ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯರವರು, ಶೀಘ್ರದಲ್ಲೇ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಗುರುವಾರ ಹೇಳಿದ್ದಾರೆ.
ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಮತ್ತು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಿ ಈ ವಿಚಾರವಾಗಿ ಚರ್ಚಿಸಿದ್ದೇನೆ, ಮುಂದಿನ ದಿನಗಳಲ್ಲಿ ನನಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸರ್ಕಾರಕ್ಕೆ ಇನ್ನೂ ಹಲವು ತಿಂಗಳ ಅಧಿಕಾರಾವಧಿ ಉಳಿದಿದೆ. ಅದಕ್ಕಿಂತ ಮೊದಲು, ನನಗೆ ಅವಕಾಶ ಸಿಗಬಹುದು.ಈ ಬಗ್ಗೆ ನಾನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ ಕುಮಾರ ಕಟೀಲ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.
ಒಟ್ಟು 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಮಧ್ಯ ಕರ್ನಾಟಕ ಭಾಗವಾಗಿರುವ ದಾವಣಗೆರೆ ಪ್ರಮುಖ ಜಿಲ್ಲೆಯಾಗಿರುವುದರಿಂದ ಪಕ್ಷವು ಈ ಪ್ರದೇಶದ ನಾಯಕರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಹೊನ್ನಾಳಿ ಶಾಸಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.