ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭವಾಗಲು ಒಂದೇ ದಿನ ಬಾಕಿಯಾಗಿರುವಾಗ, ಕಾಂಗ್ರೆಸ್ ಪಕ್ಷದ ಸಂಸದೀಯ ಶ್ರೇಣಿಯಲ್ಲಿ ಬದಲಾವಣೆಗಳನ್ನು ತಂದಿರುವ ಸೋನಿಯಾ ಗಾಂಧಿ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸಂಸದೀಯ ತಂಡವನ್ನು ಪುನರ್ ರಚನೆ ಮಾಡಿದ್ದಾರೆ.
ವಿವಿಧ ವಿಷಯಗಳ ಕುರಿತು ಪಕ್ಷದ ನಿಲುವಿನ ಕಾರ್ಯತಂತ್ರ ರೂಪಿಸುವುದು ಮತ್ತು ಉಭಯ ಸದನಗಳಲ್ಲಿ ಪಕ್ಷದ ಅವಲೋಕನಗಳು ಮತ್ತು ಪ್ರತಿಕ್ರಿಯೆಯನ್ನು ಈ ತಂಡಗಳು ಮುನ್ನಡೆಸಲಿದೆ. ತಮ್ಮೊಂದಿಗೆ ಸಂಖ್ಯಾಬಲ ಹೊಂದಿಸುವುದು, ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಮಸೂದೆಗೆ ಬೆಂಬಲ ಅಥವಾ ಸರ್ಕಾರದೊಂದಿಗಿನ ಸಹಕಾರದ ವ್ಯಾಪ್ತಿಯಂತಹ ಪ್ರಮುಖ ವಿಷಯಗಳನ್ನು ನಿರ್ಧರಿಸುವುದು ಹಾಗೂ ಯಾವ ಸಮಸ್ಯೆಯನ್ನು ಎತ್ತಬೇಕು ಮತ್ತು ಇತರ ಪಕ್ಷಗಳು ಎತ್ತುವ ವಿಷಯಗಳ ಬಗ್ಗೆ ಕಾಂಗ್ರೆಸ್ ಹೇಗೆ ತಂತ್ರ ಮಾಡುತ್ತದೆ ಎಂಬುದನ್ನು ಈ ತಂಡ ನಿರ್ಧರಿಸುತ್ತದೆ.
ಈ ಕುರಿತು ಪತ್ರ ಬರೆದಿರುವ ಸೋನಿಯಾ ಗಾಂಧಿ, ಕಾಂಗ್ರೆಸ್ ಪಾರ್ಲಿಮೆಂಟರಿ ಪಾರ್ಟಿ(CPP) ಅಧ್ಯಕ್ಷರಾಗಿ, ಸಂಸತ್ತಿನ ಉಭಯ ಸದನಗಳಲ್ಲಿ ನಮ್ಮ ಪಕ್ಷದ ಕಾರ್ಯನಿರ್ವಹಣೆಯನ್ನು ಪರಿಣಾಮಕಾರಿಯಾಗಿಸಲು, ಹಾಗೂ ಸುಲಭಗೊಳಿಸಲು ಸಂಸದೀಯ ತಂಡಗಳನ್ನು ಪುನರ್ ರಚಿಸಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿ ಬಂಗಾಳ ಮೂಲದ ಸಂಸದ ಆಧೀರ್ ರಂಜನ್ ಚೌಧರಿ ಅವರು ಮುಂದುವರೆಯಲಿದ್ದಾರೆ. ಚೌಧರಿಯನ್ನು ಬದಲಿಸುವಂತೆ ಬಂದಿರುವ ಅಭಿಪ್ರಾಯಗಳಿಗೆ ವಿರುದ್ಧವಾಗಿ, ಈ ಹುದ್ದೆಯನ್ನು ಅವರಲ್ಲೇ ಉಳಿಸಿಕೊಳ್ಳಲಾಗಿದೆ. ಪಕ್ಷದ ಲೋಕಸಭಾ ಸಂಸದೀಯ ತಂಡಕ್ಕೆ ಹೊಸ ಸೇರ್ಪಡೆಯಾಗಿ ಮನೀಶ್ ತಿವಾರಿ ಮತ್ತು ಶಶಿ ತರೂರ್ ಸೇರಿದ್ದಾರೆ. ಹೊಸತಾಗಿ ಸೇರಿಕೊಂಡಿರುವ ಇಬ್ಬರೂ ಚೌಧರಿ ಅವರನ್ನು ಬದಲಿಯಾಗುವ ಉನ್ನತ ಸ್ಪರ್ಧಿಗಳಾಗಿ ಕಾಣುತ್ತಿದ್ದಾರೆ. ಪಕ್ಷಕ್ಕೆ “ಪೂರ್ಣ ಸಮಯ ಮತ್ತು ಪರಿಣಾಮಕಾರಿ ನಾಯಕತ್ವ” ನೀಡುವಂತೆ ಒತ್ತಾಯಿಸಿ 2020 ರ ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದ 23 ಕಾಂಗ್ರೆಸ್ ನಾಯಕರ ತಂಡದಲ್ಲಿ ತಿವಾರಿ ಮತ್ತು ಶಶಿ ತರೂರ್ ಕೂಡಾ ಇದ್ದರು.

ಲೋಕಸಭೆಯ ತಂಡದ ಇತರೆ ಸದಸ್ಯರಾಗಿ ಗೌರವ್ ಗೊಗೊಯ್, ಮುಖ್ಯ ವಿಪ್ ಕೆ.ಸುರೇಶ್ ಮತ್ತು ರಾವ್ನೀತ್ ಸಿಂಗ್ ಬಿಟ್ಟು ಮತ್ತು ಮಾಣಿಕಮ್ ಟ್ಯಾಗೋರ್ ಇರಲಿದ್ದಾರೆ.
ಹಿಂದೆ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷದ ನಾಯಕರಾಗಿ, ಆನಂದ್ ಶರ್ಮಾ (ಉಪನಾಯಕ) ಮತ್ತು ಜೈರಾಮ್ ರಮೇಶ್ (ಮುಖ್ಯ ವಿಪ್) ಅವರನ್ನು ಹೊಂದಿದ್ದ ರಾಜ್ಯಸಭಾ ತಂಡಕ್ಕೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಮತ್ತು ಹಿರಿಯ ಮುಖಂಡ ಅಂಬಿಕಾ ಸೋನಿ ಅವರನ್ನು ಸೇರಿಸಲಾಗಿದೆ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಆರ್ಥಿಕತೆ, ವ್ಯಾಕ್ಸಿನೇಷನ್ ಕಾರ್ಯತಂತ್ರ, ಉದ್ಯೋಗ ನಷ್ಟ ಮತ್ತು ರೈತರ ಹೋರಾಟ ಮೊದಲಾದ ವಿಷಯಗಳ ಬಗ್ಗೆ ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿರುವುದರಿಂದ ಕಾಂಗ್ರೆಸ್ ಸಾಕಷ್ಟು ಸಜ್ಜಾಗುತ್ತಿದೆ.

ಕಳೆದ ವಾರವಷ್ಟೇ ಕಾಂಗ್ರೆಸ್ ಸಂಸತ್ತಿನಲ್ಲಿ ಇತರ ಪಕ್ಷಗಳೊಂದಿಗೆ ಸಮನ್ವಯದೊಂದಿಗೆ ಲೋಕಸಭೆಯ ನಾಯಕತ್ವವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಿತ್ತು. ತ್ರಿವಳಿ ತಲಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ, 370ನೇ ವಿಧಿ ರದ್ಧತಿ ಮುಂತಾದ ಪ್ರಮುಖ ಮಸೂದೆಗಳನ್ನು ಅಂಗೀಕರಿಸುವಲ್ಲಿ ಪ್ರತಿಪಕ್ಷಗಳ ಏಕತೆಯ ಕೊರತೆ ನೀಗಿಸುವಲ್ಲಿ ಕೇಂದ್ರದ ಮಾಜಿ ಸಚಿವರಾಗಿದ್ದ, ಮುತ್ಸದ್ಧಿ ರಾಜಕಾರಣಿ ಖರ್ಗೆ ಸಂಸತ್ತಿನಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ಮುಂಬರಲಿರುವ ರಾಜ್ಯ ಚುನಾವಣೆಗಳು ಮತ್ತು 2024 ರ ಲೋಕಸಭಾ ಚುನಾವಣೆಗಳಿಗೂ ಈ ತಂಡ ಕೆಲಸ ಮಾಡಲಿದೆ. ರಾಷ್ಟ್ರೀಯ ಸಮೀಕ್ಷೆಯ ದೊಡ್ಡ ಗುರಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಪ್ರಾದೇಶಿಕ ಪಕ್ಷಗಳು ತಮ್ಮ ಸ್ವತಂತ್ರ ಸ್ಥಾನವನ್ನು ರೂಪಿಸಲು ಪ್ರಯತ್ನಿಸುತ್ತಿರುವ ಪ್ರತಿಪಕ್ಷ ಶಿಬಿರದಲ್ಲಿ ಬಿರುಕುಗಳ ಲಕ್ಷಣ ಕಂಡುಬಂದಾಗ ಹಿರಿಯ ನಾಯಕರ ಗುಂಪುಗಳು ಸಹಾಯಕ್ಕೆ ನಿಲ್ಲುತ್ತವೆ.










