
ಹೊಸ ಸಂಸತ್ತು ಭವನದ ನಿರ್ಮಾಣದ ಕಾರ್ಯ ಚಾಲ್ತಿಯಲ್ಲಿದ್ದು, ಮುಂದಿನ ವರ್ಷ ಆಗಸ್ಟ್ 15ರ ಮುನ್ನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಬುಧವಾರ ತಿಳಿಸಿದ್ದಾರೆ.
ಹೊಸ ಕಟ್ಟಡವನ್ನು ಮುಂದಿನ ವರ್ಷ ಪೂರ್ಣಗೊಳಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದು, 2022 ರ ವೇಳೆಗೆ ದೇಶವು ಪೂರ್ಣಗೊಳಿಸುತ್ತಿರುವ 75 ವರ್ಷಗಳ ಸ್ವಾತಂತ್ರ್ಯ ಸಂಭ್ರಮವನ್ನು ಹೊಸ ಸಂಸತ್ ಭವನದಲ್ಲಿ ಆಚರಿಸಲಿಕ್ಕಿದ್ದೇವೆ” ಎಂದು ಸುದ್ದಿಗಾರರೊಂದಿಗೆ ಬಿರ್ಲಾ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ʼಅಧಿವೇಶನದಲ್ಲಿ ಸದನದ ಕಲಾಪಗಳು ನಿರೀಕ್ಷೆಯಂತೆ ನಡೆಯದ ಕಾರಣ ನನಗೆ ನೋವಾಗಿದೆ. ಸದನದಲ್ಲಿ ಸಾರ್ವಜನಿಕ ವಿಷಯಗಳ ಕುರಿತು ನಡೆಯುವ ಸಕರಾತ್ಮಕ ಚರ್ಚೆಗಳು ನಡೆಯಲು ಯಾವಾಗಲೂ ಪ್ರಯತ್ನಿಸುತ್ತೇನೆʼ ಎಂದು ಸ್ಪೀಕರ್ ಅಳಲು ತೋಡಿಕೊಂಡಿದ್ದಾರೆ.
ಮುಂದೆ ಮಾತನಾಡಿದ ಅವರು ʼಲೋಕಸಭೆಯ ಅಂಗಳದಲ್ಲಿ ಪ್ಲೆಕಾರ್ಡ್ಗಳನ್ನು ಹಿಡಿದು, ಘೋಷಣೆಗಳನ್ನು ಕೂಗುವುದು ಸದನದ ಸಂಪ್ರದಾಯಗಳಿಗೆ ಅನುಗುಣವಾಗಿಲ್ಲʼ ಎಂದು ಪ್ರತಿಪಕ್ಷಗಳ ಪ್ರತಿಭಟನೆಯ ಕುರಿತು ಸ್ಪೀಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ನಡೆದ ಅಧಿವೇಶನಗಳು ತುಂಬಾ ಪ್ರತಿಫಲದಾಯಕ ಹಾಗೂ ಫಲಪ್ರದಾಯಕವಾಗಿತ್ತು. ಆದರೆ ಈ ಬಾರಿಯ ಇಢೀ ಅಧಿವೇಶನ 21 ಗಂಟೆಗಳ ಕಾಲದವರೆಗೆ ನಡೆದರೂ ಫಲಪ್ರದಾಯಕವಾಗಿದ್ದು ಕೇವಲ 22% ರಷ್ಟು ಮಾತ್ರ ಎಂದಿದ್ದಾರೆ.
“ಎಲ್ಲಾ ಪಕ್ಷಗಳ ಸರ್ವಾನುಮತದ ಒಪ್ಪಿಗೆಯೊಂದಿಗೆ ಅಂಗೀಕರಿಸಲ್ಪಟ್ಟ ಒಬಿಸಿ ಮಸೂದೆ ಸೇರಿದಂತೆ ಒಟ್ಟು 20 ಮಸೂದೆಗಳನ್ನು ಸಭೆಯಲ್ಲಿ ಅಂಗೀಕರಿಸಲಾಗಿದೆ. ಪ್ರಧಾನಮಂತ್ರಿ ಮತ್ತು ಎಲ್ಲಾ ಪಕ್ಷಗಳ ನಾಯಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ.
ಎಲ್ಲಾ ಸಂಸದರು ಸದನದ ಘನತೆ, ಗೌರವವನ್ನು ಕಾಪಾಡಿಕೊಳ್ಳಬೇಕೆಂದು ನಾನು ಯಾವಾಗಲೂ ನಿರೀಕ್ಷಿಸುತ್ತೇನೆ. ಸದನದಲ್ಲಿ ಚರ್ಚೆಗಳು, ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳ ಮಂಡನೆಗಳು ಸಹಜ . ಆದರೆ ಸಂಸತ್ತಿನ ಸಾಂವಿಧಾನಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಸದನವನ್ನು ನಡೆಸಬೇಕು ಮತ್ತು ಅದರ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ನಾನು ಎಲ್ಲ ಸಂಸದರನ್ನು ಒತ್ತಾಯಿಸುತ್ತೇನೆ. ಘೋಷಣೆಗಳು ಮತ್ತುಫಲಕಗಳನ್ನು ಪ್ರದರ್ಶಿಸುವುದು ನಮ್ಮ ಸಂಸತ್ತಿನ ಸಂಪ್ರದಾಯಗಳ ಭಾಗವಲ್ಲʼ ಎಂದು ಲೋಕಸಭಾ ಸ್ಪೀಕರ್ ಹೇಳಿದ್ದಾರೆ.