ಕಳೆದ ವರ್ಷ ಕರ್ನಾಟಕ ಕಾಂಗ್ರೆಸ್ ಯುವ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಆ ಸಮಯದಿಂದ ಯುವ ಕಾಂಗ್ರೆಸ್ ನಲ್ಲಿ ಆರಂಭವಾದ ಗೊಂದಲ ಇನ್ನೂ ಬಗೆಹರಿದಿಲ್ಲ. ಅಧ್ಯಕ್ಷ ಸ್ಥಾನಕ್ಕಾಗಿ ರಕ್ಷಾ ರಾಮಯ್ಯ ಹಾಗೂ ಮಹಮ್ಮದ್ ನಲಪಾಡ್ ಅವರ ನಡುವೆ ನಡೆಯುತ್ತಿರುವ ಜಟಾಪಟಿ ಈಗಲೂ ಮುಂದುವರೆಯುತ್ತಿದೆ.

ಇಲ್ಲಿಯವರೆಗೆ ಅದು ಕೇವಲ ಅಧ್ಯಕ್ಷ ಸ್ಥಾನಕ್ಕಾಗಿ ಮಾತ್ರ ನಡೆಯುತ್ತಿದ್ದ ಜಟಾಪಟಿಯಾಗಿತ್ತು. ಆದರೆ, ಈಗ ಕಾಂಗ್ರೆಸ್ ನ ಹಿರಿಯ ನಾಯಕರ ನಡುವೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿರುವುದರಿಂದ, ಅವರ ಬೆಂಬಲಿತ ಯುವ ನಾಯಕರು ಅಧಿಕಾರ ಪಡೆದುಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ.
ಕಳೆದ ವರ್ಷ ಚುನಾವಣೆ ನಡೆದ ನಂತರ ಮಹಮ್ಮದ್ ನಲಪಾಡ್ ಅವರು ಬಹುಮತದಿಂದ ಗೆಲುವು ಸಾಧಿಸಿದ್ದರು. ೬೪,೨೦೩ ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನವನ್ನೇರುವ ಕನಸು ಕಂಡಿದ್ದರು. ಇವರ ನಂತರದ ಸ್ಥಾನ ೫೭,೨೭೧ ಮತಗಳನ್ನು ಪಡೆದಿದ್ದ ರಕ್ಷಾ ರಾಮಯ್ಯ ಅವರಿಗೆ ದಕ್ಕಿತ್ತು. ಚುನಾವಣೆಯ ಫಲಿತಾಂಶ ಘೋಷಿಸಲಾದ ಅಂತರ್ಜಾಲ ತಾಣದಲ್ಲಿ ನಲಪಾಡ್ ಅನರ್ಹ, ರಕ್ಷಾ ರಾಮಯ್ಯ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂದು ಘೋಷಿಸಲಾಯಿತು. ಇದಾದ ಬಳಿಕ ತಾನು ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗುತ್ತೇನೆ ಎಂದು ಹೇಳಿದ್ದ ನಲಪಾಡ್, ದೆಹಲಿಯಲ್ಲಿ ಬೀಡು ಬಿಟ್ಟು ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು.

ದೆಹಲಿಯಿಂದ ವಾಪಾಸ್ ಬರುವಾಗ ಬೆಂಗಳೂರು ವಿಮಾನ ನಿಲ್ದಾಣದಿಂದ ಬೃಹತ್ ರ್ಯಾಲಿ ನಡೆಸಿ ತಮ್ಮ ಶಕ್ತಿ ಪ್ರದರ್ಶನವನ್ನೂ ಮಾಡಿದ್ದರು. ಅವರಿಗೆ ದೊರಕಿದ ಅಭೂತಪೂರ್ವ ಬೆಂಬಲದಿಂದ ಇನ್ನೇನು ಕೆಲವೇ ದಿನಗಳಲ್ಲಿ ನಲಪಾಡ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾಗುತ್ತಾರೆ ಎಂಬ ಸುದ್ದಿಯೂ ದಟ್ಟವಾಗಿ ಹರಡಿತು. ಆದರೆ, ಅದು ಕೇವಲ ಸುದ್ದಿಗಾಗಿ ಸೀಮಿತವಾಯಿತೇ ಹೊರತು ನಲಪಾಡ್ ಅವರಿಗೆ ಅಧ್ಯಕ್ಷ ಸ್ಥಾನ ಮಾತ್ರ ದೊರಕಲಿಲ್ಲ.
ಅದಾದ ಬಳಿಕ ಹಲವು ಬಾರಿ ನಲಪಾಡ್ ಅವರು ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಪಟ್ಟರಾದರೂ, ಅದು ಸಫಲವಾಗಲಿಲ್ಲ. ಈಗ ಮತ್ತೆ ಇದೇ ವಿಚಾರ ಮುನ್ನೆಲೆಗೆ ಬಂದಿದ್ದು, ಇದರ ಹಿಂದೆ ಹಿರಿಯ ನಾಯಕರ ಕೈವಾಡವೂ ಇದೆಯೇ ಎಂಬ ಸಂಶಯ ಮೂಡುತ್ತಿದೆ.

ನಲಪಾಡ್ ಪರ ಡಿಕೆಶಿ, ರಕ್ಷಾ ಪರ ಸಿದ್ದರಾಮಯ್ಯ:
ನಲಪಾಡ್ ಅವರು ಚುನಾವಣೆಗೆ ನಿಂತಾಗ ಅವರ ವಿರುದ್ದ ಇರುವಂತಹ ಕ್ರಿಮಿನಲ್ ಪ್ರಕರಣಗಳ ಕುರಿತು ಡಿಕೆಶಿ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಈ ಸಂದರ್ಭದಲ್ಲಿ ಉತ್ತರಿಸಿದ್ದ ಡಿಕೆಶಿ ಅವರು, ಅದೆಲ್ಲ ಯುವಕರಾಗಿರುವಾಗ ನಡೆಯುವ ಸಾಮಾನ್ಯ ಘಟನೆಗಳು. ಈಗ ನೋಡಿ ನನ್ನ ಮೇಲೆಯೇ ಕೇಸುಗಳಿವೆ ನಾನು ಅಧ್ಯಕ್ಷ ಆಗಿಲ್ಲವೇ ಎಂದು ಹೇಳಿದ್ದರು. ಇದರ ಮೂಲಕ ಪರೋಕ್ಷವಾಗಿ ನಲಪಾಡ್ ಅವರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು.
ಕೆಪಿಸಿಸಿಯಲ್ಲಿ ಈಗ ಎದ್ದಿರುವ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಕುತೂಹಲಕಾರಿ ಪ್ರಶ್ನೆಗೆ ಎಲ್ಲರೂ ತಮ್ಮದೇ ಆದ ಉತ್ತರ ನೀಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಬಣದ ನಾಯಕರು ಬಹಿರಂಗವಾಗಿ ತಮ್ಮ ತಮ್ಮ ನಾಯಕರ ಪರ ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಕೂಸು ಹುಟ್ಟುವುದಕ್ಕಿಂತಲೂ ಮುಂಚೆ ಕುಲಾವಿ ಹೊಲಿಸಿದರಂತೆ ಅನ್ನುವ ರೀತಿ, ರಾಜ್ಯದಲ್ಲಿ ಪಕ್ಷ ಸಂಘಟನೆಯ ಕುರಿತು ಚರ್ಚೆ ನಡೆಸುವುದರ ಬದಲಾಗಿ, ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಕಂಡುಕೊಳ್ಳಲು ನಡೆಸಿದ ಚರ್ಚೆ ನಿಜಕ್ಕೂ ಆಶ್ಚರ್ಯಕರ.
ಈ ಪ್ರಶ್ನೆ ಹಿಂದಿನಿಂದಲೂ ಕೇಳುತ್ತಾ ಬಂದಿದ್ದರೂ, ಯಾರೂ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ. ಸಿದ್ದರಾಮಯ್ಯನವರಂತೂ ಕೆಲವೊಂದು ಬಾರಿ ಬಹಿರಂಗ ಸಭೆಯಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದರು. ಡಿಕೆಶಿ ಈ ಕುರಿತಾಗಿ ಬಹಿರಂಗ ಹೇಳಿಕೆಗಳನ್ನು ನೀಡಿರಲಿಲ್ಲ. ಈಗ ಪಕ್ಷದಲ್ಲಿ ಯಾರು ಮೇಲು, ಯಾರಿಗೆ ಹೆಚ್ಚಿನ ಬೆಂಬಲವಿದೆ ಎಂದು ತೋರಿಸಲು ಎರಡೂ ಬಣಗಲು ಹಠಕ್ಕೆ ಬಿದ್ದಿವೆ.
ಇದೇ ಹಠದ ಒಂದು ಮುಖ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಜಟಾಪಟಿ. ಚುನಾವಣೆ ಗೆಲ್ಲಲು ಯುವ ಘಟಕದ ಸಹಕಾರ ಅತ್ಯಗತ್ಯ. ಯಾವ ನಾಯಕರಿಗೆ ಈ ಬಲ ಸಿಗುತ್ತದೆಯೋ ಅವರ ಪರ ಪ್ರಚಾರ ನಡೆಸಲು ಯುವ ಶಕ್ತಿಯನ್ನು ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದರಲ್ಲಿ ಅಡಗಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ ಇಬ್ಬರೂ ನಾಯಕರು ರಾಜಕೀಯ ಹಿನ್ನೆಲೆ ಉಳ್ಳವರು. ಅವರಿಗೆ ರಾಜಕೀಯ ಎಂಬುದು ಹೊಸತೇನಲ್ಲ. ಹೀಗಾಗಿ ಚುನಾವಣೆಯಲ್ಲಿ ಅವರ ಪಾತ್ರದ ಎಷ್ಟು ಪ್ರಮುಖವಾಗಿರುತ್ತದೆ ಎಂಬುದು ಹಿರಿಯ ನಾಯಕರಿಗೆ ತಿಳಿಯದ ವಿಚಾರವೂ ಅಲ್ಲ. ಯುವಕರನ್ನು ಪ್ರಚಾರಕ್ಕೆ ಬಳಸಿಕೊಂಡು ಚುನಾವಣೆ ಗೆಲ್ಲುವುದು ಎಲ್ಲಾ ರಾಜಕೀಯ ಪಕ್ಷಗಳ ತಂತ್ರ. ಕಾಂಗ್ರೆಸ್ ನಲ್ಲಿಯೂ ಇದೇ ತಂತ್ರಗಾರಿಕೆ ಹಿಂದಿನಿಂದಲೂ ಬಳಕೆಯಲ್ಲಿದೆ. ಈಗ ರಾಜ್ಯ ರಾಜಕಾರಣದಲ್ಲಿ ಯಾರ ಕಡೆಗೆ ಬಲ ಹೆಚ್ಚಿರುತ್ತದೆಯೋ ಅವರೇ ಮುಮದಿನ ಮುಖ್ಯಮಂತ್ರಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಹಿರಿಯ ರಾಜಕಾರಣಿಗಳೇ ತಾವು ಬೆಂಬಲಿಸುವ ಇತರ ನಾಯಕರನ್ನು ಅಚ್ಚುಕಟ್ಟಾದ ಸ್ಥಾನದಲ್ಲಿ ಕೂರಿಸಲು ಪ್ರಯತ್ನ ಪಡುತ್ತಿರುವುದು ಗೋಚರಿಸುತ್ತಿದೆ.
ಚುನಾವಣೆಗೆ ಇನ್ನು ಕೇವಲ ಎರಡು ವರ್ಷಗಳು ಮಾತ್ರ ಬಾಕಿ ಇದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಸಲುವಾಗಿ ಹೋರಾಡಬೇಕಿದ್ದ ಪಕ್ಷದ ನಾಯಕರು, ಆಂತರಿಕ ಅಧಿಕಾರಕ್ಕಾಗಿ ಹೆಣಗಾಡುತ್ತಿದ್ದಾರೆ. ಇದರ ಪರಿಣಾಮ ಸಾಮಾನ್ಯ ಯುವ ಕಾರ್ಯಕರ್ತರ ಮೇಲೂ ಬೀರುತ್ತಿದೆ. ಪಕ್ಷದ ನಾಯಕರಲ್ಲಿಯೇ ಒಮ್ಮತ ಮೂಡಿ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಮೂಡಿರುವ ಗೊಂದಲ ಬಗೆಹರಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ, ಮುಂದಿನ ಚುನಾವಣೆಯ ವೇಳೆ ಒಬ್ಬ ಸಮರ್ಥ ನಾಯಕನಿಲ್ಲದೇ ಕಾಂಗ್ರೆಸ್ ಯುವ ಘಟಕವು ಒಡೆದು ಹೋಳಾಗುವುದರಲ್ಲಿ ಸಂಶಯವಿಲ್ಲ.





