• Home
  • About Us
  • ಕರ್ನಾಟಕ
Thursday, November 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕೋವಿಡ್-19 ಹೊಣೆಗೇಡಿ ಆಡಳಿತದ ಮತ್ತೊಂದು ಪರ್ವ

by
April 22, 2021
in ದೇಶ
0
ಕೋವಿಡ್-19 ಹೊಣೆಗೇಡಿ ಆಡಳಿತದ ಮತ್ತೊಂದು ಪರ್ವ
Share on WhatsAppShare on FacebookShare on Telegram

“ ಅನಗತ್ಯವಾಗಿ ಯಾರೂ ಮನೆಯಿಂದ ಹೊರಬರಬೇಡಿ ಕೋವಿಡ್ ನಿಯಮ ಪಾಲಿಸಿ ” ಇದು ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮತ್ತೊಂದು ಟಿವಿ ಉಪನ್ಯಾಸ(!)ದಲ್ಲಿ ಹೇಳಿದ ಮಾತು. ನಾಲ್ಕೈದು ದಿನದ ಹಿಂದೆ ಈ ಮಾತುಗಳನ್ನು ಹೇಳಿದ್ದಿದ್ದರೆ “ ಇಷ್ಟೊಂದು ಜನರನ್ನು ನನ್ನ ಜೀವಮಾನದಲ್ಲೇ ನೋಡಿರಲಿಲ್ಲ ” ಎಂದು ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳುವ ಪ್ರಸಂಗವೇ ಬರುತ್ತಿರಲಿಲ್ಲ. ತಮ್ಮ ಮುಂದೆ ಲಕ್ಷಾಂತರ ಜನರು ಒಬ್ಬರಿಗೊಬ್ಬರು ಅಂಟಿಕೊಂಡು ಜೈಕಾರ ಹಾಕುತ್ತಿದ್ದ ಸಂದರ್ಭದಲ್ಲೇ ಭಾರತದಲ್ಲಿ ಎರಡೂವರೆ ಲಕ್ಷ ಕೋವಿಡ್ ಸೋಂಕಿತರು ಚಿಕಿತ್ಸೆಗಾಗಿ ಪರದಾಡುತ್ತಿದ್ದರು ಎಂಬ ಪರಿವೆ ಇದ್ದಿದ್ದರೆ ಟಿ ವಿ ಪರದೆಯ ಫೋಟೋಶೂಟ್ ಕಾರ್ಯಕ್ರಮ ಬೇಕಾಗುತ್ತಿರಲಿಲ್ಲ.

ADVERTISEMENT

ಎಲ್ಲ ಸಾರ್ವತ್ರಿಕ ವಿದ್ಯಮಾನಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು, ಲಾಭ ಪಡೆಯುವ ಕಲೆ ಭಾರತದ ಆಳುವ ವರ್ಗಗಳಿಗೆ ಸಿದ್ಧಿಸಿದೆ. ಜಾತಿ, ಧರ್ಮ, ಸಾಮುದಾಯಿಕ ಮತ್ತು ಪ್ರಾದೇಶಿಕ ಅಸ್ಮಿತೆಗಳು ರಾಜಕೀಯ ಲಾಭದ ರಫ್ತು ಗುಣಮಟ್ಟದ (Export Quality) ಸರಕುಗಳಾಗಿ ಬಳಕೆಯಲ್ಲಿವೆ. ಕೋವಿಡ್ 19 ಸಂದರ್ಭದಲ್ಲಿ ಒಂದು ಸಾಂಕ್ರಾಮಿಕ ಪಿಡುಗನ್ನೂ ಇದೇ ರೀತಿ ಮಾರುಕಟ್ಟೆ ಸರಕಿನಂತೆ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಛಾತಿ, ಕ್ಷಮತೆ ಮತ್ತು ಜಾಣ್ಮೆ ನಮ್ಮಲ್ಲಿದೆ ಎಂದು #ಆತ್ಮನಿರ್ಭರ ಭಾರತ ಪುನಃಪುನಃ ನಿರೂಪಿಸಿದೆ. ಕುಂಭಮೇಳದ ಗಂಗಾಸ್ನಾನ ಜನರನ್ನು ಕೋವಿದ್‍ನಿಂದ ಕಾಪಾಡುತ್ತದೆ ಎಂದು ಹೇಳುವ ಒಬ್ಬ ಅಪ್ರಬುದ್ಧ ಮುಖ್ಯಮಂತ್ರಿಗೂ, ಕೋವಿಡ್ ಬಿಕ್ಕಟ್ಟಿನ ನಡುವೆ ತಮ್ಮೆದುರಿನ ಜನಸ್ತೋಮವನ್ನು ಕಂಡು ಸಂಭ್ರಮಿಸುವ ದೇಶದ ಪ್ರಧಾನಮಂತ್ರಿಗೂ ತಾತ್ವಿಕವಾಗಿ ಯಾವ ವ್ಯತ್ಯಾಸವೂ ಇಲ್ಲ.

#ಆತ್ಮನಿರ್ಭರ ಭಾರತ ಮತ್ತೊಮ್ಮೆ ಯುದ್ಧಸನ್ನದ್ಧವಾಗಿದೆ. ಖಚಿತವಾಗಿ ಕೆಲವು ಕ್ಷಣಗಳಲ್ಲಿ ಸಮುದ್ರದೊಳಗೆ ಬೀಳಲಿರುವ ವಿಮಾನದಲ್ಲಿರುವ ಪ್ರಯಾಣಿಕರಿಗೆ ನಿಮ್ಮ ಸೀಟ್ ಬೆಲ್ಟುಗಳನ್ನು ಗಟ್ಟಿಯಾಗಿ ಕಟ್ಟಿಕೊಳ್ಳಿ ಎಂದು ಹೇಳಿದಂತೆಯೇ ಭಾರತದಲ್ಲಿ ಕರೋನಾ ವಿರುದ್ಧ ಎಚ್ಚರದಿಂದಿರಲು ಹೇಳಲಾಗುತ್ತಿದೆ. ಕೊರೋನಾ ಹರಡಲು ಜನರೇ ಕಾರಣ ಎನ್ನುವ ಕರ್ನಾಟಕದ ಆರೋಗ್ಯ ಸಚಿವರಿಗೆ ಕುಂಭಮೇಳಕ್ಕೆ, ಚುನಾವಣಾ ಸಭೆಗಳಿಗೆ ಜನರನ್ನು ಕರೆತರುವ ರಾಜಕೀಯ ಪಕ್ಷಗಳ ಕ್ಷುದ್ರ ರಾಜಕಾರಣ ಕಾಣುವುದೇ ಇಲ್ಲ. ಏಕೆಂದರೆ ಇವರ ದೃಷ್ಟಿಯೇ ಮಂಕಾಗಿದೆ. ಮಿದುಳು ನಿಷ್ಕ್ರಿಯವಾಗಿದೆ. ಅಧಿಕಾರ ಪೀಠದ ಹೊರತು ಮತ್ತೇನೂ ಕಾಣದಷ್ಟು ಮಟ್ಟಿಗೆ ಆಳುವವರ ಕಣ್ಣಲ್ಲಿ ವೈರಾಣುಗಳು ತುಂಬಿವೆ.

ಅಂಕಿ ಸಂಖ್ಯೆಗಳು ಒಂದು ರೀತಿ ಸಿನಿಮಾ ವಾಲ್ ಪೋಸ್ಟ್‍ಗಳಂತೆ. ತಮಗೆ ಬೇಕಾದ್ದನ್ನು ಮಾತ್ರ ತೋರಿಸಲು ಬಳಸುವ ಒಂದು ತಂತ್ರ. ಉತ್ತರಪ್ರದೇಶ, ಗುಜರಾತ್ ಸರ್ಕಾರಗಳು ಈ ತಂತ್ರವನ್ನು ಒಂದು ವರ್ಷದಿಂದಲೂ ಅನುಸರಿಸುತ್ತಿವೆ. ನಾವು ಅಧಿಕೃತ ಅಂಕಿಸಂಖ್ಯೆಗಳನ್ನು ಗಮನಿಸುತ್ತಲೇ ನೆರೆಮನೆಯ ಸಾವುನೋವುಗಳನ್ನು ಲೆಕ್ಕಿಸದಂತೆ ಮಾಡುವ ಕಲೆಯನ್ನೂ ನಮ್ಮ ಆಳುವ ವರ್ಗಗಳು ಕರಗತ ಮಾಡಿಕೊಂಡಿವೆ. ಹಾಗಾಗಿಯೇ ಕೇಂದ್ರ ಆರೋಗ್ಯ ಸಚಿವರಿಗೆ ಕುಂಭಮೇಳದಲ್ಲಿ ಆಗಬಹುದಾದ/ಆಗಿರುವ ಅಪಾಯಕ್ಕಿಂತಲೂ, ಮಹಾರಾಷ್ಟ್ರದ ಕಾಂಗ್ರೆಸ್ ಆಡಳಿತದಲ್ಲಿ ಹೆಚ್ಚಾಗಿರುವ ಕೋವಿದ್ ಕಾಣುತ್ತದೆ. ಜನಸಾಮಾನ್ಯರ ಸಾವುಗಳನ್ನು ಲೆಕ್ಕಿಸದ ಒಂದು ಪರಂಪರೆಯನ್ನು ಭಾರತದ ಪ್ರಭುತ್ವ ಈಗಾಗಲೇ ಅಪ್ಪಿಕೊಂಡಿದೆ.

2017ರ ಆಗಸ್ಟ್ 9ರಂದು ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಪೂರೈಕೆಯ ಕೊರತೆಯಿಂದ ನೂರು ಮಕ್ಕಳ ಸಾವು ಸಂಭವಿಸುತ್ತದೆ. ಮೂರೂವರೆ ವರ್ಷದ ನಂತರವೂ ನಮ್ಮಲ್ಲಿ ಆಕ್ಸಿಜನ್ ಪೂರೈಕೆಯ ಕೊರತೆ ಇದೆ. ಇದು ಆಡಳಿತ ವ್ಯವಸ್ಥೆಯ ಅದಕ್ಷತೆಗೆ ಸ್ಪಷ್ಟ ನಿದರ್ಶನ. ಪ್ರಪಂಚಕ್ಕೆ ಕಣ್ಣು ತೆರೆಯುವ ಮುನ್ನವೇ ಕಣ್ಣುಮುಚ್ಚಿದ ಆ ನೂರು ಮಕ್ಕಳಿಗೆ ಮತ್ತು ಕರುಳ ಕುಡಿಗಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ಒದಗಿಸಲಾಗಿದೆಯೇ ? ಅಪರಾಧಿಗಳನ್ನು ಕಂಡುಹಿಡಿದು ಶಿಕ್ಷಿಸಲಾಗಿದೆಯೇ ? ಪುಲ್ವಾಮಾದ ಯೋಧರಂತೆ ಈ ಮಕ್ಕಳೂ ನಡುರಾತ್ರಿಯ ಶವಗಳಾಗಿ ಮರೆಯಾಗಿಬಿಟ್ಟಿವೆ. ಅಮಾಯಕ ವೈದ್ಯ ಕಫೀಲ್ ಖಾನ್ ಸೆರೆವಾಸ ಮುಗಿಸಿ ಈಗ ಹೊರಬಂದಿದ್ದಾರೆ. ಡಾ ಕಫೀಲ್ ಖಾನ್ ಆ ಸಂದರ್ಭದಲ್ಲೇ ಆಕ್ಸಿಜನ್ ಪೂರೈಕೆಯ ಬಗ್ಗೆ ಮಾತನಾಡಿದ್ದರು. ಅವರ ಬಾಯಿಗೆ ಮಾಸ್ಕ್ ಹಾಕಲಾಯಿತು. ಕೈಗೆ ಕೋಳ ತೊಡಿಸಲಾಯಿತು.

ಇದು ಏನನ್ನು ಸೂಚಿಸುತ್ತದೆ ? ಜನತೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮೂಲಭೂತ ಕೊರತೆ ಇದೆ ಎಂದಲ್ಲವೇ ? ಇದಕ್ಕೆ ಇಂದಿನ ಸರ್ಕಾರ ಅಥವಾ ಪ್ರಧಾನಿ ಮಾತ್ರ ಕಾರಣರಲ್ಲ. ಈ ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರೋಗ್ಯ ಕಾಳಜಿಯ ಬಗ್ಗೆ ಇರುವ ದಿವ್ಯ ನಿರ್ಲಕ್ಷ್ಯವೇ ಕಾರಣ. 70 ವರ್ಷಗಳಲ್ಲಿ ಸಾರ್ವತ್ರಿಕ ಆರೋಗ್ಯ ಪಾಲನೆಯ ಬಗ್ಗೆ ನಾವು ಯೋಚಿಸಿಲ್ಲ. ಕಳೆದ ಒಂದು ವರ್ಷದಲ್ಲಿ ಒಂದು ಸಾಂಕ್ರಾಮಿಕದಿಂದ 1 ಲಕ್ಷ 80 ಸಾವಿರ ಜನರು ಸತ್ತಿದ್ದರೂ ಈ ಕುರಿತು ಯೋಚಿಸುತ್ತಿಲ್ಲ. ಸಾರ್ವತ್ರಿಕ ಆರೋಗ್ಯ ಪಾಲನೆಯನ್ನು ಸಾಂವಿಧಾನಿಕವಾಗಿ ಶಾಸನಬದ್ಧವಾಗಿ ಜಾರಿಗೊಳಿಸಲು ಜನಾಂದೋಲನಗಳು ನಡೆದಿರುವುದೂ ಕಡಿಮೆಯೇ. ವಿರೋಧ ಪಕ್ಷಗಳು ಯಾವ ಕಾಲದಲ್ಲೂ ಇದರ ಬಗ್ಗೆ ಯೋಚಿಸಿಲ್ಲ.

“ ನಿಮ್ಮ ಜೀವ ನಿಮ್ಮ ಕೈಯ್ಯಲ್ಲಿದೆ ನಿರ್ಲಕ್ಷ್ಯ ಮಾಡಬೇಡಿ ” ಎಂಬ ಕೊರೋನಾ ಸಂದರ್ಭದ ಘೋಷವಾಕ್ಯ ಈ ದೇಶದಲ್ಲಿ ಮೊದಲಿನಿಂದಲೂ ಜಾರಿಯಲ್ಲಿದೆ. ಈಗ ರಾಜ್ಯ ಮತ್ತು ಕೇಂದ್ರ ಸಚಿವರು ಅಧಿಕೃತವಾಗಿ ಹೇಳುತ್ತಿದ್ದಾರೆ. ಏಕೆಂದರೆ ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ ಅಲ್ಲ ಎನ್ನುವುದು ನವ ಉದಾರವಾದದ ವೇದಮಂತ್ರ. ಹಾಗೊಮ್ಮೆ ಅದು ಸರ್ಕಾರಗಳ ಸಾಂವಿಧಾನಿಕ ಹೊಣೆ ಆಗಿದ್ದಿದ್ದರೆ ಉತ್ತರಪ್ರದೇಶದ ನೂರು ಮಕ್ಕಳಿಗೆ ಎಂದೋ ನ್ಯಾಯ ದೊರೆಯುತ್ತಿತ್ತು. ನಡುರಾತ್ರಿಯ ಶವಗಳನ್ನು ಹಗಲಲ್ಲಿ ಸುಟ್ಟು ಹಾಕುವ ಒಂದು ವಿಕೃತ ವ್ಯವಸ್ಥೆಗೆ ನಾವು ಒಗ್ಗಿಹೋಗಿದ್ದೇವೆ. 2002ರ ಗುಜರಾತ್ ಆಗಲಿ, 1984ರ ದೆಹಲಿ ಆಗಲಿ, 1992ರ ಭೂಪಾಲ್ ಆಗಲಿ, ನಮಗೆ ಶವಗಳ ಸಂಖ್ಯೆಯಷ್ಟೇ ಮುಖ್ಯವಾಗುತ್ತದೆ. ಸುಟ್ಟ ಶವದ ಹಿಂದೆ ನೊಂದ ಜೀವಗಳು ಇರುವುದನ್ನು ನಾವು ಗಮನಿಸುವುದೇ ಇಲ್ಲ.

ಏಕೆಂದರೆ ಆ ನೊಂದ ಜೀವಗಳನ್ನೂ ಕೊಂಡುಕೊಳ್ಳುವ ಆರ್ಥಿಕ ಸಾಮರ್ಥ್ರ್ಯವನ್ನು ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ನಮಗೆ ತಂದುಕೊಟ್ಟಿದೆ. ಬೆಂದ ಜೀವಗಳನ್ನು ಮರೆಯಲು ಮತ್ತಷ್ಟು ಜೀವಗಳು ಶವಗಳಾಗುತ್ತಿರುತ್ತವೆ. ಪುಲ್ವಾಮಾದ ಯೋಧರು ನಮ್ಮ ಮನದ ಮೂಲೆ ಸೇರಿಬಿಟ್ಟಿದ್ದಾರೆ, ಈಗ ಛತ್ತಿಸ್‍ಘಡದ 22 ಹುತಾತ್ಮ ಯೋಧರು ಚಾಲ್ತಿಯಲ್ಲಿದ್ದಾರೆ. ಇನ್ನು ಕೆಲವು ದಿನ ಮತ್ತೊಂದು ದಾಳಿ ಮತ್ತಷ್ಟು ಹುತಾತ್ಮರು. ಉತ್ತರ ಪ್ರದೇಶದಲ್ಲಿ ಉಸಿರಾಡಲಾಗದೆ ಸತ್ತ ಮಕ್ಕಳು ನಮಗೆ ಹುತಾತ್ಮರಾಗಿ ಕಾಣುವುದೇ ಇಲ್ಲ ಏಕೆಂದರೆ ಪಾಪ ಆ ಮಕ್ಕಳಿಗೆ ದೇಶ ಎಂದರೇನು ಎಂದೇ ಗೊತ್ತಿಲ್ಲ ಇನ್ನು ಯಾರೊಡನೆ ಸೆಣಸಾಡಿ ಸಾಯಲು ಸಾಧ್ಯ ? ಸಾವಿನಲ್ಲೂ ಶ್ರೇಣೀಕರಣ ಇರುವ ಏಕೈಕ ರಾಷ್ಟ್ರ ಭಾರತ. ಸಂಬೋಧನೆಯಲ್ಲಿ ಮಾತ್ರವೇ ಅಲ್ಲ, ಸಂಸ್ಕಾರದಲ್ಲೂ. ಅಂತ್ಯಕ್ರಿಯೆಯಲ್ಲೂ. ಕೊರೋನಾದಿಂದ ಹತರಾದ ಲಕ್ಷಾಂತರ ಜನರನ್ನು ಹೇಗೆ ವರ್ಗೀಕರಿಸುವುದು ? ಇದಕ್ಕೆ ಯಾರೂ ಹೊಣೆಯಲ್ಲ. ಈಗ ತಬ್ಲೀಗಿಗಳನ್ನು ದೂಷಿಸಲಾಗದು ಏಕೆಂದರೆ ಕುಂಭಮೇಳದಲ್ಲಿ ಮಿಂದೆದ್ದವರ ಚಿತ್ರ ಕಣ್ಣಿಗೆ ರಾಚುತ್ತದೆ.

ಮಸಣದಲ್ಲಿ ಜಾಗ ಸಿಗದೆ ಬಯಲಲ್ಲಿ ಸುಡುವ ಕೋವಿದ್ ಶವಗಳು ಪಕ್ಷಾಧಾರಿತ ವರ್ಗೀಕರಣಕ್ಕೊಳಪಡುತ್ತವೆ. ಸುದ್ದಿಮನೆಗಳಿಗೆ ಧಗಧಗ ಉರಿಯುವ ಚಿತೆಗಳು ಟಿ ಆರ್ ಪಿ ಹೆಚ್ಚಿಸಿಕೊಳ್ಳುವ ಸಾಧನಗಳಾಗುತ್ತವೆ. ಕೇಂದ್ರ ಸಚಿವರಿಗೆ, ರಾಜಕೀಯ ನಾಯಕರಿಗೆ ಈ ಉರಿವ ಚಿತೆಗಳಲ್ಲೂ ಪಕ್ಷದ ಚಿಹ್ನೆಗಳು ಕಾಣುತ್ತವೆ. ಆಮ್ಲಜನಕ ಮತ್ತು ಕೋವಿಡ್ ಲಸಿಕೆಯ ಕೊರತೆ ಜೀವಕ್ಕೆ ಮಾರಕ ಎನ್ನುವ ಸಾಮಾನ್ಯ ಪ್ರಜ್ಞೆಯೂ ಇಲ್ಲದ ಕೇಂದ್ರ ಆರೋಗ್ಯ ಸಚಿವರು, ಈ ಕುರಿತು ಒಂದು ಪ್ರಬುದ್ಧ ಸಲಹೆ ನೀಡುವ ಮಾಜಿ ಪ್ರಧಾನಿಯನ್ನು ಲೇವಡಿ ಮಾಡುತ್ತಾರೆ. “ ಎರಡನೆ ಅಲೆ ಹೀಗೆ ವ್ಯಾಪಕವಾಗಿ ಹರಡುತ್ತದೆ ಎಂದು ನಮಗೆ ತಿಳಿದಿತ್ತು, ಜನರು ಎಚ್ಚರ ವಹಿಸಬೇಕಿತ್ತು, ಜನರ ನಿರ್ಲಕ್ಷ್ಯದಿಂದಲೇ ಈ ಬಾರಿ ಸೋಂಕು ಹೆಚ್ಚಾಗಿದೆ ” ಎಂದು ಹೇಳುವ ಕರ್ನಾಟಕದ ಆರೋಗ್ಯ ಸಚಿವರಿಗೆ ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ನಡೆದ ರಾಜಕೀಯ ಸಮಾವೇಶಗಳು, ಚುನಾವಣೆಗಳು ಕಾಣುವುದೇ ಇಲ್ಲ.

ಇಂತಹ ಅಪ್ರಬುದ್ಧ ಜನಪ್ರತಿನಿಧಿಗಳ ನಡುವೆ #ಆತ್ಮನಿರ್ಭರ ಭಾರತ ಮತ್ತೊಮ್ಮೆ ಕೋವಿಡ್ 19 ಭೀತಿಯನ್ನು ಎದುರಿಸುತ್ತಿದೆ. ದೇಶವನ್ನು ರಕ್ಷಿಸಲು ಲಾಕ್ ಡೌನ್ ಅನಿವಾರ್ಯ ಎಂದು ಕಳೆದ ವರ್ಷ ನಾಲ್ಕು ದಿನಗಳ ನೋಟಿಸ್ ನೀಡಿ ಅವೈಜ್ಞಾನಿಕ ರೀತಿಯಲ್ಲಿ ಲಾಕ್ ಡೌನ್ ಘೋಷಿಸಿ ದೇಶವನ್ನು ಸಂಕಷ್ಟಕ್ಕೆ ದೂಡಿದ ಪ್ರಧಾನಮಂತ್ರಿ ಈಗ ದೇಶದ ರಕ್ಷಣೆಗಾಗಿ ಲಾಕ್ ಡೌನ್ ತಪ್ಪಿಸಬೇಕು, ಜನರು ಎಚ್ಚರವಹಿಸಬೇಕು ಎಂದು ಮನವಿ ಮಾಡುತ್ತಾರೆ. ಪಶ್ಚಿಮಬಂಗಾಲ, ತಮಿಳುನಾಡು, ಕೇರಳ, ಕರ್ನಾಟಕದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಈ ವಿವೇಕ ಎಲ್ಲಿ ಮರೆಯಾಗಿತ್ತು ? ಸಾರ್ವಜನಿಕ ಸಭೆಗಳಲ್ಲಿ ಜನರು ಲಕ್ಷ ಸಂಖ್ಯೆಯಲ್ಲಿ ನೆರೆದಿರುವುದು, ಜೈಘೋಷ ಕೂಗಿರುವುದು ಇದೇ ರಾಜಕೀಯ ನಾಯಕರ ಪ್ರೇರಣೆಯಿಂದಲೇ ಅಲ್ಲವೇ ?

ಜನರು ಎಚ್ಚರವಹಿಸಬೇಕು ನಿಜ, ಆದರೆ ಹೇಗೆ ? ಯಾವ ಜನರನ್ನು ಕುರಿತು ಈ ಜನಪ್ರತಿನಿಧಿಗಳು ಮಾತನಾಡುತ್ತಾರೆ. ಹಿತವಲಯದ ಜನರು ಸದಾ ಎಚ್ಚರದಿಂದಲೇ ಇರುತ್ತಾರೆ. ಲಸಿಕೆ ಪಡೆಯುವುದರಲ್ಲೂ ಇವರೇ ಮುಂದಿದ್ದಾರೆ. ಏಕೆಂದರೆ ಮಧ್ಯಮವರ್ಗದ ಹಿತವಲಯದವರಿಗೆ ಡಿಜಿಟಲ್ ಯುಗದಲ್ಲಿ ಓಡಾಟ ಅನಿವಾರ್ಯವಲ್ಲ. “ಅನಗತ್ಯವಾಗಿ ಓಡಾಡಬೇಡಿ ” ಎಂದು ಹೇಳುವ ಮುನ್ನ ಪ್ರಧಾನಮಂತ್ರಿಯವರು ಜನರ ಅಗತ್ಯತೆಗಳೇನು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಲ್ಲವೇ ? ಹಾಗೆ ಅರ್ಥಮಾಡಿಕೊಳ್ಳುವ ವ್ಯವಧಾನ ಇದ್ದಿದ್ದರೆ ಕಳೆದ ಬಾರಿ ಹಠಾತ್ತನೆ ಲಾಕ್ ಡೌನ್ ಘೋಷಿಸುತ್ತಿರಲಿಲ್ಲ. ತಟ್ಟೆ, ಜಾಗಟೆ, ಶಂಖ, ಚಪ್ಪಾಳೆಗಳಲ್ಲಿ ಔಷಧಿಯನ್ನು ಹುಡುಕುತ್ತಿರಲಿಲ್ಲ.

ಈಗಲೂ ನಮ್ಮ ಸರ್ಕಾರಗಳು ಎಚ್ಚೆತ್ತಿಲ್ಲ. ಅದೇ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಮಾದರಿಯನ್ನೇ ಅನುಸರಿಸಲಾಗುತ್ತಿದೆ. ಉಳಿದ ದಿನಗಳಲ್ಲಿ ಉಂಟಾಗುವ ಹಾನಿಗೆ ಯಾರು ಹೊಣೆ ? ರಾತ್ರಿ ಹಗಲು ಮನುಷ್ಯರಿಗೆ ಅರಿವಾಗುತ್ತದೆ, ವೈರಾಣು ಸದಾ ಕಾಲ ಹರಡುತ್ತಲೇ ಇರುತ್ತದೆ ಅಲ್ಲವೇ ? ಜನರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ದೈಹಿಕ ಅಂತರ ಕಾಪಾಡಿಕೊಳ್ಳುವುದು ಒಂದು ಮಜಲು, ಮತ್ತೊಂದು ಮಜಲಿನಲ್ಲಿ ಜನದಟ್ಟಣೆ ಮತ್ತು ಜನಸಂದಣಿಯನ್ನು ನಿಯಂತ್ರಿಸುವ ಕ್ರಮಗಳೂ ಅಗತ್ಯ ಅಲ್ಲವೇ ? ಜನಸಂದಣಿ ಮತ್ತು ಜನದಟ್ಟಣೆ ಹೆಚ್ಚಾದರೆ ಮಾಸ್ಕ್ ಧರಿಸುವುದರಿಂದಲೂ ಉಪಯೋಗವಾಗುವುದಿಲ್ಲ ಎಂಬ ಪರಿಜ್ಞಾನ ಕನಿಷ್ಟ ಆರೋಗ್ಯ ಸಚಿವರಿಗಾದರೂ ಇರಬೇಕಲ್ಲವೇ ? ಜನಜಂಗುಳಿಯನ್ನು ನಿಯಂತ್ರಿಸುವ ಯಾವುದೇ ವೈಜ್ಞಾನಿಕ ಮಾರ್ಗಗಳನ್ನು ಕಳೆದ ಒಂದು ವರ್ಷದಲ್ಲಿ ಅನುಸರಿಸಿಲ್ಲ.

ಇವೆಲ್ಲದರ ನಡುವೆ ಕಳೆದ ಒಂದು ವರ್ಷದಲ್ಲಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಯಾವ ಕ್ರಮಗಳನ್ನೂ ಜಾರಿಗೊಳಿಸಿಲ್ಲ. 2021ರ ಮಾರ್ಚ್ ನಂತರ ಕೋವಿದ್ ಇನ್ನೂ ವ್ಯಾಪಕವಾಗಿ ಹರಡುತ್ತದೆ ಎಂದು ವಿಜ್ಞಾನಿಗಳು , ತಜ್ಞರು ಎಚ್ಚರಿಸಿದ ನಂತರವಾದರೂ ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸಿ ದಾಸ್ತಾನು ಮಾಡಬಹುದಿತ್ತಲ್ಲವೇ ? ಈಗ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ ಎಂಬ ಪ್ರಧಾನಮಂತ್ರಿಯ ಆಶ್ವಾಸನೆ ಹಾಸ್ಯಾಸ್ಪದವಾಗಿ ಕಾಣುತ್ತದೆ. ದೇಶದ ಸಮಸ್ತ ಜನತೆಗೂ ಲಸಿಕೆ ನೀಡುವ ನಿರ್ಧಾರ ಕೈಗೊಳ್ಳುವ ವೇಳೆಗೆ ಎರಡನೆಯ ಅಲೆ ಅಪ್ಪಳಿಸಿಯಾಗಿತ್ತು. ಈಗ ಲಸಿಕೆಯ ಕೊರತೆಯೂ ತಲೆದೋರಿದೆ. ಕಳೆದ ಆರು ತಿಂಗಳಲ್ಲಿ ಎಲ್ಲ ನಗರಗಳಲ್ಲೂ ಕೆಲವು ಆಸ್ಪತ್ರೆಗಳನ್ನು ಗುರುತಿಸಿ, ಹಾಸಿಗೆಗಳನ್ನು ಖಾಲಿ ಇರಿಸಿ, ರೆಮಿಡಿಸಿವಿರ್ ಮುಂತಾದ ಔಷಧಿಗಳನ್ನು ದಾಸ್ತಾನು ಮಾಡುವ ಕ್ರಮಗಳನ್ನು ಕೈಗೊಳ್ಳಬಹುದಿತ್ತು. ರಾಜ್ಯಗಳಲ್ಲಿ ಅಧಿಕಾರ ಗಳಿಸುವುದು ಪ್ರಥಮ ಆದ್ಯತೆಯಾಗಿಬಿಟ್ಟಿತು.

ಮಾರುಕಟ್ಟೆ ಮುಕ್ತವಾದ ಕೂಡಲೇ ಆಡಳಿತಾರೂಢ ಪಕ್ಷಗಳಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ಕ್ಷೀಣಿಸತೊಡಗಿತು. ಸುದ್ದಿಮನೆಗಳಲ್ಲಿ ರಣಕಲಿಗಳು ಸೃಷ್ಟಿಯಾದರು, ಕೊರೋನಾ ಸಂಹಾರವಾಯಿತು, ಕೋವಿದ್ 19 ಮಟ್ಯಾಷ್ ಮಾಡಿದ್ದೂ ಆಯಿತು. ಭೀಕರ ಯುದ್ಧ ಸಾರಲಾಯಿತು. ಯುದ್ಧ ಸನ್ನದ್ಧ ರಾಷ್ಟ್ರದ ವೀರ ದಂಡನಾಯಕನಿಗೆ ಪರಾಕುಗಳನ್ನು ಹಾಡಿದ್ದೂ ಆಯಿತು. ಆದರೆ ಕೊರೋನಾ ಕೊನೆಯಾಗಲಿಲ್ಲ, ಆಗುವುದೂ ಇಲ್ಲ. ಏಕೆಂದರೆ ಇನ್ನು ಹಲವು ವರ್ಷಗಳ ಕಾಲ ನಮ್ಮ ನಡುವೆ ಇರುತ್ತದೆ. ಕೊರೋನಾದೊಂದಿಗೆ ಬದುಕುವುದನ್ನು ಕಲಿಯಿರಿ ಎಂದು ದೇಶದ ಪ್ರಧಾನಿಗಳೇ ಕಳೆದ ವರ್ಷ ಹೇಳಿದ್ದಾರಲ್ಲವೇ ? ಹೇಗೆ ಬದುಕುವುದು ? ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶಗಳನ್ನು ಮಾಡುವುದರ ಮೂಲಕವೋ ಅಥವಾ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳುವುದರ ಮೂಲಕವೋ ?

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರು ತಿಂಗಳ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಗೆ ಈಗ ಮತ್ತೊಮ್ಮೆ ದೇಶದ ಜನತೆ ಬಲಿಯಾಗುತ್ತಿದ್ದಾರೆ. ಕೋವಿದ್ 19 ಬಿಕ್ಕಟ್ಟಿನ ನಡುವೆ ಮಾರಣಾಂತಿಕ ಕರಾಳ ಶಾಸನಗಳನ್ನು ಜಾರಿಗೊಳಿಸಲು ಬಳಸಿದ ಜಾಣ್ಮೆ ಮತ್ತು ಚಾಕಚಕ್ಯತೆಯನ್ನು ಕೋವಿದ್ ನಿಯಂತ್ರಣದ ವಿಚಾರದಲ್ಲಿ ಬಳಸಿದ್ದರೆ ಬಹುಶಃ ಭಾರತ ಇಂದು ಹೆಚ್ಚು ನೆಮ್ಮದಿ ಕಾಣಬಹುದಿತ್ತು. ಸಾವು ನೋವುಗಳನ್ನು ತಪ್ಪಿಸಬಹುದಿತ್ತು. ಜನಸಾಮಾನ್ಯರ ಬವಣೆಯನ್ನು ಕಡಿಮೆ ಮಾಡಬಹುದಿತ್ತು. “ ಇಷ್ಟೊಂದು ಜನರನ್ನು ನಾನೆಂದೂ ನೋಡಿರಲಿಲ್ಲ ” ಎನ್ನುವ ಉದ್ಗಾರದ ಬದಲು ದೇಶದ ಪ್ರಧಾನಿಯ ಬಾಯಲ್ಲಿ “ ಇಷ್ಟೊಂದು ಸಾವು ನೋವುಗಳನ್ನು ಎಂದೂ ಕಂಡಿರಲಿಲ್ಲ ”ಎಂಬ ವಿಷಾದದ ನುಡಿ ಹೊರಟಿದ್ದರೆ ಸಾರ್ಥಕವಾಗುತ್ತಿತ್ತು.

ಇದು ಸಂಯಮ, ಸಂವೇದನೆ ಮತ್ತು ಮಾನವೀಯತೆಯ ಪ್ರಶ್ನೆ. #ಆತ್ಮನಿರ್ಭರ ಭಾರತ ಇವುಗಳನ್ನು ಕಳೆದುಕೊಂಡಿದೆ. ಎಲ್ಲವನ್ನೂ ರಾಜಕೀಯ ಮಸೂರದ ಮೂಲಕ ನೋಡುವ ಒಂದು ಅಪ್ರಬುದ್ಧ ಆಡಳಿತ ವ್ಯವಸ್ಥೆಯಲ್ಲಿ ಭಾರತದ 137 ಕೋಟಿ ಜನತೆ ಬದುಕು ಸವೆಸಬೇಕಿದೆ. ತಣ್ಣನೆಯ ಕ್ರೌರ್ಯ ನವಿರಾಗಿ ಆಡಳಿತ ವ್ಯವಸ್ಥೆಯಲ್ಲಿ ನೆಲೆ ಕಂಡುಕೊಳ್ಳುತ್ತಿದೆ. ಹಾಗಾಗಿ ಒಂದೆರಡು ಸಾವಿರ ಜನರ ಸಾವು ಸಹಜ ಸಾವಿನಂತೆಯೇ ಕಾಣುತ್ತದೆ. ಬದುಕಿರುವವರು “ ನಮ್ಮ ಜೀವ ನಮ್ಮ ಕೈಯ್ಯಲ್ಲಿ ” ಎಂಬ ಮಂತ್ರ ಜಪಿಸುತ್ತಾ ಕಾಲ ಕಳೆಯಬೇಕಿದೆ. ಇಂತಹ ಒಂದು ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯಿಂದ ಸಾರ್ವತ್ರಿಕ ಆರೋಗ್ಯ ಪಾಲನೆಯ ನೀತಿಯನ್ನು ನಿರೀಕ್ಷಿಸುವುದಾದರೂ ಹೇಗೆ ? ಇದು ಭಾರತದ ಆಳುವವರ್ಗಗಳ ಕಲ್ಪನೆಗೂ ಮೀರಿದ ಒಂದು ಉದಾತ್ತ ಜಾಗತಿಕ ಪರಿಕಲ್ಪನೆ.

ಕರೋನಾ ನಮ್ಮೊಡನೆಯೇ ಇರಲಿದೆ. ನಾವು ಬದುಕಲು ಕಲಿಯಬೇಕಿದೆ, ಜಾಗ್ರತೆಯೊಂದಿಗೆ, ಮುನ್ನೆಚ್ಚರಿಕೆಯೊಂದಿಗೆ. ಸರ್ಕಾರ ಮಾರುಕಟ್ಟೆಯತ್ತ ದೃಷ್ಟಿ ನೆಟ್ಟಿದೆ. ನಾವು ನಮ್ಮ ಮನೆಯ ಜಗುಲಿಕಟ್ಟೆಯ ಮೇಲೆ ನೆಮ್ಮದಿಯ ಬದುಕು ಸಾಗಿಸೋಣ.

Previous Post

ಕನ್ನಡದ ಹಿರಿಯ ನಿಘಂಟು ತಜ್ಞ ಪ್ರೊ ಜಿ ವೆಂಕಟಸುಬ್ಬಯ್ಯ ಅಸ್ತಂಗತ

Next Post

ನಾಳೆಯಿಂದ ಮೇ31 ರವರೆಗೂ ಬ್ಯಾಂಕಿಂಗ್ ಸೇವೆ ಸಮಯ ಬದಲು

Related Posts

Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
0

"ಜೆಡಿಎಸ್ ಅವರ ಯೋಗ್ಯತೆಗೆ ಒಂದು ಕೆಲಸ ಮಾಡಿಲ್ಲ. ತುಂಗಭದ್ರಾ ಅಣೆಕಟ್ಟಿನ ಗೇಟ್ ಕಿತ್ತು ಹೋದಾಗ ಒಂದೇ ವಾರದಲ್ಲಿ ಗೇಟ್ ದುರಸ್ತಿ ಮಾಡಲಾಗಿದೆ. ಜೆಡಿಎಸ್ ಅವರಿಗೆ ಏನೂ ಮಾಡಲು...

Read moreDetails

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

November 19, 2025
ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

November 19, 2025

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

November 18, 2025

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025
Next Post
ನಾಳೆಯಿಂದ ಮೇ31 ರವರೆಗೂ ಬ್ಯಾಂಕಿಂಗ್ ಸೇವೆ ಸಮಯ ಬದಲು

ನಾಳೆಯಿಂದ ಮೇ31 ರವರೆಗೂ ಬ್ಯಾಂಕಿಂಗ್ ಸೇವೆ ಸಮಯ ಬದಲು

Please login to join discussion

Recent News

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
Top Story

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

by ಪ್ರತಿಧ್ವನಿ
November 20, 2025
ಮರೆವುದೆಂತು ಆ ಗಟ್ಟಿ ಜನಪರ ದನಿಯನು
Top Story

ಮರೆವುದೆಂತು ಆ ಗಟ್ಟಿ ಜನಪರ ದನಿಯನು

by ನಾ ದಿವಾಕರ
November 20, 2025
Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
Top Story

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

by ಪ್ರತಿಧ್ವನಿ
November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ
Top Story

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

Daily Horoscope: ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

November 20, 2025
ಮರೆವುದೆಂತು ಆ ಗಟ್ಟಿ ಜನಪರ ದನಿಯನು

ಮರೆವುದೆಂತು ಆ ಗಟ್ಟಿ ಜನಪರ ದನಿಯನು

November 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada