• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಜಾತಿ ಶ್ರೇಷ್ಠತೆಯ ವ್ಯಸನದಿಂದ ಮುಕ್ತರಾಗಬೇಕಿದೆ

ನಾ ದಿವಾಕರ by ನಾ ದಿವಾಕರ
June 13, 2021
in ಅಭಿಮತ
0
ಜಾತಿ ಶ್ರೇಷ್ಠತೆಯ ವ್ಯಸನದಿಂದ ಮುಕ್ತರಾಗಬೇಕಿದೆ
Share on WhatsAppShare on FacebookShare on Telegram

ADVERTISEMENT

ಚಿತ್ರನಟ ಚೇತನ್ ಅವರ ಬ್ರಾಹ್ಮಣ್ಯ ಕುರಿತ ಉಲ್ಲೇಖಿತ ಹೇಳಿಕೆಗಳು ಸಾಕಷ್ಟು ವಿವಾದ ಸೃಷ್ಟಿಸಿದೆ. ತಾವು ಬ್ರಾಹ್ಮಣರ ಬಗ್ಗೆ ಮಾತನಾಡಿಲ್ಲ ಎನ್ನುವ ಸಮಜಾಯಿಷಿಯೂ ವಿವಾದವನ್ನು ತಣ್ಣಗಾಗಿಸಿಲ್ಲ. ಚೇತನ್ ಅಂಬೇಡ್ಕರ್ ಮತ್ತು ಪೆರಿಯಾರ್ ಅವರನ್ನು ಉಲ್ಲೇಖಿಸಿ, ಬ್ರಾಹ್ಮಣ್ಯದ ಅಪಾಯಗಳನ್ನು ಕುರಿತು ಮಾತನಾಡಿದ್ದಾರೆ. ಬ್ರಾಹ್ಮಣ್ಯದ ಅಪಾಯಗಳು ಎಂದರೆ ಮೂಲತಃ ಅಸ್ಪೃಶ್ಯತೆಯನ್ನು ಜೀವಂತವಾಗಿರಿಸುವುದು ಮತ್ತು ಜಾತಿ ಆಧಾರಿತ ತಾರತಮ್ಯಗಳನ್ನು ಯಥಾಸ್ಥಿತಿಯಲ್ಲಿರಿಸುವುದೇ ಆಗಿದೆ. ಇದು ಒಂದು ಭಾರತದ ನಾಗರಿಕ ಸಮಾಜದಲ್ಲಿ ಬೇರೂರಿರುವ ಮನಸ್ಥಿತಿಯೂ ಹೌದು, ಬಹುತೇಕ ಮೇಲ್ಜಾತಿಗಳಲ್ಲಿ ಇಂದಿಗೂ ಜೀವಂತವಾಗಿರುವ ಮನೋಭಾವವೂ ಹೌದು. ಯಾವ ಒಂದು ಮನಸ್ಥಿತಿಯನ್ನು ಭಾರತದ ಸಮಾಜ ಸುಧಾರಕರು ಶತಮಾನಗಳಿಂದ ವಿರೋಧಿಸುತ್ತಾ ಬಂದಿದ್ದಾರೋ, ಅದೇ ಬ್ರಾಹ್ಮಣ್ಯದ ಲಕ್ಷಣಗಳು ಇಂದಿಗೂ ಒಂದು ಸಮುದಾಯದ ಅಂತಃಸತ್ವ ಎನ್ನುವುದಾದರೆ, ಚೇತನ್ ಹೇಳಿರುವುದರಲ್ಲಿ ತಪ್ಪೇನೂ ಕಾಣುವುದಿಲ್ಲ.  ಡಾ ಬಿ ಆರ್ ಅಂಬೇಡ್ಕರ್ ಮತ್ತು ಪೆರಿಯಾರ್ ಸಹ ಇದನ್ನೇ ಹೇಳಿದ್ದಾರಲ್ಲವೇ ? ತನ್ನ ತಾತ್ವಿಕ ಸಂಕೋಲೆಗಳನ್ನು ಕಳಚಿಕೊಂಡು ಸಹ ಮಾನವರೊಡನೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಕೂಡಿ ಬಾಳುವ ನಿಟ್ಟಿನಲ್ಲಿ ಯೋಚಿಸುವುದು ಇಂದಿನ ತುರ್ತು.

ಜಾತಿ ಆಧಾರಿತ ತಾರತಮ್ಯ, ಪಕ್ಷಪಾತ, ಮತಭೇದ, ಸಾಂಸ್ಕೃತಿಕ ಕ್ರೌರ್ಯ, ಆಚರಣಾತ್ಮಕ ದೌರ್ಜನ್ಯ ಇವೆಲ್ಲವನ್ನೂ  ಬ್ರಾಹ್ಮಣ್ಯ ಪ್ರತಿನಿಧಿಸುತ್ತದೆ ಎಂದಾದರೆ ಈ ಬ್ರಾಹ್ಮಣ್ಯ ಇಲ್ಲದೆಯೂ ಬ್ರಾಹ್ಮಣಿಕೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲವೇ ? ಆಚರಣೆಯ ನೆಲೆಯಲ್ಲಿ ಇದು ಇಂದಿಗೂ ವಾಸ್ತವವೇ ಅಲ್ಲವೇ ? ಬ್ರಾಹ್ಮಣ್ಯ ಎನ್ನುವುದು ನಿರ್ದಿಷ್ಟ ಜಾತಿ ಸೂಚಕ ಪದ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅದು ಒಂದು ಮನಸ್ಥಿತಿಯ ಸಂಕೇತ. ಒಂದು ಸಾಮುದಾಯಿಕ ಅಸ್ಮಿತೆಯನ್ನು ಪ್ರತಿನಿಧಿಸುವ ಸಂಕೇತ. ಜಾತಿ ಶ್ರೇಷ್ಠತೆಯನ್ನು ಸಂರಕ್ಷಿಸಿಕೊಳ್ಳುವ ಅನಿವಾರ್ಯ ಸಾಧನ. ತಾನು ಜನ್ಮತಃ ಶ್ರೇಷ್ಠ ಎಂದು ಭಾವಿಸುವ ಮತ್ತು ಅನ್ಯರನ್ನು ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ನಿಕೃಷ್ಟವಾಗಿ ಕಾಣುವ ಒಂದು ಮನಸ್ಥಿತಿಯನ್ನೇ ಬ್ರಾಹ್ಮಣ್ಯ ಎಂದು ವ್ಯಾಖ್ಯಾನಿಸಲಾಗಿದೆ.  ಈ ಪದಬಳಕೆ ಚಾರಿತ್ರಿಕವಾಗಿ ಬೆಳೆದುಬಂದಿರುವಂತಹುದು. ಹಲವಾರು ದಾರ್ಶನಿಕರು ಈ ಮನಸ್ಥಿತಿಯನ್ನು ಧಿಕ್ಕರಿಸಿಯೇ ತಮ್ಮ ಬ್ರಾಹ್ಮಣಿಕೆಯನ್ನೂ ತ್ಯಜಿಸಿದ್ದಿದೆ, ಅಲ್ಲವೇ ? ಡಾ ಅಂಬೇಡ್ಕರ್ ಇದನ್ನು ಬ್ರಾಹ್ಮಣಶಾಹಿ ಅಥವಾ ಬ್ರಾಹ್ಮಣವಾದ ಎಂದು ಗುರುತಿಸುತ್ತಾರೆ. ಭಾರತದ ಧರ್ಮಶಾಸ್ತ್ರಗಳು ಮತ್ತು ತತ್ವಶಾಸ್ತ್ರಗಳ ಹಿನ್ನೆಲೆಯಲ್ಲಿ ನೋಡಿದಾಗ ವೈದಿಕ ಪರಂಪರೆಯನ್ನು ಹೀಗೆ ಗುರುತಿಸಿರುವುದನ್ನೂ ಕಾಣಬಹುದು.

ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹೆಚ್.ಎಸ್. ಸಚ್ಚಿದಾನಂದ ಮೂರ್ತಿ ವಿರುದ್ಧ ದೂರ ದಾಖಲು

ಏಕೆ ಹೀಗೆ ಎಂಬ ಪ್ರಶ್ನೆಗೆ ಇತಿಹಾಸದ ಪುಟಗಳಲ್ಲೇ ಉತ್ತರ ದೊರೆಯುತ್ತದೆ. ಮನುಸ್ಮೃತಿಯನ್ನು ಆಧರಿಸಿದ ಮತಧರ್ಮದಲ್ಲಿ ಜಾತಿ ತಾರತಮ್ಯಗಳನ್ನು ಮತ್ತು ಜಾತಿ ಆಧಾರಿತ ದೌರ್ಜನ್ಯಗಳನ್ನು ಸಮರ್ಥಿಸಲು ಬಳಸುವ ಆಯುಧಗಳಲ್ಲಿ ಬ್ರಾಹ್ಮಣ್ಯವೂ ಒಂದು. ಜನ್ಮತಃ ಶ್ರೇಷ್ಠತೆಯನ್ನು ಗಳಿಸುವ ಒಂದು ವಿಕೃತ ಪರಿಕಲ್ಪನೆಗೆ ಧರ್ಮಶಾಸ್ತ್ರಗಳೂ ಸಾಕಷ್ಟು ಮೇವು ಒದಗಿಸಿವೆ ಅಲ್ಲವೇ ? ಈ ಧರ್ಮಶಾಸ್ತ್ರಗಳನ್ನೇ ಡಾ ಅಂಬೇಡ್ಕರ್ , ಭಾರತೀಯ ಸಮಾಜದ ಬಹುಸಂಖ್ಯಾತ ಜನಸಮುದಾಯಗಳ ನೆಲೆಯಲ್ಲಿ ನಿಂತು ವಿಮರ್ಶಿಸಿದ್ದಾರೆ. ಬುದ್ಧನ ಕಾಲದಿಂದ ಬಸವಣ್ಣನವರೆಗೂ ಭಾರತದ ಸಮಾಜ ಸುಧಾರಕರು, ದಾರ್ಶನಿಕರು ಈ ವೈದಿಕ ಪರಂಪರೆಯ ವಿರುದ್ಧ ದನಿ ಎತ್ತುತ್ತಲೇ ಶೋಷಿತ ಸಮುದಾಯಗಳಿಗೆ ಒಂದು ಗೌರವಯುತ ಸ್ಥಾನ ನೀಡಲು ಪ್ರಯತ್ನಿಸಿದ್ದಾರೆ. ಇದೇ ಪ್ರಯತ್ನವನ್ನು ಡಾ ಅಂಬೇಡ್ಕರ್ ಸಹ ಮಾಡಿದ್ದಾರೆ, ಪೆರಿಯಾರ್ ಕೊಂಚ ಭಿನ್ನ ಮಾರ್ಗ ಅನುಸರಿಸಿದರೂ ಮೂಲತಃ ಈ ಪರಿವರ್ತನೆಯ ಹಾದಿಯಲ್ಲೇ ಸಾಗಿದ್ದಾರೆ. ಈ ಜಾತಿ ಶ್ರೇಷ್ಠತೆಯ ಪರಿಕಲ್ಪನೆಯೇ ಭಾರತದ ಜಾತಿ ವ್ಯವಸ್ಥೆಯ ಅಂತಃಸತ್ವವೂ ಹೌದಲ್ಲವೇ ? ವ್ಯಕ್ತಿಗತ ನೆಲೆಯಲ್ಲಿನ ಬ್ರಾಹ್ಮಣಿಕೆಗೂ ಸಾಮುದಾಯಿಕ ನೆಲೆಯ ಬ್ರಾಹ್ಮಣ್ಯಕ್ಕೂ ಇರುವ ಸೂಕ್ಷ್ಮಗಳನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಸಾಮುದಾಯಿಕ ಅಸ್ಮಿತೆಗಾಗಿ ಬ್ರಾಹ್ಮಣಿಕೆಯನ್ನು ಉಳಿಸಿಕೊಂಡಿರುವ ಅನೇಕ ಮಹನೀಯರು ಬ್ರಾಹ್ಯಣ್ಯ ಎನ್ನಲಾಗುವ ಪರಿಕಲ್ಪನೆಯಿಂದ ವಿಮುಖರಾಗಿರುವುದನ್ನೂ ನಾವು ಗಮನಿಸಬಹುದು. ಬ್ರಾಹ್ಮಣ್ಯವನ್ನು ಧಿಕ್ಕರಿಸಿ ಹೊರಬಂದ ಬ್ರಾಹ್ಮಣರೂ ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಇಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಪೂರ್ಣ ಸಮೀಕರಣ ಉಚಿತ ಎನಿಸುವುದಿಲ್ಲ. ಹಾಗಾಗಿ “ ಬ್ರಾಹ್ಮಣ= (ಬ್ರಾಹ್ಮಣ್ಯ)2 ” ಎನ್ನುವ ಗಣಿತ ಶಾಸ್ತ್ರದ ಪ್ರಮೇಯವನ್ನು ಬಳಸುವುದೂ ಪ್ರಮಾದವಾಗುತ್ತದೆ.  ಜನ್ಮತಃ ಬಂದ ತನ್ನ ಅಸ್ಮಿತೆಯನ್ನು ಕಳಚಿಕೊಂಡು ಸಹಮಾನವರೊಡನೆ ಬದುಕುವ ಪ್ರವೃತ್ತಿ ಬೆಳೆಸಿಕೊಂಡರೆ ಸಹಜವಾಗಿಯೇ ಬ್ರಾಹ್ಮಣ್ಯದ ಒಳಸುಳಿಗಳು ಅರ್ಥವಾಗಿಬಿಡುತ್ತವೆ. ಆದರೆ ಭಾರತದ ಜಾತಿ ವ್ಯವಸ್ಥೆಯಲ್ಲಿ ಬೇರುಬಿಟ್ಟಿರುವ ಸಾಮುದಾಯಿಕ ಅಸ್ಮಿತೆಗಳು ಮತ್ತು ಮತಧಾರ್ಮಿಕ ನಿಷ್ಠೆ ಈ ವಿಮೋಚನೆಗೆ ಅವಕಾಶ ನೀಡುವುದಿಲ್ಲ. ಇದು ಬ್ರಾಹ್ಮಣಶಾಹಿಯ ಶಕ್ತಿ ಮತ್ತು ಅಂತಃಸತ್ವವೂ ಆಗಿದೆ. ಬ್ರಾಹ್ಮಣಶಾಹಿ ಎನ್ನುವುದು ಇವೆಲ್ಲವನ್ನೂ ಒಳಗೊಂಡ ಒಂದು ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನ. ಇದು ಎಲ್ಲ ಜಾತಿಗಳಲ್ಲೂ ಕಂಡುಬರುವ ವಿದ್ಯಮಾನವೂ ಹೌದು. ಇದನ್ನೇ ಅಂಬೇಡ್ಕರರೂ ಬ್ರಾಹ್ಮಣಶಾಹಿಯ ವ್ಯಾಖ್ಯಾನದ ಮೂಲಕ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಸಹಜವಾಗಿಯೇ ಎಲ್ಲ ಜಾತಿಗಳಲ್ಲೂ ವ್ಯಾಪಕವಾಗುತ್ತಿದ್ದು ಜಾತಿ ವ್ಯವಸ್ಥೆಯನ್ನು ಚಾಲ್ತಿಯಲ್ಲಿಡುವ ವಾಹಕಗಳೂ ಆಗುತ್ತವೆ.

ಈ ಹೊತ್ತಿನ ಆಧುನಿಕತೆಯ ಸೋಗಿನಲ್ಲೂ ಸಹ, ಸಾಮುದಾಯಿಕ ನೆಲೆಯಲ್ಲಿ ಈ ತಾರತಮ್ಯಗಳು, ಭೇದಭಾವಗಳು ಇರುವುದನ್ನು ನಿರಾಕರಿಸಲಾಗುವುದಿಲ್ಲ. ದೇವಸ್ಥಾನಗಳಲ್ಲಿನ ಪಂಕ್ತಿಭೇದ, ಮನೆಗಳಲ್ಲಿ, ದೇವಾಲಯಗಳಲ್ಲಿ ನಡೆಸುವ ಹೋಮಗಳು, ಪೂಜಾ ವಿಧಿವಿಧಾನಗಳಲ್ಲಿ ಈ ಸೂಕ್ಷ್ಮಗಳು ಅಡಗಿವೆ       ಅಲ್ಲವೇ ? ಈ ಬ್ರಾಹ್ಮಣೀಕರಣದ ಪ್ರಭಾವಕ್ಕೊಳಗಾದ ಅಸಂಖ್ಯಾತ ದಲಿತರೂ ಸಹ ಮತಧರ್ಮ , ಸಂಸ್ಕೃತಿ, ಆಚರಣೆಗಳ ಹೆಸರಿನಲ್ಲಿ ಈ ನಿಯಮಗಳನ್ನು ಆಚರಣೆಯ ನೆಲೆಯಲ್ಲಿ ಒಪ್ಪಿಕೊಳ್ಳುತ್ತಲೇ ಬಂದಿದ್ದಾರೆ. ಆಚರಿಸುತ್ತಲೂ ಬಂದಿದ್ದಾರೆ. ಇಂದು ನಾವು ವಿರೋಧಿಸಬೇಕಿರುವುದು ತಾರತಮ್ಯ ಸೃಷ್ಟಿಸುವ ಮತ್ತು ಪೋಷಿಸುವ ದುಷ್ಟ ಗುಣಗಳನ್ನು. ಅಸ್ಪೃಶ್ಯತೆ ಮತ್ತು ಜಾತಿ ಭೇದ ಇದರ ಒಂದು ಲಕ್ಷಣ. ಇಡೀ ಬ್ರಾಹ್ಮಣ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಕ್ಕಿಂತಲೂ, ಈ ಜಾತಿ ತಾರತಮ್ಯ, ಶ್ರೇಷ್ಠತೆಯ ಅಹಮಿಕೆ, ಮೇಲುಕೀಳು ಎಂಬ ಭಾವನೆ ಇವುಗಳನ್ನು ಪೋಷಿಸುವ ಅಥವಾ ಸಮರ್ಥಿಸುವವರನ್ನು ಖಂಡಿಸುವುದು ಸಮರ್ಥನೀಯ. ಡಾ ಅಂಬೇಡ್ಕರ್ ಸಹ ಈ ಬ್ರಾಹ್ಮಣವಾದವನ್ನೇ ಖಂಡಿಸಿದ್ದಾರೆ. ಬ್ರಾಹ್ಮಣವಾದ, ಬ್ರಾಹ್ಮಣೀಕರಣ, ಬ್ರಾಹ್ಮಣ್ಯ ಮುಂತಾದ ಪದಗಳು ನಿರ್ದಿಷ್ಟ ಜಾತಿ ಸೂಚಕವೇ ಆಗಬೇಕೆಂದಿಲ್ಲ. ಈ ಮನೋವೃತ್ತಿ ಅನ್ಯ ಜಾತಿಗಳಲ್ಲೂ ಪ್ರಬಲವಾಗಿವೆ. ಕರ್ಮಠರಲ್ಲಿ ಹೆಚ್ಚಾಗಿರುತ್ತದೆ. ವೈಚಾರಿಕ ನೆಲೆಯಲ್ಲಿ ಇದರ ವಿರುದ್ಧ ಹೋರಾಡಿದವರಲ್ಲಿ ಪೆರಿಯಾರ್ ಸಹ ಒಬ್ಬರು. ಈ ವ್ಯಾಖ್ಯಾನಗಳಲ್ಲಿ ಬ್ರಾಹ್ಮಣ ಎಂಬ ಪದ ಬಳಕೆಯನ್ನು ಜಾತಿ ಸೂಚಕ ಎಂದು ಪರಿಭಾವಿಸುವುದೇ ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಮೌಢ್ಯದ ಸಂಕೇತ ಎನ್ನಬಹುದು. ಈ ಬೌದ್ಧಿಕ ಮೌಢ್ಯವನ್ನು ಹೋಗಲಾಡಿಸುವುದು ನಮ್ಮ ಆದ್ಯತೆಯಾಗಬೇಕು.

ಯಾವುದೇ ಕಾರಣಕ್ಕಾದರೂ ಸಹ ಮಾನವರನ್ನು ಸ್ಪರ್ಶಿಸಲು ನಿರಾಕರಿಸುವುದು ಜಾತಿ ತಾರತಮ್ಯ ಮತ್ತು ಮೇಲು ಕೀಳುಗಳ ಮನೋಭಾವಕ್ಕೆ ಪುಷ್ಟಿ ನೀಡುತ್ತದೆ. ಅಸ್ಪೃಶ್ಯತೆಯ ಮೂಲವೂ ಈ ಧೋರಣೆಯಿಂದಲೇ ಉಗಮಿಸಿರುವುದಲ್ಲವೇ ? ಮನುಷ್ಯರನ್ನು ಮನುಷ್ಯರಂತೆ ಕಾಣದ ಒಂದು ವಿಕೃತ ವ್ಯವಸ್ಥೆಯನ್ನು ವೈಚಾರಿಕ ನೆಲೆಯಲ್ಲಿ, ಮಾನವೀಯ ನೆಲೆಯಲ್ಲಿ ಹೇಗೆ ಸ್ವೀಕರಿಸಲು ಸಾಧ್ಯ ? ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಉಲ್ಲೇಖಿತ ಹೇಳಿಕೆಗಳೂ ಇದನ್ನೇ ಸೂಚಿಸುತ್ತವೆ. ಇದು ಒಂದು ನಿರ್ದಿಷ್ಟ ಸಮುದಾಯದ ಪ್ರಶ್ನೆ ಅಲ್ಲ ಆದರೂ ಸಾಮುದಾಯಿಕವಾಗಿ ಸಮಾಜದ ಎಲ್ಲ ಸ್ತರಗಳಲ್ಲಿ ಬೇರೂರಿರುವ ಆಚರಣೆಗಳ, ಪದ್ಧತಿಗಳ ಪ್ರಶ್ನೆ. ‘ಅನ್ಯ’ರನ್ನು ಸೃಷ್ಟಿಸುವ ಯಾವುದೇ ಸಾಂಸ್ಕೃತಿಕ-ಸಾಮುದಾಯಿಕ ಪ್ರಜ್ಞೆ ವೈಚಾರಿಕ ನೆಲೆಯಲ್ಲಿ ಖಂಡನಾರ್ಹವೇ ಆಗುತ್ತದೆ. ಚೇತನ್ ಇದನ್ನೇ ಹೇಳಿದ್ದಾರೆ. ಅವರ ವಿರುದ್ಧ ಎಫ್ ಐ ಆರ್ ದಾಖಲಿಸುವ ಬದಲು, ಮಾನವೀಯ ನೆಲೆಯಲ್ಲಿ ನಿಂತು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತಲ್ಲವೇ ? ವ್ಯಕ್ತಿಗತ ನೆಲೆಯ ವೈಚಾರಿಕತೆಯನ್ನೂ ಸಾಮುದಾಯಿಕ ನೆಲೆಯಲ್ಲಿ ಕಳೆದುಕೊಳ್ಳುವಂತಹ ವಿಕೃತ ಪರಿಸ್ಥಿತಿಯನ್ನು ಇತ್ತೀಚೆಗೆ ಪೋಷಿಸಲಾಗುತ್ತಿದೆ. ಇದು ಸೌಹಾರ್ದಯುತ ಸಮಾಜಕ್ಕೆ ಅಪಾಯಕಾರಿಯಾಗುತ್ತದೆ. ಮೇಲ್ನೋಟಕ್ಕೆ ಒಪ್ಪಿಕೊಂಡರೂ ಅಪ್ಪಿಕೊಳ್ಳುವ ಮನಸ್ಥಿತಿ ಇಲ್ಲದಿದ್ದರೆ ವೈಚಾರಿಕತೆಯೂ ಸೊರಗಿಹೋಗುತ್ತದೆ. ಆಧುನಿಕ ಜೀವನಶೈಲಿಯಲ್ಲಿ ಈ ದ್ವಂದ್ವವನ್ನು ಸ್ಪಷ್ಟವಾಗಿ ಗುರುತಿಸಬಹುದು. ಇದರಿಂದ ಮುಕ್ತರಾಗುವ ನಿಟ್ಟಿನಲ್ಲಿ ಯೋಚಿಸುವ ತೆರೆದ ಮನಸುಗಳು ಹೇರಳವಾಗಿವೆ ಆದರೆ ಪ್ರಬಲವಾಗಿಲ್ಲ. ಜಾತಿ ದೌರ್ಜನ್ಯಗಳ ಬಗ್ಗೆ ಕಾಣುವ ಸಾರ್ವಜನಿಕ ಮೌನವೇ ಇದಕ್ಕೆ ಸಾಕ್ಷಿ.

ಚೇತನ್ ಅವರ ಮಾತುಗಳಲ್ಲಿ ಸೌಹಾರ್ದತೆಯ ಸೂಕ್ಷ್ಮ ಸಂವೇದನೆಯೂ ಇರುವುದನ್ನು ಗಮನಿಸಿದ್ದರೆ ಬಹುಶಃ ಇದು ವಿವಾದ ಸೃಷ್ಟಿಸುತ್ತಿರಲಿಲ್ಲ. ಒಂದು ಸೌಹಾರ್ದಯುತ ಸಮ-ಸಮಾಜದ ನಿರ್ಮಾಣದ ದೃಷ್ಟಿಯಿಂದ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಗಳನ್ನು ತೊಡೆದುಹಾಕುವ ಅನಿವಾರ್ಯತೆ ನಮ್ಮೆದುರಿದೆ. ಚಾಲ್ತಿಯಲ್ಲಿರುವ ಸಾಂಸ್ಕೃತಿಕ ಧೋರಣೆ ಮತ್ತು ಸಾಂಪ್ರದಾಯಿಕ ಆಚರಣೆಗಳು ಈ ನಿಟ್ಟಿನಲ್ಲಿ ಅಡ್ಡಿಯಾಗುತ್ತಿದ್ದರೆ ಅದನ್ನು ತೊಡೆದುಹಾಕುವ ಜವಾಬ್ದಾರಿಯೂ ನಮ್ಮ ಮೇಲಿದೆ. ಸಂಪ್ರದಾಯ, ಪರಂಪರೆ, ಕಲ್ಪಿತ ಶ್ರೇಷ್ಠತೆ ಮತ್ತು ಮತಧಾರ್ಮಿಕ ಅಸ್ಮಿತೆಗಳ ಸಂಕೋಲೆಗಳನ್ನು ಕಳಚಿಕೊಳ್ಳದೆ ಹೋದರೆ ಇದು ಸಾಧ್ಯವಾಗುವುದೂ ಇಲ್ಲ. ಈ ಸಂಕೋಲೆಗಳನ್ನು ಯಥಾಸ್ಥಿತಿಯಲ್ಲಿರಿಸುವ  ಒಂದು ಅಮೂರ್ತ ಶಕ್ತಿಯನ್ನೇ ಡಾ ಅಂಬೇಡ್ಕರ್ ಬ್ರಾಹ್ಮಣ್ಯ ಅಥವಾ ಬ್ರಾಹ್ಮಣಶಾಹಿ ಎಂದು ಗುರುತಿಸುತ್ತಾರೆ. ಈ ಶಕ್ತಿಯ ವಿರುದ್ಧ, ತುಳಿತಕ್ಕೊಳಗಾಗುವ, ಶೋಷಿತ ಜನಸಮುದಾಯಗಳು ದನಿ ಎತ್ತುತ್ತಲೇ ಇವೆ, ಹೋರಾಡುತ್ತಲೇ ಇವೆ. ಇಂದಿಗೂ ತನ್ನ ಹುಟ್ಟಿನ ಅಸ್ಮಿತೆಯಿಂದಲೇ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ದೌರ್ಜನ್ಯಕ್ಕೊಳಗಾಗುವ ಜನಸಮುದಾಯಗಳು ನಮ್ಮ ನಡುವೆ ಇದೆ ಎನ್ನುವುದೇ  ನಮ್ಮ ಆಲೋಚನೆಯ ದಿಕ್ಕನ್ನು ಬದಲಿಸಬೇಕಿದೆ. ಅಲ್ಲವೇ ?

ಈ ಜಾತಿ ತಾರತಮ್ಯಗಳನ್ನು, ದೌರ್ಜನ್ಯಗಳನ್ನು ಮತಭೇದವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಜ್ಞಾವಂತ ಸಮಾಜ ಯೋಚಿಸಬೇಕಲ್ಲವೇ ? ದಲಿತರ ಮೇಲೆ ದೌರ್ಜನ್ಯ ಎಸಗುತ್ತಿರುವ ಯಾವುದೇ ಸಮುದಾಯ ಜಾತಿ ಶ್ರೇಷ್ಠತೆಯ ಅಹಮಿಕೆಯಿಂದಲೇ  ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲ ಯತ್ನಿಸುತ್ತದೆ. ಶೋಷಿತರನ್ನು, ದುರ್ಬಲರನ್ನು, ಅಸಹಾಯಕರನ್ನು ನಿಯಂತ್ರಣದಲ್ಲಿರಿಸಲು ಈ ಸಮುದಾಯಗಳಿಗೆ ಸಾಮಾಜಿಕ ಸ್ಥಾನಮಾನಗಳು ಭೌತಿಕವಾಗಿ ನೆರವಾದರೆ, ಬ್ರಾಹ್ಮಣ್ಯ ಎನ್ನಲಾಗುವ ಸಾಂಪ್ರದಾಯಿಕ ಮನಸ್ಥಿತಿ ಒಂದು ಬೌದ್ಧಿಕ ಅಸ್ತ್ರವಾಗುತ್ತದೆ. ಹಾಗಾಗಿಯೇ ಇಂದು ದಲಿತರ ಮೇಲಿನ ದೌರ್ಜನ್ಯಗಳು ಎಲ್ಲ ಸ್ತರಗಳಲ್ಲೂ ನಡೆಯುತ್ತಿದೆ. ಇದು ಭಾರತವನ್ನು ಕಾಡುತ್ತಿರುವ ಒಂದು ಸಾಮಾಜಿಕ ವ್ಯಾಧಿ. ಸಾಮುದಾಯಿಕ ನೆಲೆಯಲ್ಲಿ ಮಾತ್ರವೇ ಇದನ್ನು ನಿಷ್ಕರ್ಷೆಗಳಪಡಿಸುವುದರಿಂದ ನಾವು,  ಶೋಷಣೆಯ ಮೂಲದಿಂದ ವಿಮುಖರಾಗುತ್ತೇವೆ. ಶ್ರೇಷ್ಠತೆ ಎನ್ನುವುದು ಒಂದು ವ್ಯಸನ, ಶೋಷಕ ಮನಸ್ಥಿತಿ ನಮ್ಮನ್ನು ಕಾಡುತ್ತಿರುವ ವ್ಯಾಧಿ. ಇದರ ಮೂಲ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲೇ ಅಡಗಿದೆ. ಜನರ ಮನಸ್ಥಿತಿಯಲ್ಲಿ ಅಡಗಿದೆ, ಮನೋಭಾವದಲ್ಲಿ ಅಡಕವಾಗಿದೆ ಮತ್ತು ಸಾರ್ವಜನಿಕ ಧೋರಣೆಯಲ್ಲಿ ಅಡಗಿದೆ.

ನಾವು ಎಫ್ ಐ ಆರ್ ದಾಖಲಿಸುವುದೇ ಆದರೆ ಈ ಮನೋಭಾವದ ವಿರುದ್ಧ ದಾಖಲಿಸಬೇಕಿದೆ. ಈ ಮನಸ್ಥಿತಿಯನ್ನು ರಾಜದ್ರೋಹದ ಕಾಯ್ದೆಯಡಿ ಬಂಧಿಸಬೇಕಿದೆ. ಈ ಧೋರಣೆಯ ಗಡೀಪಾರು ಮಾಡಬೇಕಿದೆ. ನಾವು 21ನೆಯ ಶತಮಾನದ ಮೂರನೆಯ ದಶಕದಲ್ಲಿದ್ದೇವೆ ಎನ್ನುವ ಪ್ರಜ್ಞೆಯೂ ನಮ್ಮಲ್ಲಿರಬೇಕಲ್ಲವೇ ? ಭಾರತ ಬದಲಾಗಬೇಕಿರುವುದು ಇಲ್ಲಿ.

Previous Post

ಕರೋನ ಎಫೆಕ್ಟ್: ಕಳೆದ ವರ್ಷಕ್ಕಿಂತ 2021ರ ಏಪ್ರಿಲ್-ಮೇ ತಿಂಗಳಲ್ಲಿ ಸಂಭವಿಸಿದ ಸಾವುಗಳು 4 ಪಟ್ಟು ಹೆಚ್ಚು

Next Post

ಮಧ್ಯಪ್ರದೇಶ: 2021ರ ಏಪ್ರಿಲ್-ಮೇ ತಿಂಗಳಲ್ಲಿ ಸಾಮಾನ್ಯ ದಿನಗಳಿಗಿಂತ ಮೂರು ಪಟ್ಟು ಹೆಚ್ಚಾದ ಕೋವಿಡ್ ಸಾವಿನ ಪ್ರಮಾಣ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಮಧ್ಯಪ್ರದೇಶ: 2021ರ ಏಪ್ರಿಲ್-ಮೇ ತಿಂಗಳಲ್ಲಿ ಸಾಮಾನ್ಯ ದಿನಗಳಿಗಿಂತ ಮೂರು ಪಟ್ಟು ಹೆಚ್ಚಾದ ಕೋವಿಡ್ ಸಾವಿನ ಪ್ರಮಾಣ

ಮಧ್ಯಪ್ರದೇಶ: 2021ರ ಏಪ್ರಿಲ್-ಮೇ ತಿಂಗಳಲ್ಲಿ ಸಾಮಾನ್ಯ ದಿನಗಳಿಗಿಂತ ಮೂರು ಪಟ್ಟು ಹೆಚ್ಚಾದ ಕೋವಿಡ್ ಸಾವಿನ ಪ್ರಮಾಣ

Please login to join discussion

Recent News

Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada