ಭಾರತದ ಪ್ರಾಚೀನ ರಾಜಕೀಯ ಕಾಂಗ್ರೆಸ್ ತಾನು ಅಧಿಕಾರದಲ್ಲಿರುವ ವೇಳೆಗಿಂತಲೂ, ಅಧಿಕಾರದಲ್ಲಿಲ್ಲದ, ವಿಪಕ್ಷ ಸ್ಥಾನದಲ್ಲಿರುವ ಸಂಧರ್ಭದಲ್ಲಿ ಹೆಚ್ಚು ಟೀಕೆಗೆ ಗುರಿಯಾಗಿದೆ. ಒಂದು ಸಮರ್ಥ ವಿರೋಧಪಕ್ಷವಾಗಿ ನೆಲೆ ಕಾಣಲು ಸೋತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಹೊತ್ತಿದೆ. ಅದೇ ವೇಳೆ, ತನ್ನ ಆಂತರಿಕ ನಾಯಕತ್ವದಲ್ಲೂ ಕಾಂಗ್ರೆಸ್ ತನ್ನ ಸಮರ್ಥತೆಯನ್ನು ಪ್ರದರ್ಶಿಸುತ್ತಿಲ್ಲ.
ಕಾಂಗ್ರೆಸ್ ನ ಹಿರಿಯ ನಾಯಕರು ದೆಹಲಿ ನಾಯಕತ್ವದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಪದೇ ಪದೇ ಏಳುತ್ತಿರುವ ಬಂಡಾಯವನ್ನು ಶಮನಗೊಳಿಸಲು ಕಾಂಗ್ರೆಸ್ ನಾಯಕತ್ವ ಹೈರಾಣಾಗುತ್ತಿದೆ. ಇದರ ಜೊತೆಗೆ ಹೊಸ ಯುವ ನಾಯಕರನ್ನು ಬೆಳೆಸುವಲ್ಲಿ ಹಾಗೂ ಈಗಾಗಲೇ ಇರುವ ಯುವ ನಾಯಕರನ್ನು ಮುನ್ನಡೆಸುವಲ್ಲಿ ಕಾಂಗ್ರೆಸ್ ಎಡವುತ್ತಿದೆ.
ಇತ್ತೀಚೆಗೆ ಗುಜರಾತಿನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ, ಕಾಂಗ್ರೆಸ್ ಯುವ ನಾಯಕ ಹಾರ್ದಿಕ್ ಪಟೇಲ್ ಇದೀಗ ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಪಕ್ಷದ ಕಾರ್ಯಾಕಾರಿ ಸದಸ್ಯರಾದರೂ ತನಗೆ ಸ್ಥಳೀಯ ಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ವಹಿಸದೆ ನಾಮಾಕಾವಸ್ಥೆ ಮಾಡಲಾಗಿದೆಯೆಂಬುದು ಅವರ ಆರೋಪ.
ಪಾಟೀದಾರ್ ಸಮುದಾಯದ ಮೀಸಲಾತಿ ಹೋರಾಟಗಳಲ್ಲಿ ಬೆಳಕಿಗೆ ಬಂದ ಹಾರ್ದಿಕ್ ಪಟೇಲ್ ಪಾಟೀದಾರ್ ಸಮುದಾಯದ ಭರವಸೆಯ ನಾಯಕನಾಗಿ ಹೊರಹೊಮ್ಮಿದ್ದರು. ಬಳಿಕ ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಾರ್ಯಕಾರಿ ಅಧ್ಯಕ್ಷ ಪದವಿಯನ್ನು ನೀಡಿತ್ತು. ಇದೀಗ ಅವರದೇ ಆರೋಪದಂತೆ, ಪಾಟೀದಾರ್ ಸಮುದಾಯ ಬಲಾಢ್ಯವಾಗಿರುವ ಕ್ಷೇತ್ರದಲ್ಲೂ ಅವರ ಅಭಿಪ್ರಾಯ ಪಡೆಯದೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಚುನಾವಣೆಯ ಹೀನಾಯ ಸೋಲಿಗೆ ಇದೂ ಕಾರಣವೆಂದು ಪಟೇಲ್ ಆರೋಪ.

ಪಟೇಲ್ ಆರೋಪವನ್ನು ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಯಾಕೆಂದರೆ ಸೂರತ್‌ನ ಚುನಾವಣೆಯಲ್ಲಿ ಪಾಟೀದಾರ್ ಪ್ರಾಬಲ್ಯ ಕ್ಷೇತ್ರದ 30 ಸ್ಥಾನಗಳನ್ನೂ ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ ಪಾಟೀದಾರ್ ಕ್ಷೇತ್ರದಲ್ಲಿ ಸೋಲು ಅನುಭವಿಸಲು ಪಟೇಲ್ ಅವರನ್ನು ನಿರ್ಲಕ್ಷಿಸಿರುವುದೇ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.
ಹಾರ್ದಿಕ್ ಪಟೇಲ್ ಅವರಂತಹ ಯುವ ನಾಯಕರನ್ನು ಕಾಂಗ್ರೆಸ್ ಅಸಮರ್ಪಕವಾಗಿ ಬಳಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವಾರು ಬಾರಿ ಕಾಂಗ್ರೆಸ್ ತನ್ನ ಯುವ ನಾಯಕರೊಂದಿಗೆ ಇದೇ ರೀತಿ ವರ್ತಿಸಿದೆ. ವಿವಿಧ ರಾಜ್ಯಗಳಲ್ಲಿ ಯುವ ಕಾಂಗ್ರೆಸ್ ನಾಯಕರು VS ಕಾಂಗ್ರೆಸ್ ಅಥವಾ ಹಿರಿಯ ಕಾಂಗ್ರೆಸ್ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇತ್ತೀಚೆಗೆ, ಕರ್ನಾಟಕ ಯೂತ್ ಕಾಂಗ್ರೆಸ್ ಚುನಾವಣೆಯಲ್ಲೂ ಅಂತಹದ್ದೇ ಯಡವಟ್ಟೊಂದನ್ನು ಕಾಂಗ್ರೆಸ್ ಮಾಡಿಕೊಂಡಿತು. ಮೊಹಮ್ಮದ್ ಹಾರಿಸ್ ನಲಪಾಡ್‌ಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ ಗೆದ್ದ ಬಳಿಕ ಅವರನ್ನು ಅನರ್ಹಗೊಳಿಸಿ ಎರಡನೇ ಸ್ಥಾನ ಪಡೆದ ಅಭ್ಯರ್ಥಿಯನ್ನು ವಿಜಯಿಯೆಂದು ಘೋಷಿಸಿತು. ಈ ಕುರಿತು ಕಾಂಗ್ರೆಸ್‌ನ ನ್ಯಾಯೀಕರಣಗಳು ಅದೇನೇ ಇದ್ದರೂ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಕಾಂಗ್ರೆಸ್ ಈ ನಡೆಯಲ್ಲಿ ಎಡವಟ್ಟು ಮಾಡಿಕೊಂಡಿರುವುದು ಕಾಣುತ್ತದೆ. ಈ ಯುವ ನಾಯಕನ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅನರ್ಹಗೊಂಡ ನಾಯಕ ಕೂಡಾ ಪಕ್ಷದ ಆಂತರಿಕ ಸಬೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿತ್ತು.
ಕಳೆದ ವರ್ಷದ ದೇಶದ ರಾಜಕೀಯ ಪ್ರಹಸನ ಗಮನಿಸುವುದಾದರೆ, ಕಾಂಗ್ರೆಸ್ ತನ್ನ ಯುವನಾಯಕರೊಂದಿಗೆ ನಡೆಸಿದ ಜಟಾಪಟಿಯಿಂದ ಒಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು. ಇನ್ನೊಂದು ರಾಜ್ಯದಲ್ಲಿ ಬಹುತೇಕ ಅಧಿಕಾರ ಕಳೆದುಕೊಳ್ಳುವ ಮಟ್ಟಕ್ಕೆ ಬಂದು ತಲುಪಿತ್ತು.

ಕಳೆದ ಮಾರ್ಚ್‌ನಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಬೆಂಬಲಿಗರು ಪಕ್ಷ ಬಿಟ್ಟು ಬಿಜೆಪಿ ಸೇರಿಕೊಂಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಕಮಲ್‌ನಾಥ್ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಉರುಳಿತ್ತು. ಜ್ಯೋತಿರಾಧಿತ್ಯ ಸಿಂಧಿಯಾ ಪಕ್ಷ ತೊರೆಯಲು ಸಮನ್ವಯ ಸಾಧಿಸಲು ವಿಫಲವಾದ ಕಾಂಗ್ರೆಸ್ ನಾಯಕತ್ವವೇ ಕಾರಣ ಎನ್ನಲಾಗಿದೆ.
ಮೂಲಗಳು ತಿಳಿಸಿರುವಂತೆ, ಚುಣಾವಣೆಗೆ ಮುಂಚೆಯಿಂದಲೂ ಸಿಎಂ ಸ್ಥಾನಕ್ಕಾಗಿ ಜ್ಯೋತಿರಾಧಿತ್ಯ ಮತ್ತು ಕಮಲ್ ನಾಥ್ ನಡುವೆ ಪೈಪೋಟಿ ಇತ್ತು. ಅಂದಿನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ತಮಗೆ ಸಿಎಂ ಸ್ಥಾನದ ಭರವಸೆ ನೀಡಿದ್ಧಾರೆ ಎಂಬುದನ್ನು ಬಹಿರಂಗವಾಗಿಯೇ ಸಿಂಧಿಯಾ ಹೇಳಿಕೊಂಡಿದ್ದರು. ಆದರೆ, ಫಲಿತಾಂಶ ಹೊರಬಿದ್ದು ಪಕ್ಷ ಬಹುಮತ ಪಡೆಯುತ್ತಲೇ ಕಾಂಗ್ರೆಸ್ಸಿನ ಹಿರಿಯ ತಲೆಗಳ ಕೈ ಮೇಲಾಯಿತು. ಸಿಂಧಿಯಾ ಬದಲಿಗೆ ಕಮಲ್ ನಾಥ್ ಸಿಎಂ ಹುದ್ದೆಗೇರಿದರು. ಬಳಿಕ ಕನಿಷ್ಠ ಪಕ್ಷದ ಅಧ್ಯಕ್ಷ ಸ್ಥಾನವನ್ನಾದರೂ ಕೊಡಿ, ಪಕ್ಷ ಕಟ್ಟುವೆ ಎಂಬ ಪ್ರಸ್ತಾಪವನ್ನು ಸಿಂಧಿಯಾ ಮುಂದಿಟ್ಟಿದ್ದರು. ಆದರೆ ಬರೋಬ್ಬರಿ 15 ತಿಂಗಳು ಕಳೆದರೂ ಸಿಎಂ ಕಮಲ್ ನಾಥ್ ರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿದಿದ್ದರೆ ವಿನಃ ಸಿಂಧಿಯಾಗೆ ಅಧಿಕಾರ ಸಿಗಲಿಲ್ಲ. ಆ ಅವಮಾನವನ್ನೂ ಸಹಿಸಿಕೊಂಡ ಸಿಂಧಿಯಾ, ಕನಿಷ್ಠ ಪಕ್ಷದಿಂದ ರಾಜ್ಯಸಭೆ ಪ್ರವೇಶದ ಅವಕಾಶವಾದರೂ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾದಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಗಳು ಆ ನಿರೀಕ್ಷೆ ಕೂಡ ಕೈಗೂಡದು. ತಮ್ಮ ವಿರುದ್ಧ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಪ್ರಬಲ ತಂತ್ರ ಹೂಡಿದ್ದಾರೆ ಎಂಬುದು ಅರಿವಾಗುತ್ತಲೇ ಬಿಜೆಪಿ ಸೇರಿಕೊಂಡಿದ್ದಾರೆ.
ಇಂತಹದ್ದೇ ಸನ್ನಿವೇಶವೊಂದರಲ್ಲಿ, ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೂ ಬಹುತೇಕ ಸಂಚಕಾರ ಬಂದೊದಗಿತ್ತು. ಯುವ ನಾಯಕ ಸಚಿನ್ ಪೈಲಟ್ ಹಾಗೂ ಬೆಂಬಲಿಗ ಶಾಸಕರು ಬಂಡಾಯವೆದ್ದು, ದೆಹಲಿಗೆ ದೌಡಾಯಿಸಿದ್ದರು. ಆದರೆ ಹಿಂದಿನ ತಪ್ಪಿನಿಂದ ಅದಾಗಲೇ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್, ರಾಹುಲ್ ಗಾಂಧಿ ಮೂಲಕ ಬಂಡಾಯ ಶಮನಗೊಳಿಸಿತ್ತು.
ಒಟ್ಟು ಮೊತ್ತ ದೇಶೀಯ ಕಾಂಗ್ರೆಸ್‌ಅನ್ನು ಸ್ಥೂಲವಾಗಿ ಗಮನಿಸುವಾಗ ಭವಿಷ್ಯದ ನಾಯಕರೊಂದಿಗಿನ ಕಾಂಗ್ರೆಸ್ ನಡವಳಿಕೆ ಅಸ್ಪಷ್ಟವಾಗಿಯೂ, ಕಟುವಾಗಿಯೂ ತೋರುತ್ತಿದೆ. ಅತೀ ಹೆಚ್ಚು ʼಯುವ ಜನಾಂಗʼ ಇರುವ ಭಾರತದಂತಹ ದೇಶದಲ್ಲಿ ರಾಜಕಾರಣವನ್ನು ಯುವಜನಾಂಗದ ಕಡೆಗೆ ಕೇಂದ್ರೀಕರಿಸಿ ಪಕ್ಷ ಕಟ್ಟುವುದು ವಿವೇಕ. ಸದ್ಯ ಭಾರತವನ್ನು ಆಳುತ್ತಿರುವ ಭಾಜಪಾ ಆ ನಿಟ್ಟಿನಲ್ಲಿ ಯಶಸ್ಸು ಕಂಡಿದೆ. ಕಾಂಗ್ರೆಸ್ ಇನ್ನೂ ಹಳೆಯ ತಲೆಗಳಿಗೆ ಮಣೆ ಹಾಕುತ್ತಾ, ಯುವ ನಾಯಕರನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪಕ್ಕೆ ಪೂರಕವಾಗಿ ವರ್ತಿಸುತ್ತಿದೆ.