ರೂಪಾಂತರಿ ಕರೋನಾ ವೈರಸ್ ಪ್ರಕರಣಗಳು ಭಾರತದಲ್ಲೂ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಮುನ್ನೆಚ್ಚರಿಕೆ ದೃಷ್ಟಿಯಿಂದ ಜ.31 ರವರೆಗೆ ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧ ವಿಸ್ತರಿಸಿದೆ.
ದೇಶದ ಶೇಕಡಾ 60 ರಷ್ಟು ಕರೋನಾ ಪ್ರಕರಣಗಳು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಕಂಡುಬಂದಿದ್ದು, ಈ ಸಂಬಂಧ ಅಲ್ಲಿನ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡು ಲಾಕ್ಡೌನ್ ಮೊರೆ ಹೋಗಿ ಕೆಲವು ನಿರ್ಬಂಧಗಳನ್ನು ವಿಧಿಸಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೀಗ ಬ್ರಿಟನ್ನಲ್ಲಿ ಕಂಡುಬಂದ ಹೊಸ ಮಾದರಿ ಕರೋನಾ ವೈರಸ್, ಇತರೆ ರಾಷ್ಟ್ರಗಳಿಗೂ ಹರಡುತ್ತಿದೆ. ಬ್ರಿಟನ್ನಿಂದ ಮುಂಬೈಗೆ ಬಂದ ಐದು ಮಂದಿಯಲ್ಲಿ ರೂಪಾಂತರಿ ಕರೋನಾ ಪಾಸಿಟಿವ್ ಕಂಡುಬಂದಿರುವುದಾಗಿ ವರದಿಗಳು ಹೇಳಿವೆ. ಈ ನಿಟ್ಟಿನಲ್ಲಿ ರಾಜ್ಯದ ಜನರ ಸುರಕ್ಷತೆಯ ದೃಷ್ಟಿಯಿಂದ ಲಾಕ್ಡೌನ್ ಮಾರ್ಗಸೂಚಿಯಲ್ಲಿರುವ ನಿರ್ಬಂಧಗಳನ್ನು 2021 ರ ಜ.31 ರವರೆಗೆ ಮುಂದುವರೆಸಲಾಗುತ್ತದೆ ಎಂದು ಸರ್ಕಾರದ ಸುತ್ತೋಲೆ ಹೊರಡಿಸಿದೆ.
ಮಹಾರಾಷ್ಟ್ರದಲ್ಲಿ ದಿನೇ ದಿನೇ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 19,25,066 ಏರಿದ್ದು, ದೇಶದಲ್ಲಿಯೇ ಅತೀ ಹೆಚ್ಚು ಪ್ರಕರಣ ದಾಖಲಾಗುತ್ತಿರುವ ರಾಜ್ಯವಾಗಿದೆ. ಈ ನಿಟ್ಟಿನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಇದನ್ನ ಗಂಭೀರವಾಗಿ ತೆಗೆದುಕೊಂಡು ಲಾಕ್ಡೌನ್ ವಿಸ್ತರಿಸಿದೆ. ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಪಾಡಿಕೊಂಡು ದಿನನಿತ್ಯದ ಕಾರ್ಯಚಟುವಟಿಕೆ ಮಾಡಬಹುದು ಎಂದು ಸರ್ಕಾರ ಹೇಳಿದೆ.