ವಿಶ್ವ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆಯುವ #ಆತ್ಮನಿರ್ಭರ ಭಾರತದ ಕನಸು ನನಸಾಗಬೇಕಾದರೆ ಭಾರತದ ಸಕಲ ನೈಸರ್ಗಿಕ ಸಂಪತ್ತು ಜಾಗತಿಕ ಬಂಡವಾಳದ ಗೋದಾಮು ಸೇರಬೇಕು. ಕಾರ್ಪೋರೇಟ್ ಜಗತ್ತಿಗೆ ಭಾರತದ ಸಂಪನ್ಮೂಲಗಳನ್ನು ಲೂಟಿ ಮಾಡಲು ಅನುಕೂಲ ಮಾಡಿಕೊಡಬೇಕೆಂದರೆ ಈ ನಿಸರ್ಗ ಸಂಪತ್ತಿನ ವಾರಸುದಾರರು, ಅಂದರೆ ಸಾರ್ವಭೌಮ ಪ್ರಜೆಗಳು, ಕೈ ಕಟ್ಟಿ ಕುಳಿತಿರಬೇಕು. ನೆಲ ನಮ್ಮದು, ಜಲ ನಮ್ಮದು, ಗಾಳಿ ನಮ್ಮದು ಎಂಬ ಈ ವಾರಸುದಾರರ ಧ್ವನಿ ಅಡಗಬೇಕು. ಮತಧರ್ಮ, ಜಾತಿ, ರಾಷ್ಟ್ರೀಯತೆ ಮತ್ತಿತರ ಯಾವುದೇ ಅಸ್ಮಿತೆಗಳು ಈ ಧ್ವನಿಯನ್ನು ಅಡಗಿಸಲು ಅಶಕ್ಯ ಎನಿಸಿದಾಗ ಪ್ರಭುತ್ವ ತನ್ನ ಸಾಂವಿಧಾನಿಕ ಹಕ್ಕುಗಳನ್ನು ವ್ಯವಸ್ಥಿತವಾಗಿ ಬಳಸುವ ಮೂಲಕ, ಹಾದಿ ತೆರವುಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲೇ ಎಲ್ಲವನ್ನೂ ಬುಡಮೇಲು ಮಾಡುವ ಒಂದು ಯಂತ್ರ ಜೆ ಸಿ ಬಿ ನವ ಭಾರತದ ರೂಪಕವಾಗಿಬಿಟ್ಟಿದೆ.
ಭೂಮಿ ಯಾರ ಸ್ವತ್ತು ? ಈ ಪ್ರಶ್ನೆ #ಆತ್ಮನಿರ್ಭರ ಭಾರತದ ಪ್ರತಿಯೊಬ್ಬ ಪ್ರಜೆಯನ್ನೂ ಕಾಡಬೇಕಿದೆ. 200 ವರ್ಷಗಳ ವಸಾಹತು ಆಳ್ವಿಕೆಯ ದಾಸ್ಯದಿಂದ ವಿಮೋಚನೆ ಹೊಂದಿದ್ದು ಕೇವಲ ಭೌಗೋಳಿಕ ಭಾರತವೋ ಅಥವಾ ಮಾನವ ಶ್ರಮವನ್ನೂ ಸೇರಿದಂತೆ ಸಕಲ ಸಂಪನ್ಮೂಲಗಳನ್ನೊಳಗೊಂಡ ಒಂದು ದೇಶವೋ ? ಏಳು ಶತಮಾನಗಳ ಪರ್ಷಿಯನ್ ಆಳ್ವಿಕೆಯಲ್ಲಿ ಭಾರತದ ಸಂಪತ್ತು ಲೂಟಿಯಾಗಲಿಲ್ಲ. ವಿಭಿನ್ನ ಸ್ವರೂಪಗಳಲ್ಲಿ ವೃದ್ಧಿಯಾಗಿತ್ತು. ಆದರೆ 200 ವರ್ಷಗಳ ವಸಾಹತು ಆಳ್ವಿಕೆ ಭಾರತವನ್ನು ಬರಿದು ಮಾಡಿತ್ತು. ಈ ಸಂಪತ್ತಿನ ಲೂಟಿಗೆ ಕಾರಣವಾದ ಗ್ರೇಟ್ ಬ್ರಿಟನ್ ಎಂಬ ಸಾಮ್ರಾಜ್ಯ ಲೂಟಿಯನ್ನು ನಿರ್ವಹಿಸಿದ ಒಂದು ಸಂಸ್ಥೆಯಷ್ಟೇ. ಭಾರತದ ಸಂಪತ್ತು ಪೋಷಿಸಿದ್ದು ಜಾಗತಿಕ ಬಂಡವಾಳಶಾಹಿ ಮಾರುಕಟ್ಟೆಯನ್ನು.
ಈ ಅಪಾಯವನ್ನು ಅರಿತಿದ್ದೇ ವಿವೇಕಾನಂದರೂ ಸಹ ತಮ್ಮ ಮತಧರ್ಮ ಪ್ರಚಾರದ ನಡುವೆ ಸಮಾಜವಾದವನ್ನು ಪ್ರತಿಪಾದಿಸಿದ್ದರು. ಭಾರತ ಒಂದು ಸಮಾಜವಾದಿ ರಾಷ್ಟ್ರವಾಗಿ ರೂಪುಗೊಳ್ಳಬೇಕು ಎಂಬ ಆಶಯದೊಂದಿಗೇ ಡಾ ಬಿ ಆರ್ ಅಂಬೇಡ್ಕರ್ ಸಂವಿಧಾನ ರಚನೆಯ ಸಂದರ್ಭದಲ್ಲಿ ಭಾರತ ಬಲಿಷ್ಠವಾಗಬೇಕಾದರೆ ಸಮಾಜವಾದವೇ ಬುನಾದಿಯಾಗಬೇಕು ಎಂದು ಬಯಸಿ, ಸಾಂವಿಧಾನಿಕ ಸಮಾಜವಾದವನ್ನು ಪ್ರತಿಪಾದಿಸಿದ್ದರು. ಭೂಮಿ, ನೆಲ , ಜಲ ಮತ್ತು ನಿಸರ್ಗ ಸಂಪತ್ತಿಗೆ ಸಾರ್ವಭೌಮ ಭಾರತದ ಪ್ರಜೆಗಳೇ ಒಡೆಯರು ಎಂಬ ತಾತ್ವಿಕ ತಳಹದಿಯ ಮೇಲೆ ಭಾರತದ ಸಂವಿಧಾನ ರಚನೆಯಾಗಿತ್ತು. ಪ್ರಜೆಗಳ ಈ ಒಡೆತನವನ್ನು ನಿರ್ವಹಿಸುವ ಹೊಣೆ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಮೇಲಿತ್ತು. ಇಂದಿಗೂ ಭಾರತವನ್ನು ಇದೇ ಸಂವಿಧಾನ ಆಳುತ್ತಿದೆ. ಆದರೆ ಇದನ್ನು ಪ್ರತಿನಿಧಿಸುವ ಆಡಳಿತ ವ್ಯವಸ್ಥೆ ಬಂಡವಾಳಶಾಹಿ ಮಾರುಕಟ್ಟೆಗೆ ಶರಣಾಗಿದೆ.
ತಮ್ಮ ಮೂಲ ನೆಲೆ ಮತ್ತು ಅಸ್ತಿತ್ವವನ್ನು ಸಂರಕ್ಷಿಸಿಕೊಳ್ಳಲು ಈ ದೇಶದ ಬುಡಕಟ್ಟು ಸಮುದಾಯಗಳು ಇಂದಿಗೂ ಹೋರಾಡಬೇಕಿದೆ. 1855ರಲ್ಲಿ ಜಮೀನ್ದಾರಿ ದಬ್ಬಾಳಿಕೆಯ ವಿರುದ್ಧ, ತಮ್ಮ ಭೂಮಿಯ ಹಕ್ಕುಗಳಿಗಾಗಿ ಹೋರಾಡಿದ ಸಂತಾಲ್ ಬುಡಕಟ್ಟು ಸಮುದಾಯ ಬ್ರಿಟೀಷರ ಕ್ರೂರ ದಬ್ಬಾಳಿಕೆಗೆ ಮಣಿದು ಇತಿಹಾಸದ ಒಂದು ಭಾಗವಾಗಿಹೋಯಿತು. ಈ ಬುಡಕಟ್ಟು ಸಮುದಾಯಗಳು ಅಂದು ಹೋರಾಡಿದ್ದು ತಮ್ಮ ಅರಣ್ಯ ಸಂಪತ್ತಿನ ರಕ್ಷಣೆಗಾಗಿ, ಭೂಮಿಯ ರಕ್ಷಣೆಗಾಗಿ ಮತ್ತು ಎಲ್ಲವನ್ನು ಕಬಳಿಸುವ ಬಂಡವಾಳಶಾಹಿಯ ಆಕ್ರಮಣದ ವಿರುದ್ಧ. 15 ಸಾವಿರ ಆದಿವಾಸಿಗಳು ಬಲಿಯಾಗಿದ್ದರು. ಇಂದು ನಾವು ಸಂತಾಲ್ ಹುತಾತ್ಮರ ಸ್ಮಾರಕದ ಸುತ್ತ ನಿಂತು ಇತಿಹಾಸವನ್ನು ಸ್ಮರಿಸುತ್ತಿದ್ದೇವೆ.
ದುರಂತ ಎಂದರೆ 160 ವರ್ಷಗಳ ನಂತರ, ಇಂದಿಗೂ ಸಹ ಭಾರತದ ಆದಿವಾಸಿ ಸಮುದಾಯ, ಬುಡಕಟ್ಟು ಜನಾಂಗಗಳು ತಮ್ಮ ಅರಣ್ಯ ರಕ್ಷಿಸಿಕೊಳ್ಳಲು, ತಮ್ಮ ಭೂಮಿಯ ಹಕ್ಕಿಗಾಗಿ, ತಮ್ಮ ಜೀವಿಸುವ ಹಕ್ಕುಗಳಿಗಾಗಿ ಸ್ವತಂತ್ರ ಭಾರತದಲ್ಲಿ ಹೋರಾಡುತ್ತಲೇ ಇದ್ದಾರೆ. ಜಾರ್ಖಂಡ್, ಛತ್ತಿಸ್‍ಘಡ ಮತ್ತಿತರ ಪೂರ್ವ ಭಾರತದ ಆದಿವಾಸಿ ಸಮುದಾಯ ತಮ್ಮ ಜೀವನ ಮತ್ತು ಜೀವನೋಪಾಯದ ಹಕ್ಕುಗಳಿಗಾಗಿ ಸ್ವತಂತ್ರ ಭಾರತದ ಪ್ರಜಾಸತ್ತಾತ್ಮಕ ಪ್ರಭುತ್ವದ ವಿರುದ್ಧ ಹೋರಾಡುತ್ತಲೇ ಇರುವುದು ವಾಸ್ತವ. ಈ ಸಂಘರ್ಷ ಮೂಲತಃ ಸಂಪತ್ತನ್ನು ಕೊಳ್ಳೆ ಹೊಡೆಯುವ ಬಂಡವಾಳಶಾಹಿ ಮಾರುಕಟ್ಟೆ ಮತ್ತು ನಿಸರ್ಗದ ಮಕ್ಕಳ ನಡುವೆ ನಡೆಯುತ್ತಿದೆ. ಸ್ವತಂತ್ರ ಭಾರತದ ಪ್ರಜೆಗಳೂ ಸಹ ತಮ್ಮ ನದಿ ನೀರು, ಖನಿಜ ಸಂಪತ್ತು, ಅರಣ್ಯ ಭೂಮಿ ಮತ್ತು ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಹೋರಾಡುವುದು ಅನಿವಾರ್ಯವೂ ಆಗಿದೆ.
ಆದಿವಾಸಿಗಳ ಸಂಘರ್ಷದ ಸುತ್ತ
ಇತ್ತೀಚಿನ ದಿನಗಳಲ್ಲಿ ಇಂತಹ ಒಂದು ಹೋರಾಟವನ್ನು ಜಾರ್ಖಂಡ್‍ನ 32 ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಪಾಥಲ್‍ಗರಿ ಆಂದೋಲನದಲ್ಲಿ ಗುರುತಿಸಬಹುದು. ತಮ್ಮ ಕುಟುಂಬಗಳು, ಗ್ರಾಮಗಳು ಮತ್ತು ಅಲ್ಲಿನ ನಿಸರ್ಗ ಸಂಪತ್ತಿನ ಮೇಲೆ ಆದಿವಾಸಿಗಳ ಹಕ್ಕು ಪ್ರತಿಪಾದಿಸುವ ನಿಟ್ಟಿನಲ್ಲಿ, ಜಾರ್ಖಂಡ್‍ನ ಆದಿವಾಸಿ ಸಮುದಾಯಗಳು ಅಲ್ಲಿನ ಸ್ಮಾರಕದ ಮೇಲೆ ಲೋಹದಿಂದ ಮಾಡಿದ ಫಲಕವೊಂದನ್ನು ಅಂಟಿಸಿ ತನ್ಮೂಲಕ ಹಕ್ಕು ಪ್ರತಿಪಾದನೆ ಮಾಡುತ್ತಾರೆ. ಬುಡಕಟ್ಟು ಸಂಪ್ರದಾಯದಿಂದ ಅನುಸರಿಸಲಾಗುವ ಪಾಥಲ್‍ಗರಿ ಎಂಬ ಪದವೂ ಹುಟ್ಟಿಕೊಂಡಿದೆ. ಈ ಫಲಕಗಳ ಮೂಲಕ ಇಲ್ಲಿನ ಗ್ರಾಮಸ್ಥರು ತಮ್ಮ ಹಳ್ಳಿಗಳ ಗಡಿ ಪ್ರದೇಶಗಳನ್ನು ನಿರ್ಧರಿಸುತ್ತಾರೆ. ಆದಿವಾಸಿಗಳ ಹೊರತಾಗಿ ಮತ್ತಾರಿಗೂ ಅಲ್ಲಿ ಭೂಮಿಯನ್ನು ಖರೀದಿಸುವ ಹಕ್ಕನ್ನು ನಿರಾಕರಿಸಲಾಗುತ್ತದೆ. ಪಂಚಾಯತ್ ನಿಯಮಗಳ ( ಅನುಚ್ಚೇದಿತ ಪ್ರದೇಶಗಳಿಗೆ ವಿಸ್ತರಿಸಲಾದ) ಕಾಯ್ದೆ 1996 ಜಾರಿಯಾದ ನಂತರ ಐಎಎಸ್ ಅಧಿಕಾರಿ ಬಿ ಡಿ ಶರ್ಮ ಈ ರೀತಿಯ ಫಲಕಗಳನ್ನು ನೆಡುವ ಮೂಲಕ ಪಾಥಲ್‍ಗರಿ ಆಂದೋಲನಕ್ಕೆ ನಾಂದಿ ಹಾಡಿದ್ದರು.
ಈ ಕಾಯ್ದೆಯನ್ವಯ 5ನೆಯ ಅನುಚ್ಚೇದಕ್ಕೆ ಒಳಪಡುವ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ಕೆಲವು ವಿಶೇಷ ಹಕ್ಕುಗಳನ್ನೂ ನೀಡಲಾಗಿದೆ. ಬುಡಕಟ್ಟುಗಳ ಸ್ವಾಯತ್ತತೆ, ಸಂಸ್ಕೃತಿ ಮತ್ತು ಆರ್ಥಿಕ ಸಬಲೀಕರಣವನ್ನು ಸಂರಕ್ಷಿಸಿ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಲವು ತೀರ್ಪುಗಳೂ ಸಹ ಪೇಸಾ ಕಾಯ್ದೆಯ ನಿಯಮಗಳನ್ನು ಸಮರ್ಥಿಸಿವೆ. ಈ ಹಿನ್ನೆಲೆಯಲ್ಲೇ ಇಲ್ಲಿನ ಸಾಂಪ್ರದಾಯಿಕ ಗ್ರಾಮಸಭೆಯ ಆಡಳಿತ ವ್ಯವಸ್ಥೆ, ಭೂಮಿಯ ಮೇಲಿನ ಆದಿವಾಸಿಗಳ ಹಕ್ಕು ರಕ್ಷಣೆ, ಆದಿವಾಸಿಗಳನ್ನು ಹೊರತುಪಡಿಸಿ ಇತರರಿಗೆ ಮತ್ತು ಹೊರಗಿನವರಿಗೆ ಈ ಪ್ರದೇಶದಲ್ಲಿ ನೆಲೆಸಲು ನಿರ್ಬಂಧಿತ ಅವಕಾಶಗಳನ್ನು ನೀಡುವುದು ಇವೇ ಮುಂತಾದ ನಿಯಮಗಳಿಗೆ ಒತ್ತಾಯಿಸಿತ್ತು. ಪೇಸಾ ಕಾಯ್ದೆಯಡಿ ಈ ನಿಯಮಗಳು ಕಾನೂನುಬದ್ಧವಾಗಿವೆ ಎಂದೂ ಸುಪ್ರೀಂಕೋರ್ಟ್‍ನ ಸಮತಾ ತೀರ್ಪಿನಲ್ಲಿ ಹೇಳಲಾಗಿದೆ. ಜಾರ್ಖಂಡ್‍ನ ಒಟ್ಟು ಜನಸಂಖ್ಯೆಯಲ್ಲಿ ಬುಡಕಟ್ಟುಗಳು ನಾಲ್ಕನೆ ಒಂದು ಭಾಗದಷ್ಟಿದ್ದು, ಹಲವಾರು ಜಿಲ್ಲೆಗಳಲ್ಲಿ ಆದಿವಾಸಿಗಳ ಜನಸಂಖ್ಯೆ ಅಧಿಕವಾಗಿದೆ. ರಾಜ್ಯ ಸರ್ಕಾರ ಪೇಸಾ ಕಾಯ್ದೆಯ 5ನೆಯ ಅನುಚ್ಚೇದದದ ನಿಯಮಗಳನ್ನು ಜಾರಿಗೊಳಿಸದಿದ್ದುದರಿಂದ ಇಲ್ಲಿನ ಆದಿವಾಸಿಗಳು ತಮ್ಮದೇ ಸಂಘಟನೆಯೊಂದಿಗೆ ಭೂಮಿ ಮತ್ತು ಸಂಪನ್ಮೂಲಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.
ಈ ಪಾಥಲ್‍ಗರಿ ಆಂದೋಲನದ ಹಿನ್ನೆಲೆಯಲ್ಲೇ ಜಾರ್ಖಂಡ್ ಸರ್ಕಾರವು ನಾಲ್ಕು ಸಾವಿರಕ್ಕೂ ಹೆಚ್ಚು ಆದಿವಾಸಿಗಳನ್ನು ಮಾವೋವಾದಿಗಳೊಡನೆ ಸಂಪರ್ಕವಿರುವ ಆರೋಪದ ಮೇಲೆ ಬಂಧಿಸಿತ್ತು. ಈ ಬಂಧಿತರ ಪರವಾಗಿ ಸ್ಟ್ಯಾನ್ ಸ್ವಾಮಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದರು. 2019ರಲ್ಲಿ ಅಧಿಕಾರಕ್ಕೆ ಬಂದ ಹೇಮಂತ್ ಸೊರೇನ್ ಸರ್ಕಾರ ಈ ಬಂಧಿತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದಿದ್ದರೂ, ಬಂಧಿತರ ಬಿಡುಗಡೆಗಾಗಿ ಆದೇಶ ಹೊರಡಿಸಲಿಲ್ಲ. ಸ್ಟ್ಯಾನ್ ಸ್ವಾಮಿಯವರ ಹೋರಾಟ ಮುಂದುವರೆದಿತ್ತು. ಫಾದರ್ ಸ್ವಾಮಿ ಅವರು ಆಳುವ ವರ್ಗಗಳ ಕೆಂಗಣ್ಣಿಗೆ ಗುರಿಯಾಗಿದ್ದು ಮೂಲತಃ ಈ ಕಾರಣಗಳಿಗಾಗಿ. ಭೀಮಾಕೊರೆಗಾಂವ್ ಒಂದು ನಿಮಿತ್ತ ಮಾತ್ರವಾಗಿತ್ತು.