ದಿನೇದಿನ ಏರುತ್ತಿರುವ ಜಾಗತಿಕ ತಾಪಮಾನ ಮತ್ತು ಅದು ಭೂಮಿಯ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು, ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿರುವ ನಡುವೆಯೇ ಕುತೂಹಲಕಾರಿ ಸಂಶೋಧನೆಯೊಂದು ಏರುತ್ತಿರುವ ಜಾಗತಿಕ ತಾಪಮಾನವು ಡೆಂಗ್ಯೂ ಜ್ವರದ ಹರಡುವಿಕೆಯನ್ನು ಕಡಿಮೆಗೊಳಿಸಬಹುದು ಎಂದು ಪ್ರತಿಪಾದಿಸಿದೆ. ಆದರೆ ಇದರ ಜೊತೆಗೆ ವೈರಲ್ ಸೋಂಕನ್ನು ನಿಯಂತ್ರಿಸಲು ಸೊಳ್ಳೆಗಳಲ್ಲಿ ಬಳಸುವ ಬ್ಯಾಕ್ಟೀರಿಯಾದ ಪರಿಣಾಮಕಾರಿತ್ವವನ್ನು ಸಹ ಗ್ಲೋಬಲ್ ವಾರ್ಮಿಂಗ್ ಕಡಿಮೆ ಮಾಡಬಹುದು ಎಂದು ಅದೇ ಅಧ್ಯಯನ ಅಭಿಪ್ರಾಯ ಪಟ್ಟಿದೆ.
‘PLOS Neglected Tropical Diseases’ ಜರ್ನಲ್ನಲ್ಲಿ ಗುರುವಾರ ಪ್ರಕಟವಾದ ಸಂಶೋಧನಾ ಪ್ರಬಂಧದಲ್ಲಿ, ಡೆಂಗ್ಯೂ ವೈರಸ್ ಸೋಂಕನ್ನು ಹೊಂದಿರುವ ಸೊಳ್ಳೆಗಳು ಬೆಚ್ಚಗಿನ ತಾಪಮಾನದಲ್ಲಿ ಹೆಚ್ಚು ಸೂಕ್ಷ್ಮವಾಗಿರುತ್ತದೆ ಎಂದು ಹೇಳಲಾಗಿದೆ.

ಡೆಂಗ್ಯೂ ವಿರುದ್ಧ ಇತ್ತೀಚಿನ ದಿನಗಳಲ್ಲಿ ಜೈವಿಕ ನಿಯಂತ್ರಣ ಏಜೆಂಟ್ ಆಗಿ ಬಳಸಲಾಗುತ್ತಿರುವ ‘ವೋಲ್ಬಾಚಿಯಾ’ ಎಂಬ ಬ್ಯಾಕ್ಟೀರಿಯ ಸಹ ಸೋಂಕಿರುವ ಕೀಟಗಳ ಉಷ್ಣ ಸಂವೇದನೆ ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಡೆಂಗ್ಯೂ ಜ್ವರ ಯಾವುದೇ ಚಿಕಿತ್ಸೆ ಇಲ್ಲದ ಮಾರಕ ಕಾಯಿಲೆಯಾಗಿದೆ. ಈ ಸೊಳ್ಳೆಯು ಡೆಂಗ್ಯೂ ಮಾತ್ರವಲ್ಲದೆ ಇತರ ಹಲವು ಖಾಯಿಲೆಹಳನ್ನು ಸಹ ಅತ್ಯಂತ ವೇಗವಾಗಿ ಹರಡುತ್ತದೆ. “ಈ ಸೊಳ್ಳೆಯು ಜಿಕಾ, ಚಿಕೂನ್ಗುನ್ಯಾ ಮತ್ತು ಹಳದಿ ಜ್ವರ ಸೇರಿದಂತೆ ಹಲವಾರು ರೋಗ-ಉಂಟುಮಾಡುವ ವೈರಸ್ಗಳನ್ನು ಹರಡಲು ಕಾರಣವಾಗಿದೆ” ಎಂದು ಯುಎಸ್ನ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಎಲಿಜಬೆತ್ ಮೆಕ್ಗ್ರಾ ಹೇಳುತ್ತಾರೆ.
“ಹೆಚ್ಚುತ್ತಿರುವ ನಗರೀಕರಣ ಮತ್ತು ಹವಾಮಾನ ಬದಲಾವಣೆಯ ನೆರವಿನಿಂದ, ಈ ಸೊಳ್ಳೆಯ ವ್ಯಾಪ್ತಿಯು 2050 ರ ವೇಳೆಗೆ ವಿಶ್ವದ ಜನಸಂಖ್ಯೆಯ ಶೇಕಡಾ 50ರಷ್ಟಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮತ್ತು ಆ ವೇಳೆಗೆ ಈ ವೈರಸ್ಗಳಿಗೆ ಒಡ್ಡಿಕೊಳ್ಳುವ ಜನರ ಸಂಖ್ಯೆಯೂ ನಾಟಕೀಯವಾಗಿ ಹೆಚ್ಚುತ್ತದೆ” ಎಂದು ಮೆಕ್ಗ್ರಾ ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ, ವೊಲ್ಬಾಚಿಯಾ ಪಿಪೆಂಟಿಸ್ ಎಂಬ ಬ್ಯಾಕ್ಟೀರಿಯಾವನ್ನು ಈಡಿಸ್ ಈಜಿಪ್ಟಿಗೆ ತಗುಲಿಸಿ ನಂತರ ಸೊಳ್ಳೆಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುವ ಮೂಲಕ ವಿಶ್ವದಾದ್ಯಂತದ ಸಂಶೋಧನಾ ಗುಂಪುಗಳು ಈ ವೈರಸ್ಗಳನ್ನು ನಿಯಂತ್ರಿಸಲು ಪ್ರಯತ್ನಿಸಿವೆ ಎಂದು ಮೆಕ್ಗ್ರಾ ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.
ಡೆಂಗ್ಯೂ ಸೇರಿದಂತೆ ವೈರಸ್ಗಳು ಸೊಳ್ಳೆಗಳೊಳಗೆ ಸೇರದಂತೆ ವೊಲ್ಬಾಚಿಯಾವನ್ನು ಬಳಸಲಾಗುತ್ತದೆ. “ಮುಖ್ಯವಾಗಿ, ವೊಲ್ಬಾಚಿಯಾವನ್ನು ಸೋಂಕು ರೋಗ ಹರಡದಿರಲೆಂದು ಸೊಳ್ಳೆಗಳ ಸಂತತಿಗೆ ರವಾನಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ರೋಗ ನಿಯಂತ್ರಣ ಮಾಡುವ ವಿಧಾನದಲ್ಲಿ ಇದು ಅತ್ಯಂಕ ಕಡಿಮೆ ವೆಚ್ಚದ ವಿಧಾನವಾಗಿದೆ” ಎಂದು ಮೆಕ್ಗ್ರಾ ಹೇಳಿದ್ದಾರೆ.
ಡೆಂಗ್ಯೂ ವೈರಸ್ ಮತ್ತು ವೊಲ್ಬಾಚಿಯಾ ಎರಡೂ ಸೊಳ್ಳೆಯ ದೇಹದಾದ್ಯಂತ ವಿವಿಧ ಅಂಗಾಂಗಗಳಿಗೆ ಸೋಂಕು ತಗುಲಿಸುತ್ತವೆ. ವೊಲ್ಬಾಚಿಯಾ ವಿಷಕಾರಿಯಲ್ಲದಿದ್ದರೂ ಅವು ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ ಎಂದು ಅವರು ಹೇಳುತ್ತಾರೆ.
“ಡೆಂಗ್ಯೂ ವೈರಸ್ ಮತ್ತು ವೊಲ್ಬಾಚಿಯಾದಿಂದ ಸೋಂಕಿಗೆ ಒಳಗಾದ ಸೊಳ್ಳೆಗಳು ಒತ್ತಡದ ಪ್ರತಿಕ್ರಿಯೆಯಿಂದ ಬಳಲುವುದರಿಂದ ಶಾಖದಂತಹ ಹೆಚ್ಚುವರಿ ಒತ್ತಡವನ್ನು ಎದುರಿಸಲು ಅಶಕ್ತವಾಗಿರುತ್ತವೆ ಎಂದು ನಾವು ಭಾವಿಸಿದ್ದೇವೆ” ಎಂದು ಮೆಕ್ಗ್ರಾ ಹೇಳಿದ್ದಾರೆ.
ಸಂಶೋಧಕರು ಸೋಂಕಿತ ಸೊಳ್ಳೆಗಳನ್ನು ಮುಚ್ಚಿದ ಬಾಟಲಿಗಳಲ್ಲಿ ಇರಿಸಿ ನಂತರ ಬಾಟಲುಗಳನ್ನು 42 ಡಿಗ್ರಿ ಸೆಲ್ಸಿಯಸ್ಗೆ ಬಿಸಿಮಾಡಿದ ನೀರಿನಲ್ಲಿ ಮುಳುಗಿಸಿ, ನಂತರ ಅವರು ಸೊಳ್ಳೆಗಳು ನಿಶ್ಚಲವಾಗಲು ಎಷ್ಟು ಸಮಯ ತೆಗೆದುಕೊಂಡಿತು ಎಂದು ಗಮನಿಸಿ ಆ ಸಮಯವನ್ನು ಸೋಂಕುರಹಿತ ಸೊಳ್ಳೆಗಳು ತೆಗೆದುಕೊಂಡ ಸಮಯಕ್ಕೆ ಹೋಲಿಸಿದರು. ಈ ಮೂಲಕ ಡೆಂಗ್ಯೂ ವೈರಸ್ ಸೋಂಕಿತ ಸೊಳ್ಳೆಗಳು ಶಾಖಕ್ಕೆ ಹೆಚ್ಚು ಸೂಕ್ಷ್ಮವಾಗಿರುತ್ತವೆ ಎಂದು ಕಂಡುಹಿಡಿಯಲಾಯಿತು.
ಬಿಸಿನೀರಿನ ಕೊಳದಲ್ಲಿ ಇರಿಸಿದಾಗ ಸೋಂಕುರಹಿತ ಸೊಳ್ಳೆಗಳಿಗಿಂತ ಅವು ಮೂರು ಪಟ್ಟು ವೇಗವಾಗಿ ನಿಶ್ಚಲಗೊಂಡವು. ಅಂತೆಯೇ, ವೊಲ್ಬಾಚಿಯಾ ಸೋಂಕಿತ ಸೊಳ್ಳೆಗಳು ಸೋಂಕುರಹಿತ ಸೊಳ್ಳೆಗಳಿಗಿಂತ ನಾಲ್ಕು ಪಟ್ಟು ವೇಗವಾಗಿ ನಿಶ್ಚಲಗೊಂಡವು ಎಂದು ವಿಜ್ಞಾನಿಗಳ ತಂಡ ಹೇಳಿಕೊಂಡಿದೆ.
ಭವಿಷ್ಯದ ಹವಾಮಾನ ಮಾದರಿಗಳು ವಿಪರೀತ ತಾಪಮಾನದ ಏರಿಳಿಕೆಗಳನ್ನು ಸೂಚಿಸಲಿವೆ ಎಂದು ಹವಾಮಾನ ವಿಜ್ಞಾನಿಗಳು ಈಗಾಗಲೇ ಹೇಳಿದ್ದಾರೆ.ಹೆಚ್ಚಿನ ತಾಪಮಾನವು ಡೆಂಗ್ಯೂ ಮತ್ತು ವೊಲ್ಬಾಚಿಯಾ ಸೋಂಕಿತ ಸೊಳ್ಳೆಗಳ ಉಳಿವಿಗೆ ಅಪಾಯವನ್ನುಂಟುಮಾಡುತ್ತದೆ.
“ಹೆಚ್ಚಿನ ತಾಪಮಾನದಲ್ಲಿ, ವೈರಸ್ ವೇಗವಾಗಿ ಸಂತಾನೋತ್ಪತ್ತಿ ಮಾಡಬಹುದಾದರೂ, ಏರುತ್ತಿರುವ ತಾಪಮಾನವು ಸೊಳ್ಳೆಯ ಬದುಕುಳಿಯುವಿಕೆಯ ಮೇಲೆ ಪ್ರಭಾವ ಬೀರುತ್ತದೆ. ಅದು ಸಹಜವಾಗಿಯೇ ರೋಗ ಹರಡುವಿಕೆಯನ್ನು ಕಡಿಮೆ ಮಾಡಲಿದೆ ” ಎಂದು ಸಂಶೋಧನಾ ತಂಡದಲ್ಲಿದ್ದ ಮತ್ತೊಬ್ಬ ವಿಜ್ಞಾನಿ ವೇರ್-ಗಿಲ್ಮೋರ್ ಹೇಳಿದ್ದಾರೆ.