ಕಳೆದ ಮೂರು ವರ್ಷಗಳಿಂದ ಪ್ರತೀ ವರ್ಷದ ಆಗಸ್ಟ್‌ತಿಂಗಳಿನಲ್ಲೂ ಪುಟ್ಟ ಪ್ರವಾಸೀ ಜಿಲ್ಲೆ ಕೊಡಗಿನಲ್ಲಿ ಭೂಕುಸಿತ ಸಂಭವಿಸಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ರಾತ್ರಿ ನಿದ್ರೆಯಲ್ಲೇ ಭೂ ಸಮಾಧಿ ಆದವರೂ ಇದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ತೋಟ ಮನೆ ಮಠ ಕಳೆದು ಕೊಂಡವರಿದ್ದಾರೆ. 2018 ರಲ್ಲಿ ಭೂಕುಸಿತದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಸರ್ಕಾರ ಮನೆಗಳನ್ನು ನಿರ್ಮಿಸಿಕೊಡುವ ಕಾಮಗಾರಿ ಇನ್ನೂ ಮುಗಿದಿಲ್ಲ. ಪದೇ ಪದೇ ಭೂಕುಸಿತ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಪಶ್ಚಿಮಘಟ್ಟ ಜೀವ ವೈವಿಧ್ಯ ಮಂಡಳಿಯ ಅದ್ಯಕ್ಷ ಅನಂತ್‌ಹೆಗಡೆ ಅಶೀಸರ ಅವರ ನೇತೃತ್ವದ ಸಮಿತಿಗೆ ಭೂಕುಸಿತಕ್ಕೆ ನಿಖರ ಕಾರಣ ಮತ್ತು ಅದರ ತಡೆಗೆ ಮುಂದಿನ ಮಾರ್ಗೋಪಾಯಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆದೇಶಿಸಿತ್ತು. ತಜ್ಞರ ಸಮಿತಿಯು ಭೂ ಕುಸಿತ ನಡೆದ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಕಳೆದ ತಿಂಗಳಷ್ಟೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ತನ್ನ ವರದಿಯನ್ನು ಸಲ್ಲಿಸಿತು. ಅದರಲ್ಲಿ ಭೂ ಕುಸಿತಕ್ಕೆ ಅವೈಜ್ಞಾನಿಕ ಮಣ್ಣಿನ ಅಗೆತವೇ ಕಾರಣ ಎಂದು ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಿದೆ.
ಇಷ್ಟಿದ್ದರೂ ಕೊಡಗಿನಲ್ಲಿ ಈಗಲೂ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಲೇ ಇದೆ, ಕೊಡಗಿನಲ್ಲಿ ಪ್ರವಾಸೋದ್ಯಮ ದಾಪುಗಾಲಿಕ್ಕಿ ಬೆಳೆಯುತ್ತಿದ್ದು ಇದರಿಂದಾಗಿ ಆತಿಥ್ಯ ಉದ್ಯಮವೂ ಗಣನೀಯವಾಗಿ ಬೆಳೆದಿದ್ದು ನೂರಾರು ಕೃಷಿಕರ ಆರ್ಥಿಕತೆಯೂ ಉತ್ತಮಗೊಂಡಿದೆ. ಇದರ ಬೆನ್ನು ಹತ್ತಿರುವ ಅನೇಕರು ಸರ್ಕಾರದ ನಿಯಮಾವಳಿಗಳನ್ನೂ ಉಲ್ಲಂಘಿಸಿ ಅವೈಜ್ಞಾನಿಕ ಕಾಮಗಾರಿ ನಡೆಸಿ ತಮ್ಮ ಸ್ವಾರ್ಥವನ್ನು ಮೆರೆಯುತಿದ್ದಾರೆ.
ಇತ್ತೀಚೆಗೆ ವೀರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ಬೆಟ್ಟದ ಜಾಗವನ್ನು ಬೃಹತ್ ಹಿಟಾಚಿ ಯಂತ್ರದ ಮೂಲಕ ಕೊರೆಯಲಾಗುತ್ತಿದ್ದು, ಸುಮಾರು 8 ಎಕರೆಯಷ್ಟು ಜಾಗವನ್ನು ನೆಲಮಟ್ಟದಿಂದ 2೦೦ ಅಡಿಯಷ್ಟು ಎತ್ತರದವರೆಗೆ ದೊಡ್ಡ ಗಾತ್ರದ ಬಂಡೆ ಕಲ್ಲುಗಳನ್ನು ಸಡಿಲಿಸಿ ರಸ್ತೆ ಮಾಡಿ ಹಲವು ಹಂತದಲ್ಲಿ ಸಮತಟ್ಟು ಮಾಡಲಾಗಿರುವ ಪ್ರಕರಣ ಕಂಡುಬಂದಿದೆ. ಬೆಟ್ಟ ಶ್ರೇಣಿಯಲ್ಲಿ ಹಾಗೂ ಎತ್ತರ ಪ್ರದೇಶದಲ್ಲಿ ಇಂತಹ ಕಾಮಗಾರಿಯನ್ನು ಮಾಡಲು ಸರ್ಕಾರದ ನಿಯಮಾನುಸಾರ ಅವಕಾಶವಿಲ್ಲದಿದ್ದರೂ ನಿಯಮಗಳನ್ನು ಗಾಳಿಗೆ ತೂರಿ, ಭವಿಷ್ಯದಲ್ಲಿ ಬೆಟ್ಟ ಸಡಿಲವಾಗಿ ಭೂಕುಸಿತದಂತಹ ಅಪಾಯವನ್ನು ಸ್ವಯಂಕೃತವಾಗಿ ಮಾನವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂಬ ಆಕ್ಷೇಪ ಕೂಡ ವ್ಯಕ್ತವಾಗಿದೆ.
ಬೃಹತ್ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕೊಡಗು ವನ್ಯಜೀವಿ ಸಂಘದ ಮಾಜಿ ಅಧ್ಯಕ್ಷ ನಿವೃತ್ತ ಕರ್ನಲ್ ಚೆಪ್ಪುಡೀರ ಪಿ. ಮುತ್ತಣ್ಣ ಮತ್ತು ಕಾವೇರಿ ಸೇನೆಯ ಪ್ರಮುಖರಾದ ಕೋಲತಂಡ ರಘುಮಾಚಯ್ಯ ಅವರು ಭೇಟಿ ನೀಡಿ ಬೆಟ್ಟವನ್ನು ಕೊರೆದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸತತ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ದೊಡ್ಡ ಮಟ್ಟದ ಭೂಕುಸಿತ, ಆಸ್ತಿ-ಪಾಸ್ತಿ ಹಾನಿಯೊಂದಿಗೆ ಮಾನವ ಜೀವ ಹಾನಿಯಾಗಿದ್ದರೂ ಇದರಿಂದ ಪಾಠ ಕಲಿಯದ ಮಾನವ ಮತ್ತೊಂದು ಪ್ರಾಕೃತಿಕ ವಿಕೋಪಕ್ಕೆ ದಾರಿ ಮಾಡುತ್ತ ಸಾಗುತ್ತಿದ್ದಾರೆ. ಕಾಮಗಾರಿ ನಡೆಯುತ್ತಿರುವ ಸ್ಥಳವು ಈ ಹಿಂದೆ ಸ್ಥಳೀಯ ಬೆಳೆಗಾರನೋರ್ವರಿಗೆ ಸೇರಿದ್ದಾಗಿದ್ದು ಈ ಸ್ಥಳವನ್ನು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ಅಥವಾ ಮಾರಾಟ ಮಾಡಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬೆಟ್ಟವನ್ನು ಕೊರೆದು ‘ಗಲ್ಫ್ವಿಲ್ಲ್’ ಎಂಬ ಹೆಸರಿನಲ್ಲಿ ವಿಲ್ಲಾಗಳನ್ನು ನಿರ್ಮಿಸಿ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ ಎಂಬ ಬಗ್ಗೆ ಮಾಹಿತಿ ದೊರೆತಿದೆ.
ಬೃಹತ್ ಬೆಟ್ಟವನ್ನು ಕೊರೆಯುತ್ತಿರುವುದು ಹಾಗೂ ಇದರಿಂದ ಬೃಹತ್ ಬಂಡೆ ಕಲ್ಲುಗಳನ್ನು ಸಡಿಲಿಸಿ ಪಕ್ಕಕ್ಕೆ ಸರಿಸಲಾಗುತ್ತಿದೆ. ಇದರೊಂದಿಗೆ ಬೃಹತ್ ಯಂತ್ರದಿಂದ ಕಲ್ಲುಗಳನ್ನು ಡ್ರಿಲ್ಲಿಂಗ್ ಮಾಡಿ ಒಡೆಯಲಾಗುತ್ತಿದೆ. ಈ ಬೃಹತ್ ಯೋಜನೆಯ ಬಗ್ಗೆ ತಗ್ಗು ಪ್ರದೇಶದಲ್ಲಿರುವ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಬೆಟ್ಟದಿಂದ ಸಡಿಲವಾಗುತ್ತಿರುವ ಮಣ್ಣು ಹಾಗೂ ಬಂಡೆ ಕಲ್ಲುಗಳು ಜಾರಿ ಪ್ರಾಣಾಪಾಯವಾಗುವ ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಬಿಹಾರ್ ಮೂಲದ ಹಿಟಾಚಿ ಆಪರೇಟರ್ ಮತ್ತು ಇತರ ಕಾರ್ಮಿಕರು ಶೆಡ್ಡ್ ನಿರ್ಮಿಸಿ ವಾಸವಾಗಿದ್ದಾರೆ. ಸ್ಥಳಕ್ಕೆ ಬಿಟ್ಟಂಗಾಲ ಗ್ರಾ.ಪಂ.ಯ ಅಧ್ಯಕ್ಷರು ಮತ್ತು ಪಿಡಿಓ ಅವರು ಭೇಟಿ ನೀಡಿದ್ದು, ಬೃಹತ್ ಕಾಮಗಾರಿ ಹಾಗೂ ಬೆಟ್ಟವನ್ನು ಕೊರೆಯುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಇಲ್ಲಿ ನಿರ್ಮಿಸಿರುವ ಶೆಡ್ಡ್ಗಾಗಿ ವಿದ್ಯುತ್ ಸಂಪರ್ಕಕ್ಕಾಗಿ ನಿರಾಪೇಕ್ಷಣ ಪತ್ರಕ್ಕಾಗಿ ವಸಂತ್ ಮಾಚಯ್ಯ ಎಂಬುವವರು ಪತ್ರ ನೀಡಿದ್ದಾರೆ ಎಂದು ತಿಳಿದಿದೆ ಆದರೆ ಈ ಜಾಗದ ಯಾವುದೇ ಕಾಮಗಾರಿಗೆ ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರವನ್ನು ನೀಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಪ್ರದೇಶವಾದ ಬಿಟ್ಟಂಗಾಲ ಗ್ರಾಮದಲ್ಲಿ ಬೆಟ್ಟ ಪ್ರದೇಶವನ್ನು ದೊಡ್ಡ ಮಟ್ಟದಲ್ಲಿ ಕೊರೆಯಲಾಗಿದ್ದು, ಇದರ ಬಗ್ಗೆ ಗ್ರಾ.ಪಂ.ಗೆ ಯಾವುದೇ ಮಾಹಿತಿ ಇಲ್ಲ. ಇಂದು ಭೇಟಿ ನೀಡಿದ ನಂತರವೇ ವಿಚಾರ ತಿಳಿದಿದೆ. ಈ ಬೆಟ್ಟವನ್ನು ಕೊರೆಯುತ್ತಿರುವುದರಿಂದ ತಗ್ಗು ಪ್ರದೇಶದ ಜನರಿಗೆ ಅಪಾಯ ಉಂಟಾಗುವ ಎಲ್ಲಾ ಸಾಧ್ಯತೆ ಇದೆ. ದೊಡ್ಡ ಮಳೆ ಬಂದರೆ ಹಾಗೂ ಮಳೆಗಾಲದಲ್ಲಿ ಬಂಡೆ ಕಲ್ಲುಗಳು ಉರುಳಿ ಮಣ್ಣು ಕುಸಿಯುವ ಆತಂಕ ಕಂಡುಬಂದಿದ್ದು, ಈ ಬಗ್ಗೆ ಗ್ರಾ.ಪಂ.ನಿಂದ ಆಕ್ಷೇಪಣೆ ವ್ಯಕ್ತಪಡಿಸಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲಾಗುವುದು ಎಂದು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಆರ್. ರಮ್ಯ ತಿಳಿಸಿದ್ದಾರೆ. ಖಾಸಗಿ ಜಾಗವಾದರೂ ಎತ್ತರ ಹಾಗೂ ಬೆಟ್ಟ ಪ್ರದೇಶವಾಗಿರುವ ಈ ಜಾಗವನ್ನು ಯಂತ್ರದ ಮೂಲಕ ಕೊರೆದು ಬೆಟ್ಟ ಜಾರುವಂತೆ ಅಪಾಯ ಮಾಡಲಾಗಿದೆ. ಈ ಜಾಗದಲ್ಲಿ ಯಾವುದೇ ನಿರ್ಮಾಣಕ್ಕೆ ಗ್ರಾ.ಪಂ.ಯಿಂದ ಯಾವುದೇ ನಿರಾಪೇಕ್ಷಣ ಪತ್ರ ನೀಡಿಲ್ಲ. ಮುಂದೆಯೂ ಈ ಜಾಗದಲ್ಲಿ ಯಾವುದೇ ನಿರ್ಮಾಣಕ್ಕೆ ನಿರಾಪೇಕ್ಷಣ ಪತ್ರ ನೀಡಲು ಬರುವುದಿಲ್ಲ ಎಂದು ಪಿಡಿಒ ಹೆಚ್.ಯು. ಚಂದ್ರು ತಿಳಿಸಿದ್ದಾರೆ.
ಆದರೆ ಈಗಾಗಲೇ ಬೆಟ್ಟ ಕೊರೆದಿರುವುದರಿಂದ ಭೂಮಿಗೆ ಗಣನೀಯ ಹಾನಿ ಆಗಿದೆ. ಇನ್ನು ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಪ್ರಕೃತಿಗೆ ಆಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಕರ್ನಲ್‌ಮುತ್ತಣ್ಣ ಹೇಳಿದರು. ಸರ್ಕಾರ ಇಂತಹ ಕಾಮಗಾರಿ ಮಾಡಿದವರಿಗೆ ಕಠಿಣ ಶಿಕ್ಷೆ ಅಗಬೇಕು ಎಂದು ಅವರು ಒತ್ತಾಯಿಸಿದರು.