ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನಿನ್ನೆ (ಜುಲೈ 13) ಇದ್ದಕ್ಕಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿದ್ದು ತೀವ್ರ ಕುತೂಹಲ ಮೂಡಿಸಿತ್ತು. ಪ್ರಶಾಂತ್ ಕಿಶೋರ್ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ರಣತಂತ್ರ ರೂಪಿಸುತ್ತಿರುವ ಕಾರಣಕ್ಕೆ ಹಾಗೂ ಸದ್ಯ ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹಾಗೂ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ನಡುವೆ ಭಿನ್ನಾಭಿಪ್ರಾಯ ತಾರಕಕ್ಕೆ ಏರಿರುವ ಕಾರಣಕ್ಕೆ ರಾಹುಲ್ ಗಾಂಧಿ ಮತ್ತು ಪ್ರಶಾಂತ್ ಕಿಶೋರ್ ಭೇಟಿ ಆಗಿರಬಹುದು. ಅಲ್ಲದೆ ಪ್ರಶಾಂತ್ ಕಿಶೋರ್ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದರಿಂದ ಅದರ ಮುಂದುವರೆದ ಭಾಗವಾಗಿ ಕೂಡ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಆದರೀಗ ಬೇರೆಯದೇ ಸುದ್ದಿ ಸಿಗುತ್ತಿದೆ.

ಕಾಂಗ್ರೆಸ್ ಸೇರುತ್ತಾರಾ ಪ್ರಶಾಂತ್ ಕಿಶೋರ್?
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರೆ, ಅದೇ ಕಾರಣಕ್ಕೆ ಅವರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತಾವು ರಣತಂತ್ರ ರೂಪಿಸಿದ್ದ ತೃಣಮೂಲ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯ ಸಾಧಿಸಿದ ಬಳಿಕ ‘ಚುನಾವಣಾ ತಂತ್ರಜ್ಞನ ಕೆಲಸದಿಂದ ವಿರಮಿಸುವೆ’ ಎಂಬುದಾಗಿ ಘೋಷಿಸಿದ್ದರು ಎಂದು ಹೇಳಲಾಗುತ್ತಿತ್ತು. ಆದರೀಗ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ ಒಂದು ದಿನದ ಬಳಿಕ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರೆ ಎಂಬ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ.
ಕಾಂಗ್ರೆಸ್ ಹೈಕಮಾಂಡ್ ಮೂಲಗಳ ಪ್ರಕಾರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜೊತೆಗಿನ ಮಾತುಕತೆ ಸಮಯದಲ್ಲಿ ಪ್ರಶಾಂತ್ ಕಿಶೋರ್ ಅವರಿಗೆ ಪಕ್ಷದೊಂದಿಗೆ ಇರುವಂತೆ ಹೇಳಿದ್ದಾರೆ ಎನ್ನಲಾಗಿದೆ. ಮುಂದಿನ ಎರಡು ವರ್ಷ ನಡೆಯಲಿರುವ ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಗೋವಾ, ಮಣಿಪುರ, ಉತ್ತರಖಂಡ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ರಣತಂತ್ರ ರೂಪಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಪ್ರಶಾಂತ್ ಕಿಶೋರ್ ಸಕಾರಾತ್ಮಕ ಸ್ಪಂದಿಸಿದ್ದಾರೆ. ನಿರಂತರವಾಗಿ ಕಾಂಗ್ರೆಸ್ ಜೊತೆ ಕೆಲಸ ಮಾಡುವ ದೃಷ್ಟಿಯಿಂದ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಯುಪಿಎ ಬಲಪಡಿಸುವರೇ ಪಿಕೆ?
ಮೂಲಗಳು ಹೇಳುವ ಪ್ರಕಾರ ನಿನ್ನೆ ಮಾತ್ರವಲ್ಲ ಇತ್ತೀಚೆಗೆ ಬಹಳಷ್ಟು ಬಾರಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆ ಸಂಪರ್ಕದಲ್ಲಿದ್ದಾರೆ. ಅವರ ಪಕ್ಷಗಳ ಪರವಾಗಿ ಚುನಾವಣಾ ತಂತ್ರಗಾರಿಕೆ ಮಾಡಿದ್ದಾರೆ. ಹಾಗಾಗಿ ಅವರನ್ನು ಯುಪಿಎಗೆ ತರಲು ಪ್ರಯತ್ನಿಸುತ್ತಿದ್ದಾರೆ (ಡಿಎಂಕೆ ಈಗಾಗಲೇ ಯುಪಿಎ ಜೊತೆ ಇದೆ) ಎಂದು ಹೇಳಲಾಗುತ್ತಿದೆ.

ಇದಲ್ಲದೆ ಈಗಾಗಲೇ ಯುಪಿಎ ಜೊತೆಗೆ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಶಿವಸೇನೆ ಜೊತೆ ಸೇರಿ ಸರ್ಕಾರವನ್ನೂ ರಚಿಸಿರುವ ಎನ್ ಸಿಪಿ ನಾಯಕ ಶರದ್ ಪವರ್ ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಸದ್ಯ ಯುಪಿಎ ಜೊತೆಗಿದ್ದರೂ ಯಾವಾಗ ಬೇಕಾದರೂ ತೃತೀಯ ರಂಗದತ್ತ ವಾಲುವ ಅಥವಾ ರಾಷ್ಟ್ರಪತಿ ಸ್ಥಾನಕ್ಕಾಗಿ ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆದುದರಿಂದ ಅವರನ್ನು ಯುಪಿಎ ಜೊತೆ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಪ್ರಶಾಂತ್ ಕಿಶೋರ್ ಮೂಲಕ ಪ್ರಯತ್ನಿಸುತ್ತಿದೆ. ಆಂಧ್ರ ಮುಖ್ಯಮಂತ್ರಿ ವೈಎಸ್ ಆರ್ ಜಗನ್ಮೋಹನ ರೆಡ್ಡಿ ಪರವಾಗಿ ಕೂಡ ಪ್ರಶಾಂತ್ ಕಿಶೋರ್ ರಣತಂತ್ರ ರೂಪಿಸಿದ್ದು ಅವರ ಸಂಪರ್ಕದಲ್ಲೂ ಇದ್ದಾರೆ. ವೈಎಸ್ ಆರ್ ಜಗನ್ಮೋಹನ ರೆಡ್ಡಿ ಎನ್ ಡಿಎ ಸೇರದೆ ತಟಸ್ಥ ನಿಲುವು ಹೊಂದಿರುವುದರಿಂದ ಪ್ರಶಾಂತ್ ಕಿಶೋರ್ ಮೂಲಕ ಅವರನ್ನೂ ಯೂಪಿಎ ಕಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಜೊತೆಗೆ ಕಹಿ ಅನುಭವ
ಸದ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಬಹುದು ಎಂದು ಹೇಳಬಹುದು. ಆದರೆ ಕಾಂಗ್ರೆಸ್ ಜೊತೆ ಅವರಿಗೆ ಆಗಿರುವುದು ಕಹಿ ಅನುಭವಗಳು ಮಾತ್ರ. 2017ರಲ್ಲಿ ಅವರು ಕಾಂಗ್ರೆಸ್ ಪರವಾಗಿ ಉತ್ತರ ಪ್ರದೇಶದಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. ಪಂಜಾಬಿನಲ್ಲಿ ಕೆಲಸ ಮಾಡಲು ನಿಯೋಜನೆಗೊಂಡಿದ್ದರು. ಆದರೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇವರಿಗೆ ಯಾವುದೇ ಮಹತ್ವ ನೀಡಲಿಲ್ಲ. ಇದಾದ ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ರಣತಂತ್ರ ರೂಪಿಸುವ ಅವಕಾಶವೇ ಸಿಗಲಿಲ್ಲ. ಇತ್ತೀಚೆಗೆ ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ‘ಕಾಂಗ್ರೆಸ್ 100 ವರ್ಷಗಳಷ್ಟು ಹಳೆಯ ರಾಜಕೀಯ ಪಕ್ಷವಾಗಿದೆ. ಅದರ ಕಾರ್ಯವೈಖರಿ ಬದಲಾಗಬೇಕಿದೆ. ಅದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ” ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಸೇರುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.












