ಕೃಷಿ ಕಾಯ್ದೆಗಳ ವಿರುದ್ದ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಮೂಲದ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ, ಅಖಿಲ ಭಾರತ ರೈತ ಸಂಘವು ಈ ಕಾಯ್ದೆಗಳನ್ನು ವಾಪಾಸ್ ಪಡೆಯಬಾರದು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಸಂಘದ ಕಾರ್ಯಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿರುವ ಸಂಜಯ್ ನಾಥ್ ಸಿಂಗ್ ಅವರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಈ ಮನವಿ ಸಲ್ಲಿಸಿದ್ದಾರೆ.
ಸಂಜಯ್ ನಾಥ್ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾದ ನಿಯೋಗವೊಂದು, ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿದೆ. ರೈತರ ಸಮಸ್ಯೆಗಳಿಗೆ ಪರಿಹಾರವಾಗಿ ಹೊಸ ಕೃಷಿ ಕಾಯ್ದೆಗಳನ್ನು ತಂದಿರುವುದು ನಿಜಕ್ಕೂ ಉತ್ತಮವಾದ ನಿರ್ಧಾರ. ಈ ಮೂರು ಕಾಯ್ದೆಗಳು ದೇಶದ ರೈತರ ಭವಿಷ್ಯವನ್ನು ಬದಲಾಯಿಸಲಿವೆ, ಎಂದು ಮನವಿ ಪತ್ರದಲ್ಲಿ ಬರೆಯಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದರೊಂದಿಗೆ ಮುಂದೆ ರೈತರೊಂದಿಗೆ ಸಂವಾದ ನಡೆಸುವ ಸಂದರ್ಭದಲ್ಲಿ ಅವರ ಮನವೊಲಿಸಲು ಸಲಹೆಗಳನ್ನೂ ನೀಡಿದ್ದಾರೆ. ಕಾಂಟ್ರಾಕ್ಟ್ ಫಾರ್ಮಿಂಗ್ ಅನ್ನು ನಿಯಂತ್ರಿಸಲು ಒಂದು ಸಂಸ್ಥೆಯ ರಚನೆ ಮತ್ತು ರೈತರ ಪರವಾಗಿರುವ ನಿಯಮಗಳನ್ನು ರೂಪಿಸಬೇಕು. ಗುತ್ತಿಗೆಯ ಕರಾರು ಪತ್ರದ ಕರಡು ಪ್ರತಿ ತಯಾರಿಸಬೇಕು. ಕನಿಷ್ಟ ಬೆಂಬಲ ಬೆಲೆಯನ್ನು ಖಾತರಿಪಡಿಸಲು ಕೃಷಿ ಬೆಲೆ ಆಯೋಗದ ನಿರ್ಮಾಣ. ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಳ್ಳುವುದಿಲ್ಲ ಎಂಬ ಭರವಸೆ ನೀಡಬೇಕು, ಎಂದು ಸಲಹೆ ನೀಡಿದ್ದಾರೆ.
ಇದರೊಂದಿಗೆ ಹೊಸ ಕಾನೂನುಗಳನ್ನು ಯಾವುದೇ ಕಾರಣಕ್ಕೂ ವಾಪಾಸ್ ಪಡೆಯಬಾರದು ಎಂದು ಒತ್ತಿ ಹೇಳಿದ್ದಾರೆ.