ಮುಖ್ಯಮಂತ್ರಿ ಬದಲಾವಣೆ ವಿಚಾರ ಇವತ್ತು ನೆನ್ನೆಯದಲ್ಲ ಯಡಿಯೂರಪ್ಪ ನವರು ಸಿಎಂ ಆದ ದಿನದಿಂದಲೂ ಈ ಚರ್ಚೆ ನಡೆಯುತ್ತಲೇ ಬಂದಿದೆ ಈ ಕುರಿತು ಬಿಎಸ್‌ವೈ ಬೆಂಬಲಕ್ಕೆ ನಿಂತು ಸಹಿ ಸಂಗ್ರಹ ಮಾಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ತಿಳಿಸಿದ್ದಾರೆ.
ಈ ಕುರಿತು ದಾವಣಗೆರೆಯಲ್ಲಿ ಮಾತನಾಡಿರುವ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಪರ 65 ಶಾಸಕರ ಸಹಿ ಸಂಗ್ರಹ ಮಾಡಿರುವುದು ಸತ್ಯ. ಇದರಲ್ಲಿ ಯಾವುದೇ ಅನುಮಾನಗಳು ಬೇಡ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಗೆ ಸಮಯ ನೀಡಿದ್ದು, ಸಹಿ ಸಂಗ್ರಹವನ್ನು ನೀಡುತ್ತೇನೆ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಯಾರೊ ಮೂರು ಜನ ದೆಹಲಿ ಕದ ತಟ್ಟಿದರೆ ಇಲ್ಲಿ ನಾಯಕತ್ವ ಬದಲಾಗುವುದಿಲ್ಲ. ಕೆಲವರು ಸೂಟು ಹೊಲಿಸಿ ಸಿಎಂ ಆಗಲು ಕನಸು ಕಾಣುತ್ತಿದ್ದಾರೆ. ಆ ಸೂಟನ್ನು ಅವರ ಕ್ಷೇತ್ರದ ಜಾತ್ರೆಯಲ್ಲಿ ಹಾಕಿಕೊಳ್ಳಲಿ. ಇಂದು ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ ನೀಡಲಿದ್ದಾರೆ. ನಾಯಕತ್ವ ಬದಲಾವಣೆ ವಿಷಯಕ್ಕೆ ತೆರೆ ಬೀಳಲಿದ್ದು. ಬಿಎಸ್‌ವೈ ವಿರುದ್ಧ ತಂತ್ರಗಾರಿಗೆ ಮಾಡುತ್ತಿರುವವರಿಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಎರಡು ಮೂರು ವಾರಗಳಿಂದ ಸಹಿ ಸಂಗ್ರಹ ನಮ್ಮ ಬಿಜೆಪಿ ಸಂಸ್ಕೃತಿಯಲ್ಲ ಎನ್ನುತ್ತಿದ್ದ ಸಚಿವರಾದ ಈಶ್ವರಪ್ಪ, ಆರ್, ಅಶೋಕ್ ಇನ್ನಿತರು ಈಗ ಮೌನಕ್ಕೆ ಜಾರಿದ್ದಾರೆ.