ಕರೋನಾ 2ನೇ ಅಲೆ ದೇಶದಲ್ಲಿ ಸಂದಿಗ್ಧ ಪರಿಸ್ಥಿತಿ ಉಂಟು ಮಾಡಿದ್ದು, ವೈದ್ಯಕೀಯ ಸೌಲಭ್ಯದ ಕೊರತೆಯಿಂದ ಸೋಂಕಿತರು ಸಾವನ್ನಪ್ಪುತ್ತಿರುವುದು ದುರಾದೃಷ್ಟಕರ. ಈ ನಿಟ್ಟಿನಲ್ಲಿ ಸರ್ಕಾರದ ಎಲ್ಲಾ ದುಬಾರಿ ಯೋಜನೆಯನ್ನು ಕೈಬಿಟ್ಟು, ಆ ಹಣವನ್ನು ವೈದ್ಯಕೀಯ ಕ್ಷೇತ್ರಕ್ಕೆ ಬಳಸಿ ಜನರ ಪ್ರಾಣ ಉಳಿಸಿ ಎಂಬುವುದು ದೇಶದ ರಾಜಕೀಯ ನಾಯಕರ, ಪ್ರಜ್ಞಾವಂತ ಸಮುದಾಯದ ಒತ್ತಾಯವಾಗಿದ್ದು, ಇದೀಗಾ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ನವ ಸಂಸತ್ ಭವನ ಮತ್ತು ಪ್ರಧಾನಿ ಬಂಗಲೆಯ ಕಾಮಗಾರಿಯನ್ನು ಮುಂದೂಡಿ ಅದರ ಹಣ ಆರೋಗ್ಯ ಸೇವಾ ವ್ಯವಸ್ಥೆಯ ಬಲವರ್ಧನೆಗೆ ಬಳಸಬೇಕೆಂದು ಆಗ್ರಹಿಸಿದೆ.
ದೆಹಲಿಯಲ್ಲಿ ಸುಮಾರು 13,450 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ “ನವ ಸಂಸತ್ ಭವನ” ಮತ್ತು ಪ್ರಧಾನಿ ಬಂಗಲೆಯ ಕಾಮಗಾರಿಯನ್ನು (Central Vista Project) ಸದ್ಯಕ್ಕೆ ಮುಂದೂಡಿ ಅದಕ್ಕೆ ಒದಗಿಸಿರುವ ಹಣವನ್ನು ದೇಶದಲ್ಲಿ ಸರ್ಕಾರಿ ಆರೋಗ್ಯ ಸೇವಾ ವ್ಯವಸ್ಥೆಯ ಬಲವರ್ಧನೆಗೆ ಬಳಸಬೇಕೆಂದು ಕೆಆರ್‌ಎಸ್ ಪಕ್ಷದ ರಾಜಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಸಲಹೆ ಕೊಟ್ಟಿದ್ದಾರೆ.
ಸದ್ಯಕ್ಕೆ ನಿರುಪಯುಕ್ತವಾಗಿರುವ ಬೆಳಗಾವಿಯ ಸುವರ್ಣಸೌಧವನ್ನು ರಾಜ್ಯ ಸರ್ಕಾರವು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕೆಂದು ಹೀಗಾಗಲೇ ಹಲವು ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರವನನ್ನು ಒತ್ತಾಯಿಸಿದ್ದು, ಇದಕ್ಕೆ ಕೆಆರ್‌ಎಸ್ ಪಕ್ಷ ಕೂಡ ಬೆಂಬಲ ನೀಡಿದೆ.
ತಕ್ಷಣಕ್ಕೆ ಅಗತ್ಯವಿಲ್ಲದ ಎಲ್ಲಾ ಕಟ್ಟಡ, ಸೇತುವೆ, ಕಾಂಕ್ರೀಟ್ ಯೋಜನೆಗಳನ್ನು ರಾಜ್ಯ ಸರ್ಕಾರ ಕೂಡಲೇ ನಿಲ್ಲಿಸಿ ಆ ಹಣವನ್ನು ರಾಜ್ಯದ ಆಸ್ಪತ್ರೆ ಮತ್ತು ವೈದ್ಯಕೀಯ ಸೌಲಭ್ಯಗಳ ಉನ್ನತೀಕರಣಕ್ಕೆ ಬಳಸಬೇಕು. ಹಾಗೆಯೇ ಸೆಂಟ್ರಲ್ ವಿಸ್ತಾ(Central Vista Project) ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹಠಕ್ಕೆ ಬೀಳದೆ ಮತ್ತು ಅದನ್ನು ತಮ್ಮ ದೊಡ್ಡಸ್ತಿಕೆಯ ತೋರ್ಪಡಿಕೆಗೆ ಬಳಸದೆ ದೇಶದ ಸದ್ಯದ ಪರಿಸ್ಥಿತಿಯನ್ನು ಮನಗಂಡು ಸಂವೇದನೆ ಮತ್ತು ಕಾಳಜಿಯಿಂದ ವರ್ತಿಸಬೇಕೆಂದು ತಿಳಿಸಿದೆ.
ದೇಶದ ಬಹುಜನರು ಸಂಕಷ್ಟದಲ್ಲಿ ಇರುವಾಗ ಆಡಳಿತಗಾರರ ವೈಭವೋಪೇತ ಜೀವನ ಮತ್ತು ಎದ್ದು ಕಾಣಿಸುವ ದುಂದು ವೆಚ್ಚವನ್ನು ಜನರು ಹಗುರವಾಗಿ ಪರಿಗಣಿಸುವುದಿಲ್ಲ. ಅಂತಹ ನಡವಳಿಕೆ ಕೇವಲ ಮೋದಿಯವರ ಮೇಲಷ್ಟೇ ಪರಿಣಾಮ ಬೀರದೆ ಇಡೀ ದೇಶದ ಎಲ್ಲಾ ರಾಜಕಾರಣಿಗಳ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ಜನರು ತಮ್ಮ ಪ್ರತಿನಿಧಿಗಳ ಮೇಲೆ ಸಾರಾಸಗಟಾಗಿ ವಿಶ್ವಾಸವನ್ನು ಕಳೆದುಕೊಂಡ ಸಂದರ್ಭದಲ್ಲಿ ದೇಶದ ಪ್ರಜಾಪ್ರಭುತ್ವವೂ ಅಪಾಯಕ್ಕೆ ಸಿಲುಕುತ್ತದೆ. ವ್ಯಕ್ತಿ ಮತ್ತು ಆತನ ವೈಯಕ್ತಿಕ ತೆವಲು ಮತ್ತು ಮಹತ್ವಾಕಾಂಕ್ಷೆಗಳಿಗಿಂತ ದೇಶ ದೊಡ್ಡದು ಈ ವೇಳೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಜನರ ಸಮಸ್ಯೆ ಬಗೆಹರಿಸುವತ್ತ ಚಿತ್ತಹರಿಸ ಬೇಕೆಂಬುವುದು ಕೆಆರ್‌ಎಸ್ ಪಕ್ಷದ ಸಲಹೆ.