ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಪ್ರಕರಣ ಮತ್ತು ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಆಕ್ಸಿಜನ್, ಬೆಡ್, ವೆಂಟಿಲೇಟರ್‌ಗಳ ಸಮಸ್ಯೆ ಉಂಟಾಗಿದ್ದು, ಈಗಾಗಲೇ ಅನೇಕ ರಾಷ್ಟ್ರಗಳು ಭಾರತಕ್ಕೆ ವೈದ್ಯಕೀಯ ನೆರವನ್ನು ನೀಡಿದ್ದು, ಬ್ರಿಟನ್ ಈಗಾಗಲೇ 200 ವೆಂಟಿಲೇಟರ್‌ಗಳನ್ನು ಭಾರತಕ್ಕೆ ಕಳುಹಿಸಿದೆ. ಇದೀಗ ಮತ್ತೆ ಹೆಚ್ಚುವರಿಯಾಗಿ 1000 ವೆಂಟಿಲೇಟರ್‌ಗಳನ್ನು ಕಳುಹಿಸುವುದಾಗಿ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಬಿಬಿಸಿ ಟೆಲಿವಿಷನ್‌ಗೆ ತಿಳಿಸಿದ್ದಾರೆ.
ಭಾರತಕ್ಕೆ ತುರ್ತು ಅಗತ್ಯವಿರುವ ವೈದ್ಯಕೀಯ ನೆರವನ್ನು ನಮ್ಮಿಂದ ಎಷ್ಟು ಸಾಧ್ಯಯೋ ಅಷ್ಟು,ಸಹಾಯ ಮಾಡಲು ನಾವು ಸಿದ್ಧ ಎಂದು ಬ್ರಿಟನ್ ತಿಳಿಸಿದೆ. ಭಾರತದ ವೈದ್ಯರ ಮೇಲಿನ ಒತ್ತಡಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ ಮೂಲದ ಬ್ರಿಟನ್ ವೈದ್ಯರ ಸಂಸ್ಥೆಯು (ಬಿಎಪಿಐಒ) ತುರ್ತು ಆರೈಕೆಯ ಅವಶ್ಯಕತೆ ಇರುವ ರೋಗಿಗಳಿಗೆ ಆನ್‌ಲೈನ್ ಮೂಲಕವೇ ಸಲಹೆ, ಸೂಚನೆ ನೀಡುವ ಚಟುವಟಿಕೆಯನ್ನು ಆರಂಭಿಸಿದೆ.
ಭಾರತ ಪ್ರವಾಸವನ್ನು ಕೈಗೊಂಡ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಕರೋನಾ ಹೆಚ್ಚಳದಿಂದಾಗಿ ಭಾರತ ಪ್ರವಾಸವನ್ನು ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆನ್‌ಲೈನ್ ಸಭೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.