ಅಲೋಪಥಿ ವೈದ್ಯರು ಹಾಗೂ ಆಯುಷ್ ವೈದ್ಯರ ನಡುವೆ ವೇತನ ತಾರತಮ್ಯ ಸಲ್ಲದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಜತೆಗೆ, ಉತ್ತರ ದೆಹಲಿ ಮುನ್ಸಿಪಾಲಿಟಿ ಕಾರ್ಪೊರೇಷನ್’ಗೆ ನಿರ್ದೇಶನ ನೀಡಿರುವ ಕೋರ್ಟ್, ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಆಯುಷ್ ವೈದ್ಯರಿಗೂ ಅಲೋಪಥಿಕ್ ವೈದ್ಯರಷ್ಟೇ ವೇತನ ನೀಡಲು ಸೂಚಿಸಿದೆ.
ಜಸ್ಟೀಸ್ ಎಲ್ ಎನ್ ರಾವ್ ಹಾಗೂ ಹೃಷಿಕೇಶ್ ರಾಯ್ ಅವರಿದ್ದ ಪೀಠವು ಈ ತೀರ್ಪನ್ನು ನೀಡಿದೆ. ಉತ್ತರ ದೆಹಲಿ ಮುನ್ಸಿಪಾಲಿಟಿ ಕಾರ್ಪೊರೇಷನ್ ಆಯುಷ್ ವೈದ್ಯರನ್ನು ಸಿಹೆಚ್ಎಸ್ ಸೇರಿದಂತೆ ಇತರೆ ಕೆಟಗರಿಗಳ ಅಡಿಯಲ್ಲಿ ವಿಂಗಡಿಸಿ ಅದರಂತೆ ವೇತನ ನಿಗದಿ ಮಾಡಿತ್ತು. ಈ ಕ್ರಮವು ಕಾನೂನಿನ ಪರಿಧಿಯಲ್ಲಿ ಜಾರಿಗೊಳಿಸಲಾಗಿದೆ ಎಂದು NDMC ಹೇಳಿತ್ತು. ಈ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ.

“ಕೇಂದ್ರ ಸರ್ಕಾರ ಅಲೋಪಥಿಕ್ ವೈದ್ಯರ ನಿವೃತ್ತಿ ವಯಸ್ಸನ್ನು 65ಕ್ಕೆ ಏರಿಸಿದೆ. NDMC ಇದನ್ನು ಜಾರಿಗೊಳಿಸಿದೆ ಕೂಡಾ. ಹೀಗಿರುವಾಗ ಆಯುಷ್ ವೈದ್ಯರಿಗೆ ಈ ಸೌಲಭ್ಯವನ್ನು ವಿಸ್ತರಿಸದೇ ಇರುವುದು ಸರಿಯಲ್ಲ. NDMC ವಾದ ಪುರಸ್ಕರಿಸಬೇಕೆಂದು ಅನ್ನಿಸುತ್ತಿಲ್ಲ. ಆಯುಷ್ ವೈದ್ಯರ ವಿಂಗಡನೆ ತಾರತಮ್ಯದಿಂದ ಕೂಡಿದೆ ಹಾಗೂ ಅವೈಜ್ಞಾನಿಕವಾಗಿದೆ,” ಎಂದು ಕೋರ್ಟ್ ಹೇಳಿದೆ.
ಅಲೋಪಥಿಕ್ ಮತ್ತು ಆಯುಷ್ ವೈದ್ಯರು ಒಂದೇ ರೀತಿಯ ಸೇವೆ ನೀಡುತ್ತಿದ್ದಾರೆ. ಇಬ್ಬರೂ ಅವರ ರೋಗಿಗಳ ಚಿಕಿತ್ಸೆಗೆ ಪ್ರಯತ್ನಿಸುತ್ತಾರೆ. ಹೀಗಿರುವಾಗ ತಾರತಮ್ಯ ಏಕೆ? ಎಂದು ಕೋರ್ಟ್ ಪ್ರಶ್ನಿಸಿದೆ.
“ಆಯುಷ್ ಮತ್ತು ಅಲೋಪಥಿಕ್ ವೈದ್ಯರ ಚಿಕಿತ್ಸಾ ಪದ್ದತಿಯಲ್ಲಿ ಮಾತ್ರ ವ್ಯತ್ಯಾಸವಿದೆ. ಈ ಚಿಕಿತ್ಸಾ ಪದ್ದತಿಯೇ ಅವರ ನಡುವಿನ ತಾರತಮ್ಯಕ್ಕೆ ಕಾರಣವಾಗಬಾರದು. ಹೀಗಾಗಿ ಸಂವಿಧಾನದ 14ನೇ ವಿಧಿಯ ಪ್ರಕಾರ ಆಯುಷ್ ಹಾಘೂ ಅಲೋಪಥಿಕ್ ವೈದ್ಯರ ನಡುವಿನ ಈ ತಾರತಮ್ಯ ತಪ್ಪು,” ಎಂದು ಕೋರ್ಟ್ ತೀರ್ಪು ನೀಡಿದೆ.