ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಅವರ ವಿರುದ್ದ ಬಿಜೆಪಿ ಸಂಸದ ಪಿ ಪಿ ಚೌಧರಿ ಅವರು ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಿದ್ದಾರೆ. ಸುಪ್ರಿಂಕೋರ್ಟ್ ಮಾಜಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್ ಅವರ ಕುರಿತು ಮಹುವಾ ಮೋಯಿತ್ರಾ ಅವರು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆಂದು ಚೌಧರಿ ಅವರು ಹೇಳಿದ್ದಾರೆ.
ಫೆಬ್ರುವರಿ 9 ರಂದು ನಡೆದ ಲೋಕಸಭೆ ಸದನದಲ್ಲಿ ಮೋಯಿತ್ರಾ ಅವರು, ರಂಜನ್ ಗೊಗಾಯ್ ಅವರ ಇದ್ದಂತಹ ಲೈಂಗಿಕ ಕಿರುಕುಳದ ಪ್ರಕರಣವನ್ನು ಪ್ರಸ್ತಾಪಿಸಿದ್ದರು. ಈ ಪ್ರಕರಣವನ್ನು ಸುಪ್ರಿಂಕೋರ್ಟ್ ನಿರ್ವಹಿಸಿದ ರೀತಿಯನ್ನು ಟೀಕಿಸಿದ್ದರು. ಇವರ ಹೇಳಿಕೆಗಳ ವಿರುದ್ದ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಬುಧವಾರದಂದು ನಡೆದ ಕಲಾಪದಲ್ಲಿ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾನೂನು ತಜ್ಞರ ಪ್ರಕಾರ, ಮಹುವಾ ಮೋಯಿತ್ರಾ ಅವರ ಹೇಳಿಕೆ ʼಮಾಜಿʼ ನ್ಯಾಯಾಧೀಶರ ಮೇಲೆ ಇರುವುದರಿಂದ ಅವರಿಗೆ ಯಾವುದೇ ತೊಡಕಾಗುವುದಿಲ್ಲ. ಒಂದು ವೇಳೆ ʼಹಾಲಿʼ ನ್ಯಾಯಾಧೀಶರ ಕುರಿತು ಮಾತನಾಡಿದ್ದಿದ್ದರೆ ಅದು ತೊಂದರೆಗೆ ಕಾರಣವಾಗುತ್ತಿತ್ತು ಎಂದು ಹೇಳಿದ್ದಾರೆ.
“ನ್ಯಾಯಾಧೀಶರ ಕುರಿತು ಸದನದಲ್ಲಿ ಚರ್ಚೆ ನಡೆಸಬಹುದೇ ಇಲ್ಲವೇ ಎಂಬುದು ಸ್ಪಷ್ಟವಾಗಬೇಕಿದೆ,” ಎಂದು ಪಿಪಿ ಚೌಧರಿ ಅವರು ಹೇಳಿದ್ದಾರೆ. ಇದರೊಂದಿಗೆ ಮಾಜಿ ಅಥವಾ ಹಾಲಿ ನ್ಯಾಯಾಧೀಶರ ಕುರಿತು ಸದನದಲ್ಲಿ ಚರ್ಚಿಸುವಂತಿಲ್ಲ ಎಂಬ ನಿಯಮವನ್ನು ಕಲಾಪದ ವೇಳೆ ಓದಿ ಹೇಳಿದ್ದಾರೆ. ಮಹುವಾ ಮೋಯಿತ್ರಾ ಅವರು ಉದ್ದೇಶಪೂರ್ವಕವಾಗಿ ಹೇಳಿಕೆಯನ್ನು ನೀಡಿದ್ದಾರೆ ಎಂದಿದ್ದಾರೆ.
ಚೌಧರಿ ಅವರನ್ನು ಬೆಂಬಲಿಸಿ ಮಾತನಾಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ಮಹುವಾ ಮೋಯಿತ್ರಾ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.