ಕಪ್ಪು ಶಿಲೀಂಧ್ರ, ಬ್ಲ್ಯಾಕ್ ಫಂಗಸ್ ಇಲ್ಲವೇ ಮ್ಯೂಕೋರ್ಮಿಕೋಸಿಸ್ !
ಸದ್ಯ ಕೊರೋನಾ ವೈರಸ್ ಎರಡನೆಯ ಅಲೆಯ ಹೊಡೆತಕ್ಕೇ ತಲೆಯತ್ತಲು ಹೆಣಗುತ್ತಿರುವ ಭಾರತೀಯರನ್ನು, ಸದ್ಯ ಕಾಡುತ್ತಿರುವ ಇನ್ನೊಂದು ಅತೀ ದೊಡ್ಡ ಗುಮ್ಮ ಅಂದರೆ ಅದು ಕಪ್ಪು ಶಿಲೀಂಧ್ರ.
ಪ್ರಾಣಾಂತಿಕ ಕೋವಿಡ್ ವೈರಸ್ ಜತೆಗೆ ಗುದ್ದಾಡಿ ಗುಣಮುಖರಾಗಿ ಬಂದವರನ್ನು ಧುತ್ತೆಂದು ಕಾಡಿಸಿ, ಪೀಡಿಸಿ ಮತ್ತೆ ಆಸ್ಪತ್ರೆಗೆ ಧಾವಿಸುವಂತೆ ಮಾಡುತ್ತಿರುವುದಲ್ಲದೆ, ಪ್ರಾಣಘಾತಕವಾಗಿಯೂ ಪರಿಣಮಿಸುತ್ತಿದೆ. ಸದ್ಯ ಜಗತ್ತಿನ ಯಾವುದೇ ದೇಶವನ್ನೂ ಈ ಪರಿಯಲ್ಲಿ ಪೀಡಿಸದ ಈ ಕಪ್ಪು ಶಿಲಿಂಧ್ರವೆಂಬ ‘ಪಿಶಾಚಿ’ ಭಾರತದ ಬೆನ್ನೇರಿದ್ದು ಹೇಗೆ? ಅಲ್ಲದೆ, ಮೊದಲ ಅಲೆಯಲ್ಲೂ ಕಾಡದ ಇದು ಎರಡನೇ ಅಲೆಯಲ್ಲಿ ಧುತ್ತೆಂದು ಪ್ರತ್ಯಕ್ಷವಾಗಿ ಕಾಡುತ್ತಿರುವುದಾದರೂ ಏಕೆ? ಈ ಶಿಲೀಂಧ್ರವು ರೋಗಿಯೊಳಗೆ ಸೇರುತ್ತಿರುವುದಾದರೂ ಹೇಗೆ?
‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ’ ಎಂಬಂತೆ ಕೋವಿಡ್ ಬಲೆಯಿಂದ ಬಿಡಿಸಿಕೊಂಡರೂ ಈ ಕಪ್ಪು ‘ಪಿಶಾಚಿ’ಯ ಜಾಲದಿಂದ ಬಿಡಿಸಿಕೊಳ್ಳಲಾರದೆ ಸಾವಿನ ಕದ ತಟ್ಟುವವರ ಸಂಖ್ಯೆ ಏರುತ್ತಿದೆ. ಅದರ ಮೂಲ ಯಾವುದೆಂದು ತಿಳಿಯದೆ ವೈದ್ಯಲೋಕವೂ ಕಂಗಾಲಾಗಿ ಕುಳಿತಿದೆ. ಈ ಸೋಂಕಿನ ಮೂಲಗಳ ಬಗ್ಗೆ ಒಬ್ಬೊಬ್ಬ ತಜ್ಞರು ಒಂದೊಂದು ರೀತಿಯ ವಿವರಣೆ ಕೊಡುತ್ತಿದ್ದಾರೆ. ಯಾವುದೂ ತಾರ್ಕಿಕವಾಗಿ ಸರಿಹೊಂದುತ್ತಿಲ್ಲ. ವೈದ್ಯ ವಿಜ್ಞಾನಿಗಳ ಕೆಲವೊಂದು ತರ್ಕಗಳಂತೂ ಗಾಬರಿ ಹುಟ್ಟಿಸುತ್ತಿದೆ. ಎರಡು ಮೂರು ವಾರಗಳಿಂದ ಈ ಸೋಂಕಿನ ಹೆಸರು ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಳಿಸುತ್ತಿದ್ದು, ಜನಸಾಮಾನ್ಯರು ಇದರ ಹೆಸರು ಕೇಳಿದರೆ ಬೆಚ್ಚಿಬೀಳುತ್ತಿದ್ದಾರೆ. ರಾಜ್ಯದಲ್ಲಿ ಕಳೆದ 7 ದಿನಗಳಲ್ಲಿ 7 ನೂರಕ್ಕೂ ಅಧಿಕ ಮಂದಿ ಈ ಶಿಲೀಂಧ್ರಕ್ಕೆ ತುತ್ತಾಗಿದ್ದಾರೆ ಎನ್ನುವುದು ಸಹಜವಾಗಿಯೇ ರಾಜ್ಯ ಸರಕಾರಕ್ಕೂ ಆತಂಕ ಉಂಟುಮಾಡುತ್ತಿದೆ. ಅದೇ ಕಾರಣಕ್ಕೆ ಇದರ ಮೂಲ ಪತ್ತೆ ಹಚ್ಚುವ ಕೆಲಸವನ್ನು ವೈದ್ಯ ವಿಜ್ಞಾನಿಗಳಿಗೆ ವಹಿಸಲು ನಿರ್ಧರಿಸಿದೆ.
ಬೆಂಗಳೂರಿನಲ್ಲಿ 90, ತುಮಕೂರಲ್ಲಿ 18, ಧಾರವಾಡದಲ್ಲಿ 16, ಬಳ್ಳಾರಿಯಲ್ಲಿ 10, ಬೆಳಗಾವಿಯಲ್ಲಿ 9, ದಕ್ಷಿಣ ಕನ್ನಡದಲ್ಲಿ 15, ಯಾದಗಿರಿ ಹಾಗೂ ಕೊಪ್ಪಳದಲ್ಲಿ ತಲಾ ಎರಡು, ಉತ್ತರ ಕನ್ನಡದಲ್ಲಿ 1, ಹೀಗೆ ನಾನಾ ಜಿಲ್ಲೆಗಳಲ್ಲಿ ಕಪ್ಪು ಶಿಲೀಂಧ್ರದ ಕಾಟ ಕಾಣಿಸಿಕೊಳ್ಳುತ್ತಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ. ಭಾನುವಾರ ಇದರಿಂದ ರಾಜ್ಯದಲ್ಲಿ ಐವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
ದೇಶದೆಲ್ಲೆಡೆ ಈಗಾಗಲೇ 7 ಸಾವಿರಕ್ಕೂ ಹೆಚ್ಚು ಸಾವು?
ಕೊರೋನಾ ಎರಡನೇ ಅಲೆಯ ನಡುವೆ ಕಾಣಿಸಿಕೊಂಡಿರುವ ಕಪ್ಪು ಶಿಲೀಂಧ್ರದ ಕಾಟಕ್ಕೆ ಈಗಾಗಲೇ ದೇಶದಲ್ಲೆಡೆ 7 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿರುವುದಾಗಿ ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಾಹಿತಿ ನೀಡಿದೆ.
“ಕಪ್ಪು ಶಿಲೀಂಧ್ರದಿಂದ ಈಗಾಗಲೇ ದೇಶದ 9 ಸಾವಿರಕ್ಕೂ ಅಧಿಕ ಮಂದಿ ದೃಷ್ಟಿದೋಷ, ಉಸಿರಾಟದಂಥ ಸಮಸ್ಯೆಗಳಿಂದ ಬಳಲುತ್ತಿದ್ದು, 7 ಸಾವಿರಕ್ಕೂ ಅಧಿಕ ಮಂದಿ ಇದರ ಸೋಂಕಿಗೆ ಸಾವನ್ನಪ್ಪಿರುವ ಸಾಧ್ಯತೆಗಳಿವೆ. ಸೋಂಕಿಗೆ ತುತ್ತಾಗಿರುವ ರಾಜ್ಯಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದ್ದು, ಗುಜರಾತಿನಲ್ಲಿ ಎರಡು ಸಾವಿರ, ಮಹಾರಾಷ್ಟ್ರದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಮಂದಿಯನ್ನು ಈ ಸೋಂಕು ಬಲಿ ಪಡೆದಿದೆ” ಎಂದು ಏಮ್ಸ್ ನ ಮುಖ್ಯಸ್ಥ ಡಾ.ರಣದೀಪ್‍ಗುಲೇರಿಯಾ ತಿಳಿಸಿದ್ದಾರೆ ಎನ್ನುವ ಸುದ್ದಿ ಸಂಸ್ಥೆಯೊಂದರ ವರದಿ ನಿಜವಾದರೆ, ಅದು ನಿಜಕ್ಕೂ ಕಳವಳಕಾರಿ ಬೆಳವಣಿಗೆಯಾಗಿದೆ.

ಏಕೆಂದರೆ ಈ ಕಪ್ಪು ಶಿಲೀಂಧ್ರ ಈಗ ದಿಲ್ಲಿ, ಕರ್ನಾಟಕ, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶದಲ್ಲೂ ನಿಧಾನವಾಗಿ ಬಾಲ ಬಿಚ್ಚುತ್ತಿದೆ.
ಪೀಡಿತ ರೋಗಿಗೆ ತ್ರಾಸ ನೀಡುವ ಸೋಂಕು:
ಈ ಸೋಂಕು ತಗುಲಿದರೆ ಹಲವು ಲಕ್ಷಣಗಳು ರೋಗಿಯ ಮೈಮೇಲೆ ಕಾಣಿಸಲಾರಂಭಿಸುತ್ತದೆ. ಮುಖದಲ್ಲಿ ಒಂದು ತೆರನಾದ ಊತ, ನೋವು ಉಂಟಾಗುತ್ತದೆ. ಮೂಗು ಅಥವಾ ಮುಖದ ಮೇಲ್ಭಾಗದ ಚರ್ಮದಲ್ಲಿ ಕಪ್ಪು ಕಲೆಗಳಾಗುತ್ತವೆ. ವಿಪರೀತ ತಲೆನೋವು, ದವಡೆ ಮತ್ತು ಮುಖಗಳಲ್ಲಿ ಊತ ಕಾಣಿಸುತ್ತದೆ. ಕಣ್ಣುಗಳಲ್ಲೂ ಊತ, ನೋವು, ದೃಷ್ಟಿ ಮಂದವಾಗುವಂಥ ಲಕ್ಷಣಗಳು ಗೋಚರಿಸಬಹುದು.
ಕಪ್ಪು ಶಿಲೀಂಧ್ರವು ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಇದರಿಂದಾಗಿ ಕೊರೋನಾದಿಂದ ಗುಣಮುಖರಾದವರಿಗೆ ಮೂಗು ಕಟ್ಟಿಕೊಳ್ಳುವುದು, ಮೂಗಿನಿಂದ ಕಪ್ಪು ಕಣಗಳು ಸುರಿದಂತಾಗುವುದು, ಮುಖದಲ್ಲಿ ಕಪ್ಪು ಕಲೆಗಳು, ಊತ ಕಾಣಿಸಿಕೊಳ್ಳಬಹುದು.
ಮಧುಮೇಹ ಸಮಸ್ಯೆ ಇದ್ದರೆ, ದೇಹದ ಸಕ್ಕರೆ ಪ್ರಮಾಣದಲ್ಲಿ ನಿಯಂತ್ರಣ ಇಲ್ಲದಿದ್ದರೆ ಈ ಸೋಂಕು ಕಾಡಿಸಬಲ್ಲದು. ಕ್ಯಾನ್ಸರ್ ಇಲ್ಲವೇ ಅಂಗಾಂಗ ಕಸಿ ಮಾಡಿರುವವರಿಗೂ ಅಪಾಯ ಒಡ್ಡಬಲ್ಲದು. ಕೊರೋನಾ ನಿಯಂತ್ರಿಸಲು ಲೆಕ್ಕಕ್ಕಿಂತ ಜಾಸ್ತಿ ಸ್ಟಿರಾಯ್ಡ್ ನೀಡಿದ್ದರೆ, ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿರುವವರನ್ನೂ ಕಾಡಬಲ್ಲದು.

ಈ ಸೋಂಕು ಬಂದರೆ ಆ ಭಾಗದಲ್ಲಿ ರಕ್ತ ಚಲನೆ ಸ್ತಗಿತಗೊಳಿಸುತ್ತದೆ. ಸಹಜವಾಗಿಯೇ ಈ ಭಾಗದಲ್ಲಿರುವ ಜೀವಕೋಶಗಳು ನಿಷ್ಕ್ರಿಯಗೊಳ್ಳುತ್ತವೆ. ಆಂಟಿಫಂಗಲ್ ಔಷಧ ನೀಡಿ ಸೋಂಕು ನಿಯಂತ್ರಿಸಲು ವೈದ್ಯರು ಪ್ರಯತ್ನಿಸುತ್ತಾರೆ. ಅದು ಸಾಧ್ಯವಾಗದಿದ್ದಾಗ ಶಸ್ತ್ರಚಿಕಿತ್ಸೆ ನಡೆಸಿ ರೋಗ ತಗುಲಿದ ಭಾಗವನ್ನು ಬೇರ್ಪಡಿಸಲಾಗುತ್ತದೆ. ಹಾಗಂತ, ಈ ಬ್ಲ್ಯಾಕ್‍ಫಂಗಸ್ ಗೆ ಹೆದರಿ ಕುಳಿತುಕೊಳ್ಳಬೇಕಿಲ್ಲ. ವೈದ್ಯ ಲೋಕದಲ್ಲಿ ಇದಕ್ಕೆ ಚಿಕಿತ್ಸೆ ಇದೆ. ವೈದ್ಯರ ಬಳಿ ಸಕಾಲದಲ್ಲಿ ಸಲಹೆ ಪಡೆದರೆ ಸಂಭವನೀಯ ಅಪಾಯವನ್ನು ತಗ್ಗಿಸಬಹುದು.
ಸೋಂಕು ಹೇಗೆ ಹರಡುತ್ತಿದೆ?
ಕಪ್ಪು ಶಿಲೀಂಧ್ರಗಳ ಹುಟ್ಟಿನ ಬಗ್ಗೆ ಹಲವು ವೈದ್ಯ ವಿಜ್ಞಾನಿಗಳು ಬೇರೆ ಬೇರೆ ವಿವರಣೆಗಳನ್ನು ನೀಡುತ್ತಿದ್ದಾರೆ. ಇದೊಂದು ಸೆಕೆಂಡರಿ ಸೋಂಕು ಆಗಿದ್ದು, ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ ಕಾಣಿಸಿಕೊಳ್ಳುತ್ತಿದೆ. ಒಂದೂವರೆ ತಿಂಗಳಿಗೂ ಹೆಚ್ಚುಕಾಲ ಚಿಕಿತ್ಸೆಗೆ ಒಳಗಾದವರು, ಮಿತಿ ಮೀರಿದ ಇಲ್ಲವೇ ಅವ್ಯವಸ್ಥಿತವಾಗಿ ಸ್ಟಿರಾಯ್ಡ್ ಬಳಕೆ ಮಾಡಿದ ದುಷ್ಪರಿಣಾಮದ ರೂಪದಲ್ಲಿ ಇದು ಜನ್ಮತಳೆಯುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ವೈದ್ಯಕೀಯ ಆಮ್ಲಜನಕದ ಸಾಕಷ್ಟು ದಾಸ್ತಾನು ಇಲ್ಲದಿರುವುದರಿಂದ ಕೈಗಾರಿಕಾ ಆಮ್ಲಜನಕದ ವ್ಯಾಪಕ ಬಳಕೆ ಮಾಡಿ ರೋಗಿಗಳ ಪ್ರಾಣ ಕಾಪಾಡುವ ತುರ್ತಿನಲ್ಲಿ ಸಾಕಷ್ಟು ಯಡವಟ್ಟಾಗಿರುವಂತಿದೆ. ಕೈಗಾರಿಕಾ ಆಮ್ಲಜನಕವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುತ್ತಿರುವುದರಿಂದ ವೈದ್ಯಕೀಯ ಆಮ್ಲಜನಕಕ್ಕೆ ಕೈಗಾರಿಕಾ ಆಮ್ಲಜನಕದ ಗುಣಮಟ್ಟ ಸರಿಸಮವಾಗಿದೆ ಎಂದು ಪ್ರಮಾಣಿಸಲಾಗದ ಸ್ಥಿತಿಯಲ್ಲಿ ಸದ್ಯ ವೈದ್ಯಲೋಕವಿದೆ. ಹೀಗಾಗಿ ಸೋಂಕಿತರಿಗೆ ಪೂರೈಸಲಾಗುವ ಆಮ್ಲಜನಕದೊಂದಿಗೆ ಈ ಶಿಲೀಂಧ್ರವು ರೋಗಿಯ ದೇಹ ಪ್ರವೇಶಿಸುತ್ತಿರಬಹುದು ಎಂದು ಇನ್ನು ಕೆಲವು ತಜ್ಞರು ಸಂಶಯಿಸುತ್ತಿದ್ದಾರೆ.
ಆಸ್ಪತ್ರೆಗಳ ಐಸಿಯುಗಳಲ್ಲಿ ಸದ್ಯದ ತುರ್ತು ಪರಿಸ್ಥಿತಿಯಲ್ಲಿ ಕಳಪೆ ಗುಣಮಟ್ಟದ ಆಮ್ಲಜನಕದ ಸಿಲಿಂಡರ್ ಗಳು ಅಥವಾ ಪೂರೈಕೆ ಮಾಡುವ ಪೈಪುಗಳ ಕಳಪೆ ಗುಣಮಟ್ಟವೂ ಕೂಡ ರೋಗಿಗಳ ಒಡಲೊಳಗೆ ಶಿಲೀಂಧ್ರ ಪ್ರವೇಶಿಸಲು ನೆರವಾಗುತ್ತಿರುವ ಸಾಧ್ಯತೆಗಳನ್ನೂ ಕೆಲವು ವೈದ್ಯರು ನೀಡುತ್ತಿದ್ದಾರೆ.
ಅಶುದ್ಧ ‘ಡಿಸ್ಟಿಲರಿ’ ನೀರು ಮಾರಕವಾಗುತ್ತಿದೆಯೇ?
ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕೊರೋನಾ ಪೀಡಿತ ರೋಗಿಗೆ ಆಮ್ಲಜನಕ ನೀಡಿ ಪುನರ್ಜನ್ಮ ನೀಡುವ ವೈದ್ಯರ ಪ್ರಯತ್ನಗಳೇ ಮಾರಕವಾಗುತ್ತಿದೆಯೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ. ಕೈಗಾರಿಕಾ ಆಮ್ಲಜನಕವನ್ನೂ ತುರ್ತು ಚಿಕಿತ್ಸೆಗೆ ರೋಗಿಗಳ ಬಳಸುತ್ತಿದ್ದು, ಅವು ಕಲುಷಿತವಾಗಿದ್ದರೆ ಕಪ್ಪು ಶಿಲೀಂಧ್ರಗಳ ಪ್ರವೇಶಕ್ಕೆ ರಹದಾರಿ ತೆರೆಯಬಹುದು ಎನ್ನುವ ಸಂಶಯಗಳೂ ವೈದ್ಯರನ್ನು ಕಾಡಲಾರಂಭಿಸಿದೆ.
ದೊಡ್ಡ ಮಟ್ಟದಲ್ಲಿ ಬೇಡಿಕೆಗಳು ಇರುವುದರಿಂದ ರೋಗಿಗಳಿಗೆ ಪೂರೈಕೆ ಪ್ರಕ್ರಿಯೆಗಳಲ್ಲೂ ಧಾವಂತಗಳಿರುತ್ತದೆ. ಅವಸರದ ತುರ್ತಿನಲ್ಲಿ ಆಮ್ಲಜನಕದ ಸಾಂಧ್ರಕಗಳಿಗೆ ಡಿಸ್ಟಿಲರಿ ನೀರು ಬಳಸುವ ಬದಲು ನಳ್ಳಿಯ ನೀರು ಬಳಸುತ್ತಿರುವ, ವೆಂಟಿಲೇಟರ್ ಗಳಲ್ಲಿ ಸಾಮಾನ್ಯ ನಳ್ಳಿ ನೀರು ಉಪಯೋಗಿಸುವ ಅನುಮಾನಗಳೂ ಕಾಡಲಾರಂಭಿಸಿದೆ. ಐಸಿಯುಗಳಲ್ಲಿನ ಸ್ವಚ್ಛತೆ ಕೊರತೆಯೂ ಕೂಡ ರೋಗಿಗಳ ದೇಹಕ್ಕೆ ಸೋಂಕು ಹರಡಲು ಕಾರಣವಾಗುತ್ತಿರುಬಹುದು ಎಂಬ ಅನುಮಾನಗಳು ಕೂಡ ವೈದ್ಯ ವಿಜ್ಞಾನಿಗಳಲ್ಲಿ ಮೂಡಲಾರಂಭಿಸಿದೆ.
ಕಪ್ಪು ಶಿಲೀಂಧ್ರದ ಮೂಲ ಪತ್ತೆಗೆ ಡಿಸಿಎಂ ನಿರ್ದೇಶನ:
ಕೋವಿಡ್ 19 ನಿಂದ ಗುಣಮುಖರಾದವರನ್ನು ಏಕಾಏಕಿ ಕಾಡಲಾರಂಭಿಸಿರುವ ಅಪಾಯಕಾರಿ ಕಪ್ಪು ಶಿಲೀಂಧ್ರದ ಮೂಲ ಪತ್ತೆ ಹಚ್ಚುವ ಹೊಣೆಯನ್ನು ರಾಜ್ಯದ ಖ್ಯಾತ ತಜ್ಞ ವೈದ್ಯರು ಹಾಗೂ ಸೂಕ್ಷ್ಮಾಣುಜೀವಿಗಳ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳಿಗೆ ರಾಜ್ಯ ಸರಕಾರವು ಹೊರಿಸಿದೆ.
ರಾಜ್ಯದ ಖ್ಯಾತ ತಜ್ಞ ವೈದ್ಯರ ಜತೆ ಕೋವಿಡ್ ಹಾಗೂ ಕಪ್ಪು ಶಿಲೀಂಧ್ರದ ಚಿಕಿತ್ಸೆಗಳ ಶಿಷ್ಟಾಚಾರ ಸಮಿತಿ ಸಭೆಯಲ್ಲಿ ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಅವರು ಭಾನುವಾರ ಸಭೆ ನಡೆಸಿ, ಸೋಮವಾರದಿಂದಲೇ ಈ ಸೋಂಕಿನ ಮೂಲ ಪತ್ತೆ ಹಚ್ಚುವಂತೆ ಮನವಿ ಮಾಡಿದ್ದಾರೆ. ಆದಷ್ಟು ಶೀಘ್ರ ಕಪ್ಪು ಶಿಲೀಂಧ್ರದ ಮೂಲ ಪತ್ತೆ ಹಚ್ಚಿ ವರದಿ ನೀಡಲು ಮತ್ತು ಈ ಸೋಂಕಿನ ಚಿಕಿತ್ಸೆಗೆ ಮಾರ್ಗಸೂಚಿ ರೂಪಿಸಲು ತಜ್ಞರಿಗೆ ಸೂಚಿಸಿದ್ದಾರೆ. ತಜ್ಞರ ತಂಡಗಳು ಸಮಗ್ರ ಅಧ್ಯಯನ ನಡೆಸಿ ಸದ್ಯದಲ್ಲೇ ವರದಿ ನೀಡಲಿದ್ದಾರೆ. ಸಮಸ್ಯೆ ಗಂಭೀರವಾಗಿರುವುದರಿಂದ ಉಪೇಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ.
ತಜ್ಞರ ವರದಿಗಾಗಿ ಸರಕಾರ ಮಾತ್ರವಲ್ಲ, ರಾಜ್ಯದ ವೈದ್ಯರೂ ರೋಗಿಗಳೂ ಜನಸಾಮಾನ್ಯರೂ ಕಾತರದಿಂದ ಕಾಯುತ್ತಿದ್ದಾರೆ. ಸಮಸ್ಯೆ ದೊಡ್ಡದಾಗುವ ಮೊದಲೇ ಪರಿಹಾರ ಸಿಕ್ಕರೆ ಸಾಕು ಎಂಬಂತಿದೆ ಈಗಿನ ಪರಿಸ್ಥಿತಿ.