ಕರೋನಾ ಚಿಕಿತ್ಸೆ ಮತ್ತು ಲಸಿಕೆಯ ವಿಷಯದಲ್ಲಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮತ್ತು ಯೋಗ ಗುರು ಬಾಬಾ ರಾಮದೇವ್ ನಡುವೆ ನಡೆಯುತ್ತಿರುವ ವಾಗ್ವಾದ ಮತ್ತೊಂದು ಮಜಲಿಗೆ ಹೊರಳಿದ್ದು, ಅಲೋಪತಿ ಚಿಕಿತ್ಸೆ ವಿರುದ್ಧದ ರಾಮದೇವ್ ಹೇಳಿಕೆಗೆ ಸಂಬಂಧಿಸಿದಂತೆ ಒಂದು ಸಾವಿರ ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿರುವ ಐಎಂಎ, ಪ್ರಧಾನಿ ಮೋದಿಗೆ ಪತ್ರ ಬರೆದು ಬಾಬಾ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆಯೂ ಒತ್ತಾಯಿಸಿದೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿರುವ ಬಾಬಾ ರಾಮದೇವ್ ಅವರು, ಅಲೋಪತಿ ವೈದ್ಯಕೀಯ ಮತ್ತು ವೈದ್ಯರ ವಿರುದ್ಧ ಆಡಿರುವ ಮಾತುಗಳ ವೀಡಿಯೋ ಹಿನ್ನೆಲೆಯಲ್ಲಿ ಐಎಂಎ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಯ ಸ್ಥಾಪಕ ಬಾಬಾ ರಾಮದೇವ್ ನಡುವೆ ಭಾರೀ ವಾಗ್ವಾದ ಗರಿಗೆದರಿದೆ.
ಕರೋನಾ ಚಿಕಿತ್ಸೆಗೆ ಅಲೋಪತಿ ಚಿಕಿತ್ಸೆ ಮತ್ತು ಔಷಧಿ ಬಳಕೆಯಿಂದಾಗಿ ದೇಶದಲ್ಲಿ ಲಕ್ಷಾಂತರ ಮಂದಿ ಸಾವು ಕಂಡರು ಮತ್ತು ಕರೋನಾ ಲಕಸಿಕೆಯ ಎರಡೂ ಡೋಸ್ ಹಾಕಿಸಿಕೊಂಡ ಬಳಿಕವೂ ದೇಶದಲ್ಲಿ 10 ಸಾವಿರ ಮಂದಿ ವೈದ್ಯರು ಸಾವು ಕಂಡಿದ್ದಾರೆ ಎಂದು ಬಾಬ್ ರಾಮ್ ದೇವ್ ಹೇಳಿರುವುದು ವೈರಲ್ ಆಗಿತ್ತು. ಆ ಹಿನ್ನೆಲೆಯಲ್ಲಿ ಐಎಂಎ ಬಾಬಾ ರಾಮ್ ದೇವ್ ಹೇಳಿಕೆಗಳು ಸರ್ಕಾರ ಮತ್ತು ಆರೋಗ್ಯ ಸಚಿವಾಲಯಗಳೇ ನಿಗದಿ ಮಾಡಿರುವ ಚಿಕಿತ್ಸಾ ಪ್ರೋಟೋಕಾಲ್ ವಿರುದ್ಧ ಇವೆ ಮತ್ತು ದೇಶದ ಜನರನ್ನು ಅಲೋಪತಿ ವೈದ್ಯಕೀಯದ ವಿಷಯದಲ್ಲಿ ಹಾದಿತಪ್ಪಿಸುವ ಉದ್ದೇಶ ಹೊಂದಿವೆ. ಆ ಹಿನ್ನೆಲೆಯಲ್ಲಿ ಅವರು ತಮ್ಮ ಹೇಳಿಕೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಮತ್ತು ಆ ತಮ್ಮ ಹೇಳಿಕೆಗಳು ಸುಳ್ಳು ಎಂದು ಸಾರ್ವಜನಿಕರ ಮುಂದೆ ತಪ್ಪೊಪ್ಪಿಕೊಳ್ಳಬೇಕು. ವಾಸ್ತವಾಂಶಗಳಿಗೆ ವಿರುದ್ಧವಾದ ವೀಡಿಯೋಗಳನ್ನು ಡಿಲೀಟ್ ಮಾಡಿ, ಸತ್ಯವನ್ನು ಜನರಿಗೆ ತಿಳಿಸಬೇಕು. ಇಲ್ಲವಾದಲ್ಲಿ ಮುಂದಿನ 15 ದಿನಗಳಲ್ಲಿ ಅವರ ಮೇಲೆ ಒಂದು ಸಾವಿರ ಕೋಟಿ ಮಾನನಷ್ಟ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಐಎಂಎ ಬುಧವಾರ ಆರು ಪುಟಗಳ ನೋಟಿಸ್ ನೀಡಿದೆ.
ಈ ನಡುವೆ ಲಸಿಕೆಗಳ ಕುರಿತ ಬಾಬಾ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಐಎಂಎ, ದೇಶದ ಆರೋಗ್ಯ ಇಲಾಖೆ ನಿಗದಿ ಮಾಡಿರುವ ಚಿಕಿತ್ಸಾ ಪ್ರೋಟೋಕಾಲ್ ಮತ್ತು ಜನರ ಜೀವ ಉಳಿಸುವ ಲಸಿಕೆಗಳ ವಿಷಯದಲ್ಲಿ ಸುಳ್ಳುಗಳನ್ನು ಹೇಳಿ, ಜನ ಚಿಕಿತ್ಸೆ ಮತ್ತು ಲಸಿಕೆ ಪಡೆಯದಂತೆ ರಾಮ್ ದೇವ್ ಸಂಚು ನಡೆಸಿದ್ದಾರೆ. ಅದರ ಹಿಂದೆ ದೇಶದ ಹಿತ ಬಲಿಕೊಟ್ಟು, ತಮ್ಮ ಉದ್ಯಮ ಹಿತ ಕಾಪಾಡುವ ಸಂಚು ಇದೆ. ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಕೂಡಲೇ ಕ್ರಮ ಜರುಗಿಸಬೇಕು ಮತ್ತು ಮಾರುಕಟ್ಟೆಯಲ್ಲಿರುವ ಪತಂಜಲಿಯ ಕರೋನಿಲ್ ಔಷಧಿಯನ್ನು ವಾಪಸು ಪಡೆದು, ಆ ಕುರಿತ ಜಾಹೀರಾತುಗಳನ್ನೂ ತೆರವು ಮಾಡಬೇಕು ಎಂದು ಒತ್ತಾಯಿಸಿದೆ.
ಈ ನಡುವೆ, ಐಎಂಎ ವಿರುದ್ಧ ಸವಾಲು ಹಾಕಿದ್ದ ರಾಮ್ ದೇವ್, ಭಾನುವಾರ ಐಎಂಎಗೆ ಕ್ಯಾನ್ಸರ್, ಮಧುಮೇಹ, ಬಂಜೆತನ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ 25 ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಕೇಳಿ, ಅಲೋಪತಿ ವಿರುದ್ಧದ ತಮ್ಮ ವಾಗ್ವಾದವನ್ನು ಮುಂದುವರಿಸಿದ್ದರು. ಆ ಬಗ್ಗೆಯೂ ಪ್ರತಿಕ್ರಿಯಿಸಿರುವ ಐಎಂಎ, ಅಲೋಪತಿ ವೈದ್ಯಕೀಯದ ವಿರುದ್ಧ ಸಂಚಿನ ಭಾಗವಾಗಿ ತಮ್ಮ ಆಯುರ್ವೇದ ಉತ್ಪನ್ನಗಳ ಮಾರಾಟದ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದಿದೆ.