ಬಿಜೆಪಿ ಆಡಳಿತದ ರಾಜ್ಯಗಳು ವಿಶೇಷವಾಗಿ ಉತ್ತರ ಪ್ರದೇಶ ಮತ್ರು ಅಸ್ಸಾಂ ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ರೂಪಿಸುತ್ತಿದ್ದರೆ ಇತ್ತ ಛತ್ತೀಸ್ಗಢ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಭೂಪೇಶ್ ಬಾಗೆಲ್ ಅವರು ಬುಧವಾರ, ಜನಸಂಘವು 1970 ರ ದಶಕದಲ್ಲಿ ಸಂತಾನ ನಿಯಂತ್ರಣ ಕ್ರಮವನ್ನು ವಿರೋಧಿಸದಿರುತ್ತಿದ್ದರೆ ಈಗ ಜನಸಂಖ್ಯೆ ನಿಯಂತ್ರಣದಲ್ಲಿರುತ್ತಿತ್ತು ಎಂದಿದ್ದಾರೆ. ಬಿಜೆಪಿಯು ಮುಂದಿನ ವರ್ಷ ನಡೆಯಲಿರುವ ಚುನಾವಣೆಯನ್ನು ಮಾತ್ರ ದೃಷ್ಟಿಯಲ್ಲಿಟ್ಟು ಈ ವಿಚಾರ ಎತ್ತುತ್ತಿದೆ ಎಂದೂ ಅವರು ಹೇಳಿದ್ದಾರೆ.
ಕಾನೂನುಗಳನ್ನು ಜಾರಿಗೆ ತರುವುದಕ್ಕಿಂತ ಜನಸಂಖ್ಯೆಯ ಹೆಚ್ಚಳವನ್ನು ನಿಯಂತ್ರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹೆಚ್ಚು ಮುಖ್ಯ ಎಂದು ಬಾಗೆಲ್ ಹೇಳಿದ್ದಾರೆ.

ನಾಗ್ಪುರಕ್ಕೆ ತೆರಳುವ ಮೊದಲು ರಾಯ್ಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಗೆಲ್, 1970 ರ ದಶಕದಲ್ಲಿ ಆರಂಭಿಸಲಾದ ಜನನ ನಿಮತ್ರಣ ಅಭಿಯಾನವನ್ನು ವಿರೋಧ ಪಕ್ಷಗಳು ವಿರೋಧಿಸದಿರುತ್ತಿದ್ದರೆ ಜನಸಂಖ್ಯೆಯು ಅಷ್ಟೊಂದು ಏರುತ್ತಿರಲಿಲ್ಲ ಎಂದಿದ್ದಾರೆ.
“1970 ರ ದಶಕದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಬಿಜೆಪಿ (ಆಗಿನ ಜನ ಸಂಘ) ವಿರೋಧಿಸಿತ್ತು. ಆಗ ಬೆಂಬಲ ಕೊಟ್ಟಿದ್ದಿದ್ದರೆ ಆ ಕ್ರಮಗಳು ಈಗ ದೇಶದ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುತ್ತಿದ್ದವು. ಈಗ ಬಿಜೆಪಿ ಎರಡು ಮಕ್ಕಳ ನೀತಿಯನ್ನು ಹೇರುತ್ತಿದೆ ಮತ್ತು ಎರಡಕ್ಕಿಂತ ಜಾಸ್ತಿ ಮಕ್ಕಳನ್ನು ಹೊಂದಿರುವ ದಂಪತಿಗಳಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಲಾಗುವುದಿಲ್ಲ ಎಂದು ಹೇಳುತ್ತಿದೆ ”ಎಂದು ಅವರು ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ಹಾಗಾದರೆ ಅವರು ಮಸೂದೆಗೆ ಸರಿಹೊಂದುವ ದಂಪತಿಗಳಿಗೆ (ಇಬ್ಬರೇ ಮಕ್ಕಳಿರುವ ದಂಪತಿಗೆ) ಸರ್ಕಾರಿ ಉದ್ಯೋಗದ ಖಾತರಿ ನೀಡುತ್ತಾರೆಯೇ? ಹೌದಾಗಿದ್ದರೆ ಇಬ್ಬರು ಮಕ್ಕಳನ್ನು ಹೊಂದಿರುವ ಎಲ್ಲ ದಂಪತಿಗಳಿಗೆ ಸರ್ಕಾರಿ ಉದ್ಯೋಗ ಒದಗಿಸುವ ಕಾನೂನು ತರಲಿ” ಎಂದು ಉತ್ತರ ಪ್ರದೇಶದ ಜನಸಂಖ್ಯೆ ನಿಯಂತ್ರಣ ಮಸೂದೆ ಮತ್ತು ಅಸ್ಸಾಂನಲ್ಲಿ ಈ ನಿಟ್ಟಿನಲ್ಲಿ ಪ್ರಸ್ತಾಪಿಸಲಾಗಿರುವ ನೀತಿಯ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಬಾಗೆಲ್ ಹೇಳಿದ್ದಾರೆ.
ಯುಪಿಯ ಕರಡು ಮಸೂದೆಯಲ್ಲಿ ಎರಡು ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರನ್ನು ಸರ್ಕಾರಿ ಯೋಜನೆಗಳ ಪ್ರಯೋಜನಗಳಿಂದ ತಡೆಯಲು ಅವಕಾಶವಿದೆ ಮತ್ತು ಎರಡು ಮಕ್ಕಳ ನೀತಿಯನ್ನು ಅನುಸರಿಸುವವರಿಗೆ ಹಲವು ಸವಲತ್ತುಗಳನ್ನು ನೀಡುವ ಒಪ್ಪಂದಗಳಿವೆ.
“1970 ರ ದಶಕದಲ್ಲಿ, ವಿರೋಧ ಪಕ್ಷಗಳು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವನ್ನು ಮುಖ್ಯ ಚುನಾವಣಾ ವಿಷಯವನ್ನಾಗಿ ಮಾಡಿದ್ದು ಯೋಜನೆಯ ಮೇಲೆ ಕೆಟ್ಟ ಪರಿಣಾಮ ಬೀರಿತು” ಎಂದು ಅವರು ಹೇಳಿದರು.
ಕಾನೂನುಗಳನ್ನು ರೂಪಿಸುವ ಮೂಲಕ ಹೆಚ್ಚುತ್ತಿರುವ ಜನಸಂಖ್ಯೆಯ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ ಎಂದ ಅವರು ಈ ನಿಟ್ಟಿನಲ್ಲಿ ಸಾರ್ವಜನಿಕ ಜಾಗೃತಿಯ ಅಗತ್ಯವಿದೆ ಎಂದಿದ್ದಾರೆ. “ಈಗ ದಲಿತರೂ ಸೇರಿದಂತೆ ಅನೇಕ ಕುಟುಂಬಗಳು ಒಂದು ಅಥವಾ ಎರಡು ಮಕ್ಕಳನ್ನು ಹೊಂದುವ ಮಹತ್ವವನ್ನು ಅರಿತುಕೊಂಡಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಬೇಕು ಮತ್ತು ರಾಜಕೀಯದ ಸಲುವಾಗಿ ಮಾತ್ರ ಕಾನೂನುಗಳನ್ನು ಮಾಡಬಾರದು” ಎಂದು ಅವರು ಹೇಳಿದರು.
ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಆಂದೋಲನದಲ್ಲಿ ಭಾಗಿಯಾಗಲು ಅವರು ನಾಗ್ಪುರಕ್ಕೆ ಹೊರಟಿದ್ದರು. “ಪ್ರತಿಪಕ್ಷದಲ್ಲಿದ್ದಾಗ ಬಿಜೆಪಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತೀವ್ರವಾಗಿ ಎತ್ತುತ್ತಿತ್ತು. ಆದರೆ ಈಗ, ಇಂಧನ ಮತ್ತು ಎಲ್ಪಿಜಿ ಬೆಲೆಗಳು ಗಗನಕ್ಕೇರಿರುವಾಗ ಅದು ತಲೆಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಆಂದೋಲನವು ಬಿಜೆಪಿಯ ಬೂಟಾಟಿಕೆಯನ್ನು ಸಾರ್ವಜನಿಕರ ಗಮನಕ್ಕೆ ತರುವ ಉದ್ದೇಶವನ್ನು ಮತ್ತು COVID-19 ನಿಂದ ಈಗಾಗಲೇ ತಮ್ಮ ಆರ್ಥಿಕ ಪರಿಸ್ಥಿತಿಗಳ ಮೇಲೆ ಭಾರಿ ನಷ್ಟವನ್ನು ಅನುಭವಿಸಿರುವ ಸಮಯದಲ್ಲಿ ಜನರು ಎದುರಿಸುತ್ತಿರುವ ಸಂಕಟವನ್ನು ಎತ್ತಿ ತೋರಿಸುವ ಉದ್ದೇಶವನ್ನು ಹೊಂದಿದೆ ”ಎಂದು ಅವರು ಹೇಳಿದ್ದಾರೆ.
“ಚಿಲ್ಲರೆ ಬೆಲೆ ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ, ಹಣದುಬ್ಬರವು ಮೇ ತಿಂಗಳಲ್ಲಿ 12% ಕ್ಕಿಂತ ಹೆಚ್ಚಾಗಿದೆ ಎಂದು ಆರ್ಬಿಐಯೇ ಹೇಳಿದೆ” ಎಂದ ಅವರು “ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಎಂದಿಗೂ ಸಾಮಾನ್ಯ ಜನರಿಗೆ ಮುಖ್ಯವಾದ ವಿಷಯಗಳಾದ ಬೆಲೆ ಏರಿಕೆ, ರೈತರ ಸಮಸ್ಯೆಗಳು, ನಿರುದ್ಯೋಗ, ಜಿಎಸ್ಟಿ ಇತ್ಯಾದಿಗಳನ್ನು ಉಲ್ಲೇಖಿಸುವುದಿಲ್ಲ. ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಅವರು ಕೋಮು ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತಾರೆ” ಎಂದೂ ಹೇಳಿಕೆ ನೀಡಿದ್ದಾರೆ.