ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ನಂತರ ಈಗ ಮಮತಾ ಬ್ಯಾನರ್ಜಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿರುವಂತಿದೆ. ಮಮತಾ ಬ್ಯಾನರ್ಜಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರೊಂದಿಗೆ ಐದು ದಿನಗಳ ಭೇಟಿಯ ನಂತರ ಶುಕ್ರವಾರ ದೆಹಲಿಯಿಂದ ಮತ್ತೆ ಪಶ್ಚಿಮ ಬಂಗಾಳಕ್ಕೆ ವಾಪಾಸ್ ತೆರಳಿದ್ದಾರೆ.
ತನ್ನ ರಾಜ್ಯಕ್ಕೆ ಹಿಂದಿರುಗುವಾಗ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ” ತನ್ನ ಐದು ದಿನಗಳ ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಸವನ್ನು ಯಶಸ್ವಿಯಾಗಿದೆ. ನಾನು ಎರಡು ತಿಂಗಳಿಗೊಮ್ಮೆ ದೆಹಲಿಗೆ ಮರಳುತ್ತೇನೆ, ಪ್ರಜಾಪ್ರಭುತ್ವ ಮುಂದುವರಿಯುತ್ತದೆ” ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸರಣಿ ಸಭೆಗಳನ್ನು ಗಮನಿಸಿದಾಗ,2024ರ ಚುನಾವಣೆಯಲ್ಲಿ ರಾಷ್ಟ್ರ ನಾಯಕತ್ವಕ್ಕೆ ಪ್ರಮುಖವಾದ ಉಮೇದುವಾರಿಕೆಯನ್ನು ಬಯಸುತ್ತಿರುವಂತೆ ಭಾಸವಾಗುತ್ತಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ ನಯವಾಗಿ ಉತ್ತರಿಸಿದ್ದ ದೀದಿ, ತಾನೊಬ್ಬಳು ಸಾಮಾನ್ಯ ಕಾರ್ಯಕರ್ತೆ ಎಂದಿದ್ದರು. ರಾಷ್ಟ್ರ ರಾಜಕಾರಣಕ್ಕೆ ಮತ್ತೆ ಪ್ರವೇಶಿಸುವ ಕುರಿತು ಹೆಚ್ಚಿನ ಗುಟ್ಟು ಬಿಟ್ಟುಕೊಡಲಿಲ್ಲ. ಆದರೆ, ಲೋಕಸಭಾ ಚುನಾವಣೆಯ ವೇಳೆ ದೇಶದಲ್ಲಿರುವ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಎಲ್ಲಾ ಪಕ್ಷಗಳು ಒಗ್ಗೂಡಬೇಕಾದ ಅನಿವಾರ್ಯತೆಯ ಕುರಿತು ಅವರು ಬೆಳಕು ಚೆಲ್ಲಿದ್ದಾರೆ.
“ರಾಜಕಾರಣದಲ್ಲಿ ಕೆಲವು ಬಾರಿ ನಾವು ನಮ್ಮೊಳಗಿನ ಭಿನ್ನಮತವನ್ನು ಮರೆತು ಒಗ್ಗೂಡಬೇಕಿದೆ. ದೇಶಕ್ಕಾಗಿ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಸಾಕಷ್ಟು ‘ಅಚ್ಚೇ ದಿನ್’ ನೋಡಿದ್ದೇವೆ. ಇನ್ನು ‘ಸಚ್ಚೇ ದಿನ್’ (ಸತ್ಯದ ದಿನಗಳು) ನೋಡಬೇಕಿದೆ,” ಎಂದು ಅವರು ಹೇಳಿದ್ದಾರೆ.
2019ರ ಚುನಾವಣೆಯಲ್ಲಿಯೂ ವಿಪಕ್ಷಗಳನ್ನು ಒಗ್ಗೂಡಿಸುವ ಕೆಲಸಕ್ಕೆ ದೀದಿ ಕೈಹಾಕಿದ್ದರು. ಆದರೆ, ಬಹುತೇಕ ಪಕ್ಷಗಳು ದೀದಿ ಕೈಹಿಡಿಯದ ಕಾರಣ ಈ ಯೋಜನೆ ಮಕಾಡೆ ಮಲಗಿತ್ತು. ಏಕೆಂದರೆ, ಎಲ್ಲಾ ವಿರೋಧ ಪಕ್ಷಗಳು ತೃಣಮೂಲ ಕಾಂಗ್ರೆಸ್ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಬೇಕು ಎಂಬ ಆಲೋಚನೆಯೊಂದಿಗೆ ರೂಪಿಸಿದ ಯೋಜನೆಗೆ ಹೆಚ್ಚಿನ ಬೆಂಬಲ ಸಿಗಲಿಲ್ಲ.
ಈ ಬಾರಿಯೂ ಅಂತಹುದೇ ಪ್ರಯತ್ನಕ್ಕೆ ದೀದಿ ಮತ್ತೆ ಮುಂದಾಗಿದ್ದಾರೆ. ಆದರೆ, ಈ ಬಾರಿ ಪಶ್ಚಿಮ ಬಂಗಾಳ ಚುನಾವಣೆ ಗೆದ್ದಿರುವ ಅಧಿಕಾರದೊಂದಿಗೆ ವಿಪಕ್ಷ ನಾಯಕರನ್ನು ಭೇಟಿಯಾಗಿದ್ದಾರೆ.

ಬಂಗಾಳದಲ್ಲಿ ವೀರಾವೇಶದಿಂದ ಮುನ್ನುಗ್ಗುತ್ತಿದ್ದ ಬಿಜೆಪಿಯ ಯಾಗಾಶ್ವವನ್ನು ಕಟ್ಟಿ ಹಾಕಿದ ದೀದಿ, ದೇಶದಲ್ಲಿ ಬಿಜೆಪಿಯನ್ನು ಸೋಲಿಸುವ ಹೊಸ ಮಂತ್ರವನ್ನು ಕಂಡು ಹುಡುಕಿದಂತಾಗಿದೆ. ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಅನುಸರಿಸುತ್ತಿದ್ದ ಬೂತ್ ಮಟ್ಟದ ತಂತ್ರಗಾರಿಕೆ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿಯೂ ದೀದಿ ಬಿಜೆಪಿಯನ್ನು ಹಿಂದಿಕ್ಕಿದ್ದಾರೆ.
‘ಹಿಂದುತ್ವ’ದಿಂದಲೇ ಚುನಾವಣೆ ಗೆಲ್ಲಬಹುದು ಅಂದುಕೊಂಡಿದ್ದ ಬಿಜೆಪಿಗೆ, ತಕ್ಕ ಉತ್ತರವನ್ನು ಈಗಾಗಲೇ ದೀದಿ ನೀಡಿದ್ದಾರೆ. ಇತರ ಜಾತ್ಯಾತೀತ ಪಕ್ಷಗಳು ‘ಮೃದು ಹಿಂದುತ್ವ’ ಧೋರಣೆಯನ್ನು ಅನುಸರಿಸಬೇಕಾದ ಅಗತ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಚುನಾವಣೆ ತೋರಿಸಿಕೊಟ್ಟಿದೆ.
ಚುನಾವಣೆಯಲ್ಲಿ ಗೆದ್ದ ನಂತರ ಒಂದರ ಮೇಲೊಂದರಂತೆ ಬಿಜೆಪಿಗೆ ಮರ್ಮಾಘಾತವನ್ನು ನೀಡುತ್ತಲೇ ಬಂದಿದ್ದಾರೆ. ಟಿಎಂಸಿ ತೊರೆದಿದ್ದ ಹಲವು ಹಿರಿಯ ನಾಯಕರು ಟಿಎಂಸಿಗೆ ವಾಪಾಸಾಗಿದ್ದಾರೆ. ಪೆಗಾಸಸ್ ವಿರುದ್ದ ತನಿಖೆ ನಡೆಸಲು ನ್ಯಾಯಾಂಗ ಸಮಿತಿಯನ್ನು ರಚಿಸಿದ್ದಾರೆ. ಮಾಧ್ಯಮಗಳ ಪಕ್ಷಪಾತೀಯ ಧೋರಣೆಯ ವಿರುದ್ದ, ಕೇಂದ್ರದ ಪರವಾದ ಒಲವಿನ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯದಿಂದ ರಾಷ್ಟ್ರ ಎಂಬ ಧೋರಣೆಯಿಂದ ರಾಷ್ಟ್ರೀಯವಾದಿ ಸಿದ್ದಾಂತವನ್ನು ಪಶ್ಚಿಮ ಬಂಗಾಳದಲ್ಲಿ ಬುಡಮೇಲು ಮಾಡುವಲ್ಲಿ ದೀದಿ ಸಫಲರಾಗಿದ್ದಾರೆ.
ಇಷ್ಟೆಲ್ಲಾ ಸಾಧನೆಗಳನ್ನು ಕೇವಲ ಕಳೆದ ಆರು ತಿಂಗಳಲ್ಲಿ ಮಾಡಿರುವ ದೀದಿ, ಪ್ರಧಾನಿ ಹುದ್ದೆಯ ಕಣ್ಣಿಡುವುದರಲ್ಲಿ ಆಶ್ಚರ್ಯವೇನಿಲ್ಲ. ದೇಶದಲ್ಲಿರುವ 16 ವಿರೋಧ ಪಕ್ಷಗಳ ಬೆಂಬಲವನ್ನು ಪಡೆಯುವಲ್ಲಿ ಮಮತಾ ಬ್ಯಾನರ್ಜಿ ಸಫಲವಾಗುತ್ತಾರೋ ಎಂಬುದು ಈಗ ಉಳಿದಿರುವ ಪ್ರಶ್ನೆ.
ಪ್ರಸ್ತುತ ದೇಶದಲ್ಲಿ ಬಿಜೆಪಿ ವಿರುದ್ದ ಇರುವಂತಹ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಿ ಈಗಿಂದಲೇ ಲೋಕಸಭಾ ಚುನಾವಣೆಗೆ ತಯಾರಿ ನಡೆಸುವುದು ಸಿಎಂ ಮಮತಾ ಬ್ಯಾನರ್ಜಿಯ ಉದ್ದೇಶವಾಗಿದೆ. ಇದರಿಂದಾಗಿ ಬಿಜೆಪಿಯ ವಿರುದ್ದ ದೇಶದೆಲ್ಲೆಡೆ ಧ್ವನಿ ಎಬ್ಬಿಸುವ ಸಾಧ್ಯತೆಯಿದೆ.
ಇಷ್ಟು ಮಾತ್ರವಲ್ಲದೇ, ಪಶ್ಚಿಮ ಬಂಗಾಳ ಚುನಾವಣೆಯ ಗೆಲುವಿನ ಮಂತ್ರವಾಗಿದ್ದ ‘ಖೇಲಾ ಹೋಬೆ’ಯನ್ನು ದೇಶದೆಲ್ಲೆಡೆ ಮೊಳಗಿಸುವ ದೀದಿ ಕಾರ್ಯತಂತ್ರಕ್ಕೆ ಇತರ ಪಕ್ಷಗಳು ಯಾವ ರೀತಿ ಸ್ಪಂದಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.


