ಚಿಕಿತ್ಸೆ ಪಡೆಯಲು ಆಂಧ್ರ ದತ್ತ ಮುಖ ಮಾಡಿದ ರಾಜ್ಯದ ಗಡಿ ಜಿಲ್ಲೆಗಳ ಬಡ ಜನರು

ರಾಜ್ಯದಲ್ಲಿ ಸರ್ಕಾರದ ಕೆಲವು ಅಸಮರ್ಪಕ  ಕ್ರಮಗಳಿಂದಾಗಿ ರಾಜ್ಯದಲ್ಲಿ ಕೋವಿಡ್ ಸಾಂಕ್ರಮಿಕವು ಈಗಲೂ ನಿಯಂತ್ರಣಕ್ಕೆ ಬಂದಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರ  ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ತಿಂಗಳು ಎಲ್ಲ ರುದ್ರಭೂಮಿಗಳೂ ಫುಲ್ ರಶ್ ಆಗಿದ್ದುದು ಖಾಯಿಲೆಯ ಭೀಕರತೆಯನ್ನು  ಹಾಗು ಸರ್ಕಾರದ ಬೇಜವಾಬ್ದಾರಿತನವನ್ನೂ ತೋರಿಸಿದೆ.

ಸರ್ಕಾರೀ ದಾಖಲಾತಿಗಳಿಗಿಂತಲೂ ಅಧಿಕ  ಶವಗಳು ಸಂಸ್ಕಾರಕ್ಕೆ ಬಂದಿವೆ. ಈ ಹೆಚ್ಚುವರಿ ಶವಗಳು ಮನೆಯಲ್ಲೇ ಮೃತಪಟ್ಟ ರೋಗಿಗಳದ್ದು ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಆದರೆ ಸಾವುಗಳ ನಿಖರ ಸಂಖ್ಯೆ ಈಗಲೂ ಸರಿಯಾಗಿ ಗೊತ್ತಿಲ್ಲ. ಸರ್ಕಾರ ನಿತ್ಯವೂ  ನೀಡಿದ ಅಂಕಿ ಅಂಶಗಳನ್ನೇ ಮಾಧ್ಯಮಗಳು ಪ್ರಕಟಿಸುತ್ತಿವೆ. ಈ ನಡುವೆ ಬೆಂಗಳೂರಿನ ಬಿಬಿಎಂಪಿ ಅಧೀನದಲ್ಲಿ ನಡೆಯುತಿದ್ದ ಬೆಡ್ ಬ್ಲಾಕ್ ದಂಧೆಯನ್ನು  ಸಂಸದರಾದ ತೇಜಸ್ವಿ ಸೂರ್ಯ ಅವರು ಬಯಲು ಮಾಡಿ  ಪ್ರಚಾರವನ್ನು ಪಡೆದುಕೊಂಡರು. ಆದರೆ ಇವರು ದಂಧೆಯನ್ನು ಇವರು ಬಯಲು ಮಾಡಿದ ನಂತರ ಬಿಬಿಎಂಪಿ ಹೆಲ್ಪ ಲೈನ್ ನಂಬರ್ ಗಳಿಗೆ ಸಂತ್ರಸ್ಥರು ಸಹಾಯಕ್ಕಾಗಿ ಕರೆ ಮಾಡಿದರೆ ಕರೆ ಸ್ವೀಕರಿಸುವವರೂ ದಿಕ್ಕಿರಲಿಲ್ಲ, ಅಷ್ಟೇ ಅಲ್ಲ ಇನ್ನು ಎಲ್ಲರಿಗೂ ಬೆಡ್ ಸಿಗುತ್ತದೆ ಎಂದು ಸೂರ್ಯ ಅವರು ಪ್ರಕಟಿಸಿದ್ದರೂ ಹಾಗೇನೂ ಆಗಲಿಲ್ಲ. ಐಸಿಯು ಬೆಡ್ ಗಳ ಕೊರತೆ ಯಥಾ ರೀತಿಯೇ ಮುಂದುವರೆದಿತ್ತು. ರಾಜ್ಯ ಸರ್ಕಾರವು ಏನೇ ಕ್ರಮಗಳನ್ನು ಕೈಗೊಂಡಿದ್ದರೂ ರೋಗಿಗಳನ್ನು  ಖಾಸಗೀ ಆಸ್ಪತ್ರೆಗಳು ಈಗಲೂ ಹಗಲು ದರೋಡೆ ಮಾಡುವುದು ನಿಂತಿಲ್ಲ. ಇದರ ಜತೆಗೇ ಆಂಬುಲೆನ್ಸ್ ಚಾಲಕರು ,ಸರ್ಕಾರೀ ಆಸ್ಪತ್ರೆಗಳ ಕೆಳ ವರ್ಗದ ಸಿಬ್ಬಂದಿಗಳೂ  ರೋಗಿಗಳ ಶೋಷಣೆಗೆ ಇಳಿದಿರುವುದಕ್ಕೂ ಸಾಕಷ್ಟು ಸಾಕ್ಷ್ಯ ಕಂಡು ಬಂದಿದೆ. ಅಷ್ಟೇಕೆ  ಜೀವ ಉಳಿಸುವ ಔಷಧ ಆಗಿರುವ ರೆಮಿಡಿಸಿವಿರ್ ನ ಕಾಳ ಸಂತೆ , ನಕಲಿ ಔಷಧ  ಮಾರಾಟದ ಹತ್ತಾರು ಪ್ರಕರಣಗಳು ರಾಜ್ಯದಲ್ಲಿ ವರದಿ ಆಗುತ್ತಲೇ ಇದೆ.

ಇನ್ನು  ಕೋವ್ಯಾಕ್ಸಿನ್ ಲಸಿಕೆಯ ವಿಷಯದಲ್ಲೂ ಸಾಕಷ್ಟು ಅವ್ಯವಹಾರ ಬಯಲಾಗಿದೆ. ಈ ನಡುವೆ ನಮ್ಮ ನೆರೆಯ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ಉತ್ತಮ ರೀತಿಯಲ್ಲಿ ಕೋವಿಡ್ ಸಾಂಕ್ರಮಿಕದ ನಿಯಂತ್ರಣ ಮಾಡಿ ಜನರಿಂದ ಸೈ ಎನಿಸಿಕೊಂಡಿದೆ. ಅಷ್ಟೇ ಅಲ್ಲ ಗಡಿ ಕನ್ನಡಿಗರಿಗೂ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ನಮ್ಮ ರಾಜ್ಯದಲ್ಲಿನ  ದುಬಾರಿ ಚಿಕಿತ್ಸಾ ವೆಚ್ಚ ಮತ್ತು ಐಸಿಯು ಬೆಡ್ ಲಭ್ಯವಾಗದ ಕಾರಣ ರಾಜ್ಯದ ಗಡಿ ಭಾಗದ ನಿವಾಸಿಗಳು ಕರೋನಾ ಚಿಕಿತ್ಸೆಗಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಸರ್ಕಾರಿ ಆಸ್ಪತ್ರೆ ಮೊರೆ ಹೋಗುತ್ತಿದ್ದಾರೆ. ಗಡಿಭಾಗದ ಕನ್ನಡಿಗರು ಕರೋನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಅನಂತಪುರ ಜಿಲ್ಲಾಧಿಕಾರಿ ಗಂಧಂ ಚಂದ್ರುಡು ಅವಕಾಶ ಕಲ್ಪಿಸಿದ್ದಾರೆ. ತಮ್ಮ ರೋಗಿಗಳಿಗೆ ಬೆಡ್, ಚಿಕಿತ್ಸೆ ಕೊಡಲಾಗದ ಪರಿಸ್ಥಿತಿಯಲ್ಲಿ ಅನಂತಪುರ ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರಾಜ್ಯದ ಗಡಿಭಾಗದ ಜನರಿಗೆ ಅವಕಾಶ ನೀಡಲಾಗಿದೆ. ಅನಂತಪುರ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳು ಮಾನವೀಯ ನಡೆಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಕರೋನಾ ಸೋಂಕಿನ ಎರಡನೇ ಅಲೆ ಪರಕಾಷ್ಠೆ ತಲುಪಿದೆ. ಪಾಸಿಟಿವ್ ಪ್ರಕರಣಗಳು ಇಳಿಕೆಯಾಗುತ್ತಿದ್ದರೂ, ಸಾವಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಕರೋನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳದೇ ಅನಾರೋಗ್ಯಕ್ಕೆ ತುತ್ತಾದ ಬಳಿಕ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.  ಇಷ್ಟಾಗಿಯೂ ಕರೋನಾ ಸೋಂಕಿಗೆ ಐಸಿಯು ಬೆಡ್ ಸಿಗುತ್ತಿಲ್ಲ.

ಇನ್ನು ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ಇದೀಗ ಕರೋನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಆದರೂ ಬಡವರಿಗೆ ಉಚಿತವಾಗಿ ಚಿಕಿತ್ಸೆ ಪಡೆಯುವಂಥ ಅವಕಾಶ ನೆರೆ ರಾಜ್ಯದಲ್ಲಿ ಕಲ್ಪಿಸಿದ್ದಾರೆ. ಹೀಗಾಗಿ ರಾಜ್ಯದ ಗಡಿ ಭಾಗದ ಜನರು ಇದೀಗ ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಆಸ್ಪತ್ರೆ ಮೊರೆ ಹೋಗುತ್ತಿದ್ದಾರೆ.

ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಮಧುಗಿರಿ, ಪಾವಗಡ, ಮಡಕಶಿರಾ, ಚಳ್ಳಕೆರೆ, ಶಿರಾದ ಜನರು ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಅನಂತಪುರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕರ್ನಾಟಕದಿಂದ ಹೋಗುತ್ತಿರುವ ಆಂಬ್ಯುಲೆನ್ಸ್ ಗಳನ್ನು ತಡೆಯದೇ, ಚಿಕಿತ್ಸೆಗೆ ಅವಕಾಶ ಕಲ್ಪಿಸುವ ಮೂಲಕ ಗಡಿ ಭಾಗದ ಆಂಧ್ರ ಪೊಲೀಸರು ತಮ್ಮ ಮಾನವೀಯತೆ ತೋರಿದ್ದಾರೆ. ಸೋಂಕಿನಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೆಂಗಳೂರಿನಲ್ಲಿ ಬೆಡ್ ಲಭ್ಯವಾಗಿಲ್ಲ. ಜೀವ ಉಳಿಸಿಕೊಳ್ಳುವ ಆಸೆಯಿಂದ ನೆರೆಯ ಅನಂತಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಕರ್ನಾಟಕದಿಂದ ಬರುತ್ತಿರುವ ರೋಗಿಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ನಿವೃತ್ತ ಬ್ಯಾಂಕ್ ಉದ್ಯೋಗಿ ಕೂಡ ಬೆಂಗಳೂರಿನಿಂದ ಬಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆರೋಗ್ಯವಾಗಿದ್ದಾರೆ ಎಂದು ಅನಂತಪುರ ಜಿಲ್ಲಾಧಿಕಾರಿ ಗಂಧಂ ಚಂದ್ರುಡು ತಿಳಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಅಧಿಕೃತವಾಗಿಯೇ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 25 ಸಾವಿರ ಮೀರಿದ್ದರೆ ಆಂಧ್ರ ಪ್ರದೇಶದಲ್ಲಿ ಸಾವಿನ ಸಂಖ್ಯೆ 10,126 ಆಗಿದೆ. ಆಂಧ್ರ ಮುಖ್ಯ ಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು  ಬೆಡ್ ಬೇಕೆಂದವರಿಗೆ  ಮೂರು ಘಂಟೆಗಳೊಳಗೆ ಬೆಡ್ ವ್ಯವಸ್ಥೆ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿನ ಸರ್ಕಾರೀ ಆಸ್ಪತ್ರೆಗಳ  ಮೂಲ ಸೌಕರ್ಯ , ಆರೋಗ್ಯ ಸೇವೆ ನಮ್ಮಲ್ಲಿಗಿಂತ ಉತ್ತಮವಾಗಿರುವುದೇ  ಜನರು ಅತ್ತ ಮುಖ ಮಾಡಲು ಕಾರಣವಾಗಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...