ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ-ಉತ್ತರ ಪ್ರದೇಶ ಗಡಿ ಗಾಝೀಪುರದಲ್ಲಿ ನಡೆದ ಸಿನಿಮೀಯ ಮಾದರಿ ತಿರುವುಗಳು ರೈತ ಪ್ರತಿಭಟನೆಯನ್ನು ಹತ್ತಿಕ್ಕುವ ಸರ್ಕಾರದ ರೂಪುರೇಷೆಯನ್ನೇ ಬುಡಮೇಲುಗೊಳಿಸಿದೆ. ಗುರುವಾರ ತಡರಾತ್ರಿ ಸಶಸ್ತ್ರ ಪಡೆಗಳು ರೈತರು ಪ್ರತಿಭಟನೆ ನಡೆಸುವಲ್ಲಿ ನುಗ್ಗಿದ್ದು, ಪ್ರತಿಭಟನಾಕಾರರನ್ನು ಹಿಮ್ಮಟ್ಟಿಸಲು ಪ್ರಯತ್ನಿಸಿದೆ.
ಎನ್‌ಡಿಟಿವಿ ವರದಿ ಪ್ರಕಾರ, ಕೇಂದ್ರೀಯ ಸಶಸ್ತ್ರ ಪಡೆಯ 300 ಸಿಬ್ಬಂದಿ, ಪಿಎಸಿಯ 600 ಟ್ರೂಪ್ಸ್ ಹಾಗೂ 1000 ಕ್ಕೂ ಹೆಚ್ಚು ಸ್ಥಳೀಯ ಪೊಲೀಸರು ರೈತರು ಪ್ರತಿಭಟನೆ ನಡೆಸುವ ಕಡೆಗೆ ನುಗ್ಗಿದ್ದಾರೆ. ಮೊದಲಿಗೆ, ರೈತ ಮುಖಂಡರು ತಣ್ಣಗಿದ್ದು, ಶಾಂತಿಯುತವಾಗಿ ಬಂಧನಕ್ಕೊಳಗಾಗಲು ಸನ್ನದ್ಧರಾಗಿದ್ದರು. ಆದರೆ ಯಾವಾಗ ಸ್ಥಳೀಯ ಬಿಜೆಪಿ ಎಮ್‌ಎಲ್‌ಎ ಹಾಗೂ ಆತನ ಬೆಂಬಲಿಗರು ಭದ್ರತಾ ಸಿಬ್ಬಂದಿಯೊಂದಿಗೆ ಸೇರಿ ನೇರವಾಗಿ ಪ್ರತಿಭಟನಾಕಾರರನ್ನು ಎಬ್ಬಿಸಲು ಪ್ರಯತ್ನಿಸಿದರೋ, ಪರಿಸ್ಥಿತಿ ಬಿಗಡಾಯಿಸಿತು. ಅದುವರೆಗೂ ಪೊಲೀಸರೊಂದಿಗೆ ತೆರಳಲು ಹೊರಟಿದ್ದ ರೈತ ನಾಯಕರು ಸ್ಥಳದಿಂದ ನಿರ್ಗಮಿಸಿ, ಪೊಲೀಸರೊಂದಿಗೆ ತೆರಳಲು ನಿರಾಕರಿಸಿದ್ದಾರೆ. ಇದು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ.
ಈ ವೇಳೆ, ಮಾಧ್ಯಮಗಳೆದುರು ಬಹಿರಂಗವಾಗಿ ಮಾತನಾಡಿದ ಭಾರತೀಯ ಕಿಸಾನ್ ಯುನಿಯನ್ ಮುಖಂಡ ರಾಕೇಶ್ ಟಿಕಾಯತ್, ಅವರು ನಮ್ಮ ಮೇಲೆ ಗುಂಡು ಹಾರಿಸಲಿ. ನಾನಿಲ್ಲೇ ಇರುತ್ತೇನೆ. ನೇಣು ಹಾಕಿಕೊಂಡರೂ, ಸತ್ಯಾಗ್ರಹದ ಜಾಗ ಖಾಲಿ ಮಾಡುವುದಿಲ್ಲ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಒಂದು ಹಂತದಲ್ಲಿ, ಪ್ರತಿಭಟನೆಯನ್ನು ಸರ್ಕಾರ ಇನ್ನೇನು ಮಟ್ಟ ಹಾಕಿಯೇ ತೀರುತ್ತದೆಂಬ ಪ್ರಾಮಾಣಿಕ ನೋವು ಟಿಕಾಯತ್ ಅವರನ್ನು ಕಾಡುತ್ತಿತ್ತು ಎಂದು ಟೀಕಾಯತ್ ಸಹವರ್ತಿಗಳು ಹೇಳಿರುವುದಾಗಿ ದಿ ಕ್ವಿಂಟ್ ವರದಿ ಮಾಡಿದೆ. ಇದೇ ನೋವು ಅವರ ಮಾತಿನಲ್ಲಿ ಪ್ರತಿಫಲಿಸಿತ್ತು. ಸುಮಾರು ಅರ್ಧಗಂಟೆಯಷ್ಟು ನಿರಂತರ ಮಾತನಾಡಿದ ಟಿಕಾಯತ್, “ಸರ್ಕಾರ ನಮ್ಮನ್ನು (ರೈತರನ್ನು) ನಾಶ ಮಾಡಲು ನೋಡುತ್ತಿದೆ. ನಾವಿದಕ್ಕೆ ಅನುವು ಮಾಡಿಕೊಡುವುದಿಲ್ಲ. ಒಂದೋ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಅಥವಾ ಟೀಕಾಯತ್ ನೇಣು ಹಾಕಿಕೊಳ್ಳುತ್ತಾನೆ. ರೈತರ ವಿರುದ್ಧ ಷಡ್ಯಂತ್ರಗಳನ್ನು ನಡೆಸಲಾಗುತ್ತಿದೆ” ಎಂದು ಕಣ್ಣಿರಿನೊಂದಿಗೆ ದುಖತಪ್ತ ಭಾಷಣ ಮಾಡಿದ್ದಾರೆ.

ರಾಕೇಶ್ ಟೀಕಾಯತ್‌ರ ಈ ಮಾತುಗಳು ನಿಮಿಷಗಳಲ್ಲೇ ಸಾಕಷ್ಟು ವೈರಲ್ ಆಗಿದೆ. ಈ ಭಾಷಣವು ರಾಕೇಶ್ ಟೀಕಾಯತ್ ಇರುವಲ್ಲಿಗೆ ಹಳ್ಳಿ ಹಳ್ಳಿಗಳಿಂದ ರೈತ ಗುಂಪುಗಳನ್ನು ಬಂದ ತಲುಪುವಂತೆ ಪ್ರಚೋದಿಸಿದೆ. ರಾತ್ರೋರಾತ್ರಿ ತಂಡೋಪತಂಡವಾಗಿ ಬಂದು ಸೇರಿದ ರೈತರ ದಂಡನ್ನು ಕಂಡು ಸರ್ಕಾರ ನಿಯೋಜಿತ ಸಶಸ್ತ್ರ ಪಡೆ ಕ್ರಮೇಣ ಹಿಂದೆ ಸರಿದಿದೆ.
ಜೊತೆಗೆ, ಶುಕ್ರವಾರ ಬೆಳಿಗ್ಗೆ, ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಭಾರತೀಯ ಕಿಸಾನ್ ಒಕ್ಕೂಟದ ಜೊತೆ ಮಾತನಾಡಿ ತಮ್ಮ ಪಕ್ಷದ ಬೆಂಬಲವನ್ನು ವಿಸ್ತರಿಸಿದ್ದಾರೆ.
“ಇದು ರೈತರಿಗೆ ಸಾವು-ಬದುಕಿನ ವಿಷಯವಾಗಿದೆ, ಆದರೆ ಚಿಂತಿಸಬೇಡಿ. ಎಲ್ಲರೂ ಒಟ್ಟಾಗಿರಬೇಕು, ಇದರಲ್ಲಿ ಒಂದಾಗಬೇಕು” ಎಂದು ಅಜಿತ್ ಸಿಂಗ್ ಅವರ ಪುತ್ರ ಜಯಂತ್ ಚೌಧರಿ ಪ್ರತಿಭಟನಾ ನಿರತ ರೈತರಿಗೆ ಭರವಸೆ ನೀಡಿದ್ದಾರೆ.
ದೆಹಲಿ ಟ್ರಾಕ್ಟರ್ ಪರೇಡ್ ಹಿಂಸಾಚಾರದ ನೆಪದಲ್ಲಿ, ಗಾಜೀಪುರದ ರೈತ ಹೋರಾಟಗಾರರಿಗೆ ವಿದ್ಯುತ್ ಕಡಿತಗೊಳಿಸಿ, ನೀರಿನ ಸರಬರಾಜನ್ನು ತಡೆದ ಉತ್ತರಪ್ರದೇಶ ಯೋಗಿ ಸರ್ಕಾರ, ರೈತ ಹೋರಾಟವನ್ನು ಮಟ್ಟ ಹಾಕಲು ಯಶಸ್ವಿಯಾಯಿತೆಂದು ಭಾವಿಸಿಕೊಳ್ಳುತ್ತಿರುವಾಗಲೇ, ರೈತ ಹೋರಾಟಕ್ಕೆ ಇನ್ನಷ್ಟು ಹುರುಪು ಬಂದಿದೆ. ರೈತ ಹೋರಾಟದ ಸಾಗರಕ್ಕೆ ಹೊಸ ನದಿಗಳು ಸೇರಿಕೊಂಡಿವೆ.