ಒಂದು ಕಡೆ ರಾಷ್ಟ್ರಪತಿ ಚುನಾವಣೆಯ ತಯಾರಿಯ ನೆಪದಲ್ಲಿ ಎನ್ ಸಿಪಿ ನಾಯಕ ಶರದ್ ಪವಾರ್ ನೇತೃತ್ವದಲ್ಲಿ ಬಿಜೆಪಿಗೆ ಪರ್ಯಾಯವಾಗಿ ತೃತೀಯ ರಂಗ ರಚನೆಯ ಪ್ರಯತ್ನಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಅದರ ಮುಂದುವರಿದ ಭಾಗ ಎಂಬಂತೆ ಯಶವಂತ್ ಸಿನ್ಹಾ ನೇತೃತ್ವದಲ್ಲಿ ರಾಷ್ಟ್ರಮಂಚ್ ಸಭೆಗಳೂ ಆರಂಭವಾಗಿವೆ.
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮತ್ತು ಶರದ್ ಪವಾರ್ ನಡುವಿನ ಸರಣಿ ಮಾತುಕತೆಗಳು, ಯಶವಂತ್ ಸಿನ್ಹಾ ನೇತೃತ್ವದಲ್ಲಿ ಕಾಂಗ್ರೆಸ್ ಹೊರತುಪಡಿಸಿ, ಟಿಎಂಎಸಿ, ಎನ್ ಸಿಪಿ ಎಡಪಕ್ಷಗಳು ಮತ್ತು ಆಮ್ ಆದ್ಮಿ ಸೇರಿದಂತೆ ಬಹುತೇಕ ಪ್ರಮುಖ ಪಕ್ಷಗಳ ರಚಿಸಿಕೊಂಡಿರುವ ರಾಷ್ಟ್ರಮಂಚ್ ಪರ್ಯಾಯ ರಂಗದ ಪ್ರಯತ್ನಗಳು ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಪ್ರಬಲ ಪರ್ಯಾಯ ಕಟ್ಟುವ ರಾಷ್ಟ್ರಮಟ್ಟದ ತಂತ್ರಗಾರಿಕೆಯ ಭಾಗ ಎಂದೇ ಹೇಳಲಾಗುತ್ತಿದೆ. ಆದರೆ, ಈ ಪ್ರಯತ್ನಗಳಿಂದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ.

ತೃತೀಯ ರಂಗವು ಬಿಜೆಪಿಗೆ ಸವಾಲೊಡ್ಡಲಿದೆ ಎಂದು ನನಗನ್ನಿಸುವುದಿಲ್ಲ– ಪ್ರಶಾಂತ್ ಕಿಶೋರ್
ರಾಷ್ಟ್ರರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೂಡ ಬಿಜೆಪಿಯೇತರ ಪ್ರಮುಖ ಪಕ್ಷಗಳ ನಾಯಕರ ಈ ಪ್ರಯತ್ನಗಳು ಮಹತ್ವ ಪಡೆದುಕೊಂಡಿವೆ. ಉತ್ತರಪ್ರದೇಶದ ಚುನಾವಣೆಯಲ್ಲಿ ಪ್ರಮುಖ ಪ್ರತಿಪಕ್ಷಗಳು ಒಂದಾಗಿ, ಮೈತ್ರಿ ಮೂಲಕ ಬಿಜೆಪಿಯನ್ನು ಎದುರಿಸಬೇಕು. ಆ ಮೂಲಕ ಬಿಜೆಪಿಯನ್ನು ಮತ್ತೆ ಅಲ್ಲಿ ಅಧಿಕಾರಕ್ಕೆ ಬರದಂತೆ ತಡೆಯುವುದು ಮತ್ತು ಅದರ ಪರಿಣಾಮವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವಂತೆ ತಂತ್ರ ಹೆಣೆಯುವುದು ಈ ಮೈತ್ರಿ ಯತ್ನಗಳ ಅಂತಿಮ ಗುರಿ ಎನ್ನಲಾಗುತ್ತಿದೆ.
ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿ ಕಟ್ಟುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಎಂದೇ ಹೇಳಲಾಗುತ್ತಿರುವ ಈ ವಿದ್ಯಮಾನಗಳ ತತಕ್ಷಣದ ಗುರಿ ಉತ್ತರಪ್ರದೇಶ ಎಂಬ ಹಿನ್ನೆಲೆಯಲ್ಲಿ ಅಲ್ಲಿನ ಪ್ರಮುಖ ಬಿಜೆಪಿಯೇತರ ಪಕ್ಷಗಳಾದ ಎಸ್ ಪಿ, ಆರ್ ಎಲ್ ಡಿಗಳು ರಾಷ್ಟ್ರ ಮಂಚ್ ಸಭೆಯಲ್ಲಿ ಭಾಗವಹಿಸಿದ್ದರೆ, ಬಿಎಸ್ ಪಿ ಸಭೆಯಿಂದ ದೂರ ಉಳಿದಿದೆ. ಹಾಗೇ ಆರ್ ಜೆಡಿ ಮತ್ತು ಬಿಜೆಡಿ ಕೂಡ ಅಂತರ ಕಾಯ್ದುಕೊಂಡಿವೆ ಎಂಬುದು ಗಮನಾರ್ಹ.
ಉತ್ತರಪ್ರದೇಶ ಚುನಾವಣೆ ಹಿನ್ನೆಲೆ: ವಿರೋಧ ಪಕ್ಷಗಳ ಒಗ್ಗಟ್ಟಿಗೆ ಶರದ್ ಪವಾರ್ ತಯಾರಿ
ಈ ನಡುವೆ ಸ್ವತಃ ಶರದ್ ಪವಾರ್ ಅವರೇ, ರಾಷ್ಟ್ರವ್ಯಾಪಿ ಪ್ರಭಾವ ಹೊಂದಿರುವ ಕಾಂಗ್ರೆಸ್ ಹೊರತುಪಡಿಸಿ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ಆಡಿದ್ದಾರೆ. ಅದರ ಬೆನ್ನಲ್ಲೇ ಇದೀಗ ಬಿಹಾರ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಬಿಜೆಪಿಗೆ ಪ್ರಬಲ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಯಾವುದೇ ಪ್ರಬಲ ಪರ್ಯಾಯ ರಂಗವನ್ನು ಕಲ್ಪನೆ ಮಾಡಿಕೊಳ್ಳುವುದು ಕೂಡ ಸಾಧ್ಯವಿಲ್ಲ. ಏಕೆಂದರೆ, ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ 200ಕ್ಕೂ ಹೆಚ್ಚು ಕಡೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿರುವುದು ಕಾಂಗ್ರೆಸ್ ಮಾತ್ರ. ಹಾಗಿರುವಾಗ ಪ್ರಬಲ ಪ್ರತಿಪಕ್ಷವೇ ಇಲ್ಲದೆ ಪ್ರಬಲ ಪರ್ಯಾಯ ಕಟ್ಟುವುದು ಸಾಧ್ಯವೇ ಎಂದು ತೇಜಸ್ವಿ ಮಂಗಳವಾರ ಪ್ರಶ್ನಿಸಿದ್ದಾರೆ.

ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಪರ್ಯಾಯ ಶಕ್ತಿಯನ್ನು ಕಟ್ಟಲು ಈಗಾಗಲೇ ಕಾಲ ಮಿಂಚಿಹೋಗುತ್ತಿದೆ. ಕನಿಷ್ಟ ಈಗಲಾದರೂ ಆ ದಿಕ್ಕಿನಲ್ಲಿ ಗಂಭೀರ ಪ್ರಯತ್ನಗಳು ಆಗಬೇಕಿದೆ. ಆದರೆ, ಅಂತಹ ಯಾವುದೇ ಪ್ರಯತ್ನಗಳು ಕಾಂಗ್ರೆಸ್ ಪಕ್ಷದ ಆಧಾರದ ಮೇಲೆಯೇ ನಿಲ್ಲಬೇಕಾಗುತ್ತದೆ. ಉಳಿದ ಯಾವುದೇ ಪ್ರಾದೇಶಿಕ ಪಕ್ಷಗಳು ಆ ನೆಲೆಯ ಮೇಲೆಯೇ ಮುಂದೆ ಸಾಗಬೇಕಾಗುತ್ತದೆ. ಹಾಗಾದಾಗ ಮಾತ್ರ ಬಿಜೆಪಿಯನ್ನು 2024ರ ಚುನಾವಣೆಯಲ್ಲಿ ಸಂಘಟಿತವಾಗಿ ಎದುರಿಸುವುದು ಸಾಧ್ಯ ಎಂದು ತೇಜಸ್ವಿ ಹೇಳಿದ್ದಾರೆ.
ಪಂಜಾಬ್ ರಾಜಕೀಯದಲ್ಲಿ ಮಿಂಚಿನ ಬೆಳವಣಿಗೆ; SAD-BSP ಮೈತ್ರಿ: ಅಧಿಕೃತ ಘೋಷಣೆಯೊಂದೆ ಬಾಕಿ.!
ಬಿಜೆಪಿಗೆ ಪರ್ಯಾಯ ರಂಗ ಕಟ್ಟುವ ಯತ್ನಗಳ ಮುಂಚೂಣಿಯಲ್ಲಿರುವ ಎನ್ ಸಿಪಿ ನಾಯಕ ಶರದ್ ಯಾದವ್ ಬೆನ್ನಿಗೇ ಶಿವಸೇನಾ ನಾಯಕ ಸಂಜಯ್ ರಾವತ್ ಕೂಡ, ಕಾಂಗ್ರೆಸ್ ಹೊರತುಪಡಿಸಿ ಯಾವುದೇ ರಂಗ ಬಿಜೆಪಿಗೆ ಪರ್ಯಾಯವಾಗಿ ಹೊರಹೊಮ್ಮಲಾರದು. ಕಾಂಗ್ರೆಸ್ ಹೊರತುಪಡಿಸಿ ಯಾವುದೇ ಪ್ರತಿಪಕ್ಷಗಳ ಸಂಯುಕ್ತ ರಂಗಗಳೂ ಯಶಸ್ವಿಯಾಗುವುದಿಲ್ಲ ಎಂದಿದ್ದರು.
ಇದೀಗ ಆರ್ ಜೆಡಿ ನಾಯಕ ತೇಜಸ್ವಿ ಕೂಡ ಆ ಇಬ್ಬರ ಮಾತುಗಳನ್ನೇ ಪ್ರತಿಧ್ವನಿಸಿದ್ದಾರೆ. ಹಾಗಾಗಿ, ಬಹುಶಃ ಯಶವಂತ್ ಸಿನ್ಹಾ ನೇತೃತ್ವದ ರಾಷ್ಟ್ರ ಮಂಚ್ ನೇತೃತ್ವದಲ್ಲಿ ನಡೆಯುತ್ತಿರುವ ಪರ್ಯಾಯ ಶಕ್ತಿ ಕಟ್ಟುವ ಯತ್ನಗಳು ಕೂಡ ಅಂತಿಮವಾಗಿ ಶರದ್ ಯಾದವ್, ಸಂಜಯ್ ರಾವತ್ ಮತ್ತು ತೇಜಸ್ವಿ ಯಾದವ್ ಅವರ ವಾದಕ್ಕೆ ಬಂದು ನಿಲ್ಲುವ ಸಾಧ್ಯತೆಗಳು ಹೆಚ್ಚಿವೆ.
ಈ ನಡುವೆ, ಕಳೆದ ವಾರ ಪರ್ಯಾಯ ರಂಗದ ಕುರಿತ ಪ್ರಯತ್ನಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ಕರೋನಾ ಸಂಕಷ್ಟದ ಹೊತ್ತಲ್ಲಿ ರಾಜಕಾರಣದ ಕುರಿತು ಮಾತನಾಡಲಾಗದು ಎಂದಷ್ಟೇ ಹೇಳಿದ್ದರು. ಹಾಗಾಗಿ, ರಾಷ್ಟ್ರಮಂಚ್ ಸಭೆಗೆ ಆಹ್ವಾನ ನೀಡಿದ್ದರೂ ಕಾಂಗ್ರೆಸ್ ಕೆಲವು ನಾಯಕರು ಗೈರು ಹಾಜರಾದ ವಿದ್ಯಮಾನದ ಹೊರತಾಗಿಯೂ ಪರ್ಯಾಯ ರಂಗದ ಪ್ರಯತ್ನಗಳು ಮತ್ತೆ ಮತ್ತೆ ಕಾಂಗ್ರೆಸ್ ಸುತ್ತಲೇ ಗಿರಕಿಹೊಡೆಯುವಂತೆ ಕಾಣುತ್ತಿವುದು ವಾಸ್ತವ!











