ಸಿಂಘು ಗಡಿ ಸದ್ಯದ ಭಾರತದ ಕುದಿನೆಲ. ದೇಶದ ಅನ್ನದಾತರ ಸಂಘಟಿತ ಹೋರಾಟದ ಕೆಚ್ಚು ಮತ್ತು ಬದ್ಧತೆಯ ಕಣ್ಣೆದುರಿನ ರೂಪಕ.
ಶನಿವಾರ ದೆಹಲಿಯ ಹರ್ಯಾಣ- ಪಂಜಾಬ್ ಗಡಿಯ ಟಿಕ್ರಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ್ದ ಕರ್ನಾಟಕ ಐಕ್ಯ ಹೋರಾಟ ಒಕ್ಕೂಟದ ಪ್ರತಿನಿಧಿಗಳ ತಂಡ, ಭಾನುವಾರ ಕೇಂದ್ರ ಬಿಜೆಪಿ ಸರ್ಕಾರದ ಮೂರು ವಿವಾದಿತ ಕೃಷಿ ಮಸೂದೆಗಳ ವಿರುದ್ಧದ ಹೋರಾಟದ ಕೇಂದ್ರಬಿಂದು ಸಿಂಘು ಗಡಿಗೆ ಭೇಟಿ ನೀಡಿತ್ತು.
ಒಂದು ಕಡೆ ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಶನಿವಾರ, ಆತ್ಮನಿರ್ಭರ ಭಾರತ, ವೋಕಲ್ ಫಾರ್ ಲೋಕಲ್ ಎಂಬ ಮಾತುಗಳನ್ನು ಆಡುತ್ತಾ, ಸ್ವಾವಲಂಬನೆ, ದೇಸಿ ಉತ್ಪನ್ನಗಳ ಉತ್ತೇಜನದ ಬಗ್ಗೆ ಪ್ರಸ್ತಾಪಿಸುತ್ತಿದ್ದರೆ, ಅನ್ನ ಬೆಳೆಯುವ ರೈತರು ಚಳಿ-ಗಾಳಿಯ ನಡುವೆ ನಡುಬೀದಿಯಲ್ಲಿ ನಿಂತು ಪ್ರಧಾನಿ ಮಾತುಗಳಿಗೆ ತಟ್ಟೆಲೋಟ ಬಡಿದು ಪ್ರತಿಕ್ರಿಯಿಸಿದರು. ವಾಸ್ತವವಾಗಿ ದೇಶದ ಜನರ ಹೊಟ್ಟೆ ತುಂಬಿಸುವ ರೈತರನ್ನು ಕಾರ್ಪೊರೇಟ್ ಕಂಪನಿಗಳ ಜೀತಕ್ಕೆ ಹಚ್ಚುವ ಕಾಯ್ದೆಗಳನ್ನು ರೂಪಿಸಿ, ಬಾಯುಪಚಾರದ ಬಡಿವಾರದ ಮಾತುಗಳ ಮೂಲಕ ದೇಸಿ ಉತ್ಪನ್ನ ಖರೀದಿ, ಸ್ವಾಭಿಮಾನ, ಆತ್ಮನಿರ್ಭರದ ಪ್ರತಿಪಾದನೆ ಮಾಡುವುದು ಹಾಸ್ಯಾಸ್ಪದ. ಮೊದಲು ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಿರಿ ಎಂದು ಪ್ರಧಾನಿ ವಿರುದ್ಧ ರೈತರು ಘೋಷಣೆ ಮೊಳಗಿಸಿದರು.
ಟಿಕ್ರಿ ಮತ್ತು ಸಿಂಘು ಗಡಿಗಳ ಹೋರಾಟಗಳ ನಡುವೆ ಸಾಮ್ಯತೆಗಳಿರುವಷ್ಟೇ ಭಿನ್ನತೆಗಳೂ ಇರುವುದು ವಿಶೇಷ. ಅಲ್ಲಿನಂತೆಯೇ ಇಲ್ಲಿಯೂ ರೈತರು ರಾಷ್ಟ್ರೀಯ ಹೆದ್ದಾರಿಯನ್ನೇ ಮನೆ ಮಾಡಿಕೊಂಡು ಬೀಡುಬಿಟ್ಟಿದ್ದಾರೆ. ರೈತರು ರಾಜಧಾನಿಗೆ ಕಾಲಿಡದಂತೆ ಸರ್ಕಾರ ಬೃಹತ್ ಕಂಟೇನರುಗಳನ್ನು ಹೆದ್ದಾರಿಗೆ ಅಡ್ಡಲಾಗಿಟ್ಟು, ಪ್ಯಾರಾ ಮಿಲಿಟರಿ ಪಡೆಗಳನ್ನು ಕಾವಲಿಟ್ಟಿದೆ. ಶಸ್ತ್ರ ಸಜ್ಜಿತ ಯೋಧರು ಗಡಿಯಲ್ಲಿ ಶತ್ರುಗಳ ಎದೆಗೆ ಗುರಿ ಇಡುವ ಬದಲು, ತಮ್ಮ ಊಟದ ತಟ್ಟೆಯ ಅನ್ನ ಬೆಳೆಯುವ ಅನ್ನದಾತರತ್ತಲೇ ಗುರಿ ಇಟ್ಟು ಹಗಲಿರುಳೂ ಗಡಿ ಕಾದಂತೆ ಕಾಯುತ್ತಿದ್ದಾರೆ. ಜೈ ಜವಾನ್, ಜೈ ಕಿಸಾನ್ ಎಂದ ದೇಶದ ರಾಜಧಾನಿಯಲ್ಲಿ ಕಿಸಾನರ ವಿರುದ್ಧವೇ ಜವಾನರು ಶಸ್ತ್ರ ಕೈಗೆತ್ತಿಕೊಂಡು ವಿಪರ್ಯಾಸಕ್ಕೆ ಸಿಂಘು ಗಡಿ ಸಾಕ್ಷಿಯಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಿಂಘು ಗಡಿಯ ವಿಶೇಷವೆಂದರೆ; ಅಲ್ಲಿ ಕಳೆದ ಒಂದು ತಿಂಗಳಿಂದ ಠೀಕಾಣಿ ಹೂಡಿರುವ ರೈತ ಸಮುದಾಯದ ನಡುವೆ ಹೆಚ್ಚಿನ ಸಂಖ್ಯೆಯಲ್ಲಿರುವುದು ಯುವಕ-ಯುವತಿಯರು! ಕರ್ನಾಟಕವೂ ಸೇರಿದಂತೆ ದೇಶದ ಉದ್ದಗಲಕ್ಕೆ ಯುವ ಸಮೂಹ ರಚನಾತ್ಮಕ ಹೋರಾಟ, ಚಳವಳಿಗಳ ಬದಲು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಕಾಲಾಹರಣ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಮತ್ತು ರಾಜಕೀಯ ಚಳವಳಿರಹಿತ ಶೂನ್ಯ ಸ್ಥಿತಿಗೆ ಯುವ ಸಮೂಹ ಹೋರಾಟಗಳಿಂದ ವಿಮುಖವಾಗಿರುವುದೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲಿ; ಬಹುತೇಕ ಪಂಜಾಬ್ ಮತ್ತು ಹರ್ಯಾಣದ ಈ ಸಮೂಹ ಯಾಕೆ ಇತರರಿಗಿಂತ ಭಿನ್ನ? ಯಾಕೆ ರೈತ ಹೋರಾಟದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಕ್ರಿಯವಾಗಿದ್ದಾರೆ ಎಂಬ ಕುತೂಹಲದಲ್ಲಿ ಕೆಲವು ಯುವ ಹೋರಾಟಗಾರರನ್ನು ಮಾತನಾಡಿಸಿದಾಗ ಸಿಕ್ಕಿದ್ದು ಹಸಿರುಕ್ರಾಂತಿ ಮತ್ತು ಅದರ ಬಳಿಕದ ಪಂಜಾಬ್ ಮತ್ತು ಹರ್ಯಾಣದ ಕೃಷಿ ವಲಯದ ಇತಿಹಾಸ.
ಹಸಿರು ಕ್ರಾಂತಿಯ ವೇಳೆ ಅಲ್ಲಿನ ಸಣ್ಣ ಮತ್ತು ಮಧ್ಯಮರೈತರ ಹೊಲಗಳನ್ನು ಗುತ್ತಿಗೆಗೆ ಪಡೆದ ಶ್ರೀಮಂತ ಜಮೀನ್ದಾರರು ಮತ್ತು ಕೃಷಿ ಉದ್ಯಮಿಗಳು, ಅಧಿಕ ಇಳವರಿ ಮತ್ತು ಲಾಭದ ಕೃಷಿಗಾಗಿ ಆ ಜಮೀನುಗಳ ಫಲವತ್ತತೆ ನಾಶ ಮಾಡಿದ್ದಷ್ಟೇ ಅಲ್ಲದೆ, ದುರ್ಬಲ ರೈತರಿಗೆ ಹಣದ ಆಮಿಷವೊಡ್ಡಿ, ಬೆದರಿಕೆ, ಒತ್ತಡ ತಂತ್ರ ಬಳಸಿ ಭೂಮಿಯನ್ನು ಕಿತ್ತುಕೊಂಡರು. ಹಾಗಾಗಿ ಆ ರೈತರಿಗೆ ಉದ್ಯಮಿಗಳು ಒಮ್ಮೆ ತಮ್ಮ ಜಮೀನಿಗೆ ಕಾಲಿಟ್ಟರೆ, ಹೇಗೆ ಶಾಶ್ವತವಾಗಿ ತಮ್ಮನ್ನು ಅವರ ಕೂಲಿಯಾಳುಗಳನ್ನಾಗಿ ಮಾಡಿಕೊಳ್ಳುತ್ತಾರೆ ಎಂಬುದು ಅನುಭವಕ್ಕಿದೆ. ತಮ್ಮ ಕುಟುಂಬಗಳು, ನೆರೆಹೊರೆಯ ಕೃಷಿಕರು ಉದ್ಯಮಿಗಳ ಕೈಗೆ ಭೂಮಿ ಕೊಟ್ಟು ಬೀದಿಪಾಲದದ್ದನ್ನು ನೋಡಿಕೊಂಡು ಬೆಳೆದ ಈಗಿನ ತಲೆಮಾರಿನ ಯುವಕರು, ಮೋದಿ ಸರ್ಕಾರದ ಹೊಸ ಕಾಯ್ದೆಗಳು ಕೂಡ ಮತ್ತೊಮ್ಮೆ ತಮ್ಮನ್ನು ಬೀದಿ ಪಾಲು ಮಾಡಲು ಸಂಚು ಹೂಡಿವೆ ಎಂಬ ಆತಂಕದಲ್ಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಕನಿಷ್ಟ ಬೆಂಬಲ ಬೆಲೆ, ಎಪಿಎಂಸಿ ವ್ಯವಸ್ಥೆಗೆ ಸಂಬಂಧಿಸಿದ ಕಾನೂನುಗಳ ಜೊತೆಗೆ, ಕೃಷಿ ವಲಯದಲ್ಲಿ ಕಾರ್ಪೊರೇಟ್ ಹೂಡಿಕೆಗೆ ಮುಕ್ತ ಅವಕಾಶ ನೀಡುವ ಹೊಸ ಕಾಯ್ದೆ ಮತ್ತು ವಿದ್ಯುತ್ ವಲಯದ ಖಾಸಗೀಕರಣದ ಕುರಿತ ಕಾಯ್ದೆಗಳ ಬಗ್ಗೆ ಈ ಯುವಕರಿಗೆ ದೊಡ್ಡ ಮಟ್ಟದ ಆಕ್ರೋಶವಿದೆ. ಹಾಗಾಗಿಯೇ ಪಂಜಾಬ್ ಮತ್ತು ಹರ್ಯಾಣದ ಯುವ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ಹೋರಾಟಕ್ಕೆ ಧುಮುಕಿದೆ.
ಮತ್ತೊಂದು ಗಮನಾರ್ಹ ಸಂಗತಿ ಎಂದರೆ; ಈ ಸಿಂಘು ಗಡಿಯ ಹೋರಾಟದಲ್ಲಿ ರೈತ ಚಳವಳಿಗೆ ದೊಡ್ಡ ಸ್ಫೂರ್ತಿಯಾಗಿರುವುದು ಸಿಖ್ ಧಾರ್ಮಿಕ ಸಂಗತಿಗಳು. ಗುರುನಾನಕರ ಪ್ರವಚನ, ಅವರ ಕುರಿತ ಭಕ್ತಿಗೀತೆಗಳು, ಅವರ ವಿಚಾರ ಧಾರೆಗಳ ಕುರಿತ ಹಿರಿಯ ಮಾತುಗಳು,.. ಹೀಗೆ ಇಡೀ ಹೋರಾಟದಲ್ಲಿ ರೈತರಿಗೆ ಒಂದು ರೀತಿಯ ಮಾರ್ಗದರ್ಶನ ಮತ್ತು ಸಂಘಟನಾ ಮನೋಬಲವನ್ನು ಪ್ರೇರೇಪಿಸುತ್ತಿರುವುದು ಧಾರ್ಮಿಕ ಸಂಗತಿಗಳೇ. ಹಾಗಾಗಿಯೇ ಈ ಹೋರಾಟ ತಿಂಗಳ ಬಳಿಕವೂ ದಿನದಿಂದ ದಿನಕ್ಕೆ ಇನ್ನಷ್ಟು ಗಟ್ಟಿಗೊಳ್ಳುತ್ತಾ, ಸಂಘಟಿತವಾಗುತ್ತಾ, ಹೆಚ್ಚು ಬಲಗೊಳ್ಳುತ್ತಾ ಸಾಗಿದೆ. ಸಾವಿರಾರು ಜನ ಸೇರಿರುವ, ಕಾಲಿಡಲೂ ಆಗದಷ್ಟು ದಟ್ಟಣೆಯಲ್ಲಿ ಸೇರಿರುವ ಹೋರಾಟಗಾರರ ನಡುವೆ ಒಂದು ಸುತ್ತು ಹೋಗಿ ಬಂದರೆ, ಯಾವುದೋ ಭಕ್ತಿ ಚಳವಳಿಯ ಸಮಾವೇಶದಲ್ಲಿ ಹಾದುಬಂದಂತಹ ಅನುಭವ ನೀಡುತ್ತದೆ. ಅದೇ ಕಾರಣಕ್ಕೆ ಇಷ್ಟೊಂದು ಸಾವಿರ ಜನರಿದ್ದರೂ, ಇಲ್ಲಿ ಈವರೆಗೆ ಸಣ್ಣಪುಟ್ಟ ಅಹಿತಕರ ಘಟನೆಗಳಾಗಲೀ, ಕಳ್ಳತನ, ಸಂಘರ್ಷಗಳಾಗಲೀ ನಡೆದಿಲ್ಲ. ಎಲ್ಲರ ಗಮನ ಕೇವಲ ಕೃಷಿ ಹಿತ, ಕೃಷಿಕನ ಹಿತವಷ್ಟೇ ಆಗಿದೆ. ಅದರ ಮುಂದೆ ಉಳಿದೆಲ್ಲಾ ಸಂಗತಿಗಳು, ಎಲ್ಲ ಭಿನ್ನತೆಗಳು ಇಲ್ಲಿ ಗೌಣ!
ನೂರಾರು ವಿವಿಧ ರೈತ, ಕೂಲಿಕಾರ್ಮಿಕ, ಕಾರ್ಮಿಕ, ದಲಿತ ಸಂಘಟನೆಗಳ ಐಕ್ಯ ಹೋರಾಟವಾಗಿರುವ ಇಲ್ಲಿನ ಈ ರೈತರ ಈ ಒಗ್ಗಟ್ಟು ಮತ್ತು ಸಂಘಟನಾ ಬಲದ ಕುರಿತು ಸ್ಥಳಕ್ಕೆ ಭೇಟಿ ನೀಡಿದ್ದ ಕರ್ನಾಟಕ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಒಕ್ಕೂಟದ ಪ್ರಮುಖರಾದ ನೂರ್ ಶ್ರೀಧರ್ ಅವರು ಮಾತನಾಡಿ, “ಇದು ಭಾರತದ ರೈತ ಚಳವಳಿಗಳ ಇತಿಹಾಸದಲ್ಲೇ ಒಂದು ಚಾರಿತ್ರಿಕ ಹೋರಾಟ. ಬಹಳ ಯೋಜಿತವಾದ ದೂರಗಾಮಿ ಯೋಚನೆಯ ತಯಾರಿ ಮತ್ತು ಎಲ್ಲಾ ಭಿನ್ನಮತ-ಭಿನ್ನಾಭಿಪ್ರಾಯ ಬದಿಗಿಟ್ಟು ಒಕ್ಕೊರಲಿನಿಂದ ಸಂಘಟಿತರಾಗಿ ಹೋರಾಟಕ್ಕೆ ಧುಮುಕಿದ್ದು ಈ ಚಳವಳಿಯ ಯಶಸ್ಸಿನ ಗುಟ್ಟು. ತಿಂಗಳು ಕಳೆದರೂ ಈ ಹೋರಾಟಗಾರರು ಒಂದಿಷ್ಟೂ ವಿಚಲಿತರಾಗದೆ, ದಿನದಿಂದ ದಿನಕ್ಕೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಹೆಚ್ಚಿನ ಖಚಿತತೆಯಲ್ಲಿ ಗಟ್ಟಿಯಾಗಿ ನಿಂತಿರುವುದರ ಹಿಂದೆ ಅಂತಹ ದೂರಗಾಮಿ ಯೋಜನೆ ಮತ್ತು ಸಂಘಟನಾ ಐಕ್ಯತೆ ಇದೆ. ನವೆಂಬರ್ 26ರಂದು ದೆಹಲಿ ಚಲೋ ಆರಂಭಿಸುವಾಗಲೇ ಆ ರೈತರು ಪ್ರತಿಯೊಬ್ಬರೂ ತಮ್ಮ ಟ್ರ್ಯಾಕ್ಟರುಗಳಿಗೆ ಎರಡೆರಡು ಟ್ರಾಲಿಗಳನ್ನು ಜೋಡಿಸಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದರು. ಒಂದು ಟ್ರಾಲಿಯಲ್ಲಿ ಹೋರಾಟಗಾರರು ಇದ್ದರೆ, ಮತ್ತೊಂದರಲ್ಲಿ ಹಾಗೆ ಬರುವ ಪ್ರತಿಯೊಬ್ಬರಿಗೂ ಕನಿಷ್ಟ ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯ, ಬಟ್ಟೆಬರೆ, ಹೊದಿಕೆ, ಹಾಸಿಗೆ, ದಿನಬಳಕೆ ವಸ್ತುಗಳು, ಔಷಧಗಳ ಗಂಟುಮೂಟೆ ತುಂಬಿದ್ದರು. ಇದು ಅವರ ದೂರಗಾಮಿತ್ವ ಮತ್ತು ವ್ಯವಸ್ಥಿತ ಸಂಘಟನೆಗೆ ಉದಾಹರಣೆ” ಎಂದು ವಿವರಿಸಿದರು.
“ಹಾಗೇ ನೂರಾರು ರೈತ-ಕಾರ್ಮಿಕ- ದಲಿತ ಸಂಘಟನೆಗಳು ಹಲವು ವಿಷಯಗಳಲ್ಲಿ ಬೇರೆ ಬೇರೆ ನಿಲುವುಗಳನ್ನು ಹೊಂದಿದ್ದರೂ, ಬೇರೆ ಬೇರೆ ವಿಷಯಕ್ಕೆ ಸಂಬಂಧಪಟ್ಟಂತೆ ಅವರ ನಡುವೆಯೂ ಅಭಿಪ್ರಾಯಬೇಧಗಳಿದ್ದರೂ, ಈ ಕೃಷಿ ಕಾಯ್ದೆಗಳ ವಿಷಯದಲ್ಲಿ, ರೈತರ ವಿಷಯದಲ್ಲಿ ಎಲ್ಲರ ಗುರಿ ಒಂದೇ ಆಗಿದೆ. ಅಂತಹ ಒಂದು ಐಕ್ಯತೆಯನ್ನು 2016ರಿಂದಲೇ ಅಲ್ಲಿನ 22ಕ್ಕೂ ಹೆಚ್ಚು ರೈತ ಸಂಘಟನೆಗಳೂ ಸಾಧಿಸಿಕೊಂಡುಬಂದಿವೆ” ಎಂಬುದು ನೂರ್ ಶ್ರೀಧರ್ ಅವರ ವಿಶ್ಲೇಷಣೆ.
ಬಹುಶಃ ಸದ್ಯ ಕರ್ನಾಟಕದಲ್ಲಿ ಸಣ್ಣಪುಟ್ಟ ವಿಷಯಗಳಿಗಾಗಿ, ನಾಯಕರ ನಡುವಿನ ಪ್ರತಿಷ್ಠೆಗಾಗಿ ಸೋತು ಸೊರಗಿರುವ ರೈತ ಚಳವಳಿಗೆ ಪಂಜಾಬಿನ ರೈತರ ಈ ಹೋರಾಟದ ಸ್ಫೂರ್ತಿಯಲ್ಲಿ ಪಾಠವಿದೆ. ಸಣ್ಣತನ, ಪ್ರತಿಷ್ಠೆಯನ್ನು ಮೀರಿ ಸಂಘಟಿತರಾಗುವ, ರೈತ ಮತ್ತು ಕೃಷಿಯ ವಿಷಯ ಬಂದಾಗ ಎಲ್ಲಾ ಹಿತಾಸಕ್ತಿಗಳನ್ನು, ಪ್ರತಿಷ್ಠೆಯನ್ನು ಬದಿಗಿಟ್ಟು ದನಿ ಎತ್ತಬೇಕು ಎಂಬ ನೀತಿ, ಈ ಹೋರಾಟದಲ್ಲಿದೆ. ಇದು ಕರ್ನಾಟಕವಷ್ಟೇ ಅಲ್ಲದೆ, ದೇಶದ ರೈತ ಚಳವಳಿಗೇ ಹೊಸ ಭರವಸೆಯಾಗಿ, ಹೊಸ ಮಾದರಿಯಾಗಿ ಹೊರಹೊಮ್ಮಿದೆ. ಆದರೆ, ಅಂತಹ ಪಾಠಗಳನ್ನು ಕರ್ನಾಟಕದ ರೈತ ನಾಯಕರು, ಚಳವಳಿಗಾರರು ಕಲಿಯುವರೇ ಎಂಬುದು ಈಗಿರುವ ಪ್ರಶ್ನೆ!