ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ತಾಳಿದೆ. ಬಲ್ಬೀರ್ ಸಿಂಗ್ ರಾಜೇವಾಲ್ ಅಧ್ಯಕ್ಷತೆಯಲ್ಲಿ ಫೆಬ್ರವರಿ 2 ರಂದು ಕಿಸಾನ್ ಮೋರ್ಚಾ ಸಭೆ ನಡೆಸಿ, ಫೆಬ್ರವರಿ 6 ರಂದು ದೇಶಾದ್ಯಂತ ಶಾಂತಿಯುತ “ರಸ್ತೆ ಬಂದ್ ಚಳವಳಿ” ಗೆ ಕರೆನೀಡಿದೆ.
ರೈತರ ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಪ್ರತಿಭಟನಾ ನಿರತ ರೈತರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದು, ಇದನ್ನು ಸರ್ಕಾರ ನಿಲ್ಲಿಸದಿದ್ದಲ್ಲಿ ಸರ್ಕಾರದೊಂದಿಗೆ ಮುಕ್ತ ಸಭೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಕಿಸಾನ್ ಮೋರ್ಚಾ ತಿಳಿಸಿದೆ.
ರಸ್ತೆಗಳನ್ನು ಅಗೆಯುವುದು, ಕಬ್ಬಿಣದ ರಾಡ್ಗಳ ಅಳವಡಿಕೆ, ಮುಳ್ಳಿನ ತಂತಿ ಬೇಲಿ ಹಾಕುವುದು, ಅಂತರ್ಜಾಲ ಸೇವೆ ಕಡಿತಗೊಳಿಸುವುದು, ರೈಲ್ವೇ ಮಾರ್ಗಗಳ ಬದಲಾವಣೆ, ಬಿಜೆಪಿ – ಆರ್ಎಸ್ಎಸ್ ಕಾರ್ಯಕರ್ತರನ್ನು ಬಿಟ್ಟು ಶಾಂತಿಯುತ ಪ್ರತಿಭಟನೆಗೆ ತೊಂದರೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರೈತರ ಪ್ರತಿಭಟನೆಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ಭಯಭೀತವಾದಂತಿದೆ. ಇತ್ತ ಪೊಲೀಸರು ಅನೇಕ ಪ್ರತಿಭಟನಾ ನಿರತ ರೈತರನ್ನು ಬಂಧಿಸಿದ್ದಾರೆ. ಮತ್ತು ಅವರ ವಾಹನಗಳನ್ನು ವಶಪಡಿಸಿಕೊಂಡಿರುವುದನ್ನು ಕಿಸಾನ್ ಮೋರ್ಚಾ ತೀವ್ರವಾಗಿ ಖಂಡಿಸಿದೆ.
ಪ್ರತಿಭಟನಾ ನಿರತ ರೈತರಲ್ಲಿ ಸಾಕಷ್ಟು ಜನ ಕಣ್ಮರೆಯಾಗಿದ್ದಾರೆ. ರೈತರು ಮತ್ತು ಪರ್ತಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವುದು, ರೈತ ಚಳುವಳಿಯ ನೈಜ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಟ್ವಿಟರ್ ಖಾತೆಗಳನ್ನು ಮುಚ್ಚಿರುವುದು, ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಗಡಿ ಭಾಗಗಳಲ್ಲಿ ಪೊಲೀಸರು ಹೆಚ್ಚು ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ. ಮುಳ್ಳುತಂತಿ ಬೇಲಿ, ಕಬ್ಬಿಣದ ರಾಡುಗಳನ್ನು ಅಳವಡಿಸಿ ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಧಾನಿ ಮೋದಿಯವರು ರೈತರೊಂದಿಗೆ ಮಾತಾಡಲು ಸಿದ್ದ ಎನ್ನುತ್ತಾರೆ. ಮತ್ತೊಂದೆಡೆ ಚಳವಳಿ ನಿರತ ರೈತರಿಗೆ ಕಿರುಕುಳ ನಿಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇವುಗಳನ್ನು ವಿರೋಧಿಸಿ ಫೆಬ್ರವರಿ 6 ರಂದು ದೇಶಾದ್ಯಂತ ಬೆಳಿಗ್ಗೆ 12 ರಿಂದ ಮಧ್ಯಾಹ್ನ 3 ರವರೆಗೆ ಹೆದ್ದಾರಿಗಳಲ್ಲಿ ಶಾಂತಿಯುತ ರಸ್ತೆ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.