ರಾಜ್ಯದಲ್ಲೇ ಅತ್ಯಂತ ಹೆಚ್ಚು ಆದಾಯ ಹೊಂದಿರುವ ಶ್ರೀಮಂತ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಣ ದುರುಪಯೋಗದ ಗಂಭೀರ ಆರೋಪ ಕೇಳಿಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ದ ದೇವಾಲಯದ ಆದಾಯದ ಲೆಕ್ಕ ಪರಿಶೋಧನೆಯೇ ನಡೆದಿಲ್ಲ. ಕಣ್ಣಳತೆಗೇ ಆದಾಯ ತೋರಿಸಿ ದೇವಸ್ಥಾನದ ಆಡಳಿತ ಮಂಡಳಿ ಲೆಕ್ಕ ಕೊಡುತ್ತಿದೆ. ಕಳೆದ 5 ವರ್ಷದಿಂದ ದೇವಾಲಯದ ಲೆಕ್ಕ ಪರಿಶೋಧನೆ ನಡೆದೇ ಇಲ್ಲ ಎಂದು ಆರೋಪಿಸಲಾಗಿದೆ. ವಾರ್ಷಿಕ ಆದಾಯದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ದೇವಸ್ಥಾನ ದ ಆಡಳಿತ ಮಂಡಳಿಯ ವಿರುದ್ಧ ವಕೀಲರೊಬ್ಬರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದಾರೆ.

ಈ ಕುರಿತು ದೂರು ನೀಡಿರುವ ಬೆಂಗಳೂರು ಮೂಲದ ವಕೀಲ ಶ್ರೀ ಹರಿ ಕುತ್ಸ ಅವರು ದೇವಸ್ಥಾನದ ಆಡಳಿತ ಮಂಡಳಿಯು ಪ್ರತಿವರ್ಷ ಅಂದಾಜಿನ ಮಾಹಿತಿಯನ್ನೇ ನೀಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ದೇವಾಲಯಕ್ಕೆ ನೂರು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಸಂಗ್ರಹವಾದರೂ ಲೆಕ್ಕ ಪರಿಶೋಧನೆ ಆಗದಿರುವುದು ಭಾರೀ ಅನುಮಾನಕ್ಕೆ ಎಡಮಾಡಿಕೊಟ್ಟಿದೆ. ಕ್ಷೇತ್ರದ ಆಡಳಿತ ಮಂಡಳಿ 60 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಪೋಲು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಕ್ಷೇತ್ರದ ಆಡಳಿತ ಮಂಡಳಿ ಧಾರ್ಮಿಕೇತರ ಚಟುವಟಿಕೆಗಳಿಗೆ ಹೆಚ್ಚು ಹಣ ಪೋಲು ಮಾಡಿದೆ. ದೇಗುಲಕ್ಕೆ ಸಂಬಂಧಪಡದ ವ್ಯಕ್ಯಿಗಳು ದೇವಸ್ಥಾನದ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಕ್ಷೇತ್ರಕ್ಕೆ ಹರಕೆ ರೂಪದಲ್ಲಿ ಬಂದ ಚಿನ್ನ, ಬೆಳ್ಳಿ ಆಭರಣಗಳ ಬಗ್ಗೆ ಸಮರ್ಪಕವಾದ ಮಾಹಿತಿಯೇ ದೇವಸ್ಥಾನದ ಆಡಳಿತ ಮಂಡಳಿಯ ಬಳಿ ಇಲ್ಲ ಎಂದಿರುವ ಅವರು ದೇವಾಲಯಕ್ಕೆ ಬಂದ ಚಿನ್ನಾಭರಣವನ್ನು ಕರಗಿಸಲಾಗುತ್ತದೆ. ಕರಗಿಸದ ವೇಳೆ ಬಂದ ಒಳ್ಳೆಯ ಚಿನ್ನದ ಲೆಕ್ಕ ಮಾತ್ರ ಕೊಡಲಾಗಿದೆ. ಕರಗಿಸಿದ ವೇಳೆ ರಿಜೆಕ್ಟ್ ಆದ ಚಿನ್ನಾಭರಣದ ಲೆಕ್ಕವನ್ನು ಎಲ್ಲಿಯೂ ತೋರಿಸಿಲ್ಲ.ಈ ಲೆಕ್ಕವೇ ಲಕ್ಷಾಂತರ ರೂಪಾಯಿ ರೂಪದಲ್ಲಿ ಇರಬೇಕಿದೆ.ಇನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಅಂಗಡಿ ಬಾಡಿಗೆ,ಕಟ್ಟಡ ನಿರ್ವಹಣೆ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರತಿವರ್ಷ ಹರಾಜು ಪ್ರಕ್ರಿಯೆ ಮಾಡಬೇಕು. ಆದರೆ ಸುಬ್ರಹ್ಮಣ್ಯದಲ್ಲಿ ಈ ಪ್ರಕ್ರಿಯೆ ಯಾವುದೂ ನಡೆಯುತ್ತಿಲ್ಲ. ಹಲವು ವರ್ಷಗಳಿಂದ ಬಾಡಿಗೆಗೆ ಇದ್ದವರೇ ಈ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಸಮರ್ಪಕವಾಗಿ ಬಾಡಿಗೆಯನ್ನೂ ಯಾರೂ ನೀಡುತ್ತಿಲ್ಲ ಎಂದು ವಕೀಲ ಶ್ರೀಹರಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ..ಕ್ಷೇತ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದಿದ್ದು,ಸರ್ಕಾರದ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ದೂರಿನ ಬಗ್ಗೆ ಮಾತನಾಡಿದ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ದೂರು ನೀಡಿರುವ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ. ಪರಿಶೀಲನೆ ಮಾಡುವಂತೆಯೇ ಈ ಹಿಂದೆಯೇ ಸೂಚಿಸಿದ್ದೇನೆ. ಲೆಕ್ಕ ಪರಿಶೋಧನೆ ಮಾಡಲು ಈ ಹಿಂದೆಯೇ ಕ್ಷೇತ್ರ ದ ಕಾರ್ಯನಿರ್ವಹಣಾ ಅಧಿಕಾರಿಗೆ ಸೂಚಿಸಿದ್ದೆ. ಲೆಕ್ಕ ಪರಿಶೋಧನೆ ಆದರೆ ಕ್ಷೇತ್ರದ ಅಭಿವೃದ್ಧಿ ಗೂ ಪೂರಕವಾಗುತ್ತದೆ ಎಂದರು. ವಾರ್ಷಿಕ ಆದಾಯವನ್ನು ಕೇವಲ ಅಂದಾಜಿಸಿ ಬಿಡುಗಡೆ ಮಾಡುತ್ತಿದ್ದ ಕ್ಷೇತ್ರದ ಆಡಳಿತ ಮಂಡಳಿ ವಿರುದ್ಧ ಅನುಮಾನ ಮೂಡಿದ್ದು,ಕಳೆದ 5 ವರ್ಷಗಳಲ್ಲಿ ಕೊಡುತ್ತಿದ್ದ ಲೆಕ್ಕ ಕೇವಲ ಅಂದಾಜಿನ ಲೆಕ್ಕಾಚಾರ ಮಾತ್ರ ಕೊಡುತ್ತಿದೆ.ಈ ವರ್ಷ 68 ಕೋಟಿ ರೂಪಾಯಿ ಆದಾಯ ಅಂತಾ ಹೇಳಿದ್ದ ದೇವಳದ ಆಡಳಿತ ಮಂಡಳಿ ಕಳೆದ ಐದು ವರ್ಷಗಳಲ್ಲೂ ಅಂದಾಜಿನ ಲೆಕ್ಕವನ್ನು ಮಾತ್ರ ನೀಡಿತ್ತಾ ಎಂಬ ಅನುಮಾನ ಕಾಡಲಾರಂಭಿಸಿದೆ.
ಈ ಪ್ರಸಿದ್ದ ದೇವಾಲಯದಲ್ಲಿ ಅವ್ಯವಾಹಾರ ಆರೋಪವು ಕೇಳೀ ಬಂದಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳಿಂದಲೂ ಕೆಲವು ಮಾಹಿತಿಯುಳ್ಳ ವ್ಯಕ್ತಿಗಳು ಭಕ್ತರು , ಸಾಮಾಜಿಕ ಕಾರ್ಯಕರ್ತರು ದೂರು ನೀಡಿದರೂ ಸರ್ಕಾರಗಳು ಮಾತ್ರ ಗಂಭೀರವಾಗಿ ಪರಿಗಣಿಸಿದ್ದು ಕಡಿಮೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸ್ಥಳೀಯರಾದ ಟಿ ಎಸ್ ಶ್ರೀನಾಥ್ ಎಂಬುವವರು ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ದೂರು ನೀಡಿ ಅವ್ಯವಹಾರದ ಆರೋಪ ಮಾಡಿದ್ದರು. ಕುಕ್ಕೆ ಸುಬ್ರಮಣ್ಯ ದೇವಾಲಯದ ಆಡಳಿತಾಧಿಕಾರಿ ಎಂ ಜೆ ರೂಪಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ. ಎಚ್. ವಿರುದ್ಧ ದೂರು ನೀಡಲಾಗಿತ್ತು.

ಸುಬ್ರಮಣ್ಯ ದೇವಸ್ಥಾನದಲ್ಲಿ ಕೋಟ್ಯಾಂತರ ರೂಪಾಯಿ ಬೆಳೆ ಬಾಳುವ ಆಭರಣ ವಿಗ್ರಹಗಳ ಬಗ್ಗೆ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಟಿ. ಎಸ್. ಶ್ರೀನಾಥ್ ಕುಕ್ಕೆ ಸುಬ್ರಮಣ್ಯದ ನಿವಾಸಿಯಾಗಿದ್ದು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ನಿರ್ದೇಶಕರಾಗಿದ್ದಾರೆ. ಕುಕ್ಕೆ ಸುಬ್ರಮಣ್ಯ ದೇವಾಲಯದ ಅಧಿಕೃತ ದಾಖಲಾತಿ ಪುಸ್ತಕದಲ್ಲಿ ದಾಖಲಾಗಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಜ್ರದ ಕಂಠಿಹಾರ, ಆಭರಣಗಳು, ಶ್ರೀ ಸತ್ಯನಾರಾಯಣ ದೇವರ ಫೋಟೋ, ಶ್ರೀ ಕುಕ್ಕೆ ಲಿಂಗ ದೇವಳದ ಬಳಿ ಇದ್ದ ಬೆಳ್ಳಿಯ ಒಡವೆ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ದೇವಾಲಯದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮೋನಪ್ಪ ಮಾನಾಡು 22/11/2019ರಂದು ಶ್ರೀ ದೇವಾಲಯದ ಆಡಳಿತಾಧಿಕಾರಿ, ಕಾರ್ಯ ನಿರ್ವಹಣಾಧಿಕಾರಿಯವರಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿರುತ್ತಾರೆ ಎಂದು ದೂರಿನಲ್ಲಿ ವಿವರಣೆ ನೀಡಲಾಗಿದೆ.

ಅರ್ಜಿಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. 1/8/2020 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ನಾನು ಅರ್ಜಿಸಲ್ಲಿಸಿದರೂ ಯಾವುದೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಸಂಬಂಧಪಟ್ಟ ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವ ಒಡವೆ, ವಿಗ್ರಹಗಳ ಬಗ್ಗೆ ಯಾವ ಮಾಹಿತಿಯನ್ನೂ ನೀಡದ ಆಡಳಿತಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಲಾಖೆಯ ಆಡಳಿತವಿರುವ ದೇವಾಲಯಲ್ಲಿ ಅವ್ಯವಹಾರ ಮಾಡಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ದೂರನ್ನೂ ಕೂಡ ಎಸಿಬಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿಲ್ಲ ಎನ್ನಲಾಗಿದೆ. ಈಗ ಸ್ವತಃ ರಾಜ್ಯದ ಮುಖ್ಯ ಮಂತ್ರಿಗಳಿಗೇ ದೂರು ನೀಡಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಸೂಕ್ತ ತನಿಖೆಗೆ ಆದೇಶಿಸುತ್ತಾರಾ ಇಲ್ಲವೇ ದೂರು ಕಸದ ಬುಟ್ಟಿ ಸೇರುತ್ತಾ ಕಾದು ನೋಡಬೇಕಿದೆ.





