ರಾಜ್ಯದಲ್ಲಿ ವಿವಾದದ ಕಿಡಿ ಹೊತ್ತಿಸಿದ ಗೋಹತ್ಯೆ ನಿಷೇಧ ಕಾಯ್ದೆಯಡಿ 2021ರ ಫೆಬ್ರವರಿಯಿಂದ ಜೂನ್ವರೆಗಿನ ಅವಧಿಯಲ್ಲಿ ಇದುವರೆಗೂ 29 FIR ಸೇರಿ ಒಟ್ಟು 58 ಪ್ರಕರಣಗಳನ್ನು ರಾಜ್ಯ ಪೊಲೀಸರು ದಾಖಲಿಸಿದ್ದಾರೆ.
ಗೋಮಾಂಸ ಮಾರಾಟದಿಂದ ಹಿಡಿದು ದನಗಳ ಅಕ್ರಮ ಸಾಗಣೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳು ರಾಜ್ಯದ 30 ಜಿಲ್ಲೆಗಳಲ್ಲಿ ದಾಖಲಿಸಲಾಗಿದೆ, 14 ಜಿಲ್ಲೆಗಳಲ್ಲಿ FIR ಗಳು ದಾಖಲಿಸಲಾಗಿದೆ. ಕರಾವಳಿಯ ದಕ್ಷಿಣ ಕನ್ನಡದಲ್ಲಿ 8 FIR ದಾಖಲಾಗಿದ್ದು, ಮೈಸೂರಿನಲ್ಲಿ 7 FIR ದಾಖಲಾಗಿದೆ. ಅತೀ ಹೆಚ್ಚು FIR ದಾಖಲಾದ ಮೊದಲ ಎರಡು ಎರಡು ಸ್ಥಾನದಲ್ಲಿ ಈ ಜಿಲ್ಲೆಗಳಿವೆ.

ಜೂನ್ 4 ರವರೆಗೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ (ಗೋಹತ್ಯೆ ನಿಷೇಧ ಕಾಯ್ದೆ) ಮತ್ತು ಸಂರಕ್ಷಣಾ ಕಾಯ್ದೆಯ 6,7,8 ವಿಧಿಯ ಅಡಿಯಲ್ಲಿ ದಕ್ಷಿಣ ಕನ್ನಡದಲ್ಲಿ 6 ಪ್ರಕರಣಗಳು ದಾಖಲಾಗಿದ್ದರೆ, ಮಂಗಳೂರು ನಗರದಲ್ಲಿ 2 ಪ್ರಕರಣಗಳು ದಾಖಲಾಗಿದೆ (ಜಿಲ್ಲೆಯಲ್ಲಿ ಒಟ್ಟು 8) ಮೈಸೂರು ಜಿಲ್ಲೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದರೆ, ಮೈಸೂರು ನಗರದಲ್ಲಿ 3 ಪ್ರಕರಣಗಳು ದಾಖಲಾಗಿದೆ (ಜಿಲ್ಲೆಯಲ್ಲಿ ಒಟ್ಟು 7). ತುಮಕೂರು, ಮಂಡ್ಯದಲ್ಲಿತಲಾ ಎರಡು ಪ್ರಕರಣಗಳು ದಾಖಲಾಗಿದೆ. ಚಿಕ್ಕಮಗಳೂರಿನಲ್ಲಿ 3 ಹಾಗೂ ರಾಮನಗರ, ಹಾಸನ, ಕೊಡಗು, ಉತ್ತರ ಕನ್ನಡ, ಕಲಬುರಗಿ, ವಿಜಯಪುರ ಮತ್ತು ಬಳ್ಳಾರಿಯಲ್ಲಿ ತಲಾ ಒಂದೊಂದು ಎಫ್ಐಆರ್ಗಳು ದಾಖಲಾಗಿದೆ.
ಗೋಹತ್ಯೆ ಕಾನೂನನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿರುವ ರಾಜ್ಯ ರೈತ ಸಂಘದ ಅರ್ಜಿಯ ವಿಚಾರಣೆ ಸಂಬಂಧಿಸಿ ರಾಜ್ಯ ಸರ್ಕಾರ ನೀಡಿರುವ ಅಫಿಡವಿಟ್ನಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಅದರ ಪ್ರಕಾರ, 29 FIR ಗಳಲ್ಲಿ ಸುಮಾರು 50 ರಷ್ಟು ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ.

ಖರೀದಿಯ ದಾಖಲೆಗಳನ್ನು ತೋರಿಸಲು ವಿಫಲವಾದವರಿಂದ ಹಿಡಿದು, 100 ಕೆಜಿಗಳಷ್ಟು ಗೋಮಾಂಸ ಹೊಂದಿರುವವರ ವರೆಗೆ ಪ್ರಕರಣಗಳು ದಾಖಲಿಸಲಾಗಿದೆ. ದಾಖಲಾಗಿರುವ ಎಫ್ಐಆರ್ಗಳಲ್ಲಿ, ಮೂರು ವಿಚಾರಣೆಯ ಹಂತದಲ್ಲಿದ್ದರೆ, ಎರಡು ಪ್ರಕರಣಗಳು ಚಾರ್ಜ್ಶೀಟ್ ಸಲ್ಲಿಸುವ ಹಂತಕ್ಕೆ ತಲುಪಿದೆ, ಉಳಿದ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಅಫಿಡವಿಟ್ ಪ್ರಕಾರ, ಸೇಡಂ ಪಟ್ಟಣದ ಚಿಂಚೋಳಿಯಲ್ಲಿ ನಡೆಸಿದ ದಾಳಿಯಲ್ಲಿ, 4 ಟ್ರಕ್ಗಳಲ್ಲಿದ್ದ 47 ಎತ್ತುಗಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದೆ. 80 ಲಕ್ಷ ಮೌಲ್ಯದ ವಾಹನಗಳು ಹಾಗೂ 19.5 ಲಕ್ಷದ ಜಾನುವಾರುಗಳನ್ನು ವಶಕ್ಕೆ ಪಡೆಯಲಾದ ಈ ದಾಳಿಯಲ್ಲಿ 15 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಮಂಡ್ಯದ ಹೊಸಹೊಳಲು ಗ್ರಾಮದಲ್ಲಿ ನಡೆಸಿದ ಇನ್ನೊಂದು ದಾಳಿಯಲ್ಲಿ ದನ, ಕೋಣ ಸೇರಿದಂತೆ ಒಟ್ಟು 52 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಒಟ್ಟಾರೆ ದಾಳಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು 300 ಕೆಜಿಗೂ ಹೆಚ್ಚು ಗೋಮಾಂಸವನ್ನು ಜಪ್ತಿ ಮಾಡಿದ್ದಾರೆ.

ವಧಾಸ್ಥಾನವಾಗಿ ಬಳಕೆಯಾಗುತ್ತಿದೆ ರಬ್ಬರ್ ಪ್ಲಾಂಟೇಷನ್!
ಕುತೂಹಲಕಾರಿ ಅಂಶವೆಂದರೆ, ಜಾನುವಾರುಗಳ ವಧೆಗೆ ರಬ್ಬರ್ ಪ್ಲಾಂಟೇಷನ್ ಬಳಕೆಯಾಗುತ್ತಿರುವ ಅಂಶ ಈ ಅಫಿದವವಿಟ್ನಲ್ಲಿ ಉಲ್ಲೇಖಿತವಾಗಿದೆ. ದಕ್ಷಿಣ ಕನ್ನಡದ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣದಲ್ಲಿ ರಬ್ಬರ್ ಪ್ಲಾಂಟೇಷನ್ನಿಂದ ಒಟ್ಟು 165 ಕೆಜಿ ಮಾಂಸವವನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





