ತೌಕ್ತೆ ಚಂಡಮಾರುತದ ಅಬ್ಬರದಿಂದ ರಾಜ್ಯದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ರಾಜ್ಯದಲ್ಲಿ 4 ಜನರು ಪ್ರಾಣ ಕಳೆದುಕೊಂಡಿದ್ದಾರೆ, 73 ಗ್ರಾಮಗಳ ಮೇಲೆ ಈ ಚಂಡಮಾರುತದ ಪರಿಣಾಮ ಬೀರಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಭಾನುವಾರ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಒಟ್ಟು 6 ಜಿಲ್ಲೆ ಅದರಲ್ಲಿ ಮೂರು ಕರಾವಳಿ ಹಾಗು ಮೂರು ಮಲೆನಾಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಮಳೆಯ ಜೊತಗೆ ಗಾಳಿಯ ವೇಗವು ಗಂಟೆಗೆ 70 ರಿಂದ 80 ಕಿ.ಮೀ.ಗೆ ತಲುಪ್ಪಿದ್ದು, ಕರ್ನಾಟಕದ ಕರಾವಳಿಯುದ್ದಕ್ಕೂ ಗಾಳಿಯ ತೀವ್ರತೆ ಹೆಚ್ಚಾಗಿದ್ದು, ರಾಜ್ಯದಲ್ಲಿ 4 ಜನ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 73 ಹಳ್ಳಿಗಳು ಈ ಚಂಡಮಾರುತದ ಪ್ರಭಾವಕ್ಕೆ ಸಿಲುಕಿವೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇಂದು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಮೇ 15 ರ ಬೆಳಿಗ್ಗೆ 8:30 ರಿಂದ ಮೇ 16 ರ ಬೆಳಿಗ್ಗೆ 8.30 ರವರೆಗೆ ರಾಜ್ಯದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 64.5 ಮಿ.ಮೀ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ನಾಡಾ ನಿಲ್ದಾಣದಲ್ಲಿ 385 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಉಡುಪಿ ಜಿಲ್ಲೆಯ ಒಟ್ಟು 15 ಸ್ಥಳಗಳಲ್ಲಿ 200 ಮಿ.ಮೀ ಗಿಂತಲೂ ಹೆಚ್ಚಿನ ಮಳೆಯಾಗಿದೆ. ಮೇ 18 ರ ವರೆಗೆ ಚಂಡಮಾರುತದ ಅಬ್ಬರ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಕರಾವಳಿ ಪ್ರದೇಶದ ಚಂಡಮಾರುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಆ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗು ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಸಂಬಂಧ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.












