ತಮ್ಮ ಖಾತೆಯನ್ನು ಲಾಕ್ ಮಾಡಿದ ಕಾರಣಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವಿಟರ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ರಾಜಕೀಯ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಹಾಗು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಟ್ವಿಟರ್ ವಿರುದ್ದ ಆರೋಪ ಮಾಡಿದ್ದಾರೆ.
“ನನ್ನ ಖಾತೆಯನ್ನು ಅಮಾನತುಗೊಳಿಸಿ ನಮ್ಮ ರಾಜಕೀಯ ಪ್ರಕ್ರಿಯೆಯಲ್ಲಿ ಟ್ವಿಟರ್ ಹಸ್ತಕ್ಷೇಪ ಮಾಡಿದೆ. ತನ್. ಲಾಭವನ್ನು ಮಾತ್ರ ನೋಡುವ ಕಂಪೆನಿಯೊಂದು ನಮಗೆ ರಾಜಕಾರಣದ ವ್ಯಾಖ್ಯಾನವನ್ನು ಕಲಿಸಲು ಯತ್ನಿಸುತ್ತಿದೆ. ಇದು ನನಗೆ ಇಷ್ಟ ಆಗಿಲ್ಲ,” ಎಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿರುವ ‘Twitter’s Dangerous Game’ ಎಂಬ ವಿಡಿಯೋದಲ್ಲಿ ಅವರು ಹೇಳಿದ್ದಾರೆ.
ಭಾರತೀಯರಾಗಿ ನಾವು ಪ್ರಶ್ನೆ ಕೇಳಬೇಕು. ಕೇಂದ್ರ ಸರ್ಕಾರಕ್ಕೆ ಕೃತಜ್ಞವಾಗಿರುವ ಕಂಪೆನಿಯೊಂದು ನಮ್ಮ ರಾಜಕಾರಣದ ವ್ಯಾಖ್ಯಾನವನ್ನು ಬರೆಯುವುದೇ? ಪರಿಸ್ಥಿತಿ ಇಲ್ಲಿಗೆ ತಲುಪಬೇಕಿದೆಯೇ? ಅಥವಾ ನಮ್ಮ ರಾಜಕಾರಣದ ವ್ಯಾಖ್ಯಾನವನ್ನು ಬರೆಯುವವರು ನಾವೇ ಆಗಿರಬೇಕೆ?, ಎಂದು ಪ್ರಶ್ನಿಸಿದ್ದಾರೆ.
“ಇದು ರಾಹುಲ್ ಗಾಂಧಿ ಮೇಲೆ ಆದ ದಾಳಿಯಲ್ಲ. ಇದು ರಾಹುಲ್ ಗಾಂಧಿಯನ್ನು ಮೌನವಾಗಿಸುವ ಕೆಲಸವಲ್ಲ. ನನಗೆ 19-20 ಮಿಲಿಯನ್ ಫಾಲೊವರ್ಸ್ ಇದ್ದಾರೆ. ನೀವು ಅವರ ಅಭಿಮತದ ಹಕ್ಕಿಗೆ ಧಕ್ಕೆ ಉಂಟು ಮಾಡುತ್ತಿದ್ದೀರಾ. ಇದು ಕೇವಲ ಅನ್ಯಾಯ ಮಾತ್ರವಲ್ಲ, ತಾನು ನಿರ್ಲಿಪ್ತ ಸಾಮಾಜಿಕ ಜಾಲತಾಣವೆಂದು ಹೇಳಿಕೊಳ್ಳುವ ಟ್ವಿಟರ್’ನ ಆದರ್ಶಗಳ ಉಲ್ಲಂಘನೆಯೂ ಆಗಿದೆ,” ಎಂದು ರಾಹುಲ್ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗಿದೆ. ನಮಗೆ ಸಂಸತ್ತಿನಲ್ಲಿಯೂ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಮಾಧ್ಯಮಗಳನ್ನು ನಿಯಂತ್ರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಟ್ವಿಟರ್ ಭರವಸೆಯ ಕಿರಣವಾಗಿ ಗೋಚರಿಸಿತ್ತು. ಆದರೆ, ಈಗ ಟ್ವಿಟರ್ ನಿರ್ಲಿಪ್ತ ಸಾಮಾಜಿಕ ವೇದಿಕೆಯಲ್ಲ ಎಂದು ನಿರೂಪಿಸಿದೆ. ಇದೊಂದು ಪಕ್ಷಪಾತೀಯವಾದ ವೇದಿಕೆ. ಇದು ಸರ್ಕಾರದ ಮಾತುಗಳನ್ನು ಕೇಳಿ ನಡೆಯುವ ಸಂಸ್ಥೆ, ಎಂದು ಟ್ವಿಟರ್ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ.
ಟ್ವಿಟರ್’ನ ನಡೆಯನ್ನು ಖಂಡಿಸಿ ಲಕ್ಷಾಂತರ ಟ್ವಿಟರ್ ಬಳಕೆದಾರರು ತಮ್ಮ ಪ್ರೊಫೈಲ್ ಫೋಟೋವನ್ನು ರಾಹುಲ್ ಗಾಂಧಿಯ ಫೋಟೋದೊಂದಿಗೆ ಬದಲಾಯಿಸಿ, ರಾಗಾ ಪರವಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಕೇವಲ ರಾಹುಲ್ ಗಾಂಧಿ ಮಾತ್ರವಲ್ಲದೇ, ಹಲವು ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆಗಳನ್ನು ಲಾಕ್ ಮಾಡಲಾಗಿದ್ದು, ಇದು ವಿಪಕ್ಷವನ್ನು ಮೌನವಾಗಿಸುವ ಸರ್ಕಾರದ ತಂತ್ರ ಎಂದು ಕಾಂಗ್ರೆಸ್ ಆರೋಪಿಸಿದೆ.