ಸಿಟಿ ಸ್ಕ್ಯಾನ್ ಕುರಿತಂತೆ ರಾಜ್ಯದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ಶುಲ್ಕ ಇರುವ ಕುರಿತು ದೂರುಗಳ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಆಸ್ಪತ್ರೆಗಳಿಗೂ ಸರ್ಕಾರವೇ ದರ ನಿಗದಿ ಪಡಿಸುವುದೆಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರೋನಾ ನಿಖರ ತಪಾಸಣೆಗಾಗಿ ತಜ್ಞರ ತಂಡ ಸಿಟಿ ಸ್ಕ್ಯಾನ್ ಮಾಡಲು ಸಲಹೆ ನೀಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇಂದು ನಿಗದಿತ ದರಗಳನ್ನು ಮಾತ್ರ ಪಡೆಯುವಂತೆ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಅಧಿಕ ಶುಲ್ಕ ಪಡೆಯುವಂತಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ 2 ಕೋಟಿ ಲಸಿಕೆಗಳನ್ನು ಪಡೆಯಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಟಲ್ ಬಿಹಾರಿ ವಾಜಪೇಯಿ ಆಸ್ಪತ್ರೆಯಲ್ಲಿ ಲಸಿಕೆಗೆ ಚಾಲನೆ ನೀಡಲಿದ್ದಾರೆ. ಸಾರ್ವತ್ರಿಕ ಲಸಿಕೆ ಯಾವಾಗಿನಿಂದ ಆರಂಭವಾಗಲಿದೆ ಎಂಬುದು ಕಂಪನಿಗಳ ಉತ್ಪಾದನೆ ನೋಡಿಕೊಂಡು ತಿಳಿಸಲಾಗುತ್ತದೆ. ಪ್ರಸ್ತುತ ಆರು ಸಾವಿರ ಲಸಿಕಾ ಕೇಂದ್ರಗಳಿದ್ದು, ಅವುಗಳಿಗೆ 3 ಲಕ್ಷ ಲಸಿಕೆ ಅಗತ್ಯವಿದೆ. ಆದರೆ, ಸಾರ್ವತ್ರಿಕ ಲಸಿಕೆ ಆರಂಭವಾದಾಗ ನಿತ್ಯ ಆರು ಲಕ್ಷ ಲಸಿಕೆಯಾದರೂ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಾಲ್ಕೈದು ದಿನಕ್ಕೆ ಲಾಕ್‌ಡೌನ್ ಪರಿಣಾಮ ಗೊತ್ತಾಗುವುದಿಲ್ಲ:
ಲಾಕ್ ಡೌನ್ ಜಾರಿಗೆ ಬಂದು ಕೇವಲ ನಾಲ್ಕು ದಿನಗಳಷ್ಟೇ ಆಗಿದ್ದು, ಇದರ ಪರಿಣಾಮ ಈಗಲೇ ಗೊತ್ತಾಗುವುದಿಲ್ಲ. ಮಹಾರಾಷ್ಟ್ರದಲ್ಲಿ 44 ದಿನಗಳಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಈಗಷ್ಟೇ ಮುಂಬೈನಲ್ಲಿ ಕರೋನಾ ಪ್ರಕರಣ ನಿಯಂತ್ರಣಕ್ಕೆ ಬರುತ್ತಿದೆ. ಹಾಗಾಗಿ ಲಾಕ್ ಡೌನ್ ಅನಿವಾರ್ಯ. ಆಗಲೂ ನಿಯಂತ್ರಣಕ್ಕೆ ಬರದಿದ್ದರೆ ಕಠಿಣ ನಿಯಮ ಅನಿವಾರ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.