ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೇಕಬ್ ಜುಮಾರ ಬಂಧನ ವಿರೋಧಿಸಿ ಬೆಂಬಲಿಗರು ಬೀದಿಗಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರತಿಭಟನೆಯೀಗ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಮಂಗಳವಾರ ತಡ ರಾತ್ರಿಯಿಂದ ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೂ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದಲ್ಲಿ ಭಾಗಿಯಾದ 1200ಕ್ಕೂ ಹೆಚ್ಚು ಆರೋಪಿಗಳನ್ನು ದಕ್ಷಿಣಾ ಆಫ್ರಿಕಾ ಪೊಲೀಸರು ಬಂಧಿಸಿದ್ದಾರೆ.

ಒಂದು ವಾರದ ಹಿಂದೆ ಜೇಕಬ್ರನ್ನು ಭ್ರಷ್ಟಚಾರದ ಆರೋಪದಲ್ಲಿ ಜೈಲಿಗೆ ಹಾಕಲಾಯ್ತು. ಇದರಿಂದ ಸಿಟ್ಟಿಗೆದ್ದ ಬೆಂಬಲಿಗರು ನಮ್ಮ ಅಧ್ಯಕ್ಷರನ್ನೇ ಬಂಧಿಸಿದ್ದೀರಿ ಎಂದು ಬೀದಿಗಿಳಿದು ಹೋರಾಟ ಮಾಡಲು ಶುರು ಮಾಡಿದರು. ಇವರಲ್ಲಿ ಕೆಲವರು ಬೇಕಂತಲೇ ಹಿಂಸಚಾರಕ್ಕೆ ಕುಮ್ಮಕ್ಕು ನೀಡಿದರು. ಈ ಪ್ರತಿಭಟನೆಯೂ ಹಿಂಸಾಚಾರಕ್ಕೆ ತಿರುಗಿದ ಕಾರಣ ಅನೇಕ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು.
ಜೇಕಬ್ ಬೆಂಬಲಿಗರು ಪ್ರತಿಭಟನೆ ನೆಪದಲ್ಲಿ ವಿವಿಧ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಲೂಟಿ ಮಾಡುತ್ತಿದ್ದಾರೆ. ಇವರು ಲೂಟಿ ಮಾಡುತ್ತಿರುವ ಸ್ಥಳದಲ್ಲಿ ಅಪಾರ ಜನಸ್ತೋಮ ನೆರೆದಿದೆ. ಇದರಿಂದ ಜನರ ನೂಕುನುಗ್ಗಲು ಶುರುವಾಗಿದೆ. ಈ ವೇಳೆ ಜನರ ನೂಕುನುಗ್ಗಲಿನಲ್ಲಿ ಸಿಲುಕಿದ ಅನೇಕರ ಹೆಣಗಳು ಬಿದ್ದಿವೆ.
ಇನ್ನು, ಹಿಂಸಾಚಾರ ಮುಂದುವರಿದಿದೆ. ಹಿಂಸಾಚಾರದಲ್ಲಿ ತೊಡಗಿರುವ ಕಿಡಿಗೇಡಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದೀಗ ಪೊಲೀಸ್ ಮತ್ತು ಮಿಲಿಟರಿ ಪಡೆಗಳು ಸ್ಟನ್ ಗ್ರೆನೇಡ್ ಹಾಗೂ ರಬ್ಬರ್ ಬುಲೆಟ್ಗಳನ್ನ ಪ್ರಯೋಗಿಸಿದ್ದಾರೆ.

ಮೂಲಗಳ ಪ್ರಕಾರ, ಗೌಟೆಂಗ್ ಹಾಗೂ ಕ್ವಾಜುಲು-ನಟಾಲ್ ಪ್ರಾಂತ್ಯಗಳಿಗೆ ಮಾತ್ರ ಈ ಹಿಂಸಾಚಾರ ಸೀಮಿತವಾಗಿದೆ. ಇದು ಇಡೀ ಆಫ್ರೀಕಾಗೆ ಹರಡುವ ಮುನ್ನವೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಯತ್ನಿಸುತ್ತಿದ್ದಾರೆ. ಈಗಾಗಲೇ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮ್ಪೊಸಾ ಮೇಲೆ ದಾಳಿ ನಡೆಯಬಹುದು ಎಂದು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಜೇಕಬ್ ಜುಮಾ ಸುಮಾರು ಹತ್ತು ವರ್ಷಗಳ ಕಾಲ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದರು. ಅಧಿಕಾರದಲ್ಲಿದ್ದಾಗ ಜೇಕಬ್ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಜೀಕಬ್ರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಎಂದು ಅಧ್ಯಕ್ಷ ಸಿರಿಲ್ ರಾಮ್ಪೊಸಾ ಆದೇಶಿಸಿದ್ದರು. ಈ ವೇಳೆ ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಜೇಕಬ್ರನ್ನು ಬಂಧಿಸಲಾಗಿದೆ.












