಳು ಹೆಚ್ಚು ಆತಂಕಗಳನ್ನು ಸೃಷ್ಟಿಸುತ್ತವೆ. ಭೌಗೋಳಿಕ ಪ್ರಜ್ಞೆಯಿಂದ ಹೊರಬಂದು ಭಾರತವನ್ನು ಒಮ್ಮೆ ನೋಡಿದರೆ ಆಂತರಿಕವಾಗಿ ನಾವು ನಿತ್ಯ ಬದುಕಿನ ಸಾಮಾಜಿಕ ತಲ್ಲಣಗಳಿಗೆ, ಸಾಂಸ್ಕೃತಿಕ ವ್ಯತ್ಯಯಗಳಿಗೆ ಮತ್ತು ಆರ್ಥಿಕ ಪಲ್ಲಟಗಳಿಗೆ ಮುಖಾಮುಖಿಯಾಗುತ್ತಿರುವುದನ್ನು ಕಾಣಲು ಸಾಧ್ಯ.

ಸ್ವತಂತ್ರ ಭಾರತದ ಪ್ರಭುತ್ವ ಪ್ರಜಾಸತ್ತಾತ್ಮಕ ಲಕ್ಷಣಗಳನ್ನು ಉಳಿಸಿಕೊಂಡಿದೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ ಸಾಂವಿಧಾನಿಕ ಆಶಯಗಳ ನೆಲೆಯಲ್ಲಿ ನಿಂತು ನೋಡಿದಾಗ 1947ರ ಕನಸುಗಳು ಛಿದ್ರವಾಗುತ್ತಿರುವ ಆತಂಕವೂ ಎದುರಾಗುವುದು ಸಹಜ. 1950ರಲ್ಲಿ ಭಾರತದ ಪ್ರಜೆಗಳು ತಮಗೆ ತಾವೇ ಅರ್ಪಿಸಿಕೊಂಡ ಸಂವಿಧಾನ ಇಂದು ಗ್ರಾಂಥಿಕವಾಗಿ ನಮ್ಮ ನಡುವೆ ಸುರಕ್ಷಿತವಾಗಿದೆ ಆದರೆ ಆಚರಣೆಯ ನೆಲೆಯಲ್ಲಿ ಸಾಂವಿಧಾನಿಕ ಮೌಲ್ಯಗಳು ನಿರಂತರವಾಗಿ ದಾಳಿಗೆ ತುತ್ತಾಗುತ್ತಿದೆ. 75ರ ಸಂಭ್ರಮಾಚರಣೆಯ ಉನ್ಮಾದದಲ್ಲಿ ಈ ವಿಮರ್ಶಾತ್ಮಕ ನೆಲೆಯಿಂದ ನಾವು ಜಾರಿಕೊಂಡರೆ ಬಹುಶಃ ನೂರರ ವೇಳೆಗೆ ಎಲ್ಲವನ್ನೂ ಕಳೆದುಕೊಂಡಿರುತ್ತೇವೆ. ಭಾರತ ಒಂದು ದೇಶ, ದೇಶ ಎಂದರೆ ಮಣ್ಣಲ್ಲವೋ ಮನುಷ್ಯರು ಎಂಬ ಧ್ಯೇಯವಾಕ್ಯವನ್ನು ಗಮನದಲ್ಲಿಟ್ಟು ನೋಡುವುದು ಇಂದಿನ ತುರ್ತು.

ಸಂವಿಧಾನದ ಆಶಯದಂತೆ ಭಾರತ ಒಂದು ಅಪ್ಪಟ ಸಮಾಜವಾದಿ ರಾಷ್ಟ್ರವಾಗಿ ರೂಪುಗೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ ಎನ್ನುವುದು ಚಾರಿತ್ರಿಕ ಕಟು ಸತ್ಯ. ಸಮಾಜವಾದದ ಸೋಗು ಮತ್ತು ಜಾತ್ಯತೀತತೆಯ ಹೊದಿಕೆ ಭಾರತವನ್ನು ಒಂದು ಸೌಹಾರ್ದಯುತ ದೇಶವನ್ನಾಗಿ ಕಾಪಾಡಿಕೊಂಡಿರುವುದು ವಾಸ್ತವ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಊಳಿಗಮಾನ್ಯ ಔದಾರ್ಯದ ನೆಲೆಗಳನ್ನೇ ಸಮಾಜವಾದ ಎಂದು ಬಿಂಬಿಸುವ ನಿಟ್ಟಿನಲ್ಲಿ ಈ ದೇಶದ ಆಳುವ ವರ್ಗಗಳು ಯಶಸ್ವಿಯಾಗಿವೆ. ಹಾಗಾಗಿ ಉತ್ಪಾದನೆಯ ಮೂಲಗಳು ಮತ್ತು ಉತ್ಪಾದನೆಯ ಸಾಧನಗಳು 74 ವರ್ಷಗಳ ನಂತರವೂ ಬಂಡವಾಳಿಗರ ಸ್ವತ್ತಾಗಿಯೇ ಉಳಿದಿವೆ.

ಈ ಉತ್ಪಾದನಾ ಸಂಬಂಧಗಳನ್ನು ಸಡಿಲಗೊಳಿಸುವ ಅಥವಾ ಭಂಗಗೊಳಿಸುವ ಮತ್ತು ಉತ್ಪಾದನಾ ಸಾಧನಗಳ ನೆಲೆಗಳನ್ನು ಪಲ್ಲಟಗೊಳಿಸುವ ಪ್ರಯತ್ನಗಳನ್ನು ಸದಾ ವಿದ್ರೋಹದ ನೆಲೆಯಲ್ಲೇ ಕಾಣುವುದು ಭಾರತೀಯ ಪ್ರಭುತ್ವದ ಲಕ್ಷಣವಾಗಿದೆ. ಆದರೆ ಈ ದೇಶದ ಶ್ರಮಜೀವಿಗಳಿಗೆ, ದುಡಿಮೆಯನ್ನೇ ನಂಬಿ ಬದುಕುತ್ತಲೇ ರಾಷ್ಟ್ರದ ಸಂಪತ್ತನ್ನು ವೃದ್ಧಿಸಲು ನೆರವಾಗುವ ಶ್ರಮಿಕ ಸಮುದಾಯಗಳಿಗೆ ತಮ್ಮ ಭೌತಿಕ ನೆಲೆಯನ್ನೇ ಕಳೆದುಕೊಳ್ಳುತ್ತಿರುವ ಆತಂಕ ಎದುರಾಗುತ್ತಿದೆ. ಪ್ರಸ್ತುತ ದೆಹಲಿಯಲ್ಲಿ ಕಳೆದ ಒಂಬತ್ತು ತಿಂಗಳಿಂದ ನಡೆಯುತ್ತಿರುವ ರೈತರ ಹೋರಾಟದ ಹಿಂದೆ ಇದರ ಛಾಯೆಯನ್ನು ಸ್ಪಷ್ಟವಾಗಿ ಕಾಣಬಹುದು. ಸಮಾಜವಾದಿ ಅಲ್ಲದಿದ್ದರೂ, ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು, ನೆಲ-ಜಲ-ಅರಣ್ಯ ಸಂಪತ್ತನ್ನು ಸಾಮ್ರಾಜ್ಯಶಾಹಿಗಳ ವಶಕ್ಕೊಪ್ಪಿಸದೆ ಕಾಪಾಡಿಕೊಂಡು ಬಂದಿದ್ದ ಭಾರತ ಇಂದು ಸ್ವಾತಂತ್ರ್ಯ ಪೂರ್ವದ ಸನ್ನಿವೇಶಕ್ಕೆ ಮರಳುತ್ತಿರುವುದನ್ನು #ಆತ್ಮನಿರ್ಭರ ಭಾರತದ ಸಂದರ್ಭದಲ್ಲಿ ಕಾಣುತ್ತಿದ್ದೇವೆ.

74 ವರ್ಷದಲ್ಲಿ ಈ ದೇಶದ ಶ್ರಮಿಕ ವರ್ಗ ನಿರ್ಮಿಸಿದ ಸಾರ್ವಜನಿಕ ಸಂಪತ್ತು ಮತ್ತು ಸಂರಕ್ಷಿಸಿದ ನಿಸರ್ಗದೊಡಲಿನ ಸಂಪನ್ಮೂಲಗಳು ಇಂದು ನವ ಉದಾರವಾದದ ಸಾಮ್ರಾಟರ ವಶವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ನೂರಾರು ವರ್ಷಗಳ ಕಠಿಣ ಪರಿಶ್ರಮದಿಂದ ಕಟ್ಟಿದ ಸೌಧಗಳು ಇಂದು ಸ್ಮಾರಕಗಳಾಗಿ ಪರಿವರ್ತನೆಯಾಗುತ್ತಿವೆ. ನಾವೇ ಕಟ್ಟಿದ ಸಾಂಸ್ಥಿಕ ನೆಲೆಗಳನ್ನು ನಮ್ಮ ಕೈಯ್ಯಾರೆ ನವ ವಸಾಹತುಶಾಹಿ ಶಕ್ತಿಗಳಿಗೆ ಪರಭಾರೆ ಮಾಡಲು ತುದಿಗಾಲಲ್ಲಿ ನಿಂತಿದ್ದೇವೆ. ಈ ಹಸ್ತಾಂತರ ಪ್ರಕ್ರಿಯೆಗೆ ಪೂರಕವಾಗಿಯೇ ಸಮಕಾಲೀನ ಇತಿಹಾಸದ ಹೆಜ್ಜೆಗಳನ್ನೇ ಅಲ್ಲಗಳೆಯುವ ಒಂದು ಸಾಂಸ್ಕೃತಿಕ ಪ್ರಕ್ರಿಯೆ ಜಾರಿಯಲ್ಲಿದೆ.

ಇಂದು ಭಾರತ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳಿಗೆ ಸರಿಸಾಟಿಯಾಗಿ ನಿಲ್ಲುವ ಸಾಮಥ್ರ್ಯ ಗಳಿಸಿದ್ದರೆ ಅದರ ಹಿಂದೆ ಕೋಟ್ಯಂತರ ಜನರ ಕಠಿಣ ಪರಿಶ್ರಮ ಇದೆ. ಜಾರ್ಖಂಡಿನ ಕಲ್ಲಿದ್ದಲು ಗಣಿಗಳಿಂದ ಕೋಲಾರದ ಚಿನ್ನದ ಗಣಿಯವರೆಗೆ, ಛತ್ತಿಸ್‍ಘಡದ ನಿಸರ್ಗ ಸಂಪತ್ತಿನಿಂದ ಪಶ್ಚಿಮ ಘಟ್ಟದ ಅರಣ್ಯ ಸಂಪತ್ತಿನವರೆಗೆ, ಗುರುಗಾಂವ್‍ನ ಬೆವರಿನ ಗೂಡುಗಳಿಂದ ಬೆಂಗಳೂರಿನ ಕಾರ್ಖಾನೆಗಳವರೆಗೆ ಹರಿದುಬಂದಿರುವ ಒಂದು ಸಮಾನ ಎಳೆ ಎಂದರೆ, ಭಾರತವನ್ನು ಒಂದು ಸಶಕ್ತ ರಾಷ್ಟ್ರವನ್ನಾಗಿ ನಿರ್ಮಿಸುವ ಶ್ರಮಜೀವಿಗಳ ತ್ಯಾಗ ಮತ್ತು ಬಲಿದಾನ ಎನ್ನುವುದನ್ನು ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ಅರ್ಥಮಾಡಿಕೊಳ್ಳಬೇಕಿದೆ. ಈ ಸಂಪತ್ತು ಇಂದು ಒಂದೊಂದಾಗಿ ನವ ವಸಾಹತು ಶಕ್ತಿಗಳ, ಸಾಮ್ರಾಜ್ಯಶಾಹಿಗಳ, ಕಾರ್ಪೋರೇಟ್ ಜಗತ್ತಿನ ಪಾಲಾಗುತ್ತಿದೆ.

ಸಂಪತ್ತಿನ ಸಮಾನ ವಿತರಣೆಯಲ್ಲಿ ಕಾಣಬೇಕಾದ ಸಮಾಜವಾದವನ್ನು ಉತ್ಪಾದಿತ ಸಂಪತ್ತಿನಿಂದ ಉದ್ಭವಿಸುವ ಹೆಚ್ಚುವರಿಯ ಹಂಚಿಕೆಯಲ್ಲಿ ಕಾಣುವ ಭಾರತದ ಆಳುವ ವರ್ಗಗಳು ಈ ಹರಿದು ಹಂಚುವ ಪ್ರಕ್ರಿಯೆಯನ್ನೇ ನೈಜ ಸಮಾಜವಾದ ಎಂದು ಬಿಂಬಿಸುತ್ತಾ ಬಂದಿವೆ. 70 ವರ್ಷಗಳಲ್ಲಿ ಸೃಷ್ಟಿಯಾದ ಅಪಾರ ಭೌತಿಕ ಸಂಪತ್ತು ಇಂದು ಮತ್ತೊಮ್ಮೆ ಜಾಗತಿಕ ಕಾರ್ಪೋರೇಟ್ ಮಾರುಕಟ್ಟೆಯ ವಶಕ್ಕೆ ಒಳಪಡುತ್ತಿದೆ. ಈ ಸಂಪತ್ತಿನ ಫಲಾನುಭವಿಗಳೇ ಇಂದು ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ನೆಲೆಗಳನ್ನು ನಿಯಂತ್ರಿಸುತ್ತಿದ್ದಾರೆ. ಇದನ್ನೇ ನಾವು #ಆತ್ಮನಿರ್ಭರತೆ ಎಂದು ಸಂಭ್ರಮಿಸುತ್ತಿದ್ದೇವೆ. ಕ್ರೋಢೀಕೃತ ಬಂಡವಾಳ ಮತ್ತು ಸಂಪತ್ತು,  ಉತ್ಪಾದನೆಯ ಮೂಲಗಳೊಂದಿಗೇ ಮಾರುಕಟ್ಟೆಯ ಪಾಲಾಗುತ್ತಿದೆ. ಬಂಡವಾಳ ವ್ಯವಸ್ಥೆಯ ಈ ಕ್ರೌರ್ಯಕ್ಕೆ ಕೊಂಚಮಟ್ಟಿಗಾದರೂ ಅಡ್ಡಿಯಾಗಿದ್ದ ಒಂದು ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ನಿಟ್ಟಿನಲ್ಲಿ 70 ವರ್ಷದ ಸುವರ್ಣ ಇತಿಹಾಸವನ್ನೂ ಅಳಿಸಿಹಾಕಲು ನವ ಉದಾರವಾದದ ಸಾಂಸ್ಕೃತಿಕ ರಾಜಕಾರಣ ಸಜ್ಜಾಗಿದೆ.

ಭೂಮಿ  ಮತ್ತು ನಿಸರ್ಗದೊಡಲು, ಅರಣ್ಯ ಮತ್ತು ಘಟ್ಟಗಳು,  ನೀರು ಮತ್ತು ಉತ್ಪಾದನೆಯ ಮೂಲಗಳು  ಭಾರತದ ಉತ್ಪಾದಕೀಯ ಶಕ್ತಿಗಳ ಜೀವನಾಧಾರ. ಭೂಮಿಗಾಗಿ, ಸಂಪನ್ಮೂಲ ರಕ್ಷಣೆಗಾಗಿ ಮತ್ತು ಶ್ರಮದ ಹಕ್ಕುಗಳಿಗಾಗಿ ಹೋರಾಡಬೇಕಾದ ಶ್ರಮಿಕವರ್ಗಗಳು ಇಂದು ಸಾಂವಿಧಾನಿಕ ಸವಲತ್ತುಗಳಿಗಾಗಿ ಹೋರಾಡುತ್ತಿವೆ. ಸಂಪತ್ತಿನ ಕ್ರೋಢೀಕರಣದ ಮೂಲಕ ಸಮಸ್ತ ಜನಕೋಟಿಯನ್ನು ಮತ್ತೊಮ್ಮೆ ಊಳಿಗಮಾನ್ಯ ವ್ಯವಸ್ಥೆಯೆಡೆಗೆ ಕೊಂಡೊಯ್ಯಲು ರಾಜಕೀಯ ಅಧಿಕಾರ ಕೇಂದ್ರಗಳನ್ನೂ ಆಕ್ರಮಿಸಿರುವ ಬಂಡವಾಳಶಾಹಿಗಳು ಇವೆಲ್ಲವನ್ನೂ ವಶಪಡಿಸಿಕೊಳ್ಳಲು ಮಾರುಕಟ್ಟೆ ವ್ಯವಸ್ಥೆಯನ್ನು ಪೋಷಿಸುತ್ತಿವೆ. ಹಾಗಾಗಿಯೇ ಒಂಬತ್ತು ತಿಂಗಳ ಸುದೀರ್ಘ ಹೋರಾಟದ ನಂತರವೂ ದೇಶದ ಕೋಟ್ಯಂತರ ರೈತರ ನೋವಿನ ಧ್ವನಿ ಆಳುವ ವರ್ಗಗಳಿಗೆ ಕೇಳದಂತಾಗಿದೆ. ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವ ಶೋಷಿತ ಸಮುದಾಯಗಳು, ಆದಿವಾಸಿಗಳು, ಈ ಮಾರುಕಟ್ಟೆ ವ್ಯವಸ್ಥೆಯ ಆಳ್ವಿಕೆಯಲ್ಲೇ ತಮ್ಮ ಬದುಕನ್ನು ಕಟ್ಟಿಕೊಳ್ಳುವಂತಾಗಿದೆ.

ನೂತನ ಕೃಷಿ ಕಾಯ್ದೆಗಳ ಮೂಲಕ ಕೃಷಿ ಭೂಮಿ ಮತ್ತು ಉತ್ಪಾದನೆಯನ್ನು ಕಾಪೋರೇಟೀಕರಣಗೊಳಿಸುತ್ತಿರುವ ಆತ್ಮನಿರ್ಭರ ಭಾರತ, ಮಾರುಕಟ್ಟೆಗೆ ಅವಶ್ಯವೆನಿಸುವ ಕೌಶಲ್ಯಗಳನ್ನು ಉತ್ಪಾದಿಸಲು ಶೈಕ್ಷಣಿಕ ಕಾರ್ಖಾನೆಗಳನ್ನು ಸ್ಥಾಪಿಸಲು ಮುಂದಾಗುತ್ತಿರುವುದನ್ನು ನೂತನ ಶಿಕ್ಷಣ ನೀತಿಯಲ್ಲಿ ಕಾಣಬಹುದಾಗಿದೆ. ಔದ್ಯೋಗಿಕ ಕ್ಷೇತ್ರದೊಂದಿಗೆ ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳಲ್ಲೂ ಕಾರ್ಪೋರೇಟ್ ಆಧಿಪತ್ಯವನ್ನು ಸಾಧಿಸುವ ನಿಟ್ಟಿನಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳು ಸದ್ದಿಲ್ಲದೆ ಜಾರಿಯಾಗುತ್ತಿವೆ. ಹಣಕಾಸು ಮತ್ತು ವಿಮಾ ಕ್ಷೇತ್ರದ ಖಾಸಗೀಕರಣ ಈ ನಿಟ್ಟಿನಲ್ಲಿ ಭಾರತದ ಚಹರೆಯನ್ನೇ ಬದಲಾಯಿಸುವ ಒಂದು ಹೆಜ್ಜೆಯಾಗಿದೆ.

ಈ ಬದಲಾದ ಭಾರತದಲ್ಲೇ ದೇಶದ ಶೋಷಿತ ಸಮುದಾಯಗಳು ತಮ್ಮ ನಾಳೆಗಳ ನಿರೀಕ್ಷೆಯಲ್ಲಿವೆ. ಸಾಂವಿಧಾನಿಕ ಸವಲತ್ತುಗಳು ಬದುಕು ಸಾಗಿಸುವ ಮಾರ್ಗಗಳಾಗಬಹುದೇ ಹೊರತು, ಬದುಕನ್ನು ಬದಲಿಸುವುದಿಲ್ಲ. ಬಂಡವಾಳ ವ್ಯವಸ್ಥೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಸಮಾಜದ ಎಲ್ಲ ಶೋಷಣೆಯ ಮಾರ್ಗಗಳನ್ನೂ ಯಥಾಸ್ಥಿತಿಯಲ್ಲಿರಿಸಿಕೊಳ್ಳುತ್ತದೆ. ವಸಾಹತು ದಾಸ್ಯದ ಸಂಕೋಲೆಗಳಿಂದ ವಿಮೋಚನೆ ಪಡೆದ ಭಾರತ ಇಂದಿಗೂ ಜಾತಿ ಶ್ರೇಷ್ಠತೆಯ ಸಂಕೋಲೆಗಳಿಂದ, ಪಿತೃಪ್ರಧಾನ ಧೋರಣೆಯ ಸಂಕೋಲೆಗಳಿಂದ, ಊಳಿಗಮಾನ್ಯ ಸಂಕೋಲೆಗಳಿಂದ ಏಕೆ ಮುಕ್ತವಾಗಲು ಸಾಧ್ಯವಾಗಿಲ್ಲ ಎಂಬ  ಪ್ರಶ್ನೆಗೆ ಉತ್ತರ ಇಲ್ಲಿದೆ.

ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ಸಾಂಪ್ರದಾಯಿಕ ಸಮಾಜದ ಎಲ್ಲ ಶೋಷಕ ಮಾರ್ಗಗಳನ್ನೂ ಸಂರಕ್ಷಿಸುವ ನಿಟ್ಟಿನಲ್ಲಿ ಈ ದೇಶದ ಸಾಂಸ್ಕೃತಿಕ ಫ್ಯಾಸಿಸ್ಟ್ ರಾಜಕಾರಣ ಯಶಸ್ವಿಯಾಗಿದೆ.  ಹಾಗಾಗಿಯೇ ಇಂದು ಮಹಿಳೆಯರು, ದಲಿತರು, ಅಸ್ಪೃಶ್ಯರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಉತ್ಪಾದನಾ ಸಾಧನಗಳಿಗೆ ಪರಕೀಯರಾಗಿಯೇ ಇರುವ ಕೋಟ್ಯಂತರ ಶ್ರಮಜೀವಿಗಳು ಜಾತಿ, ಮತಧರ್ಮ ಮತ್ತು ಸಂಸ್ಕೃತಿಯ ಸುಳಿಯಲ್ಲಿ ಸಿಲುಕಿ ವಿಮೋಚನೆಗಾಗಿ ಹೋರಾಡುವ ಪರಿಸ್ಥಿತಿ ಎದುರಾಗಿದೆ.  ಒಂಬತ್ತು ತಿಂಗಳ ರೈತರ ಹೋರಾಟಕ್ಕೆ ವಿಮುಖವಾದಂತೆಯೇ ಈ ದೇಶದ ಪ್ರಭುತ್ವ ಮತ್ತು ಆಳುವ ವರ್ಗಗಳು ದೌರ್ಜನ್ಯ ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೂ, ಜಾತಿ ದೌರ್ಜನ್ಯಕ್ಕೊಳಗಾದ ಅಸ್ಪೃಶ್ಯರಿಗೂ, ತಮ್ಮ ಸ್ವಂತ ನೆಲೆಯನ್ನೇ ಕಳೆದುಕೊಂಡ ಆದಿವಾಸಿಗಳಿಗೂ ವಿಮುಖವಾಗುತ್ತಿರುತ್ತದೆ.

ಈ ಸಂದಿಗ್ಧತೆಯ ನಡುವೆಯೇ ನಾವು ಸಂವಿಧಾನದ ಆಶಯಗಳಲ್ಲಿ ವಿಶ್ವಾಸವಿರಿಸುತ್ತಾ ನಾಳೆಗಳನ್ನು ಎಣಿಸುತ್ತಿದ್ದೇವೆ. ಭಾರತದಲ್ಲಿ ಪ್ರಜಾತಂತ್ರ ಜೀವಂತವಾಗಿದೆ, ಸಂವಿಧಾನದ ಶ್ರೀರಕ್ಷೆ ನಮಗಿದೆ, ಸಾಂವಿಧಾನಿಕ ಆಶಯಗಳು ಇಂದಲ್ಲಾ ನಾಳೇ ಸಾಕಾರಗೊಳ್ಳುವ ಸಾಧ್ಯತೆಗಳಿವೆ ಎಂಬ ನಿರೀಕ್ಷೆ ಈ ದೇಶದ ಶ್ರಮಜೀವಿಗಳಲ್ಲಿ ಬದುಕುವ ಆಸೆಯನ್ನೂ ಚಿಗುರಿಸುತ್ತಲೇ ಇದೆ. ಕಾರ್ಪೋರೇಟ್ ಬಂಡವಾಳದ ತೂಗುಗತ್ತಿಯ ಕೆಳಗೆ, ಸಾಂಸ್ಕೃತಿಕ ರಾಜಕಾರಣದ ಸಂಕೋಲೆಗಳು ಬಿಗಿಯಾಗುತ್ತಿದ್ದರೂ, ಅಸ್ಮಿತೆಯ ಲೋಕದಲ್ಲಿ ವಿಹರಿಸುತ್ತಾ ನಾಳಿನ ಸುಂದರ ಬದುಕನ್ನು ಭ್ರಮಿಸುತ್ತಾ ಮುನ್ನಡೆಯುತ್ತಿರುವ ಒಂದು ಬೃಹತ್ ಜನಸಮುದಾಯ ನಮ್ಮ ನಡುವೆ ಜೀವಂತವಾಗಿದೆ. ಆಳುವ ವರ್ಗಗಳಿಗೆ, ದಮನಕಾರಿ ಪ್ರಭುತ್ವಕ್ಕೆ ಈ ಸಮೂಹ ಪ್ರಜ್ಞೆಯೇ ಶ್ರೀರಕ್ಷೆಯಾಗಿದೆ.

ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನಾ ವಾಹಿನಿಗಳನ್ನು ಅಳಿಸಿಹಾಕುತ್ತಾ, ಇಟ್ಟ ಹೆಜ್ಜೆಗಳನ್ನು ಅಲ್ಲಗಳೆಯುತ್ತಾ ಸಮಕಾಲೀನ ಇತಿಹಾಸದ ಪುಟಗಳನ್ನು ಹರಿದುಹಾಕುತ್ತಾ ಒಂದು ಭವ್ಯ ಭಾರತದ ನಿರ್ಮಾಣದತ್ತ ಸಾಗುತ್ತಿರುವ #ಆತ್ಮನಿರ್ಭರ ಭಾರತದ ಒಡಲಲ್ಲಿ ಒಂದು ಕ್ಷೀಣ ಧ್ವನಿ ಮಾತ್ರ ಸದಾ ಕೇಳುತ್ತಲೇ ಇರುತ್ತದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ಭಾರತದಲ್ಲಿ ಈ ನೋವಿನ ಧ್ವನಿಗಳು ಗುನುಗುನಿಸುವ ಕವಿವಾಣಿ, ಹೀಗೆ ಮಾತ್ರ ಧ್ವನಿಸಲು ಸಾಧ್ಯ  :-

“ ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ”

Tags: 75th independence dayಅಮೃತಘಳಿಗೆಪ್ರಜಾತಂತ್ರಭಾರತಭಾರತದ ಸಂವಿಧಾನ
Previous Post

“ಮೋದಿ ಭಾರತದ ರಾಜ ಅಲ್ಲ”: ಆರ್ಥಿಕ, ವಿದೇಶಿ ನೀತಿಗಳಿಗೆ ಸುಬ್ರಮಣಿಯನ್ ಸ್ವಾಮಿ ವಿರೋಧ

Next Post

ದೇಶ ವಿಭಜನೆಯ ಕರಾಳ ನೆನಪು ಸ್ಮರಣೆ: ಮೋದಿ ಘೋಷಣೆಯ ಅಸಲೀ ಉದ್ದೇಶವೇನು?

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ಮೋದಿ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ; ಪುಟಿನ್ ಸೇರಿ ಹಲವು ರಾಷ್ಟ್ರ ನಾಯಕರು ಭಾಗಿ

ದೇಶ ವಿಭಜನೆಯ ಕರಾಳ ನೆನಪು ಸ್ಮರಣೆ: ಮೋದಿ ಘೋಷಣೆಯ ಅಸಲೀ ಉದ್ದೇಶವೇನು?

Please login to join discussion

Recent News

ʼಕಾಂಗ್ರೆಸ್ ಸರ್ಕಾರ ಹೋಳು..ಜನರಿಗೆ ಗೋಳು..ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು..ಜನರಿಗೆ ಗೋಳು..ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು
Top Story

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ʼಕಾಂಗ್ರೆಸ್ ಸರ್ಕಾರ ಹೋಳು..ಜನರಿಗೆ ಗೋಳು..ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು..ಜನರಿಗೆ ಗೋಳು..ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada