ಕಳೆದ 25 ವರ್ಷಗಳಿಂದ ಬೆಳಕಿನ ಮಾಲಿನ್ಯದ ಬಗ್ಗೆ ಅಧ್ಯಯನ ಮಾಡುತ್ತಿರುವ ಭೌತಶಾಸ್ತ್ರಜ್ಞ ಫ್ಯಾಬಿಯೋ ಫಾಲ್ಕಿ, ರಾಷ್ಟ್ರೀಯ ಭೌಗೋಳಿಕ ದತ್ತಾಂಶ ಕೇಂದ್ರ ಕೊಲರಾಡೋದ ಕ್ರಿಸ್ ಎಲ್ವಿಜ್ ಮತ್ತು ಪರಿಸರ ವಿಜ್ಞಾನ ಅಧ್ಯಯನಗಳ ಸಹಕಾರಿ ಸಂಸ್ಥೆ ಕೊಲರಾಡೊದ ಕಿಂಬರ್ಲೀ ಭಾಫ್ ಮುಂತಾದವರನ್ನೊಳಗೊಂಡ ಅಧ್ಯಯನ ತಂಡವೊಂದು ಸಿದ್ಧಪಡಿಸಿದ ಬೆಳಕಿನ ಮಾಲಿನ್ಯದ ನಕ್ಷೆಯ ಪ್ರಕಾರ ದೆಹಲಿ ಮತ್ತು ಕೊಲ್ಕತ್ತಾದ ನಂತರ ಬೆಂಗಳೂರು ನಗರ ಮೂರನೆಯ ಸ್ಥಾನದಲ್ಲಿದೆ. ಸೀ ಬಾಕ್ಸ್ ಎನ್ನುವ ಅಧ್ಯಯನ ತಂಡ ನಡೆಸಿದ ದತ್ತಾಂಶ ಸಂಗ್ರಹದ ಆಧಾರದ ಮೇಲೆ ಮಾಲಿನ್ಯದ ಶ್ರೇಯಾಂಕ ನಿರ್ಧರಿಸಲಾಗಿದೆ.
2016ರಲ್ಲಿ ಈ ಅಧ್ಯಯನ ತಂಡವು ಪ್ರಕಟಿಸಿದ ವರದಿಯ ಪ್ರಕಾರ ಜಗತ್ತಿನ 80% ಜನಸಮೂಹವು ಕೃತಕ ಬೆಳಕಿನಿಂದ ಮಾಲಿನ್ಯವುಂಟಾದ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೃತಕ ಬೆಳಕಿನ ಮಿತಿಮೀರಿದ ಬಳಕೆಯು ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಉಪ ಉಷ್ಣವಲಯದಲ್ಲಿರುವ ಭಾರತವು ಹಗಲು ಮತ್ತು ರಾತ್ರಿಗಳ ಸಮತೋಲಿತ ಅನುಪಾತವನ್ನು ಹೊಂದಿದೆ. “ಮಿತಿ ಮೀರಿದ ಬೆಳಕು, ಅದರಲ್ಲೂ ಜಾಹಿರಾತು ಮತ್ತು ಬೀದಿ ದೀಪಗಳ ಬೆಳಕು ಜನಸಾಮಾನ್ಯರ ಆರೋಗ್ಯದ ಮೇಲೆ ಮತ್ತು ಪರಿಸರ ವ್ಯವಸ್ಥೆಯ ಸಮತೋಲನದ ಮೇಲೆ ದುಷ್ಪರಿಣಾಮ ಬೀರುತ್ತದೆ” ಎನ್ನುತ್ತಾರೆ ಬೆಂಗಳೂರಿನ ಪರಿಸರವಾದಿ ಲಿಯೋ ಸಲ್ದಾನಾ.
ಮರಗಳ ವೈದ್ಯ ಎಂದೇ ಪ್ರಸಿದ್ಧರಾಗಿರುವ ಬೆಂಗಳೂರಿನ ನಿಶಾಂತ್ ಸಮಸ್ಯೆ ಉದ್ಭವವಾಗಿರುವುದೇ ಮನುಷ್ಯನ ಅಹಂಕಾರದಿಂದ ಎನ್ನುತ್ತಾರೆ. “ಪರಿಸರದ ಬಗ್ಗೆ ಯಾವುದೇ ಕಾಳಜಿ ಇಲ್ಲದೆ, ದೂರಗಾಮಿ ದುಷ್ಪರಿಣಾಮಗಳ ಬಗ್ಗೆ ಚಿಂತಿಸದೆ ನಾವು ಪರಿಸರವನ್ನು ಆಕ್ರಮಿಸಿಕೊಂಡಿದ್ದೇವೆ” ಎನ್ನುತ್ತಾರವರು.
ನಗರಗಳು ಬೆಳೆದಂತೆ ಬೆಳಕಿನ ಮಾಲಿನ್ಯವೂ ಹೆಚ್ಚುತ್ತದೆ. ಇತರ ಬೆಳಕಿನ ಆಕರಗಳಿಗಿಂತ LED ಬೆಳಕು ಹೆಚ್ಚು ಹಾನಿಕಾರಕ. ಇತರ ಬಲ್ಬ್ಗಳು, ಬೆಳಕಿನ ಆಕರಗಳು ಮಾರುಕಟ್ಟೆಯಿಂದ ನಿರ್ಗಮಿಸಿದಂತೆ ಗ್ರಾಹಕರಿಗೆ ಬೇರೆ ಆಯ್ಕೆಗಳೇ ಇಲ್ಲದಂತಾಗಿದೆ. “LED ಬಲ್ಬ್ಗಳು ಹೆಚ್ಚು ವಿದ್ಯುತ್ ಉಳಿತಾಯ ಮಾಡುತ್ತದೆ. ಆದರೆ ಅದು ಪರಿಸರಕ್ಕೆ ಪೂರಕವಲ್ಲ. LED ಹೊರತುಪಡಿಸಿ ಬೇರೆ ಆಯ್ಕೆಗಳೇ ಇಲ್ಲವೆಂದಾದರೆ ಅವುಗಳ ಬಳಕೆಯನ್ನು ನಿಯಂತ್ರಿಸಿ ಪ್ರಕೃತಿದತ್ತ ಬೆಳಕನ್ನೇ ಹೆಚ್ಚು ಬಳಸಿ” ಎನ್ನುತ್ತಾರೆ ಬೆಂಗಳೂರಿನ ಪರಿಸರವಾದಿ ಸುರೇಶ್ ರಂದದತ್.
ಪ್ರಖರ ಕೃತಕ ಬೆಳಕಿಗೆ ದೀರ್ಘಕಾಲ ತೆರೆದುಕೊಳ್ಳುವುದರಿಂದ ಸಮತೋಲಿತ ಮತ್ತು ಆರೋಗ್ಯಕರ ನಿದ್ರೆಯ ಮೇಲೆ ಪ್ರಭಾವ ಬೀರುತ್ತದೆ. ಮೈಗ್ರೇನ್, ನಿದ್ರಾ ಹೀನತೆ, ಸಂತಾನ ಹೀನತೆ ಮುಂತಾದ ಸಮಸ್ಯೆಗಳೂ ಕಾಡುತ್ತವೆ.
ಅಮೆರಿಕದ ಕೊಲರಾಡೊ ಯುನಿವರ್ಸಿಟಿಯ ಸೈಮರ್ ಎಂಬವರು ತಮ್ಮ ಅಧ್ಯಯನದಲ್ಲಿ ಕೀಟಗಳ ಬದುಕಿಗೆ ಬೆಳಕಿನ ಮಾಲಿನ್ಯ ಮಾರಕ ಎಂದು ಪ್ರತಿಪಾದಿಸಿದ್ದಾರೆ. ಬೆಂಗಳೂರು ಸುಮಾರು ಎರಡು ಸಾವಿರಕ್ಕೂ ಮಿಕ್ಕಿದ ಕೀಟ ಪ್ರಭೇದಗಳಿಗೆ ಆಶ್ರಯ ನೀಡಿದೆ. ತಮ್ಮ ಸಂಚಾರಕ್ಕೆ ಪ್ರಕೃತಿದತ್ತ ಬೆಳಕನ್ನೇ ಆಶ್ರಯಿಸಿರುವ ಈ ಜೀವಿಗಳ ಬದುಕನ್ನು ಕೃತಕ ಬೆಳಕು ಅಡ್ಡಿಪಡಿಸಿದೆ.
1988ರಿಂದಲೂ ಬೆಳಕಿನ ಮಾಲಿನ್ಯದ ವಿರುದ್ಧ ಹೋರಾಡುತ್ತಿರುವ ‘ಇಂಟರ್ನ್ಯಾಷನಲ್ ಡಾರ್ಕ್ ಸ್ಕೈ ಅಸೋಸಿಯೇಷನ್’ನ ಪ್ರಕಾರ ನೊಣಗಳ, ಚಿಟ್ಟೆಗಳ ಬಾವಲಿಗಳ ಮತ್ತು ಗೂಬೆಗಳ ಬದುಕಿನ ಮೇಲೆ ಕೃತಕ ಬೆಳಕು ಅತ್ಯಂತ ಕೆಟ್ಟ ಪ್ರಭಾವವನ್ನು ಬೀರಿದೆ. ಬಾವಲಿಗಳು ತಮ್ಮ ಆಹಾರದ ಹುಡುಕಾಟವನ್ನು ಹೆಚ್ಚಾಗಿ ರಾತ್ರಿ ಹೊತ್ತಲ್ಲೇ ಮಾಡುತ್ತಿದ್ದು ಈಗ ಬೆಂಗಳೂರಲ್ಲಿ ಅವುಗಳಿಗೆ ರಾತ್ರಿಯನ್ನು ಗುರುತಿಸಲೇ ಅಸಾಧ್ಯವಾದಂತಾಗಿದೆ.
ಕೃತಕ ಬೆಳಕು ವಲಸೆ ಹಕ್ಕಿಗಳ ಹಾರಾಟಕ್ಕೂ ಅಪಾಯವನ್ನು ತಂದೊಡ್ಡಿದೆ. ವರ್ಷಂಪ್ರತಿ ಲಕ್ಷಗಟ್ಟಲೆ ಹಕ್ಕಿಗಳು ಅನಿಯಂತ್ರಿತವಾಗಿ ಕಟ್ಟಿದ ಕಟ್ಟಡಗಳಿಂದಾಗಿ, ಟವರ್ಗಳಿಂದಾಗಿ ಜೀವ ಕಳೆದುಕೊಳ್ಳುತ್ತವೆ. ಕೃತಕ ಬೆಳಕಿನಿಂದಾಗಿ ಈ ಹಕ್ಕಿಗಳು ನಿಗದಿತ ಸಮಯಕ್ಕಿಂತ ತುಂಬಾ ಬೇಗ ಅಥವಾ ನಿಗದಿತ ಸಮಯಕ್ಕಿಂತ ತುಂಬಾ ತಡವಾಗಿ ವಲಸೆ ಹೋಗಿ, ತಮ್ಮ ಗೂಡು ಕಟ್ಟುವ, ಮೊಟ್ಟೆ ಇಡುವ ಕಾಯಕಕ್ಕೆ ತೊಂದರೆ ಗೊಳ್ಳುತ್ತವೆ.
“ರಾತ್ರಿ ವೇಳೆ ಚಟುವಟಿಕೆಯಿಂದಿರುವ ಜೀವಿಗಳು ಜೀವ ವೈವಿಧ್ಯತೆಯ ರಕ್ಷಣೆಗೆ ಅನಿವಾರ್ಯ. ಮನುಷ್ಯರು ಸಾಮಾನ್ಯವಾಗಿ ಅವರ ಬದುಕಿನ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ಬೆಳಕಿನ ಮಾಲಿನ್ಯವು ಹೀಗೆಯೇ ಲಕ್ಷಗಟ್ಟಲೆ ಜೀವಿಗಳನ್ನು ಭಾದಿಸುತ್ತಿದ್ದರೆ ಅದು ಮನುಷ್ಯನ ಬದುಕಿನ ಮೇಲೂ ಪರಿಣಾಮ ಬೀರದಿರದು” ಎನ್ನುತ್ತಾರೆ ‘ಇಕೋ ವಾಚ್’ ಸಂಸ್ಥೆಯ ಸ್ಥಾಪಕರಾದ ಸುರೇಶ್ ಹೆಬ್ಳೀಕರ್.
” ಈ ದೇಶದ ಕಂಸ್ಯೂಮರ್ ಕ್ಯಾಪಿಟಲ್ ಎಂದೇ ಕರೆಸಿಕೊಳ್ಳುವ ಬೆಂಗಳೂರಿನ ಅಭಿವೃದ್ಧಿಗೆ ಸೂಕ್ತ ಬೆಳಕಿನ ವ್ಯವಸ್ಥೆ ಅನಿವಾರ್ಯ. ಸಾರ್ವಜನಿಕರ ಬದುಕನ್ನು ಸುರಕ್ಷಿತವಾಗಿಡಲು ಅಲ್ಲಲ್ಲಿ ಬೀದಿ ದೀಪಗಳನ್ನು ಅಳವಡಿಸಲೇಬೇಕಾಗುತ್ತದೆ. ಆದರೆ ಬೆಳಕಿನ ವ್ಯವಸ್ಥೆ ಮಾಡುವಾಗ ಪರಿಸರವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಎಲ್ಲಿ ಬೆಳಕು ಬೇಕೋ ಅಲ್ಲಿ ಮಾತ್ರ ಬೆಳಕು ಬೀಳುವಂತೆ ಮಾಡಬೇಕು” ಎನ್ನುತ್ತಾರೆ ಸಲ್ದಾನಾ.
ಮಾಲಿನ್ಯದ ಇತರ ರೂಪಗಳಂತೆ ಬೆಳಕಿನ ಮಾಲಿನ್ಯದ ಪ್ರತಿಕೂಲ ಪರಿಣಾಮಗಳು ತಕ್ಷಣಕ್ಕೆ ಕಂಡು ಬರುವುದಿಲ್ಲ. ಹಾಗಾಗಿಯೇ ಅದನ್ನು ನಿರ್ಲಕ್ಷಿಸಿಸುವುದು ಸುಲಭ.
ವಿದ್ಯುಚಕ್ತಿಯನ್ನು ಉಳಿಸುತ್ತಲೇ ನಾವು ಸಾಕಷ್ಟು ಬೆಳಕನ್ನು ಪಡೆದುಕೊಳ್ಳುವಂತಹ ವ್ಯವಸ್ಥೆ ರೂಪಿಸಿಕೊಳ್ಳಬೇಕು. “ನಮ್ಮಂತೆಯೇ ಇಲ್ಲಿ ಬದುಕುತ್ತಿರುವ ಅನೇಕ ಜೀವಿಗಳಿಗೆ ಕತ್ತಲೆಯ ಅಗತ್ಯವಿದೆ ಎನ್ನುವುದರ ಬಗ್ಗೆ ನಾವು ಮತ್ತಷ್ಟು ಸೂಕ್ಷ್ಮರಾಗಬೇಕು” ಎನ್ನುತ್ತಾರೆ ಸಲ್ದಾನಾ.
ಸಾಧ್ಯವಿರುವಷ್ಟು ಪ್ರಾಕೃತಿಕ ಬೆಳಕಿನ ಮೇಲೆ ಅವಲಂಬಿತರಾಗುವುದಷ್ಟೇ ಸದ್ಯಕ್ಕೆ ನಾವು ಬೆಳಕಿನ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಲ್ಲಿಸಬಹುದಾದ ಕೊಡುಗೆ.
ಕೃಪೆ: ಡೆಕ್ಕನ್ ಹೆರಾಲ್ಡ್