2019-20ನೇ ಶೈಕ್ಷಣಿಕ ವರ್ಷದಲ್ಲಿ ಭಾರತದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ದಾಖಲಾಗುವ ಮಹಿಳಾ ವಿದ್ಯಾರ್ಥಿಗಳ ಪ್ರಮಾಣ ಪುರುಷ ವಿದ್ಯಾರ್ಥಿಗಳಿಗಿಂತ ಹೆಚ್ಚಿತ್ತು ಎಂದು ಅಧ್ಯಯನವೊಂದು ತಿಳಿಸಿದೆ. ಮಹಿಳೆಯರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡದ ದೇಶವೊಂದರಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ದಾಖಲಾಗುವ ವಿದ್ಯಾರ್ಥಿಗಳು ಹೆಚ್ಚಾಗುವುದು ಆಶಾದಾಯಕ ಬೆಳವಣಿಗೆ. ಹಳ್ಳಿ, ನಗರಗಳ ಅಗಾಧ ವ್ಯತ್ಯಾಸ ಈ ದಾಖಲಾತಿಯಲ್ಲಿ ಕಾಣಿಸದಿರುವುದು ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.

ಉನ್ನತ ಶಿಕ್ಷಣಕ್ಕಾಗಿ ಭಾರತದಲ್ಲಿ ದಾಖಲಾತಿಯ ಅನುಪಾತ (ಜಿಇಆರ್) 2019-20ರಲ್ಲಿ ಶೇ 27.1 ಕ್ಕೆ ಏರಿದೆ ಮತ್ತು ಈ ಅನುಪಾತ ಹಿಂದಿನ ವರ್ಷದಲ್ಲಿ 26.3 ಶೇಕಡಾ ಇತ್ತು ಎಂದು ಇತ್ತೀಚಿನ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (AISHE) ಹೇಳಿದೆ. ಒಟ್ಟು ಜನಸಂಖ್ಯೆಯಲ್ಲಿ 18-23 ವರ್ಷ ವಯಸ್ಸಿನ ಎಷ್ಟು ಶೇಕಡಾ ಮಂದಿ ಉನ್ನತ ಶಿಕ್ಷಣಕ್ಜಾಗಿ ದಾಖಲಾಗುತ್ತಾರೆ ಎಂಬುವುದನ್ನು ಜಿಇಆರ್ ಸೂಚಿಸುತ್ತದೆ.
ಇದೇ ಜೂನ್ ಹತ್ತರಂದು ಸಮೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ಅವರು “ಈ ವರದಿಯು ದೇಶದ ಉನ್ನತ ಶಿಕ್ಷಣದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತದೆ” ಎಂದಿದ್ದಾರೆ.

2019-20ರಲ್ಲಿ ಮಹಿಳೆಯರ ಜಿಇಆರ್ ಶೇಕಡಾ 27.3 ರಷ್ಟಿದ್ದರೆ, ಪುರುಷರದ್ದು ಶೇ 26.9 ರಷ್ಟಿತ್ತು. ಇದರರ್ಥ ಪುರುಷರಿಗೆ ಹೋಲಿಸಿದರೆ ಹೆಚ್ಚು ಅರ್ಹ ಮಹಿಳೆಯರು ಭಾರತದಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2019-20ರಲ್ಲಿ ಒಟ್ಟು ದಾಖಲಾತಿಯ ಶೇಕಡಾ 49 ರಷ್ಟು ಮಹಿಳಾ ವಿದ್ಯಾರ್ಥಿಗಳು.
ಜಿಇಆರ್ ಅನ್ನು ಹೆಚ್ಚಿಸುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಎನ್‌ಇಪಿಯಲ್ಲಿ ಸೇರಿಸಲಾದ ವಿವಿಧ ಸುಧಾರಣೆಗಳ ಮೂಲಕ 2035 ರ ವೇಳೆಗೆ ಶೇ 50 ರಷ್ಟು ಜಿಇಆರ್ ಸಾಧಿಸುವ ನಿರೀಕ್ಷೆ ಕೇಂದ್ರ ಸರ್ಕಾರಕ್ಕಿದೆ.
2018-19ರಲ್ಲಿ ದಲ್ಲಿದ್ದ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ 3.74 ಕೋಟಿಗೆ ಹೋಲಿಸಿದರೆ 2019-20ರಲ್ಲಿ 3.85 ಕೋಟಿ ಆಗಿದ್ದು, 11.36 ಲಕ್ಷ (3.04 ಶೇಕಡಾ) ಬೆಳವಣಿಗೆಯನ್ನು ದಾಖಲಿಸಿದೆ. 2014-15ರಲ್ಲಿ ಈ ಸಂಖ್ಯೆ 3.42 ಕೋಟಿ ಆಗಿತ್ತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಇಆರ್ 2018-19ರಲ್ಲಿ ಕ್ರಮವಾಗಿ ಶೇ 23 ಮತ್ತು ಶೇ 17.2 ರಷ್ಟಿತ್ತು. 2019-20ರಲ್ಲಿ ಕ್ರಮವಾಗಿ ಶೇಕಡಾ 23.4 ಮತ್ತು ಶೇಕಡಾ 18 ರಷ್ಟಿದೆ.

ಉನ್ನತ ಶಿಕ್ಷಣಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಜಿಇಆರ್ ಮಾತ್ರವಲ್ಲದೆ ಲಿಂಗ ಸಮಾನತೆ ಸೂಚ್ಯಂಕ (ಜಿಪಿಐ)ಸಹ 2019-20ರ ಶೈಕ್ಷಣಿಕ ಸಾಲಿನಲ್ಲಿ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸುತ್ತದೆ.
2018-20ರಲ್ಲಿದ್ದ ಜಿಪಿಐ ಶೇಕಡಾ 1.0 ಕ್ಕೆ ಹೋಲಿಸಿದರೆ 2019-20ರ ಜಿಪಿಐ ಶೇಕಡಾ 1.01 ರಷ್ಟಿತ್ತು. ಇದರರ್ಥ ಪುರುಷರಿಗೆ ಹೋಲಿಸಿದರೆ ಹೆಚ್ಚು ಅರ್ಹ ಮಹಿಳೆಯರು ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹಾಜರಾಗುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಜಿಪಿಐ ಬೆಳವಣಿಗೆ ಸ್ಥಿರವಾಗಿದೆ. 2015-16ರಲ್ಲಿ ಜಿಪಿಐ ಶೇಕಡಾ 0.92 ರಷ್ಟಿತ್ತು. ಆ ನಂತರ ಅದು ನ ನಿರಂತರವಾಗಿ ಏರುಹತಿಯಲ್ಲಿದ್ದು 2019-20ನೇ ಸಾಲಿನಲ್ಲಿ ಶೇ 1.01 ಕ್ಕೆ ತಲುಪಿದೆ.
ವರದಿಯನ್ನು ಬಿಡುಗಡೆ ಮಾಡುತ್ತಾ, 2015-16 ಮತ್ತು 2019-20ರ ನಡುವೆ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇಕಡಾ 11.4 ರಷ್ಟು ಬೆಳವಣಿಗೆ ಕಂಡುಬಂದಿದೆ ಎಂದು ಪೋಖ್ರಿಯಾಲ್ ಹೇಳಿದ್ದಾರೆ. “ಈ ಅವಧಿಯಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳಾ ದಾಖಲಾತಿ ಹೆಚ್ಚಳವು ಶೇಕಡಾ 18.2 ಆಗಿದೆ” ಎಂದು ಅವರು ಹೇಳಿದ್ದಾರೆ.
2019-20ರಲ್ಲಿ, ಪದವಿಪೂರ್ವ ಮಟ್ಟದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಕಲೆ / ಮಾನವಿಕ / ಸಮಾಜ ವಿಜ್ಞಾನ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ . ಈ ವಿಭಾಗಕ್ಕೆ ಶೇಕಡಾ 32.7 ವಿದ್ಯಾರ್ಥಿಗಳು ದಾಖಲಾಗಿದ್ದರೆ, ವಿಜ್ಞಾನದಲ್ಲಿ 16 ಶೇಕಡಾ ಮತ್ತು ವಾಣಿಜ್ಯದಲ್ಲಿ 14.9 ಶೇಕಡಾ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು AISHE ವರದಿ ಹೇಳಿದೆ.

ಸ್ನಾತಕೋತ್ತರ ಮಟ್ಟದಲ್ಲಿ, ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ದಾಖಲಾಗಿದ್ದಾರೆ. ವಿಜ್ಞಾನವು ಎರಡನೆಯ ಸ್ಥಾನದಲ್ಲಿದೆ.
ಪಿಎಚ್‌ಡಿ ಮಟ್ಟದಲ್ಲಿ, ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗಕ್ಕೆ ದಾಖಲಾಗುತ್ತಾರೆ ಮತ್ತು ನಂತರ ಸ್ಥಾನದಲ್ಲಿ ವಿಜ್ಞಾನ ವಿಭಾಗವಿದೆ. ಕಳೆದ ಐದು ವರ್ಷಗಳಲ್ಲಿ ಪಿಎಚ್‌ಡಿ ಅಭ್ಯರ್ಥಿಗಳ ಸಂಖ್ಯೆಯೂ ಶೇಕಡಾ 60 ರಷ್ಟು ಹೆಚ್ಚಾಗಿದೆ ಎಂದೂ ವರದಿ ತಿಳಿಸಿದೆ. ಅಲ್ಲದೆ ಭಾರತದಲ್ಲಿ 168 ದೇಶಗಳ 49,348 ವಿದೇಶಿ ವಿದ್ಯಾರ್ಥಿಗಳು ಸಹ ವ್ಯಾಸಂಗ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.