ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ CBSE 12ನೇ ತರಗತಿ ಪರೀಕ್ಷೆಯನ್ನು ರದ್ದು ಗೊಳಿಸಿದ ಬೆನ್ನಲ್ಲೇ CISCE ಕೂಡಾ 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ CBSE ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು.
12 ನೇ ತರಗತಿಯ ವಿದ್ಯಾರ್ಥಿಗಳನ್ನು ಈಗ ಪರ್ಯಾಯ ಯೋಜನೆಯ ಮೂಲಕ ಮೌಲ್ಯಮಾಪನ ಮಾಡಲಾಗುವುದು ಎಂದು CBSE ಮುಖ್ಯ ಕಾರ್ಯನಿರ್ವಾಹಕ ಗೆರ್ರಿ ಅರಾಥೂನ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ಸೋಂಕಿನ ಪರಿಸ್ಥಿತಿ ಹಿನ್ನಲೆ 12ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು ಮಾಡಲಾಗಿದೆ. ಈ ಸಂಬಂಧ ವ್ಯಾಪಕ ಸಮಾಲೋಚನೆ ನಡೆಸಿದ್ದು, ಅಂತಿಮವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ, ಯುವ ಜನತೆಯ ಆರೋಗ್ಯ ಮತ್ತು ಭವಿಷ್ಯ ಕಾಪಾಡುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪರೀಕ್ಷೆ ರದ್ದಾಗಿರುವ ಹಿನ್ನಲೆ ಬಹುತೇಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮೌಲ್ಯ ಮಾಪನ ಹೇಗೆ ನಡೆಯಲಿದೆ ಎಂಬ ಗೊಂದಲಗಳು ಹುಟ್ಟಿದ್ದು, ಈ ಸಂಬಂಧ ಮಾಹಿತಿ ನೀಡಿರುವ ಅಧಿಕಾರಿಗಳು, ಈ ವರ್ಷ 12ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವುದಿಲ್ಲ. ಇದೇ ವೇಳೆ ಸಿಬಿಎಸ್ಸಿ ಈ ವಸ್ತು ನಿಷ್ಟ ಮಾನದಂಡದ ಪ್ರಕಾರ ವಿದ್ಯಾರ್ಥಿಗಳ ಫಲಿತಾಂಶವನ್ನು ಕ್ರೋಢಿಕರಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ವಿದ್ಯಾರ್ಥಿಗಳ ಮೂರು ವರ್ಷದ ಸಾಧನೆ ಸಂಗ್ರಹಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ 9, 10, 11ನೇ ತರಗತಿಯ ಬೋರ್ಡ್ ಪರೀಕ್ಷೆ ವೇಳೆ ಪಡೆದ ಅಂಕಗಳ ಸಂಬಂಧಿಸಿದಂತೆ ಈಗಾಗಲೇ ವಿವರಗಳನ್ನು ನೀಡುವಂತೆ ಶಾಲೆಗಳಿಗೆ ಕೋರಲಾಗಿದೆ. ಈ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ತೋರಿದ ಸಾಧನೆ ಆಧಾರದ ಮೇಲೆ 12ನೇ ತರಗತಿಯ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ ಎನ್ನಲಾಗಿದೆ. ಈ ಕುರಿತು ಇನ್ನು ಅಂತಿಮ ತೀರ್ಮಾನವಾಗಿಲ್ಲ.