ಸಿಡಿ ಕೇಸ್ ವಿಚಾರ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ತೇಜೋವಧೆ ಮಾಡುವ ಉದ್ದೇಶದಿಂದ ಮಾಡಲು ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ, ತಲೆಮರೆಸಿಕೊಂಡ ಪ್ರಮುಖ ಆರೋಪಿಗಳಾದ ನರೇಶ್ ಗೌಡ ಬಿ ಎಂ ಮತ್ತು ಆರ್ ಶ್ರವಣ್ ಕುಮಾರ್ ಅವರ ನಿರೀಕ್ಷಣಾ ಜಾಮೀನು ಮನವಿಯ ತೀರ್ಪನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಇಂದು ವಿಚಾರಣೆ ನಡೆಸಿದೆ.

ನ್ಯಾಯಾಧೀಶರಾದ ಲಕ್ಷ್ಮಿನಾರಾಯಣ್ ಭಟ್ ನೇತೃತ್ವದ ಪೀಠವು ವಿಚಾರಣೆ ಆರಂಭಿಸುತ್ತಿದ್ದಂತೆ ಎಸ್ಐಟಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ವಿಚಾರಣೆ ವೇಳೆ ನ್ಯಾಯಾಲಯವು, “ನೀವು (ರಮೇಶ್ ಜಾರಕಿಹೊಳಿ) ಯಾರಿಗೆ, ಯಾವಾಗ, ಎಷ್ಟು ಹಣ ಪಾವತಿಸಿದ್ದೀರಿ? ದೂರು ದಾಖಲಿಸುವಾಗ ಏಕೆ ಉಲ್ಲೇಖಿಸಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನೀವು ಎಸ್ಐಟಿ ಮುಂದೆ ನೀಡಿರುವ ಸ್ವಯಂಪ್ರೇರಿತ ಹೇಳಿಕೆಯನ್ನು ಏಕೆ ಲಗತ್ತಿಸಿಲ್ಲ? ಸಿಆರ್ಪಿಸಿ ಸೆಕ್ಷನ್ 164 ಅಡಿ ಸಂತ್ರಸ್ತೆ ದಾಖಲಿಸಿರುವ ಹೇಳಿಕೆಯನ್ನು ಏಕೆ ಸಲ್ಲಿಸಿಲ್ಲ” ಎಂದು ಪ್ರಶ್ನಿಸಿದೆ.
ಜಾಮೀನು ಕೋರಿರುವ ಅರ್ಜಿದಾರರ ಪರವಾದ ಮಂಡಿಸಿದ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಅವರು ನಮ್ಮ ಕಕ್ಷಿದಾರರ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ಅತ್ಯಾಚಾರ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸಲು ನಮ್ಮ ಕಕ್ಷಿದಾರರನ್ನು ಗುರಿಯಾಗಿಸಿ, ಕಿರುಕುಳ ನೀಡಲಾಗುತ್ತಿದೆ ಎಂದಿದ್ದಾರೆ. ಎರಡೂ ಕಡೆ ವಾದ-ವಿವಾದ ಆಲಿಸಿದ ನ್ಯಾಯಾಲಯ ಜೂನ್ 8ಕ್ಕೆ ವಿಚಾರಣೆ ಮುಂದೂಡಿದೆ.










